ಎಲ್ಲರನ್ನೂ ರಕ್ಷಿಸುವ ರಕ್ಷಾಕವಚವಾದ ಸಂವಿಧಾನವನ್ನು ರಕ್ಷಿಸಬೇಕಾದ ಕೂಗು ಎದ್ದಿದೆ. ಕರ್ನಾಟಕದಲ್ಲಿ ಈಚೆಗೆ ನಡೆದ ಸಂವಿಧಾನ ಸಮಾವೇಶವು ಸಂವಿಧಾನದ ಬಗ್ಗೆ ಅರ್ಥಪೂರ್ಣ ಚರ್ಚೆಗಳನ್ನು ಹುಟ್ಟುಹಾಕಿದೆ. ಹಾಗಾಗಿ ಮತ್ತೊಮ್ಮೆ ಅಂಬೇಡ್ಕರ್ ಮತ್ತು ಸಂವಿಧಾನದ ಕುರಿತು ಸಂವಾದಿಸಬೇಕಾಗಿದೆ.
ಇಂದು ಅಂಬೇಡ್ಕರ್ ಮತ್ತು ಭಾರತದ ಸಂವಿಧಾನ ಮತ್ತೆ ಮತ್ತೆ ಚರ್ಚಿಸುವ, ಸಂವಾದಿಸುವ, ಅರ್ಥೈಸಿಕೊಳ್ಳುವ ಸಂಗತಿಗಳಾಗಿವೆ. ಒಂದೆಡೆ ಜಗತ್ತಿನಾದ್ಯಾಂತ ವಿದ್ವತ್ ಲೋಕ ಅಂಬೇಡ್ಕರ್ ಅವರನ್ನು ಓದತೊಡಗಿದೆ. 2023-24ರಲ್ಲಿ ಅಂಬೇಡ್ಕರ್ ಕುರಿತು ಗಮನಾರ್ಹ ಕೃತಿಗಳು ಪ್ರಕಟವಾಗಿವೆ. ಅಶೋಕ ಗೋಪಾಲ ಅವರು ತಮ್ಮ ‘ಎ ಪಾರ್ಟ್ ಅಪಾರ್ಟ್’ ಕೃತಿ ಮೂಲಕ ಅಂಬೇಡ್ಕರ್ ಕುರಿತ ಹಲವು ಗೈರುಹಾಜರಿಗಳನ್ನು ದಾಖಲು ಸಮೇತ ವಿಶ್ಲೇಷಣೆ ಮಾಡಿದ್ದಾರೆ. ಅಂಬೇಡ್ಕರ್ ಅವರ ಕೃತಿಗಳು ಮರು ಚರ್ಚೆಗೆ ಒಳಗಾಗುತ್ತಿವೆ. ಇನ್ನೊಂದೆಡೆ ಭಾರತದ ಸಂವಿಧಾನ ಕೂಡ ದೇಶದೊಳಗೆ ಹೆಚ್ಚು ಚರ್ಚೆಗೆ ಕಾರಣವಾಗಿದೆ. ಎಲ್ಲರನ್ನೂ ರಕ್ಷಿಸುವ ರಕ್ಷಾಕವಚವಾದ ಸಂವಿಧಾನವನ್ನು ರಕ್ಷಿಸಬೇಕಾದ ಕೂಗು ಎದ್ದಿದೆ. ಕರ್ನಾಟಕದಲ್ಲಿ ಈಚೆಗೆ ನಡೆದ ಸಂವಿಧಾನ ಸಮಾವೇಶವು ಸಂವಿಧಾನದ ಬಗ್ಗೆ ಅರ್ಥಪೂರ್ಣ ಚರ್ಚೆಗಳನ್ನು ಹುಟ್ಟುಹಾಕಿದೆ. ಹಾಗಾಗಿ ಮತ್ತೊಮ್ಮೆ ಅಂಬೇಡ್ಕರ್ ಮತ್ತು ಸಂವಿಧಾನದ ಕುರಿತು ಸಂವಾದಿಸಬೇಕಾಗಿದೆ.
ಈಚೆಗೆ ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚಿಸಿದ್ದಾರೆಯೇ? ಅವರು ಸಂವಿಧಾನ ಶಿಲ್ಪಿ ಅಲ್ಲ, ಇತರರೂ ಸಂವಿಧಾನ ಶಿಲ್ಪಿಗಳಿದ್ದಾರೆ ಎನ್ನುವ ವಾದ ಮುನ್ನಲೆಗೆ ಬರುತ್ತಿದೆ. ಇದು ಅಂಬೇಡ್ಕರ್ ಅವರ ಪ್ರಾಮುಖ್ಯತೆಯನ್ನು ನಗಣ್ಯ ಮಾಡುವ ದಲಿತ ವಿರೋಧಿ ಅಜೆಂಡವಾಗಿದೆ. ಇದಕ್ಕೆ ಉತ್ತರವಾಗಿಯೂ ಸಂವಿಧಾನ ರಚನೆಯ ಭಾಗವಾಗಿದ್ದವರ ಹೇಳಿಕೆಗಳನ್ನು ನೀಡಲಾಗುತ್ತಿದೆ. ಚಿಂತಕರಾದ ಶಿವಸುಂದರ್ ಅವರು “ಒಂದು ವೇಳೆ ಅಂಬೇಡ್ಕರ್ ಒಬ್ಬರೇ ಸಂವಿಧಾನ ಬರೆಯಬಹುದಾಗಿದ್ದರೆ, ಸಂವಿಧಾನ ಸಭೆಯ ಅಗತ್ಯವೇ ಇರುತ್ತಿರಲಿಲ್ಲ. ಹಾಗೂ ಅಂಬೇಡ್ಕರ್ ಒಬ್ಬರೇ ಸಂವಿಧಾನ ಬರೆದಿದ್ದರೆ ಅವರ ಮೂಲ ಆಶಯಗಳಾದ ಪ್ರಭುತ್ವ ಸಮಾಜವಾದ ಮತ್ತು ಬುದ್ಧ ಭಾರತದ ಎಲ್ಲಾ ಅಂಶಗಳು ಸಂವಿಧಾನಕ್ಕೆ ಸೇರ್ಪಡೆ ಆಗುತ್ತಿದ್ದವು. ಆದರೂ ಅಂಬೇಡ್ಕರ್ ಅವರ ವಿಶೇಷ ಬದ್ಧತೆ ಮತ್ತು ವಿದ್ವತ್ತುಗಳಿಂದಾಗಿಯೇ ಭಾರತ ಸಂವಿಧಾನವು ಅಂದಿನ ಚಾರಿತ್ರಿಕ ಸಂದರ್ಭ ಅನುವು ಮಾಡಿಕೊಟ್ಟಷ್ಟಾದರೂ ಜನಮುಖಿಯಾಗಲು ಸಾಧ್ಯವಾಯಿತು. ಸಂವಿಧಾನ ರಚನಾ ಸಭೆಯ ಚರ್ಚೆಯ ನಂತರದಲ್ಲಿ ಸಂವಿಧಾನದ ಕರಡನ್ನು ರಚಿಸಿದ ಶ್ರೇಯಸ್ಸು ಮಾತ್ರ ಸಂಪೂರ್ಣವಾಗಿ ಅಂಬೇಡ್ಕರ್ ಅವರಿಗೇ ಸೇರತಕ್ಕದ್ದಾಗಿದೆ” ಎನ್ನುತ್ತಾರೆ. ಈ ಮಾತು ವಾಸ್ತವ.
ನೆಲ್ಸನ್ ಮಂಡೇಲಾ ಅವರು ಭಾರತದ ಸಂವಿಧಾನ ಮತ್ತು ಅಂಬೇಡ್ಕರ್ ಅವರ ಬಗ್ಗೆ ಹೀಗೆ ಹೇಳುತ್ತಾರೆ. “ಭಾರತದ ಸಂವಿಧಾನವು ದಕ್ಷಿಣ ಆಫ್ರಿಕಾದ ಸಂವಿಧಾನ ರಚಿಸಲು ಆಧಾರಸ್ತಂಭವೂ ಪ್ರೇರಣೆಯೂ ಆಗಿದೆ. ನಮಗೆ ನಂಬಿಕೆ ಇದೆ, ನಮ್ಮ ಹೊಸ ಸಂವಿಧಾನ ರಚನೆಯಲ್ಲಿನ ನಮ್ಮ ಶ್ರಮವು ಭಾರತದ ಹೆಮ್ಮೆಯ ಪುತ್ರನಾದ ಡಾ. ಬಿ. ಆರ್.ಅಂಬೇಡ್ಕರ್ ಅವರ ಅಪಾರ ಶ್ರಮ ಮತ್ತು ಬೌದ್ಧಿಕತೆಯ ಪ್ರತಿಬಿಂಬವಾಗಿದೆ. ಅಂಬೇಡ್ಕರ್ ಅವರ ಕೊಡುಗೆ ಎಂಥದ್ದೆಂದರೆ, ಜಗತ್ತಿನ ತುಳಿತಕ್ಕೊಳಗಾದ ಎಲ್ಲರೂ ಸಾಮಾಜಿಕ ನ್ಯಾಯ ಮತ್ತು ಆತ್ಮಗೌರವ ಎತ್ತಿಹಿಡಿಯಲು ಸ್ಪೂರ್ತಿಯಾಗಿದ್ದಾರೆ” ಎನ್ನುತ್ತಾರೆ. ಮಂಡೇಲಾ ಅವರು ಭಾರತದ ಸಂವಿಧಾನವನ್ನು ನೆನೆಯುತ್ತಾ ಅಷ್ಟೇ ಗೌರವದಿಂದ ಅಂಬೇಡ್ಕರ್ ಅವರನ್ನೂ ಸ್ಮರಿಸುತ್ತಾರೆ.
ಇದನ್ನು ಓದಿದ್ದೀರಾ? ಚಿಕ್ಕಮಗಳೂರು l ಡಾ ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ತುಪ್ಪುರು ಗ್ರಾಮಸ್ಥರ ಧರಣಿ ಸತ್ಯಾಗ್ರಹ
ಇಂಗ್ಲೆಂಡಿನ ಶ್ರೇಷ್ಠ ರಾಜ್ಯಶಾಸ್ತ್ರಜ್ಞರೂ ಮತ್ತು ಆಕ್ಸ್‌ಫರ್ಡ್ ಹಾಗೂ ಕೇಂಬ್ರಿಜ್ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರೂ ಆಗಿದ್ದ ಆರ್ನೆಸ್ಟ್ ವಾರ್ಕರ್ ಅವರು 1951ರಲ್ಲಿ ‘ಪೀಪಲ್ಸ್ ಆಫ್ ಸೋಷಿಯಲ್ ಎಂಡ್ ಪೊಲಿಟಿಕಲ್ ಥಿಯರಿ’ ಎಂಬ ಸಂಶೋಧನಾ ಗ್ರಂಥವನ್ನು ಪ್ರಕಟಿಸಿದರು. ಅದನ್ನು ಅವರು ಭಾರತೀಯ ಸಂವಿಧಾನದ ಪ್ರಸ್ತಾವನೆಗೆ (ಪ್ರಿಯಾಂಬಲ್) ಅರ್ಪಣೆ ಮಾಡಿದ್ದಾರೆ. ಆ ಗ್ರಂಥದ ಪ್ರಸ್ತಾವನೆಯಲ್ಲಿ ಹೀಗೆ ಹೇಳಿದ್ದಾರೆ. “ನನ್ನ ಪ್ರಸ್ತುತ ಗ್ರಂಥದ ಸಾರವು ಈ ಪ್ರಿಯಾಂಬಲ್‌ನಲ್ಲಿ ಅಡಗಿದೆ. ಭಾರತೀಯರು ತಮ್ಮ ಸ್ವಾತಂತ್ರ್ಯವನ್ನು ಆರಂಭಿಸುವಾಗ ಈ ಶ್ರೇಷ್ಠ ಮಾನವೀಯ ಮೌಲ್ಯವನ್ನು ಅಂಗೀಕಾರ ಮಾಡಿದ ಬಗ್ಗೆ ನನಗೆ ಅಭಿಮಾನ ಮತ್ತು ಹೆಮ್ಮೆ ಇದೆ” (ಸಂ/20ಪು/447). ಭಾರತದ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೆಲ್ಲಿದೆ.
ಅಂಬೇಡ್ಕರ್ 1922ರ ಹೊತ್ತಿಗೆ ಭಾರತದ ಸಂವಿಧಾನ ಹೇಗಿರಬೇಕು, ಏನಿರಬೇಕು ಎನ್ನುವುದನ್ನು ಸಾರ್ವಜನಿಕ ಚರ್ಚೆಗಳಲ್ಲಿ ತರುತ್ತಿದ್ದರು. ಗ್ರಾಮ ಪಂಚಾಯ್ತಿಗಳ ಮಸೂದೆ ಚರ್ಚೆಯಲ್ಲಿ (1922 ಫೆಬ್ರವರಿ 10) ಅಂಬೇಡ್ಕರ್ ಹೀಗೆ ಹೇಳುತ್ತಾರೆ. “ಮಾನ್ಯರೇ, ಭಾರತವು ಯುರೋಪಲ್ಲ. ಇಂಗ್ಲೆಂಡ್ ಭಾರತವಲ್ಲ. ಕೋಮು ಪದ್ಧತಿಯು ಇಂಗ್ಲೆಂಡಿಗೆ ಗೊತ್ತಿಲ್ಲ; ಅದು ನಮಗೆ ಗೊತ್ತಿದೆ. ಆದುದರಿಂದ ಇಂಗ್ಲೆಂಡಿಗೆ ಸರಿಹೊಂದಬಹುದಾದ ರಾಜಕೀಯ ವ್ಯವಸ್ಥೆ ನಮಗೆ ಸರಿಹೊಂದಲಾರದು. ಇದಕ್ಕೂ ಒಂದು ಹೆಜ್ಜೆ ಮುಂದಿಟ್ಟು ನಾನು ತಿಳಿಯಬಯಸುವೆ; ಭಾರತೀಯ ರಾಜ್ಯಶಾಸ್ತ್ರದ ವಿದ್ಯಾರ್ಥಿಗಳು ಏನೇ ಅನ್ನಲಿ, ಇನ್ನು ಮುಂದೆ ಬರಲಿರುವ ಭಾರತೀಯ ಸಂವಿಧಾನದಲ್ಲಿ ಯಾವುದಾದರೂ ಒಳ್ಳೇ ಅಂಶವಿದ್ದರೆ- ಅದು ಜಾತಿಯ ಪ್ರಾತಿನಿಧ್ಯ ತತ್ವವನ್ನು ಅಂಗೀಕರಿಸುವುದರಲ್ಲಿಯೇ ಇದೆಯೆಂಬುದನ್ನು ಸಾರಿ ಹೇಳುವೆ” ಅಂದರೆ 1922ರಲ್ಲಿಯೇ ಅಂಬೇಡ್ಕರ್ ಸಂವಿಧಾನದಲ್ಲಿ ಏನಿರಬೇಕು ಎನ್ನುವ ಕನಸು ಕಂಡಿದ್ದರು.
ಪುಣೆಯ ಗೋಖಲೆ ಭವನದಲ್ಲಿ (1939ರ ಜನವರಿ 29) ಅಂಬೇಡ್ಕರ್ ಮಾಡಿದ ಭಾಷಣ ಒಕ್ಕೂಟ ವ್ಯವಸ್ಥೆ ಮತ್ತು ಸ್ವಾತಂತ್ರ್ಯ ಉಪನ್ಯಾಸದಲ್ಲಿ ಅಂಬೇಡ್ಕರ್ ಎತ್ತುವ ಪ್ರಶ್ನೆಗಳು ಇಂದಿಗೂ ಪ್ರಸ್ತುತವಾಗಿವೆ. ಇಲ್ಲಿನ ಮಾತುಗಳೂ ಕೂಡ ಭಾರತದ ಸಂವಿಧಾನ ರಚನೆಯ ಪೂರ್ವ ತಯಾರಿಯ ಟಿಪ್ಪಣಿಗಳಂತಿವೆ. “ತೆರಿಗೆಗಳಿಂದ ಬರುವ ಆದಾಯದ ವರ್ಗೀಕರಣ ಫೆಡರಲ್ ಸರಕಾರಕ್ಕೆ ಸಂವಿಧಾನದಲ್ಲಿ ನೀಡಲಾಗಿರುವ ತೆರಿಗೆ ವಿಧಿಸುವ ಅಧಿಕಾರವನ್ನು ಅವಲಂಬಿಸಿದೆ. ಫೆಡರಲ್ ಸರಕಾರಕ್ಕೆ ನೀಡಲಾದ ತೆರಿಗೆ ಹಾಕುವ ಅಧಿಕಾರ ಮೂರು ಮುಖ್ಯ ವಿಧದ್ದಾಗಿದೆ. ಮೊದಲನೆಯದು ತೆರಿಗೆ ವಿಧಿಸುವ ಅಧಿಕಾರದಲ್ಲಿ ತೆರಿಗೆಯ ಎಲ್ಲಾ ಮೊತ್ತವನ್ನು ಫೆಡರಲ್ ಸರ್ಕಾರವೇ ಸಂಪೂರ್ಣ ವಿನಿಯೋಗಿಸಿಕೊಳ್ಳುವಂತಹ ತೆರಿಗೆಗಳು ಸೇರಿವೆ. ಎರಡನೆಯದಾಗಿ ಫೆಡರಲ್ ಸರ್ಕಾರ ವಿಧಿಸಿ ಸಂಗ್ರಹಿಸುವ ಅಧಿಕಾರ ಹೊಂದಿದ್ದು ಬಂದ ಆದಾಯವನ್ನು ಕೇಂದ್ರ ಮತ್ತು ಪ್ರಾಂತ್ಯ ಸರಕಾರಗಳ ನಡುವೆ ಹಂಚಲಾಗುತ್ತದೆ” (ಸಂ/1,ಪು/342) ಎನ್ನುತ್ತಾರೆ. ಇಂದು ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಯ ತತ್ವವನ್ನು ಸರಿಯಾಗಿ ಪಾಲಿಸದೆ ಇರುವ ಈ ಸಂದರ್ಭದಲ್ಲಿ ಅಂಬೇಡ್ಕರ್ ಹೇಳುವ ಈ ಮಾತುಗಳು ಹೆಚ್ಚು ಪ್ರಸ್ತುತವಾಗಿದೆ.
ಭಾರತದ ಒಕ್ಕೂಟ ವ್ಯವಸ್ಥೆಗೂ ಮತ್ತು ಜಗತ್ತಿನ ಬೇರೆ ಬೇರೆ ದೇಶಗಳ ಒಕ್ಕೂಟ ವ್ಯವಸ್ಥೆಗೂ ಇರುವ ಅಂತರ ಮತ್ತು ವ್ಯತ್ಯಾಸವನ್ನು ಅಂಬೇಡ್ಕರ್ ಸ್ಪಷ್ಟವಾಗಿ ಗುರುತಿಸುತ್ತಾರೆ. ಅವರೇ ಹೇಳುವಂತೆ “ಭಾರತ ಒಕ್ಕೂಟ ವ್ಯವಸ್ಥೆಯ ಅಮೆರಿಕ ಸಂಯುಕ್ತ ಸಂಸ್ಥಾನ, ಕೆನಡಾ ಮತ್ತು ಆಸ್ಟ್ರೇಲಿಯಾದ ಸಂಯುಕ್ತ ರಾಜ್ಯಗಳಿಗಿಂತ ಭಿನ್ನವಾಗಿದೆ. ಭಾರತದ ಸಂವಿಧಾನದಲ್ಲಿ ಸಂವಿಧಾನ ತಿದ್ದುಪಡಿಯಾದ ಪಕ್ಷದಲ್ಲಿ ಒಕ್ಕೂಟವನ್ನು ಬಿಟ್ಟುಹೋಗುವ ಹಕ್ಕನ್ನು ಮಾನ್ಯ ಮಾಡಲಾಗಿರುವುದರಿಂದ ಮತ್ತು ಅಮೆರಿಕ ಸಂವಿಧಾನದಲ್ಲಿ ಸಂವಿಧಾನವನ್ನು ಯಾವುದೇ ರಾಜ್ಯದ ಇಚ್ಛೆಯ ವಿರುದ್ಧ ಬದಲಾಯಿಸಿದರೂ ಸಹ ಒಕ್ಕೂಟವನ್ನು ಬಿಟ್ಟು ಹೋಗುವ ಹಕ್ಕನ್ನು ಮಾನ್ಯ ಮಾಡಲಾಗಿಲ್ಲವಾದ್ದರಿಂದ ಈ ವಿಷಯದಲ್ಲಿ ಭಾರತ ಸಂವಿಧಾನ ಮತ್ತು ಅಮೆರಿಕ ಸಂವಿಧಾನದಲ್ಲಿ ವ್ಯತ್ಯಾಸವಿದೆ. ಆಸ್ಟ್ರೇಲಿಯಾ ಮತ್ತು ಕೆನಡಾದಲ್ಲಿ ಈ ಪಶ್ನೆ ಉದ್ಬವಿಸುವುದೇ ಇಲ್ಲ. ಉದ್ಭವಿಸಿದರೂ ಅದನ್ನು ಬಗೆಹರಿಸಲು ಆಂತರಿಕ ಯುದ್ದ ಅನಾವಶ್ಯಕ” (ಸಂ:1, ಪು:346) ಎನ್ನುತ್ತಾರೆ. ಇದು ಭಾರತದ ಸಂವಿಧಾನ ರಚನಾ ಕಾರ್ಯದ ಆರಂಭಕ್ಕೆ ಈ ಬಗೆಯ ಒಕ್ಕೂಟ ವ್ಯವಸ್ಥೆ ಮತ್ತದರ ಸ್ವಾತಂತ್ರ್ಯದ ಬಗ್ಗೆ ಅಂಬೇಡ್ಕರ್ ಒಂದು ಒಳನೋಟವನ್ನು ಹೊಂದಿದ್ದರು.
ಇದನ್ನು ಓದಿದ್ದೀರಾ? ಸಾಮಾಜಿಕ ನ್ಯಾಯದ ವಿರೋಧಿಗಳು ಸಂವಿಧಾನ ಬದಲಾವಣೆ ಬಗ್ಗೆ ಮಾತಾಡುತ್ತಾರೆ: ಸಿದ್ದರಾಮಯ್ಯ
ದಿನಾಂಕ 26 ನವೆಂಬರ್ 1949ರಂದು ಸಂವಿಧಾನ ಸಭೆಯ ಅಧ್ಯಕ್ಷರಾದ ಡಾ. ರಾಜೇಂದ್ರ ಪ್ರಸಾದ್ ಅವರ ಸಮಾರೋಪ ಭಾಷಣ ಮುಗಿದ ಬಳಿಕ ಭಾರತದ ಸಂವಿಧಾನವನ್ನು ಸ್ವೀಕರಿಸಲಾಯಿತು. ಆದರ ಹಿಂದಿನ ದಿನ ಎಂದರೆ 25 ನವೆಂಬರ್ 1949ರಂದು ಡಾ. ಬಾಬಾಸಾಹೇಬ ಅಂಬೇಡ್ಕರರು ಸಂವಿಧಾನ ಸಭೆಯಲ್ಲಿ ಕೊನೆಯವರಾಗಿ ಭಾಷಣದಲ್ಲಿ ಹೀಗೆ ಹೇಳುತ್ತಾರೆ. “ಸ್ವಾತಂತ್ರ‍್ಯವು ಸಂತೋಷದ ಸಂಗತಿ ಎನ್ನುವುದರಲ್ಲಿ ಎರಡು ಮಾತಿಲ್ಲ, ಆದರೆ ಈ ಸ್ವಾತಂತ್ರ‍್ಯ ನಮ್ಮ ಮೇಲೆ ಗುರುತರವಾದ ಜವಾಬ್ದಾರಿಯನ್ನು ಹೊರಿಸಿದೆ ಎನ್ನುವುದನ್ನು ನಾವು ಮರೆಯುವಂತಿಲ್ಲ. ಈ ಸ್ವಾತಂತ್ರ‍್ಯದಿಂದಾಗಿ, ಯಾವುದೇ ಕೆಟ್ಟ ಸಂಗತಿ ನಡೆದರೆ, ನಾವೀಗ ಆಂಗ್ಲರ ಮೇಲೆ ತಪ್ಪು ಹೊರಿಸುವಂತಿಲ್ಲ. ಇನ್ನು ಮುಂದೆ ಏನಾದರು ಕೆಟ್ಟದ್ದು ನಡೆದರೆ ನಮಗೆ ನಾವೇ ಹೊಣೆಗಾರರಾಗುತ್ತೇವೆ. ಅನುಚಿತ ಪ್ರಸಂಗ ನಡೆಯುವ ಅಪಾಯವಿದೆ. ಕಾಲ ವೇಗದಿಂದ ಬದಲಾಗುತ್ತಿದೆ, ನಮ್ಮ ಜನರೂ ಸಹ ಹೊಸ ಹೊಸ ವಿಚಾರ ಪ್ರಣಾಲಿಯ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಜನರಿಗೆ ರಾಜ್ಯದ ಬಗೆಗೆ ಬೇಸರ ಬರುತ್ತಲಿದೆ. ಈಗ ಅವರಿಗೆ ‘ಜನರಿಗಾಗಿ ಇರುವ ರಾಜ್ಯ’ ಬೇಕಾಗಿದೆ. ರಾಜ್ಯ ಜನರದ್ದೇ ಮತ್ತು ಜನರಿಂದ ಆಯ್ಕೆಯಾದದ್ದೇ ಅಥವಾ ಅಲ್ಲವೇ ಎಂಬ ಬಗೆಗೆ ಅವರು ಯೋಚಿಸುವುದಿಲ್ಲ. ಯಾವ ಸಂವಿಧಾನದಲ್ಲಿ ನಾವು ಜನರ, ಜನರಿಗಾಗಿ ಚುನಾಯಿತ ಸರ್ಕಾರದ ತತ್ವವನ್ನು ಸಂರಕ್ಷಿಸಿದ್ದೇವೆಯೋ, ಅದನ್ನು ಸುರಕ್ಷಿತವಾಗಿ ಉಳಿಸುವುದಾದರೆ, ನಮ್ಮ ಮಾರ್ಗದಲ್ಲಿ ಅಡ್ಡಿ ಬರುವ ತೊಡಕುಗಳನ್ನು ನಾವು ಗುರುತಿಸಬೇಕು. ಆ ಮೂಲಕ ಜನರೇ ಚುನಾಯಿಸಿದ ಸರಕಾರವನ್ನು ಹೋಲಿಸಿದಾಗ, ಜನರಿಗಾಗಿ ಇರುವ ಸರ್ಕಾರಕ್ಕೆ ಜನರು ಮಹತ್ವ ನೀಡಬಹುದು. ಅದಕ್ಕಾಗಿ ಮುಂದೆ ಬಂದು ಜವಾಬ್ದಾರಿ ಹೊರಲು ಹಿಂಜರಿಯುವುದು ಸರಿಯಲ್ಲ, ದೇಶ ಸೇವೆಯ ಏಕೈಕ ಮಾರ್ಗವಿದು. ಇದಕ್ಕಿಂತ ಬೇರೆ ಉತ್ತಮ ಮಾರ್ಗ ನನಗೆ ಗೊತ್ತಿಲ್ಲ” (ಸಂ:20, ಪು:460) ಎನ್ನುತ್ತಾರೆ. ಅಂದರೆ ಇನ್ನು ಮುಂದೆ ಯಾವುದೇ ತಪ್ಪಾದರೂ ಅದನ್ನು ಬ್ರಿಟಿಷರ ಮೇಲೆ ಹೊರಿಸುವಂತಿಲ್ಲ, ಅದನ್ನು ನಾವೇ ಹೊರಬೇಕಾಗುತ್ತದೆ, ಹಾಗಾಗಿ ನಾವು ಬಹಳ ಎಚ್ಚರದಿಂದಲೂ ಜವಾಬ್ದಾರಿಯಿಂದಲೂ ಸಂವಿಧಾನಬದ್ಧ ಸರ್ಕಾರವನ್ನು ನಡೆಸಬೇಕಾಗಿದೆ ಎನ್ನುತ್ತಾರೆ.
ಈ ಸಂದರ್ಭದಲ್ಲಿ 19-20 ನವಂಬರ್ 1949 ರಂದು ಅಖಿಲ ಭಾರತೀಯ ದಲಿತ ಫೆಡರೇಶನ್‌ನ ಕಾರ್ಯದರ್ಶಿಯಾದ ಸರ್ ಬಾಪು ಸಾಹೇಬ ರಾಜಭೋಜರು ವರ್ಕಿಂಗ್ ಕಮಿಟಿಯ ಮೀಟಿಂಗ್‌ನಲ್ಲಿ ”ಡಾ.ಅಂಬೇಡ್ಕರರು ಸಂವಿಧಾನವನ್ನು ರಚಿಸಿ ವೈರಿಗಳಿಂದಲೂ ಮೆಚ್ಚುಗೆಯನ್ನು ಪಡೆದರು” ಎನ್ನುತ್ತಾರೆ.(ಸಂ:20, ಪು:442) ಇದನ್ನು ನೋಡಿದರೆ ಅಂಬೇಡ್ಕರ್ ಸಂವಿಧಾನ ರಚನೆಯ ಸಂದರ್ಭದಲ್ಲಿ ಎಷ್ಟೊಂದು ವಿರೋಧ ಎದುರಿಸಿರಬಹುದು ಎನ್ನುವುದು ಸ್ಪಷ್ಟವಾಗುತ್ತದೆ.
ಸಂವಿಧಾನ ರಚನೆಯಾಗಿ, ಸಂವಿಧಾನದ ಆಧಾರದಲ್ಲಿ ಜನಪ್ರತಿನಿಧಿಗಳು ಆಯ್ಕೆಯಾಗಿ ಸರಕಾರ ನಡೆಸುವ ಸಂದರ್ಭದಲ್ಲಿ 30 ಸೆಪ್ಟಂಬರ್ 1956ರಲ್ಲಿ ಅಂಬೇಡ್ಕರ್ ‘ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ’ ಸ್ಥಾಪಿಸಿ ಈ ಪಾರ್ಟಿಯ ಪ್ರಸ್ತಾವನೆಯಲ್ಲಿ ಸಂವಿಧಾನದ ಬಗ್ಗೆ ಈ ರೀತಿ ಎಚ್ಚರಿಕೆ ಕೊಡುತ್ತಾರೆ. “ಪ್ರಜಾಪ್ರಭುತ್ವದಲ್ಲಿ ಯಶಸ್ಸನ್ನು ಪಡೆಯಲು ಆವಶ್ಯಕವಿದ್ದ ನಾಲ್ಕನೆಯ ಸಂಗತಿ, ಎಂದರೆ ಸಾಂವಿಧಾನಿಕ ನೈತಿಕತೆಯನ್ನು (Constitutional Morality) ಪಾಲಿಸುವುದು. ಬಹಳಷ್ಟು ಜನರು ನಮ್ಮ ಸಂವಿಧಾನದ ಬಗೆಗೆ ಅತಿ ಉತ್ಸಾಹಿಗಳಾಗಿ ಕಾಣುತ್ತಾರೆ. ನನ್ನದಂತೂ ಹಾಗಲ್ಲ. ಸದ್ಯದ ಭಾರತೀಯ ಸಂವಿಧಾನವನ್ನು ಕಿತ್ತೆಸೆಯಬೇಕೆನ್ನುವ, ಕನಿಷ್ಠ ಮಟ್ಟಿಗೆ, ಅದನ್ನು ಸಂಪೂರ್ಣವಾಗಿ ಸರಿಪಡಿಸಲೆಂದು ಹೆಣಗುವ ಜನರ ಜತೆ ನಾನು ನಿಲ್ಲುತ್ತೇನೆ. ನಾವು ಒಂದು ಸಂಗತಿಯನ್ನು ಮಾತ್ರ ಒಪ್ಪಿಕೊಳ್ಳಬೇಕಿದೆ. ಅದೆಂದರೆ, ಇಂದಿನ ನಮ್ಮ ಸಂವಿಧಾನವು ಕಾನೂನಿನ್ವಯದ ವ್ಯವಸ್ಥೆ ಹಾಗೂ ತತ್ವಗಳ ಎಲುಬಿನ ಗೂಡು ಮಾತ್ರವಾಗಿದೆ. ಸಾಂವಿಧಾನಿಕ ನೀತಿಮತ್ತೆಯ ಪಾಲನೆಯಿಂದಲೇ ಈ ಎಲುಬಿನ ಗೂಡಿಗೆ ಆವಶ್ಯಕವಿದ್ದ ರಕ್ತಮಾಂಸಗಳು ಲಭಿಸುವುವು. ಇಂಗ್ಲೆಂಡಿನಲ್ಲಿ ಈ ಸಾಂವಿಧಾನಿಕ ನೀತಿಮತ್ತೆಯನ್ನೇ ಸಾಂವಿಧಾನಿಕ ಸಂಕೇತಗಳೆಂದು (Conventions of the Constitution) ಗುರುತಿಸುತ್ತಾರೆ” (ಸಂ:22, ಪು:375) ಎನ್ನುತ್ತಾರೆ. ಅಂದರೆ ಭಾರತದಲ್ಲಿ ಸಂವಿಧಾನಿಕ ನೈತಿಕತೆ ಪಾಲನೆಯಾಗುತ್ತಿಲ್ಲ. ಸಂವಿಧಾನಿಕ ನೈತಿಕತೆ ಪಾಲನೆ ಆಗದೆ ಇದ್ದರೆ ಸಂವಿಧಾನದ ಆಶಯಗಳೂ ಕೂಡ ಪಾಲನೆ ಆಗಲಾರವು ಎನ್ನುವುದು ಅಂಬೇಡ್ಕರರ ಆತಂಕವಾಗಿತ್ತು. ಈ ಆತಂಕ ಇಂದು ಬೃಹತ್ ಆಗಿ ಬೆಳೆದಿದೆ ಎನ್ನುವುದನ್ನು ಗಮನಿಸಬೇಕಾಗಿದೆ.
ಮುಂದುವರಿದು ಅಂಬೇಡ್ಕರ್ ಅವರು ಸಂವಿಧಾನವನ್ನೇನು ರಚಿಸಿದೆವು ಆದರೆ ಅದನ್ನು ಕಾಪಾಡಿಕೊಳ್ಳುವಲ್ಲಿ ಜನರ ಜವಾಬ್ದಾರಿ ಏನು ಎನ್ನುವುದನ್ನು ಹೇಳುತ್ತಾರೆ. ಅವರ ಮಾತುಗಳಲ್ಲಿ ಹೇಳುವುದಾದರೆ, “ನಾವು ಪ್ರಜಾಪ್ರಭುತ್ವವನ್ನು ಘೋಷಿಸುವ ಸಂವಿಧಾನವನ್ನು ತಯಾರಿಸಿದ್ದೇವೆ. ಅಂದ ಬಳಿಕ ಈ ಬಗೆಗೆ ನಮಗೆ ಇನ್ನೇನು ಬೇಕು? ನಾವಿನ್ನು ನಿಶ್ಚಿಂತರಾಗಿ ಕುಳಿತುಕೊಳ್ಳೋಣ, ಎನ್ನುವ ಭಾವನೆ ಈ ದೇಶದ ಜನರಲ್ಲಿ ಬೆಳೆಯುತ್ತಿದೆ. ಸಂವಿಧಾನವನ್ನು ತಯಾರಿಸಿದ್ದೇವೆ ಎಂದ ಮಾತ್ರಕ್ಕೆ ನಮ್ಮ ಕೆಲಸ ಮುಗಿಯಿತು ಎನ್ನುವ ಆತ್ಮಘಾತಕ ಭಾವನೆಯ ಬಗೆಗೆ ಎಲ್ಲರಿಗೂ ಅಪಾಯದ ಎಚ್ಚರಿಕೆಯನ್ನು ನೀಡಬಯಸುತ್ತೇನೆ. ನಮ್ಮ ಕೆಲಸ ಈಗ ಶುರುವಾಗುತ್ತಲಿದೆ. ಪ್ರಜಾಪ್ರಭುತ್ವದ ಮರ ಎಲ್ಲೆಡೆಗಳಲ್ಲಿ ಸರಿಯಾಗಿ, ಪುಷ್ಟವಾಗಿ ಬೆಳೆಯಬಲ್ಲುದೆಂದಲ್ಲ, ಎಂಬುದನ್ನು ನಾವು ಗಮನದಲ್ಲಿ ಇರಿಸಿಕೊಳ್ಳಬೇಕು. ಅದು ಅಮೆರಿಕದಲ್ಲಿ ಬೆಳೆದಿದೆ. ಇಂಗ್ಲೆಂಡಿನಲ್ಲಿ ಅದರ ಬೆಳವಣಿಗೆ ಆಯಿತು. ಅದು ಕೆಲಮಟ್ಟಿಗೆ ಫ್ರಾನ್ಸಿನಲ್ಲೂ ಬೇರುಬಿಟ್ಟಿದೆ. ಬೇರೆಡೆಗಳಲ್ಲಿ ನಡೆದ ಆಶಾದಾಯಕವಾದ ಈ ಘಟನೆಗಳಿಂದಲೇ ನಮಗೆ ಧೈರ್ಯ ಬಂದೀತು. (ಸಂ:22,ಪು:380) ಎನ್ನುವಾಗ ಸಂವಿಧಾನ ಎನ್ನುವ ಮರ ಭಾರತದಲ್ಲಿ ದಷ್ಟಪುಷ್ಟವಾಗಿ ಬೆಳೆಯುವುದೇ ಎನ್ನುವ ಅನುಮಾನವನ್ನು ವ್ಯಕ್ತಪಡಿಸುತ್ತಾರೆ.
ಇದನ್ನು ಓದಿದ್ದೀರಾ? ಶ್ರೀರಂಗಪಟ್ಟಣ | ವಿಶ್ವಜ್ಞಾನಿ ಅಂಬೇಡ್ಕರ್ ಸಂಘದಿಂದ ಕಡತನಾಳು ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ
ಅಕ್ಟೋಬರ್ 15, 1956ರಂದು ನಾಗಪುರದ ಕಾರ್ಪೊರೇಶನ್‌ನ ವತಿಯಿಂದ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಸನ್ಮಾನಿಸಲಾಯಿತು. ಅಂದು ಸನ್ಮಾನ ಸ್ವೀಕರಿಸಿ ಅಂಬೇಡ್ಕರ್ ಅವರು ಹೀಗೆ ಹೇಳಿದರು.
“ಭಾರತದ ಸಂವಿಧಾನವು ಜಾರಿಗೆ ಬಂದು ಐದು ವರ್ಷಗಳಾದವು. ಈ ಸಂವಿಧಾನವು ಸಾಕಾಗುತ್ತದೆಯೇ ಎಂಬುದರ ಬಗೆಗೆ ಪ್ರತಿಯೊಬ್ಬರೂ ವಿಚಾರ ಮಾಡಬೇಕಾಗಿದೆ. ಹೊರಗಿನಿಂದ ನೋಡಿದಾಗ ಕಂಡುಬರುವುದು ಏನೆಂದರೆ, ನಮ್ಮ ಮತ್ತು ಇಂಗ್ಲೆಂಡಿನಲ್ಲಿಯ ರಾಜ್ಯಾಡಳಿತವು ಕೆಲವಾರು ವಿಷಯಗಳನ್ನು ಬಿಟ್ಟರೆ ಉಳಿದಂತೆ ಬಹುತೇಕ ಒಂದೇ ಆಗಿರುವುದು. ಅಲ್ಲಿ ಪ್ರೌಢ ಮತದಾನದ ಮೂಲಕ ಚುನಾವಣೆಯು ನಡೆಯುತ್ತದೆ. ಇನ್ನು ನಮ್ಮ ದೇಶದಲ್ಲಿಯೂ ಚುನಾವಣೆ ನಡೆಯುತ್ತಿರುವುದು ಹಾಗೆಯೇ. ಆ ದೇಶದಲ್ಲಿ ಪಾರ್ಲಿಮೆಂಟ್ ಇದೆ, ನಮ್ಮ ದೇಶದಲ್ಲಿಯೂ ಪಾರ್ಲಿಮೆಂಟ್ ಇದೆ. ಆ ದೇಶದ ಪಾರ್ಲಿಮೆಂಟಿನಲ್ಲಿ ಬಹುಮತದಿಂದ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ. ಹಾಗೆಯೇ ನಮ್ಮ ದೇಶದ ಪಾರ್ಲಿಮೆಂಟಿನಲ್ಲಿಯೂ ಬಹುಮತದಿಂದಲೇ ನಿರ್ಣಯಗಳು ಆಗುತ್ತವೆ. ಹೀಗಿದ್ದರೂ ಕೂಡಾ ಆ ದೇಶದಲ್ಲಿನ ಆಡಳಿತದಲ್ಲಿ ಒಂದು ವಿಶೇಷ ವಿಲಕ್ಷಣವು ಇರುವುದು ಕಂಡು ಬರುತ್ತದೆ. ಇಂಗ್ಲೆಂಡಿನಲ್ಲಿ ಪ್ರಜಾತಂತ್ರದ ವ್ಯವಸ್ಥೆ ಹಾಗೆಯೇ ಉಳಿದುಕೊಂಡಿದೆ. ಆದರೆ ನಮ್ಮ ದೇಶದಲ್ಲಿ ಮಾತ್ರ ಸರ್ವಾಧಿಕಾರವು ಆರಂಭಗೊಂಡಂತೆ ಕಾಣಿಸುತ್ತದೆ. ನಮ್ಮ ದೇಶದ ಆಡಳಿತದ ವಿಷಯದಲ್ಲಿ ಮತ್ತು ಸಂವಿಧಾನದ ವಿಷಯದಲ್ಲಿ ಎಚ್ಚರಿಕೆಯಿಂದ ಇರುವುದು ಅತ್ಯಂತ ಆವಶ್ಯಕ. ಭಾರತದ ಹೊಸ ಸಂವಿಧಾನದ ಆದ್ಯಕರ್ತನು ನಾನಾಗಿದ್ದೇನೆ. ಈ ಮಾತನ್ನು ನಾನು ಬಹಳ ಅಭಿಮಾನದಿಂದ ಹೇಳುತ್ತಿದ್ದೇನೆ ಎಂದಲ್ಲ, ಆದರೆ ನಾನು ಅದರ ಆದ್ಯಕರ್ತನಾಗಿರುವುದರಿಂದ ಅದರ ಬಗೆಗೆ ನಿತ್ಯವೂ ವಿಚಾರ ಮಾಡುತ್ತಲೇ ಇದ್ದೇನೆ. ಹಾಗೆ ವಿಚಾರ ಮಾಡುವಾಗ ಕೊನೆಗೆ ಈ ದೇಶದ ಗತಿಯು ಏನಾಗಬಹುದು ಎಂಬುದರ ಬಗೆಗೆ ಒಂದು ಭಯಾನಕ ಚಿತ್ರಣವೇ ನನ್ನ ಕಣ್ಣೆದುರು ಬರುತ್ತದೆ” (ಸಂ:20,ಪು:814) ಎಂದು ಆತಂಕ ವ್ಯಕ್ತ ಪಡಿಸುತ್ತಾರೆ.
ಈ ಮಾತಿನಲ್ಲಿ ಸ್ವತಃ ಅಂಬೇಡ್ಕರ್ ಭಾರತದ ಹೊಸ ಸಂವಿಧಾನದ ಆದ್ಯಕರ್ತನೂ ಆಗಿದ್ದೇನೆ, ಹಾಗಾಗಿಯೇ ನಿತ್ಯವೂ ಸಂವಿಧಾನದ ಬಗ್ಗೆ ಆಲೋಚಿಸುತ್ತೇನೆ ಎನ್ನುತ್ತಾರೆ. ಇದೆಲ್ಲದರ ನಡುವೆ ಇಂಗ್ಲೆಂಡಿನಲ್ಲಿ ಪ್ರಜಾಪ್ರಭುತ್ವ ಪ್ರಜಾಪ್ರಭುತ್ವಾಗಿಯೇ ರೂಪುಗೊಳ್ಳುತ್ತಿದೆ. ಆದರೆ ಬಾರತದಲ್ಲಿ ಪ್ರಜಾಪ್ರಭುತ್ವ ಸರ್ವಾಧಿಕಾರದತ್ತ ಚಲಿಸುತ್ತಿದೆ ಎಂದು 1956ರಲ್ಲಿಯೇ ನುಡಿದಿದ್ದರು. ಅದೀಗ ಭಾರತದಲ್ಲಿ ಹುಲುಸಾಗಿ ಬೆಳೆದು ಹೆಮ್ಮರವಾಗಬೇಕಿದೆ.

ಅರುಣ್ ಜೋಳದ ಕೂಡ್ಲಿಗಿ
ಲೇಖಕ, ಜಾನಪದ ಸಂಶೋಧಕರು
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ
jayakumarcsj@gmail.com