ದಾವಣಗೆರೆ ಜಿಲ್ಲೆಯಲ್ಲಿ ಕಳೆದ 7 ತಿಂಗಳಲ್ಲಿ 125 ನವಜಾತ ಶಿಶುಗಳು ಮತ್ತು 28 ಮಂದಿ ಬಾಣಂತಿಯರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಅತೀ ಹೆಚ್ಚು ಮಂದಿ ಸರ್ಕಾರಿ ಆಸ್ಪತ್ರೆಯಲ್ಲೇ ಮೃತರಾಗಿದ್ದಾರೆ ಎಂಬ ಆಘಾತಕಾರಿ ಸುದ್ದಿ ಬೆಳಕಿಗೆ ಬಂದಿದೆ.
2024ರ ಏಪ್ರಿಲ್ ಮತ್ತು ನವೆಂಬರ್ ನಡೆವೆ 125 ನವಜಾತ ಶಿಶುಗಳು ಮತ್ತು 28 ಮಂದಿ ಬಾಣಂತಿಯರು ಮೃತಪಟ್ಟಿದ್ದಾರೆ. ಈ ಪೈಕಿ, ಚಿಗಟೇರಿ ಸರ್ಕಾರಿ ಆಸ್ಪತ್ರೆಯಲ್ಲಿ 111 ಶಿಶುಗಳು ಮೃತಪಟ್ಟಿದ್ದರೆ, ದಾವಣಗೆರೆಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 24 ಶಿಶುಗಳು ಸಾವನ್ನಪ್ಪಿವೆ. ಮೃತಪಟ್ಟ ಬಾಣಂತಿಯರಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿಯೇ 23 ಮಂದಿ ಸಾವನ್ನಪ್ಪಿದ್ದು, ಐವರು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.
ಕಳೆದ 7 ತಿಂಗಳಲ್ಲಿ ದಾವಣಗೆರೆಯ ಮಕ್ಕಳ ಮತ್ತು ಮಹಿಳಾ ಆಸ್ಪತ್ರೆಗೆ 732 ಮಕ್ಕಳು ದಾಖಲಾಗಿದದ್ದರು. ಅವರಲ್ಲಿ, 657 ಶಿಶುಗಳು ಆರೋಗ್ಯವಾಗಿ ಡಿಸ್ಚಾರ್ಜ್ ಆಗಿವೆ. 34 ಶಿಶುಗಳನ್ನು ಬೇರೆ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಅಂತೆಯೇ, ಚಿಗಟೇರಿ ಆಸ್ಪತ್ರೆಯಲ್ಲಿ 1,103 ಶಿಶುಗಳ ದಾಖಲಾಗಿದ್ದರು. ಅವರಲ್ಲಿ, 882 ಶಿಶುಗಳು ಡಿಸ್ಚಾರ್ಜ್ ಆಗಿದ್ದರೆ, 44 ಶಿಶುಗಳನ್ನು ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಎರಡೂ ಆಸ್ಪತ್ರೆಯಲ್ಲಿ ಒಟ್ಟು 125 ಮಕ್ಕಳು ಸಾವನ್ನಪ್ಪಿದ್ದರೆ.
ಈ ಎರಡೂ ಆಸ್ಪತ್ರೆಗಳಲ್ಲಿ ತಾಲಾ ಒಂದೊಂದು ‘ನ್ಯೂ ಬಾರ್ನ್ ಕೇರ್’ ಘಟಕಗಳಿವೆ. ಆದರೆ, ಜಿಲ್ಲೆಯ ಬೇರಾವುದೇ ತಾಲೂಕು ಅಸ್ಪತ್ರೆಗಳಲ್ಲಿ ಈ ಘಟಕಗಳು ಇಲ್ಲದ ಕಾರಣ, ಶಿಶುಗಳ ಆರೋಗ್ಯ ಬಿಗಡಾಯಿಸಿದ್ದ ಕೊನೆಯ ಹಂತದಲ್ಲಿ ದಾವಣಗೆರೆ ಮತ್ತು ಚಿಗಟೇರಿ ಆಸ್ಪತ್ರೆಗಳಿಗೆ ಕಳಿಸಲಾಗುತ್ತದೆ. ಆದ್ದರಿಂದ, ಆಸ್ಪತ್ರೆಗಳಲ್ಲಿ ಮಕ್ಕಳ ಮರಣ ಪ್ರಮಾಣ ಹೆಚ್ಚಾಗಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.