ನೂತನವಾಗಿ ನಿರ್ಮಾಣಗೊಂಡ ದಾವಣಗೆರೆ ತಾಲೂಕು ಕಚೇರಿಯನ್ನು ಕೂಡಲೇ ಉದ್ಘಾಟನೆ ಮಾಡುವಂತೆ ಒತ್ತಾಯಿಸಿ ನವೆಂಬರ್ 25ಕ್ಕೆ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಪ್ರತಿಭಟನಾಕಾರರು ಮಾತನಾಡಿ, ದಾವಣಗೆರೆ ತಾಲೂಕು ಕಚೇರಿಯ ಕಟ್ಟಡ ಕಾಮಗಾರಿಯನ್ನು ಪ್ರಾರಂಭಿಸಿ 8 ವರ್ಷಗಳಾಗಿದ್ದು, ಇತ್ತೀಚೆಗೆ 2 ವರ್ಷಗಳ ಕೆಳಗೆ ಕಟ್ಟಡ ಕಾಮಗಾರಿಯು ಪೂರ್ಣಗೊಂಡಿದೆ. ಪೀಠೋಪಕರಣಗಳನ್ನು ಕೂಡ ಕಟ್ಟಡಕ್ಕೆ ಅಳವಡಿಸಲಾಗಿದೆ. ಆದರೆ ಇಲ್ಲಿಯವರೆಗೂ ನವೀಕರಣಗೊಂಡ ಕಟ್ಟಡವನ್ನು ಸಾರ್ವಜನಿಕ ಉಪಯೋಗಕ್ಕಾಗಿ ಉದ್ಘಾಟನೆಗೊಳಿಸದೆ ರೈತ ಭವನದ ಕಟ್ಟಡದಲ್ಲಿ ಬಾಡಿಗೆ ಪಾವತಿಸುವುದರ ಮೂಲಕ ಹಣ ಪೋಲು ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ ಮಾತನಾಡಿ, ತಾಲೂಕು ಕಚೇರಿ ಕಟ್ಟಡ ಉದ್ಘಾಟನೆಯಾಗದ ಕಾರಣ ಅನೇಕ ಅನೈತಿಕ ಚಟುವಟಿಕೆಗಳ ತಾಣವಾಗಿದೆ ಮತ್ತು ಈ ಕಟ್ಟಡದ ಸೋರಿಕೆ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಕಳಪೆ ಕಾಮಗಾರಿ ಆಗಿರುವುದಕ್ಕೆ ಉದ್ಘಾಟನೆಗೆ ವಿಳಂಬವಾಗುತ್ತಿದೆ ಎಂಬ ಅನುಮಾನವಿದೆ. ನಗರ ಮತ್ತು ಗ್ರಾಮಾಂತರ ಜನರಿಗೆ ಅನುಕೂಲವಾಗುವ ಸ್ಥಳ ಬಿಟ್ಟು, ಇನ್ನೂ ಯಾಕೆ ಬಾಡಿಗೆ ಕಟ್ಟಡದಲ್ಲಿ ಕಛೇರಿ ನೆಡೆಸುತ್ತಿದ್ದಾರೆ ಎಂಬುದು ಪ್ರಶ್ನೆಯಾಗಿದೆ.
ಈ ಕಟ್ಟಡ ಉದ್ಘಾಟನೆಯಾದಲ್ಲಿ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಪಾಲಿಕೆ, ಉಪವಿಭಾಗಾಧಿಕಾರಿಗಳ ಕಚೇರಿಗಳು ಇದರ ಸಮೀಪಕ್ಕೆ ಬಂದಂತೆ ಆಗುತ್ತದೆ ಮತ್ತು ವಿದ್ಯಾರ್ಥಿಗಳು ಪ್ರಮಾಣ ಪತ್ರಕ್ಕಾಗಿ, ಜನ ಸಾಮಾನ್ಯರು ಪಡಿತರ ಚೀಟಿ ಮತ್ತು ಇತರೆ ಸೌಲಭ್ಯಗಳನ್ನು ಪಡೆಯಲು ಈಗಿರುವ ರೈತರ ಭವನದ ತಾಲೂಕು ಕಚೇರಿಗೆ ಪುನಃ ಆಟೋ ಚಾರ್ಜ್ ಕೊಟ್ಟು ಹೋಗಬೇಕಾಗುತ್ತದೆ. ಆದ್ದರಿಂದ ಕಟ್ಟಡವನ್ನು ಕೂಡಲೇ ಉದ್ಘಾಟನೆ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕು. ಶೀಘ್ರ ಉದ್ಘಾಟನೆ ಮಾಡದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ವರದಿ ಓದಿದ್ದೀರಾ? ದಾವಣಗೆರೆ | ಅಕ್ರಮ ಪಡಿತರ ಸಾಗಾಟ: ಪ್ರಶ್ನಿಸಿದ ವ್ಯಕ್ತಿ ಮೇಲೆ ಹಲ್ಲೆ: ಕಾನೂನು ಕ್ರಮಕ್ಕೆ ಒತ್ತಾಯ
ಪ್ರತಿಭಟನೆಯಲ್ಲಿ ಬಾಬುರಾವ್, ಮಂಜುನಾಥ್, ಇಸ್ಮಾಯಿಲ್, ಜಬೀವುಲ್ಲಾ, ಮೆಹಬೂಬ್, ಚಂದ್ರಶೇಖರ್, ಗಣೇಶ್, ಗಿರೀಶ್, ರಮೇಶ್, ಸೈಯದ್ ಹಾಗೂ ಇತರರು ಹಾಜರಿದ್ದರು.