ಇತ್ತೀಚೆಗೆ ಬಾಗಲಕೋಟೆಯಲ್ಲಿ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮದ ವೇಳೆ ವಕ್ಫ್ ಬಗ್ಗೆ ಪ್ರಸ್ತಾಪಿಸಿ ಜನರ ಛೀಮಾರಿ ಎದುರಿಸಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಈಗ ವಕ್ಫ್ ವಿಚಾರವನ್ನು ಮುಂದಿಟ್ಟುಕೊಂಡು ಬೀದರ್ ತಲುಪಿದ್ದಾರೆ. ವಕ್ಫ್ ವಿವಾದದ ಬಗ್ಗೆ ಜನಜಾಗೃತಿ ಮೂಡಿಸಲು ಬೀದರ್ ಜಿಲ್ಲೆಗೆ ಇಂದು ಭೇಟಿ ನೀಡಲಾಗಿದೆ ಎಂದು ನಾಯಕರುಗಳು ಹೇಳಿಕೊಂಡಿದ್ದಾರೆ.
ಆದರೆ ಬಿಜೆಪಿಯ ಕಲಬುರಗಿ ವಿಭಾಗೀಯ ಸಹ ಪ್ರಭಾರಿ ಈಶ್ವರ ಸಿಂಗ್ ಠಾಕೂರ್ ಹೊರತುಪಡಿಸಿ ಬಿಜೆಪಿಯ ಯಾವುದೇ ಮುಖಂಡರು ಕೂಡಾ ಯತ್ನಾಳ್ ತಂಡದ ಜೊತೆ ಇಲ್ಲ. ಜಿಲ್ಲೆಯಲ್ಲಿರುವ ಬಿಜೆಪಿಯ ನಾಲ್ವರು ಶಾಸಕರುಗಳು ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಅವರು ಯತ್ನಾಳ್ ತಂಡದ ಬಳಿ ಕಾಣಿಸಿಕೊಂಡಿಲ್ಲ.
ಇದನ್ನು ಓದಿದ್ದೀರಾ? ಬಾಗಲಕೋಟೆ | ದೇವಸ್ಥಾನದ ಕಾರ್ಯಕ್ರಮದಲ್ಲಿ ‘ವಕ್ಫ್’ ವಿಚಾರ: ಶಾಸಕ ಯತ್ನಾಳ್‌ಗೆ ಸಾರ್ವಜನಿಕರಿಂದ ಛೀಮಾರಿ
ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಸಂಸದ ಜಿಎಂ ಸಿದ್ಧೇಶ್ವರ, ಮಾಜಿ ಶಾಸಕ ಕುಮಾರ ಬಂಗಾರಪ್ಪ, ಶಾಸಕ ಬಿ ಪಿ ಹರೀಶ್, ಬಿಜೆಪಿ ಕಲಬುರಗಿ ವಿಭಾಗೀಯ ಸಹ ಪ್ರಭಾರಿ ಈಶ್ವರ ಸಿಂಗ್ ಠಾಕೂರ್ ತಂಡವನ್ನು ಭೇಟಿಯಾದರು.
ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ, “ವಕ್ಫ್ ವಿವಾದದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ನಾವು ಬೀದರ್ ಜಿಲ್ಲೆಯಿಂದ ಪ್ರಾರಂಭಿಸಿದ್ದೇವೆ. ವಾರ್ ರೂಂ ಆರಂಭಿಸಿದ ಬಳಿಕ ಹಲವು ಕರೆಗಳು ಬರುತ್ತಿವೆ. ವಕ್ಫ್ ವಿವಾದ ಗಮನಕ್ಕೆ ಬಂದ ಕೂಡಲೇ ವಿಜಯಪುರದಲ್ಲಿ ಯತ್ನಾಳ್ ಅವರು ಹೋರಾಟ ನಡೆಸಿದ್ದಾರೆ. ನಾವು ಈಗ ಮಾಡುತ್ತಿರುವ ಕೆಲಸ ಧರ್ಮದ ಕೆಲಸ” ಎಂದು ಹೇಳಿದರು.
“ಕೇಂದ್ರ ಸಂಸದೀಯ ಸಮಿತಿ ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಕಳುಹಿಸಲು ತಿಳಿಸಿದೆ. ಸಮಿತಿ ಸೂಚನೆಯಂತೆ ನಾವು ಮಾಹಿತಿ ಸಂಗ್ರಹಿಸಿ, ಜನಜಾಗೃತಿ ಮೂಡಿಸಲು ನಿರ್ಧರಿಸಿದ್ದೇವೆ. ಬೀದರ್‌ನ ಚಟನಳ್ಳಿ, ಧರ್ಮಾಪೂರ ಗ್ರಾಮದಲ್ಲಿ ರೈತರ ಆಸ್ತಿಯನ್ನು ವಕ್ಫ್ ಎಂದು ನಮೂದಿಸಲಾಗಿದೆ. ಅಲ್ಲಿಗೂ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತೇವೆ” ಎಂದು ತಿಳಿಸಿದರು.
