ತನ್ನನ್ನು ಮದುವೆಯಾಗಲು ನಿರಾಕರಿಸಿ ದೂರವಾಗಿದ್ದ ಯುವತಿಯ ಮೇಲೆ ಯುವಕನೊಬ್ಬ ಮಾರಕಾಸ್ತ್ರಗಳಿಂದ ದಾಳಿ ಮಾಡಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನಲ್ಲಿ ನಡೆದಿದೆ.
ಆಲೂರು ತಾಲೂಕಿನ ಕಾರುಗೋಡು ಗ್ರಾಮದ ಮೋಹಿತ್ ಎಂಬಾತ ತನ್ನ ಮಾಜಿ ಪ್ರೇಯಸಿ ಗಾನವಿ ಮೇಲೆ ದಾಳಿ ಮಾಡಿದ್ದು, ಹತ್ಯೆಗೆ ಯತ್ನಿಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಯವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕ ಪರಾರಿಯಾಗಿದ್ದಾನೆ.
ಯುವಕ ಮತ್ತು ಯುವತಿ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗೆ, ಇಬ್ಬರ ನಡುವೆ ಮನಸ್ಥಾಪ ಉಂಟಾಗಿತ್ತು. ಯುವಕನಿಂದ ಯುವತಿ ದೂರವಾಗಿದ್ದಳು. ಆದರೆ, ತನ್ನನ್ನು ಮದುವೆಯಾಗುವಂತೆ ಆಕೆಗೆ ಮೋಹಿತ್ ನಿರಂತರವಾಗಿ ಪೀಡಿಸುತ್ತಿದ್ದ ಎಂದು ತಿಳಿದುಬಂದಿದೆ.
ಆತನ ಕಾಟದಿಂದ ಬೇಸತ್ತಿದ್ದ ಯುವತಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಳು. ಬಳಿಕ, ಎರಡೂ ಕುಟುಂಬಗಳು ರಾಜಿ ಸಂಧಾನಕ್ಕೆ ಮಾಡಿದ್ದವು. ಇಬ್ಬರೂ ದೂರ ಉಳಿಯಬೇಕೆಂದು ಸೂಚನೆ ನೀಡಿದ್ದರು. ಯುವಕನಿಂದ ಮುಚ್ಚಳಿಕೆ ಪತ್ರವನ್ನೂ ಬರೆಸಿಕೊಂಡಿದ್ದರು ಎಂದು ವರದಿಯಾಗಿದೆ.
ಆದರೆ, ಮಂಗಳವಾರ ಯುವತಿ ಗಾನವಿ ಆಲೂರಿಗೆ ತೆರಳಿದ್ದಾಗ, ಆಕೆಯ ಮೇಲೆ ಮೋಹಿತ್ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾನೆ. ಆಕರಯ ತಲೆ ಮತ್ತು ಕೈಗಳಿಗೆ ಗಂಭೀರ ಗಾಯಗಳಾಗಿವೆ. ಯುವತಿಯನ್ನು ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಿ, ತನಿಖೆ ನಡೆಸುತ್ತಿದ್ದಾರೆ.