ಚಿತ್ರದುರ್ಗ | ಒಳ ಮೀಸಲಾತಿ ಜಾರಿಗೆ ಸದಾಶಿವ ಆಯೋಗದ ವರದಿ ಸಾಕು : ಚಿಂತಕ ಯಾದವ ರೆಡ್ಡಿ

Date:

Advertisements

ಒಳಮೀಸಲಾತಿ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ಒತ್ತಡಕ್ಕೆ ಮಣಿದಿದ್ದಾರೆ. ಸದಾಶಿವ ಆಯೋಗದ ವರದಿಯ ಆಧಾರದಲ್ಲೇ ಒಳಮೀಸಲಾತಿ ಜಾರಿ ಮಾಡಬಹುದು. 1901ರಿಂದ ಈವರೆಗೆ ನೀಡಿರುವ ಬೇರೆ ಬೇರೆ ಆಯೋಗದ ವರದಿಗಳು ಸುಪ್ರೀಂ ಕೋರ್ಟ್ ತೀರ್ಪಿಗಿಂತಲೂ ದೊಡ್ಡವಲ್ಲ ಎಂದು ಚಿಂತಕ ಜೆ.ಯಾದವ ರೆಡ್ಡಿ ಅಭಿಪ್ರಾಯಪಟ್ಟರು.

ಚಿತ್ರದುರ್ಗ ನಗರದ ಕ್ರೀಡಾ ಭವನದಲ್ಲಿ ಮಾದಿಗ ಮಹಾಸಭಾ, ಲಂಕೇಶ್ ವಿಚಾರ ವೇದಿಕೆ, ಬೀಕೆ-ಕೇಬಿ ಬಳಗದ ಸಹಯೋಗದಲ್ಲಿ ʼನಿವೃತ್ತ ನ್ಯಾಯಮೂರ್ತಿ ನಾಗಮೋಹನ್‍ದಾಸ್ ಆಯೋಗದ ಸಾಧ್ಯತೆ-ಸವಾಲುಗಳುʼ ಕುರಿತು ಭಾನುವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಿಲ್ಲರ್ ಆಯೋಗ, ಎಲ್.ಜಿ.ಹಾವನೂರ್ ಆಯೋಗದ ವರದಿಯನ್ನು ಕೆಲವರು ವಿರೋಧಿಸಿದ್ದುಂಟು. ಡಿ.ವಿ.ಗುಂಡಪ್ಪನವರಿಂದ ಹಿಡಿದು ಅನೇಕ ಸಾಹಿತಿಗಳು ಮೀಸಲಾತಿ ವಿರುದ್ದವಾಗಿ ಮಾತನಾಡಿದ್ದರು. ಶೇ.73 ರಷ್ಟು ಮೀಸಲಾತಿಯನ್ನು ಕರ್ನಾಟಕದಲ್ಲಿ ಮಹಾರಾಜರು ನೀಡಿದ್ದರು. ಸದಾಶಿವ ಆಯೋಗ, ಕಾಂತರಾಜ್ ಆಯೋಗದ ವಿರುದ್ದವೂ ಅಪಸ್ವರಗಳು ಕೇಳಿ ಬರುತ್ತಿವೆ ಎಂದರು.

Advertisements
ಮಾದಿಗ ಮಹಾಸಭಾ

ಇದನ್ನೂ ಓದಿ : ಈ ದಿನ ಸಂಪಾದಕೀಯ | ಉಪಸಮರದ ಗೆಲುವು– ಈಗಲಾದರೂ ಎಚ್ಚೆತ್ತುಕೊಳ್ಳುತ್ತಾ ಕಾಂಗ್ರೆಸ್‌ ಸರ್ಕಾರ?

ದಲಿತ ಸಮುದಾಯಗಳ ಒಳಗಿನವರೇ ಕೆಲವರು ಒಳ ಮೀಸಲಾತಿ ಬಗ್ಗೆ ಅತ್ಯುಗ್ರವಾಗಿ ಮಾತನಾಡುತ್ತಿರುವುದು ನೋವಿನ ಸಂಗತಿ. ಯಾರು ಯಾರ ಮೀಸಲಾತಿಯನ್ನು ಕಸಿಯುವುದಿಲ್ಲ. ಆಯಾ ಜಾತಿಗನುಗುಣವಾಗಿ ಮೀಸಲಾತಿ ಹಂಚಿಕೆಯಾಗಬೇಕು. ಇಲ್ಲದಿದ್ದರೆ ಮುಂದೆ ಸ್ವಾಸ್ಥ್ಯ ಸಮಾಜ, ಸಮಸಮಾಜವಿರುವುದಿಲ್ಲ. ಮುಂದುವರೆದಂತೆ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಮಾದಿಗ ಮಹಾಸಭಾ1

ಯಾರು ಮೀಸಲಾತಿಯನ್ನು ಬೇಕು ಎಂದು ಒಪ್ಪಿಕೊಳ್ಳುತ್ತಾರೆಯೋ, ಅವರು ಒಳಮೀಸಲಾತಿಗೆ ವಿರೋಧಿಸಿದರೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಆಶಯಗಳಿಗೆ ದ್ರೋಹವೆಸಗಿದಂತೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಒಳ ಮೀಸಲಾತಿಯನ್ನು ಶೀಘ್ರ ಜಾರಿಗೊಳಿಸಬೇಕಿತ್ತು. ನ್ಯಾ.ನಾಗಮೋಹನ್‍ದಾಸ್ ವರದಿಯ ಅವಶ್ಯಕತೆಯೇ ಇರಲಿಲ್ಲ ಎಂದು ಗುಡುಗಿದರು.

ರಾಜ್ಯ ಸರ್ಕಾರಗಳಿಗೆ ಒಳ ಮೀಸಲಾತಿ ಜಾರಿಗೊಳಿಸುವ ಅಧಿಕಾರ ಸುಪ್ರೀಂ ಕೋರ್ಟ್ ನೀಡಿದ್ದರೂ ದತ್ತಾಂಶದ ನೆಪ ಹೇಳುತ್ತಿರುವುದು ರಾಜಕೀಯ ನಾಟಕ ಎಂದು ಆಪಾದಿಸಿದರು.

ಸಾಮಾಜಿಕ, ರಾಜಕೀಯ ವಿಶ್ಲೇಷಕ ಕೋಡಿಹಳ್ಳಿ ಸಂತೋಷ್ ಮಾತನಾಡಿ, ಒಳ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿ ಮೂರು ತಿಂಗಳು ಕಳೆದಿದ್ದರೂ ರಾಜ್ಯ ಸರ್ಕಾರ ದತ್ತಾಂಶದ ನೆಪ ಮುಂದಿಟ್ಟುಕೊಂಡು ಒಳ ಮೀಸಲಾತಿಯನ್ನು ಜಾರಿಗೊಳಿಸಲು ಮೀನಾಮೇಷ ಎಣಿಸುತ್ತಿದೆ. ಮಾದಿಗ ಸಮುದಾಯ ಮೂರ್ನಾಲ್ಕು ದಶಕಗಳಿಂದಲೂ ಒಳ ಮೀಸಲಾತಿಗಾಗಿ ಹೋರಾಟ ಮಾಡಿಕೊಂಡು ಬರುತ್ತಿದೆ. ಮಾದಿಗ ಸಮುದಾಯ ಒಂಟಿಯಲ್ಲ. ಸಂಘಟನೆ ಮಾಡಿಕೊಂಡು ಹೋರಾಡುತ್ತೇವೆ. ಒಳ ಮೀಸಲಾತಿ ಅನುಷ್ಠಾನಗೊಳಿಸಲು ಇಷ್ಟವಿಲ್ಲದಿದ್ದರೆ, ಮತ್ತೆ ಕೋರ್ಟಿಗೆ ಹೋಗುತ್ತೇವೆನ್ನುವುದಾದರೆ ಹೋಗಿ ಎಂದು ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದರು.

ಮಾದಿಗ ಮಹಾಸಭಾ12

ತುಮಕೂರು ವಿಶ್ವವಿದ್ಯಾನಿಲಯದ ಉಪನ್ಯಾಸಕ ಡಾ.ನಾಗಭೂಷಣ ಬಗ್ಗನಾಡು ಮಾತನಾಡಿ, “ಕಳೆದ ನಲವತ್ತು ವರ್ಷಗಳಿಂದಲೂ ದೇಶದಲ್ಲಿ ಒಳ ಮೀಸಲಾತಿಗಾಗಿ ಹೋರಾಟಗಳು, ಚಳುವಳಿಗಳು ನಡೆಯುತ್ತಲಿವೆ. ಕೊಟ್ಟ ಮೀಸಲಾತಿಯನ್ನು ಹಂಚಿ ತಿನ್ನಲು ಒಳ ಮೀಸಲಾತಿ ನೀಡುವುದಕ್ಕೆ ಅರ್ಧ ಶತಮಾನವಾಗಿದೆ. ಇದಕ್ಕಾಗಿ ಹೋರಾಟ ನಡೆಸಿದ ಅನೇಕರು ನಮ್ಮನ್ನೆಲ್ಲಾ ಅಗಲಿದ್ದಾರೆ ಎಂದರು.

ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ಸಮಾನತೆಯ ಚಿಂತನೆಯನ್ನಿಟ್ಟುಕೊಂಡು ಸಂವಿಧಾನ ರಚಿಸಿ ದೇಶಕ್ಕೆ ಕೊಡುಗೆ ನೀಡಿರುವ ಡಾ.ಬಿ.ಆರ್.ಅಂಬೇಡ್ಕರ್‌ ಅವರ ಚಿಂತನೆಗಳನ್ನು ಹೊತ್ತವರು ಅವರ ಆಶಯಗಳನ್ನು ಏಕೆ ಮರೆತಿದ್ದಾರೆನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ಸುಪ್ರೀಂ ತೀರ್ಪು ನೀಡಿದ್ದರೂ ಒಳಮೀಸಲಾತಿ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಜಾಣೆ ನಡೆ ಪ್ರದರ್ಶಿಸುತ್ತಿದೆ. 75 ವರ್ಷಗಳ ಕಾಲ ಮೀಸಲಾತಿ ಉಂಡವರು ಒಳ ಮೀಸಲಾತಿ ಬಗ್ಗೆ ಏಕೆ ಧ್ವನಿ ಎತ್ತುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದೇ ವೇಳೆ ಹಲವು ಗಣ್ಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಇದನ್ನೂ ಓದಿ : ಚಿತ್ರದುರ್ಗ | ಅಕ್ರಮ ಮದ್ಯ ಸಾಗಾಟ: ವ್ಯಕ್ತಿ ಮತ್ತು ದ್ವಿಚಕ್ರ ವಾಹನ ಅಧಿಕಾರಿಗಳ ವಶಕ್ಕೆ

ಕಾರ್ಯಕ್ರಮದಲ್ಲಿ ಚಿಂತಕ ಶಿವಸುಂದರ್, ಹಿರಿಯ ಪತ್ರಕರ್ತ ಎಂ.ಎನ್.ಅಹೋಬಲಪತಿ, ಹಿರಿಯ ಹೋರಾಟಗಾರ ಬಿ.ಪಿ.ಪ್ರಕಾಶ್‍ಮೂರ್ತಿ, ಹುಲ್ಲೂರು ಕುಮಾರ್‌ ಸ್ವಾಮಿ, ಲಂಕೇಶ್ ವಿಚಾರ ವೇದಿಕೆಯ ಸಂಚಾಲಕ ಜಡೆಕುಂಟೆ ಮಂಜುನಾಥ್, ಕೊಟ್ಟ ಶಂಕರ್, ಮಲ್ಲಿಕಾರ್ಜುನ್, ಆರ್.ಹಲಸಂಗಿ, ಬಿ.ಎಂ.ನಿರಂಜನ್, ಎಂ.ಆರ್.ಶಿವರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ನರಸಿಂಹರಾಜ ಮತ್ತಿತರರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X