ದಾವಣಗೆರೆಯ ಹರಿಹರದ ಪಡಿತರ ವಿತರಣಾ ಕೇಂದ್ರವೊಂದರಲ್ಲಿ ಅಕ್ರಮವಾಗಿ ಅಕ್ಕಿ ಮತ್ತು ರಾಗಿಯನ್ನು ಸಾಗಿಸುವುದನ್ನು ಪ್ರಶ್ನಿಸಿದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಗ್ರಾಮಾಂತರ ಘಟಕದ ಭಾಜಪಾ ವತಿಯಿಂದ ಪ್ರತಿಭಟನೆ ನಡೆಸಿದರು.
ಹರಿಹರದ ಆಶ್ರಯ ಬಡಾವಣೆಯಲ್ಲಿರುವ ಶ್ರೀ ಶಕ್ತಿ ಜಯದೇವಿ ಮಹಿಳಾ ಮಂಡಳಿ ಪಡಿತರ ವಿತರಣಾ ಕೇಂದ್ರ ಸೊಸೈಟಿಯ ಮಾಲೀಕ ಡಿ. ಹನುಮಂತಪ್ಪ ದಂಪತಿಗಳಿಬ್ಬರು ಸೇರಿ ಬಡವರಿಗೆ ನೀಡಬೇಕಿದ್ದ ಅಕ್ಕಿ ಹಾಗೂ ರಾಗಿಯನ್ನು ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸಂದರ್ಭದಲ್ಲಿ ಸ್ಥಳೀಯ ನಗರಸಭೆ ಸದಸ್ಯ ಆಟೋ ಹನುಮಂತಪ್ಪ ಹಾಗೂ ಸ್ಥಳೀಯರು ತಡೆಯಲು ಹೋಗಿದ್ದಕ್ಕೆ ಸೊಸೈಟಿ ಮಾಲೀಕರಿಬ್ಬರು ಸೇರಿ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಹನುಮಂತಪ್ಪನವರ ಮೇಲೆ ಗುಂಡಾ ವರ್ತನೆ ತೋರಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈ ವೇಳೆ ಬಿಜೆಪಿ ಅಧ್ಯಕ್ಷ ಲಿಂಗರಾಜು ಮಾತನಾಡಿ, ಸರ್ಕಾರ ಬಡವರಿಗೆ ನೀಡುವ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಾಗಿಸಲು ಕಾರಣವಾದ ಪಡಿತರ ವಿತರಣಾ ಕೇಂದ್ರವನ್ನು ಬಂದ್ ಮಾಡಿಸಿ ಸೋಸೈಟಿ ಮಾಲೀಕನ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು, ಆಹಾರ ಸರಬರಾಜು ಇಲಾಖೆ ಕಂದಾಯ ಇಲಾಖೆ ಮತ್ತು ಪೊಲೀಸ್ ಇಲಾಖಾ ಅಧಿಕಾರಿಗಳು ಈ ಕೂಡಲೇ ಗಮನಹರಿಸಬೇಕು. ಒಂದು ವೇಳೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಭಾರತೀಯ ಜನತಾದಳ ಪಕ್ಷದ ವತಿಯಿಂದ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.