ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದ ಶಿರಗುಪ್ಪಿ ರಸ್ತೆ ಪಕ್ಕದ ಕಬ್ಬಿನ ಗದ್ದೆಗಳಿಗೆ ಬೆಂಕಿ ತಗುಲಿದ ಪರಿಣಾಮ 200 ಎಕರೆ ಕಬ್ಬು ಸಂಪೂರ್ಣ ಸುಟ್ಟು ಕರಕಲಾಗಿ ಲಕ್ಷಾಂತರ ರೂಪಾಯಿಗಳ ಬೆಳೆ ನಾಶವಾಗಿರುವ ಘಟನೆ ಸೋಮವಾರ ನಡೆದಿದೆ.
ಸೋಮವಾರ ಬೆಳಿಗ್ಗೆ ಸುಮಾರು 10 ಗಂಟೆಗೆ ಹೊತ್ತಿಕೊಂಡ ಬೆಂಕಿ ಮಧ್ಯಾಹ್ನ ವರೆಗೂ ನಿಯಂತ್ರಣಕ್ಕೆ ಬಾರದಿರುವದರಿಂದ ಬೆಂಕಿ ನಂದಿಸಲು ರೈತರು ಹಾಗೂ ಅಗ್ನಿ ಶಾಮಕ ಸಿಬ್ಬಂದಿಗಳು ಹರಸಾಹಸ ಪಟ್ಟಿದ್ದು, ರಾಯಬಾಗ ಮತ್ತು ಉಗಾರ ಶುಗರ್ಸನ ಎರಡು ಅಗ್ನಿಶಾಮಕ ವಾಹನ ಹಾಗೂ ಮಹಾರಾಷ್ಟ್ರದ ದತ್ತ ಶುಗರ್ಸ್ ಕಾರ್ಖಾನೆ ಅಗ್ನಿಶಾಮಕ ವಾಹನಗಳು ಮತ್ತು ಸಿಬ್ಬಂದಿಗಳು ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ.
ಹೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದ್ದು, ಹೆಸ್ಕಾಂ ಗೆ ಹಲವು ಬಾರಿ ಮನವಿ ಮಾಡಿಕೊಂಡರೂ ನಮ್ಮ ಮನವಿಗೆ ಸ್ಪಂದಿಸುವ ಕೆಲಸ ಮಾಡಿಲ್ಲ. ಇದರಿಂದ ರೈತನಿಗೆ ನಷ್ಟ ಉಂಟಾಗುತ್ತಿದ್ದರೂ ಅಧಿಕಾರಿಗಳು ಮಾತ್ರ ಕೈ ಕಟ್ಟಿ ಕುಳಿತಿದ್ದಾರೆ ಎಂದು ರೈತರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಸ್ಥಳಕ್ಕೆ ತಹಶಿಲ್ದಾರ ರಾಜೇಶ ಬುರ್ಲಿ, ಪಿಎಸ್‌ಐ ಜಿ.ಜಿ. ಬಿರಾದರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.