ನಾವು ಯಾವುದೇ ಬಾಷೆ ಕಲಿತರು, ಬೇರೆ ದೇಶದಲ್ಲಿ ಕೆಲಸ ಮಾಡಿದರೂ ಮಾತೃ ದೇಶದ ಸಂಸ್ಕೃತಿ, ಪರಂಪರೆ ಹಾಗೂ ಸಂಪ್ರದಾಯಗಳು, ವಿದ್ಯೆ ಕಲಿಸಿರುವ ಗುರು ಹಿರಿಯರನ್ನು, ಜನ್ಮ ಕೊಟ್ಟಿರುವ ತಂದೆ-ತಾಯಿಯನ್ನು ಮರೆಯಬಾರದು. ಇವೆಲ್ಲ ಸಂಸ್ಕಾರಗಳನ್ನು ಬಾಲ್ಯದಲ್ಲೆ ಮಕ್ಕಳಿಗೆ ಕಲಿಸಬೇಕು ಎಂದು ಚಿಕ್ಕಬಳ್ಳಾಪುರ ಅಧಿಚುಂಚನಗಿರಿ ಶಾಖಾ ಮಠದ ಮಠಾಧೀಶ ಶ್ರೀ ಮಂಗಳನಾಥ ಸ್ವಾಮೀಜಿ ಕಿವಿಮಾತು ಹೇಳಿದರು.
ಬಾಗೇಪಲ್ಲಿ ಪಟ್ಟಣದ ಬಿಜಿಎಸ್ ಪಬ್ಲಿಕ್ ಶಾಲಾವರಣದಲ್ಲಿ ಭಾನುವಾರ ಶಾಲಾ ಆಡಳಿತ ಮಂಡಳಿ ಅಯೋಜಿಸಿದ್ದ ಮಾತೃ ಭೋಜನಾ ಹಾಗೂ 2024ನೇ ಸಾಲಿನ ಶಾಲಾ ವಾರ್ಷಿಕೊತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದರು ಬಳಿಕ ಆಶೀರ್ವಚನ ನೀಡಿದರು.
ಮಕ್ಕಳಲ್ಲಿ ಸಮಾನತೆ ಹಾಗೂ ಬಾವೈಕ್ಯತೆಯ ಭಾವನೆಗಳನ್ನು ಬೆಳಸುವ ನಿಟ್ಟಿನಲ್ಲಿ ಜಾತಿ-ಧರ್ಮ, ಭೇದ-ಭಾವ ಮರೆತು ಮಾತೃ ಭೋಜನಾ ಕಾರ್ಯಕ್ರಮವನ್ನು ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಆಚರಿಸಲಾಗುತ್ತಿದೆ. ಮಕ್ಕಳು ಕೇವಲ 8 ಗಂಟೆ ಕಾಲ ಮಾತ್ರ ಶಾಲೆಯಲ್ಲಿ ಇರುತ್ತಾರೆ ಉಳಿದ 16 ಗಂಟೆ ಸಮಯ ಪಾಲಕರ ಬಳಿ ಇರುತ್ತಾರೆ. ವಿವಿಧ ಸಾಧಕರ ಕುರಿತು, ಪಾಲಕರ ಕಷ್ಟಗಳ ಕುರಿತು ಮಕ್ಕಳಿಗೆ ತಿಳಿಹೇಳಿ ಜೀವನದ ಬಗ್ಗೆಯೂ ಅರಿವು ಮೂಡಿಸಿ. ಮಕ್ಕಳಿಗೆ ಅವಶ್ಯಕತೆ ಇಲ್ಲದ ಮೊಬೈಲ್‌ನಂತಹ ವಸ್ತುಗಳನ್ನು ಕೊಟ್ಟು ಕೆಟ್ಟದಕ್ಕೆ ದಾರಿಮಾಡದಿರಿ. ಈ ನಿಟ್ಟಿನಲ್ಲಿ ಎಲ್ಲಾ ಪೋಷಕರು ಮುನ್ನೆಚ್ಚರಿಕೆವಹಿಸಬೇಕು ಎಂದು ಸಲಹೆ ನೀಡಿದರು.
ಬಾಗೇಪಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಪ್ರಶಾಂತ್ ಆರ್.ವರ್ಣಿ ಮಾತನಾಡಿ, ಪಾಲಕರು ಶಾಲಾ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೆ ಮೊಬೈಲ್ ಕೊಡುವ ಕೆಟ್ಟ ಪದ್ದತಿಯನ್ನು ನಿಲ್ಲಿಸಬೇಕು. 18 ವರ್ಷ ವಯಸ್ಸಿನೊಳಗಿನ ಶಾಲಾ, ಕಾಲೇಜು ಮಕ್ಕಳಿಗೆ ದ್ವಿಚಕ್ರ ವಾಹನ ಕೊಟ್ಟು ಅಪರಾಧಗಳಿಗೆ ಕಾರಣರಾಗಬೇಡಿ. ಚಿಕ್ಕವಯಸ್ಸಿನ ಹೆಣ್ಣು ಮಕ್ಕಳಿಗೆ ಬಾಲ್ಯ ವಿವಾಹ ಮಾಡುವ ಮೌಢ್ಯ ಪದ್ದತಿಗೆ ಪಾಲಕರು ಅವಕಾಶ ಕಲ್ಪಿಸಬೇಡಿ. ದ್ವಿಚಕ್ರ ವಾಹನ ಅಪಘಾತ ಹಾಗೂ ಬಾಲ್ಯ ವಿವಾಹದಂತಹ ಅಪರಾಧ ಪ್ರಕರಣಗಳಿಗೆ ಕಾರಣರಾಗಿರುವ ವಿದ್ಯಾರ್ಥಿಗಳ ಬದಲಿಗೆ ಪಾಲಕರು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಪೋಷಕರಲ್ಲಿ ಅರಿವು ಮೂಡಿಸಿದರು.
ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ಅಯೋಜಿಸಿದ್ದ ಮಾತೃ ಭೋಜನಾ ಕಾರ್ಯಕ್ರಮದಲ್ಲಿ ಪಾಲಕರು ಸಿದ್ದಪಡಿಸಿಕೊಂಡು ತಂದಿದ್ದ ವಿವಿಧ ಬಗೆಯ ತಿಂಡಿ, ತಿನುಸುಗಳನ್ನು ಗಣ್ಯರು ಮಕ್ಕಳಿಗೆ ತಿನ್ನಿಸುವ ಮೂಲಕ ಭಾವೈಕ್ಯತೆ ಮೆರೆದರು. ಇದೇ ವೇಳೆ ಮಂಗಳನಾಥ ಸ್ವಾಮೀಜಿಯವರನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.
ಇದನ್ನೂ ಓದಿ : ಬಾಗೇಪಲ್ಲಿ | ಸಮಗ್ರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-2024
ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಶಾಖೆ ಅಧಿಚುಂಚನಗಿರಿ ಶಿಕ್ಷಣ ಸಂಸ್ಥೆ ಸಿಇಒ ಶಿವರಾಮರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಪ್ಪ, ಪುರಸಭೆ ಉಪಾಧ್ಯಕ್ಷೆ ಸುಜಾತ ನರಸಿಂಹನಾಯ್ಡು, ಸದಸ್ಯ ನರಸಿಂಹಮೂರ್ತಿ, ಪ್ರಾಂಶುಪಾಲ ಮುನಿರಾಜು ಹಾಗೂ ಮಕ್ಕಳ ಪಾಲಕರು ಭಾಗವಹಿಸಿದ್ದರು.