ಗುಬ್ಬಿ ತಾಲ್ಲೂಕಿನ ಒಟ್ಟು ಆರು ಗ್ರಾಮ ಪಂಚಾಯಿತಿಯಲ್ಲಿ ಖಾಲಿ ಇದ್ದ ಸದಸ್ಯರ ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಮೂರು ಸ್ಥಾನಗಳು ಅವಿರೋಧ ಆಯ್ಕೆಯಾಗಿದ್ದು, ಉಳಿದ ಮೂರು ಸ್ಥಾನಕ್ಕೆ ನಡೆದ ಚುನಾವಣೆಯ ಮತ ಎಣಿಕೆ ಮಂಗಳವಾರ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ನಡೆಯಿತು.
ಪಟ್ಟಣದ ಚುನಾವಣಾ ಶಾಖೆಯಲ್ಲಿ ಬೆಳಿಗ್ಗೆ ಆರಂಭವಾದ ಮತ ಎಣಿಕೆ ಕಾರ್ಯ ತಹಶೀಲ್ದಾರ್ ಬಿ.ಆರತಿ ನೇತೃತ್ವದಲ್ಲಿ ನಡೆಯಿತು. ಜಿ.ಹೊಸಹಳ್ಳಿ ಗ್ರಾಮ ಪಂಚಾಯಿತಿಯ ಜಿ.ಹೊಸಹಳ್ಳಿ ವಾರ್ಡ್, ಎಂ.ಎನ್.ಕೋಟೆ ಗ್ರಾಮ ಪಂಚಾಯಿತಿಯ ಎಂ.ಎನ್.ಕೋಟೆ ವಾರ್ಡ್ ಹಾಗೂ ಪೆದ್ದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋಚಿಹಳ್ಳಿ ವಾರ್ಡ್ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆದಿತ್ತು.
ಜಿ.ಹೊಸಹಳ್ಳಿ ಕ್ಷೇತ್ರಕ್ಕೆ ನರೇಶ್ ಹಾಗೂ ಮಮತಾ ನೇರ ಸ್ಪರ್ಧಿಯಾಗಿದ್ದರು. ಒಟ್ಟು 675 ಮತಗಳಲ್ಲಿ 434 ಮತ ಪಡೆದ ನರೇಶ್ ಜಯಗಳಿಸಿದರು. ಪ್ರತಿಸ್ಪರ್ಧಿ ಮಮತಾ 241 ಮತ ಪಡೆದು ಬಾರಿ ಅಂತರದಲ್ಲಿ ಸೋಲು ಅನುಭವಿಸಿದರು. ಎಂ.ಎನ್.ಕೋಟೆ ಕ್ಷೇತ್ರದಲ್ಲಿ ಪತ್ರಕರ್ತ ಮೋಹನ್ ಹಾಗೂ ನರಸಿಂಹಮೂರ್ತಿ ಪೈಪೋಟಿ ಎದುರಿಸಿದ್ದರು. ಒಟ್ಟು 646 ಮತಗಳಲ್ಲಿ 346 ಮತಗಳನ್ನು ಪಡೆದ ಮೋಹನ್ ಜಯಶೀಲರಾದರು. ಎದುರಾಳಿ ನರಸಿಂಹಮೂರ್ತಿ 286 ಮತ ಪಡೆದು ಪರಾಜಯಗೊಂಡರು. ಪೆದ್ದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋಚಿಹಳ್ಳಿ ಕ್ಷೇತ್ರದಿಂದ ತಿಮ್ಮೇಗೌಡ, ಚೇತನ್ ಕುಮಾರ್ ಹಾಗೂ ವೆಂಕಟೇಶಯ್ಯ ಮೂವರು ಕಣದಲ್ಲಿದ್ದು, ಒಟ್ಟು 601 ಮತಗಳ ಪೈಕಿ 287 ಮತ ಪಡೆದ ತಿಮ್ಮೇಗೌಡ ಗೆಲುವು ಸಾಧಿಸಿದರು. 204 ಮತ ಪಡೆದ ಚೇತನ್ ಕುಮಾರ್ ಹಾಗೂ 103 ಮತ ಗಳಿಸಿದ ವೆಂಕಟೇಶಯ್ಯ ಸೋಲು ಅನುಭವಿಸಿದರು.
ಉಳಿದ ಹತ್ತು ತಿಂಗಳಲ್ಲಿ ಅಭಿವೃದ್ದಿ ಕೆಲಸ ಮಾಡುವ ಜೊತೆಗೆ ಸರ್ಕಾರಿ ಕಾರ್ಯಕ್ರಮಗಳ ಅನುಷ್ಠಾನಗೊಳಿಸಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲು ಎಲ್ಲಾ ಸದಸ್ಯರ ಒಮ್ಮತದಲ್ಲಿ ಕೆಲಸ ಮಾಡುವುದಾಗಿ ಗೆಲುವು ಸಾಧಿಸಿದ ಮೂವರು ನೂತನ ಸದಸ್ಯರು ಸುದ್ದಿಗಾರರೊಂದಿಗೆ ಹಂಚಿಕೊಂಡರು. ಇದೇ ಸಂದರ್ಭದಲ್ಲಿ ನೂತನ ಸದಸ್ಯರ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
