ಉತ್ತರ ಪ್ರದೇಶದ ಮೀರತ್‌ನಲ್ಲಿ ಮುಸ್ಲಿಂ ಯುವಕನೊಬ್ಬನಿಗೆ ಥಳಿಸಿ, ಆತನನ್ನು ವಿವಸ್ತ್ರಗೊಳಿಸಿ ಜೈ ಶ್ರೀ ರಾಮ್ ಎಂದು ಕೂಗುವಂತೆ ಒತ್ತಾಯಿಸಲಾಗಿದೆ ಎಂದು ಸೋಮವಾರ ಯುವಕನ ಕುಟುಂಬ ಆರೋಪಿಸಿದೆ.
ಆದರೆ ಆರೋಪಿಗಳು ಆತನನ್ನು ವಿವಸ್ತ್ರಗೊಳಿಸಿ ಜೈ ಶ್ರೀರಾಮ್ ಜಪಿಸಲು ಒತ್ತಾಯಿಸಿದ್ದಾರೆ ಎಂಬುದನ್ನು ಪೊಲೀಸರು ಅಲ್ಲಗಳೆದಿದ್ದಾರೆ. ಇದು ಯುವಕ ಮತ್ತು ಥಳಿಸಿದವರ ನಡುವೆ ಇರುವ ಪರಸ್ಪರ ದ್ವೇಷದಿಂದಾಗಿ ನಡೆದ ಘಟನೆಯಂತೆ ತೋರುತ್ತದೆ ಎಂದು ಪೊಲೀಸರು ಹೇಳಿಕೊಂಡಿದ್ದಾರೆ.
“ನನ್ನ ಮಗ ಮಂಗಲ್ ಪಾಂಡೆ ನಗರದ ಖಾಸಗಿ ಶೂಟಿಂಗ್ ರೇಂಜ್‌ನಲ್ಲಿ ಅಭ್ಯಾಸ ಮುಗಿಸಿ ಶನಿವಾರ ರಾತ್ರಿ 8 ಗಂಟೆಗೆ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ” ಎಂದು ಮೀರತ್‌ನ ಪಲ್ಲವಪುರಂನ ಸೋಫಿಪುರ್ ಗ್ರಾಮದ ನಿವಾಸಿ ಗುಲ್ಫಾಮ್ ಎಂಬವರ ತಂದೆ ಅಫ್ತಾಬ್ ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ಉತ್ತರ ಪ್ರದೇಶ: ರಸ್ತೆ ಬದಿ ಹಚ್ಚೆ ಹಾಕಿಸಿಕೊಂಡ 68 ಮಹಿಳೆಯರಿಗೆ ಹೆಚ್‌ಐವಿ ಸೋಂಕು
ಯುವಕನನ್ನು ಮೂವರು ಯುವಕರು ಮೋಟಾರ್‌ಸೈಕಲ್‌ನಲ್ಲಿ ವಿಕ್ಟೋರಿಯಾ ಪಾರ್ಕ್‌ಗೆ ಕರೆದೊಯ್ದಿದ್ದು, ಅಲ್ಲಿ ಥಳಿಸಿ ವಿವಸ್ತ್ರಗೊಳಿಸಿದರು. ಜೈ ಶ್ರೀ ರಾಮ್ ಎಂದು ಕೂಗುವಂತೆ ಒತ್ತಾಯಿಸಿದರು ಎಂದು ಅಫ್ತಾಬ್ ದೂರಿದ್ದಾರೆ.
ದುಷ್ಕರ್ಮಿಗಳು ಅವರ ಮೊಬೈಲ್ ಫೋನ್ ಕೂಡ ಕಿತ್ತುಕೊಂಡಿದ್ದಾರೆ. ಥಳಿಸಿ ವಿವಸ್ತ್ರಗೊಳಿಸಿದ ಬಳಿಕ ಗುಲ್ಫಾಮ್ ಪ್ರಜ್ಞಾಹೀನನಾಗಿ ಬಿದ್ದಿದ್ದನು ಎಂದು ಸಂತ್ರಸ್ತನ ಕುಟುಂಬಸ್ಥರು ಹೇಳಿದ್ದಾರೆ. ಆದರೆ ಪೊಲೀಸರು ಕುಟುಂಬಸ್ಥರ ಈ ಆರೋಪವನ್ನು ಅಲ್ಲಗಳೆದಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಸಿವಿಲ್ ಲೈನ್ಸ್ ಎಸ್‌ಎಚ್‌ಒ ಮಹಾವೀರ್ ಸಿಂಗ್, “ಎಫ್‌ಐಆರ್‌ನಲ್ಲಿ ಸಂತ್ರಸ್ತರನ್ನು ಜೈ ಶ್ರೀ ರಾಮ್ ಎಂದು ಕೂಗುವಂತೆ ಒತ್ತಾಯಿಸುವ ಯಾವುದೇ ಉಲ್ಲೇಖವಿಲ್ಲ. ಇದು ಯುವಕರ ನಡುವಿನ ದ್ವೇಷದ ಪ್ರಕರಣವಾಗಿದೆ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ಉತ್ತರ ಪ್ರದೇಶ ಸಂಭಲ್ ಹಿಂಸಾಚಾರ | ನಾಲ್ವರು ಸಾವು; ನಿರ್ಬಂಧ, ಸಂಸದರ ವಿರುದ್ಧ ಪ್ರಕರಣ
ಸದ್ಯ ಯುವಕನ ತಂದೆ ಅಫ್ತಾಬ್ ಅವರ ದೂರಿನ ಆಧಾರದ ಮೇಲೆ, ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 351 (2) (ಕ್ರಿಮಿನಲ್ ಬೆದರಿಕೆ), 352 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಮತ್ತು 324 (ಕಿಡಿಗೇಡಿತನ) ಅಡಿಯಲ್ಲಿ ದೂರು ದಾಖಲಾಗಿದೆ.
ಆರೋಪಿಗಳನ್ನು ಬಂಧಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಎಸ್‌ಎಚ್‌ಒ ಸಿಂಗ್ ತಿಳಿಸಿದ್ದಾರೆ. ಸದ್ಯ ಗುಲ್ಫಾಮ್ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಲ್ಫಾಮ್ ರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದಾನೆ ಎಂದು ಕುಟುಂಬ ತಿಳಿಸಿದೆ.