ಸಂಸತ್ತಿನ ಚಳಿಗಾಲದ ಅಧಿವೇಶನ ಇಂದು ಆರಂಭವಾಗಿದ್ದು ಸ್ಪೀಕರ್ ಓಂ ಬಿರ್ಲಾ ಅವರು ಅಧಿವೇಶನವನ್ನು ನವೆಂಬರ್ 27ಕ್ಕೆ ಮುಂದೂಡಿದ್ದಾರೆ. ಅದಾನಿ ಹಗರಣ, ಮಣಿಪುರ ಹಿಂಸಾಚಾರ ಬಗ್ಗೆ ಸದನದಲ್ಲಿ ವಿಪಕ್ಷಗಳು ಪ್ರಸ್ತಾಪಿಸಿದ್ದು ಗದ್ದಲದ ಬಳಿಕ ಕಲಾಪ ಮುಂದೂಡಲಾಗಿದೆ.
ಇನ್ನು “ಸ್ಪೀಕರ್ ಸದನವನ್ನು ಯಾಕೆ ಮುಂದೂಡಿದರು ಎಂಬುದು ತಿಳಿದಿಲ್ಲ” ಎಂದು ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ ಹೇಳಿದ್ದಾರೆ.
“ಮಣಿಪುರ ಹಿಂಸಾಚಾರದ ವಿಷಯವನ್ನು ಪ್ರಸ್ತಾಪಿಸಲು ನಾವು ಆಗ್ರಹಿಸಿದ್ದೇವೆ. ಮಣಿಪುರದಲ್ಲಿ ಅತ್ಯಾಚಾರ, ಕೊಲೆಗಳು ನಡೆಯುತ್ತಿವೆ ಮತ್ತು ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದ್ದು ಉತ್ತರ ಭಾರತದಲ್ಲಿ ಮಾಲಿನ್ಯ ಅಧಿಕವಾಗಿದೆ. ಈ ಬಗ್ಗೆ ನಮಗೆ ಆತಂಕವಿದೆ. ಇದು ಅತೀ ಗಂಭೀರ ವಿಷಯಗಳಾಗಿವೆ” ಎಂದು ಕಾಂಗ್ರೆಸ್‌ನ ಪ್ರಮೋದ್ ತಿವಾರಿ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಡಿ. 9ರಿಂದ 20ರವರೆಗೆ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ
ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಸಂಸತ್ತಿನ ಉಭಯ ಸದನಗಳು ಸುಗಮವಾಗಿ ನಡೆಯಲು ಸಹಕಾರ ಮತ್ತು ಬೆಂಬಲ ನೀಡುವಂತೆ ಎಲ್ಲಾ ಪಕ್ಷದ ನಾಯಕರನ್ನು ವಿನಂತಿಸಿದ್ದಾರೆ ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ಚಳಿಗಾಲದ ಅಧಿವೇಶನವು ಡಿಸೆಂಬರ್ 20ರವರೆಗೆ ನಡೆಯಲಿದೆ. ಈ ಅಧಿವೇಶನದಲ್ಲಿ, ವಕ್ಫ್ ತಿದ್ದುಪಡಿ ಮಸೂದೆ ಮತ್ತು ವಿಪತ್ತು ನಿರ್ವಹಣಾ (ತಿದ್ದುಪಡಿ) ಮಸೂದೆಗಳು ಚರ್ಚೆಗೆ ಬರುವ ಸಾಧ್ಯತೆಯಿದೆ. ಬ್ಯಾಂಕಿಂಗ್ ಕಾನೂನುಗಳ (ತಿದ್ದುಪಡಿ) ಮಸೂದೆ ಮತ್ತು ರೈಲ್ವೆ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗುತ್ತದೆ. ರೈಲ್ವೆ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನೂ ಮಂಡಿಸಲಾಗುವುದು.
ಜೊತೆಗೆ ಈ ಅಧಿವೇಶನದಲ್ಲಿ ಸರ್ಕಾರವು ‘ಒಂದು ದೇಶ ಒಂದು ಚುನಾವಣೆ’ ಮಸೂದೆಯನ್ನು ಮಂಡಿಸಬಹುದು ಎಂಬ ಊಹಾಪೋಹಗಳಿವೆ. ಇತ್ತೀಚೆಗೆ ಒಂದು ದೇಶ ಒಂದು ಚುನಾವಣೆ ಯೋಜನೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ನಾವು ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.
