ಪಾಕಿಸ್ತಾನದಲ್ಲಿ ರಾಜಕೀಯ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬಿಡುಗಡೆ ಆಗ್ರಹಿಸಿ ಪಾಕಿಸ್ತಾನ್ ತೆಹ್ರೀಕ್ ಎ ಇನ್ಸಾಫ್ (ಪಿಟಿಐ) ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಘರ್ಷಣೆಗಳು ನಡೆಯುತ್ತಿವೆ. ಈವರೆಗೆ ಕನಿಷ್ಠ 5 ಮಂದಿ ಸಾವನ್ನಪ್ಪಿದ್ದಾರೆ.
ಇಮ್ರಾನ್ ಖಾನ್ ಬಿಡುಗಡೆಗೆ ಆಗ್ರಹಿಸಿ ಅವರ ಬೆಂಬಲಿಗರು ಪಾಕಿಸ್ತಾನದಾದ್ಯಂತ ಪ್ರತಿಭಟನೆ ನಡೆಸಿದ್ದು, ಸೋಮವಾರ ತಡರಾತ್ರಿ ರಾಜಧಾನಿ ಇಸ್ಲಾಮಾಬಾದ್‌ಗೆ ಪ್ರವೇಶಿಸಿದ್ದಾರೆ. ಈ ವೇಳೆ, ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದೆ. ಪೊಲೀಸರು ಮತ್ತು ಪಿಟಿಐ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು, ನಾಲ್ವರು ಸೈನಿಕರು ಮತ್ತು ಓರ್ವ ಪ್ರತಿಭಟನಾಕಾರ ಸಾವನ್ನಪ್ಪಿದ್ದಾರೆ. 119ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಹಿಂಸಾಚಾರ ತೀವ್ರಗೊಂಡಿದ್ದರಿಂದ ಪಾಕಿಸ್ತಾನ ಸೇನೆಯು ಇಸ್ಲಾಮಾಬಾದ್‌ನಲ್ಲಿ ‘ಶೂಟ್ ಅಟ್ ಸೈಟ್’ (ಗಂಡಲ್ಲಿ ಗುಂಡು) ಆದೇಶ ಹೊರಡಿಸಿದೆ. ರಾಷ್ಟ್ರವ್ಯಾಪಿ ನಡೆಯುತ್ತಿರುವ ಪ್ರತಿಭಟನೆಗಳನ್ನು ನಿಗ್ರಹಿಸಲು ಪ್ರಧಾನಿ ಶೆಹಬಾಜ್ ಷರೀಫ್ ಅವರ ಸರ್ಕಾರ ನಿರಂತರ ಪ್ರಯತ್ನ ನಡೆಸಿದೆ.
Pakistan Interior Minister threatens to mass slaughter unarmed, peaceful protestors ,
— lmene 🇹🇷 🇵🇸 (@tturk_0) November 25, 2024
& after an hour 7 people reported killed & 20 are injured in Ranger firing…#Pakistan #ImranKhan pic.twitter.com/tjaIEkh3GB
‘ಜನಾದೇಶ’ ತಿರುಚಿವಿಕೆ, ಇಮ್ರಾನ್ ಖಾನ್ ಅನ್ಯಾಯದ ಬಂಧನ ಮತ್ತು 26ನೇ ತಿದ್ದುಪಡಿಯ ಅಂಗೀಕಾರವನ್ನು ಖಂಡಿಸಿ ಇಮ್ರಾನ್ ಖಾನ್ ಬೆಂಬಲಿಗರು ನವೆಂಬರ್ 24 ರಂದು ರಾಷ್ಟ್ರವ್ಯಾಪಿ ಪ್ರತಿಭಟನೆಗಳಿಗೆ ಕರೆ ನೀಡಿದ್ದರು.