ಮಹಾರಾಷ್ಟ್ರ | ಹೆಚ್ಚುವರಿ ಮತ; ಇವಿಎಂ ದುರ್ಬಳಕೆಯೇ, ಚುನಾವಣಾ ಆಯೋಗದ ಎಡವಟ್ಟೆ?

Date:

Advertisements

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಫಲಿತಾಂಶ ಈಗಾಗಲೇ ಹೊರಬಿದ್ದಿದೆ. ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಬಹುಮತ ಪಡೆದಿದ್ದು, ಮುಂದಿನ ಮುಖ್ಯಮಂತ್ರಿ ಯಾರೆಂದು ನಿರ್ಧರಿಸುವ ಸರ್ಕಸ್ ನಡೆಸುತ್ತಿದೆ. ಇವೆಲ್ಲವುದರ ನಡುವೆ ಮಹಾರಾಷ್ಟ್ರದಲ್ಲಿ ಮತದಾನದ ದತ್ತಾಂಶವು ಸಾಕಷ್ಟು ಗುಮಾನಿಗಳಿಗೆ ಎಡೆಮಾಡಿಕೊಟ್ಟಿದೆ.

ಶಿವಸೇನೆ (ಉದ್ಧವ್ ಠಾಕ್ರೆ ಬಣ)ದ ಸಂಸದ ಸಂಜಯ್ ರಾವತ್ ಹೇಳುವಂತೆಯೇ ಮಹಾರಾಷ್ಟ್ರದಲ್ಲಿ ಇವಿಎಂಗಳನ್ನು ದುರ್ಬಳಕೆ, ಹ್ಯಾಕ್ ಮಾಡಲಾಗಿದೆಯೇ ಅಥವಾ ಇವಿಎಂ ಕೆಟ್ಟಿದೆಯೇ ಎಂಬ ಪ್ರಶ್ನೆ ಹಲವರದ್ದು. ಚುನಾವಣೆಯಲ್ಲಿ ಎಣಿಸಿದ ಮತಗಳು ಮತ್ತು ಚಲಾವಣೆಯಾದ ಮತಗಳ ನಡುವೆ ಇರುವ ವ್ಯತ್ಯಾಸವೇ ಈ ಶಂಕೆ, ಪ್ರಶ್ನೆಗಳಿಗೆ ಕಾರಣವೂ ಆಗಿದೆ.

ಭಾರತದ ಚುನಾವಣಾ ಆಯೋಗದ ಪ್ರಕಾರ, ಮಹಾರಾಷ್ಟ್ರದಲ್ಲಿ ಅಂತಿಮ ಮತದಾನ ಪ್ರಮಾಣ 66.05%. ಅಂದರೆ, 64,088,195ರಷ್ಟು ಮತದಾನ ನಡೆದಿದೆ. ಈ ಪೈಕಿ, 30,649,318 ಮಹಿಳೆಯರು, 33,437,057 ಪುರುಷರು,1,820 ಇತರರು. ಆದರೆ ಎಣಿಕೆಯಾದ ಒಟ್ಟು ಮತಗಳ ಸಂಖ್ಯೆ 64,592,508 ಆಗಿದೆ. ಅಂದರೆ ಒಟ್ಟು ಚಲಾವಣೆಯಾದ ಮತಕ್ಕಿಂತ 5,04,313 ಹೆಚ್ಚುವರಿ ಮತ ಎಣಿಕೆಯಾಗಿದೆ. ಇದು ಹೇಗೆ ಸಾಧ್ಯ?

Advertisements

ಎಂಟು ಕ್ಷೇತ್ರಗಳಲ್ಲಿ ಚಲಾವಣೆಯಾದ ಮತಕ್ಕಿಂತ ಕಡಿಮೆ ಮತ ಎಣಿಕೆಯಾಗಿದೆ. ಉಳಿದಂತೆ 280 ವಿಧಾನಸಭಾ ಕ್ಷೇತ್ರದಲ್ಲಿ ಚಲಾವಣೆಯಾದ ಮತಕ್ಕಿಂತ ಅಧಿಕ ಮತ ಎಣಿಕೆಯಾಗಿದೆ. ಅಶ್ತಿ ಪ್ರದೇಶದಲ್ಲಿ 4,538 ಹೆಚ್ಚುವರಿ ಮತಗಳ ಕಂಡುಬಂದರೆ, ಒಸ್ಮಾನಾಬಾದ್‌ನಲ್ಲಿ 4,155 ಮತಗಳ ಅಂತರ ಕಂಡುಬಂದಿದೆ. ಇವೆರಡರ ಪೈಕಿ ಅಶ್ತಿಯಲ್ಲಿ ಬಿಜೆಪಿ ಗೆದ್ದರೆ, ಒಸ್ಮಾನಾಬಾದ್‌ನಲ್ಲಿ ಶಿವಸೇನೆ (ಯುಬಿಟಿ) ಜಯ ಕಂಡಿದೆ.

ಇದನ್ನು ಓದಿದ್ದೀರಾ? ಮಹಾರಾಷ್ಟ್ರ ಚುನಾವಣೆ | ಗೆಲ್ಲುತ್ತಿರುವ ಶ್ರೀಮಂತ ಜಿಲ್ಲೆಗಳು ಮತ್ತು ಸೊರಗುತ್ತಿರುವ ಬಡ ಪ್ರದೇಶಗಳು

ಬಿಜೆಪಿ, ಶಿವಸೇನೆ (ಶಿಂದೆ ಬಣ) ಹಾಗೂ ಎನ್‌ಸಿಪಿ (ಅಜಿತ್ ಬಣ)ದ ಮಹಾಯುತಿ ಮೈತ್ರಿ ಕೂಟವು ಬರೋಬ್ಬರಿ 220 ಸ್ಥಾನಗಳನ್ನು ಗೆದ್ದು ಮತ್ತೆ ಸರ್ಕಾರ ರಚನೆಗೆ ಸಿದ್ಧವಾಗಿದೆ. ಆದರೆ ಕಾಂಗ್ರೆಸ್, ಶಿವಸೇನೆ (ಯುಬಿಟಿ) ಹಾಗೂ ಎನ್‌ಸಿಪಿ (ಶರದ್ ಬಣ)ದ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟ ಹೀನಾಯ ಸೋಲು ಕಂಡಿದೆ. ಈ ಗೆಲುವಿಗೆ ಮಹಾಯುತಿ ಘೋಷಿಸಿದ ಗ್ಯಾರಂಟಿಗಳು ಕಾರಣ ಎಂಬ ಮಾತುಗಳಿವೆ. ಆದರೆ ಮತಗಳ ವ್ಯತ್ಯಾಸ ಫಲಿತಾಂಶದ ಮೇಲೆ ಪ್ರಭಾವ ಬೀರಿರಲಾರದು ಎಂದು ಹೇಳಲಾಗದು. ಚುನಾವಣಾ ಆಯೋಗದ ಎಡವಟ್ಟು ಕೂಡಾ ಈ ಗೊಂದಲ ಸೃಷ್ಟಿಸಿರಬಹುದು.

ಲೋಕಸಭೆ ಚುನಾವಣೆಯ ಬಗ್ಗೆಯೂ ಪ್ರಶ್ನೆ

ಮಹಾರಾಷ್ಟ್ರ ಚುನಾವಣೆಯಲ್ಲಿ ಕಾಣಿಸಿಕೊಂಡ ಈ ಮತಗಳ ವ್ಯತ್ಯಾಸವು ಲೋಕಸಭೆ ಚುನಾವಣೆಯ ಫಲಿತಾಂಶದ ಮೇಲೆಯೂ ಬೊಟ್ಟು ಮಾಡುವಂತೆ ಮಾಡಿದೆ. ಲೋಕಸಭೆ ಚುನಾವಣೆಯಲ್ಲಿ ಚುನಾವಣಾ ಆಯೋಗವು ಮತದಾನ ಪ್ರಕ್ರಿಯೆ ನಡೆದ ದಿನ ತಿಳಿಸಿದ ಮತದಾನ ಪ್ರಮಾಣಕ್ಕೂ ಅಂತಿಮವಾಗಿ ಘೋಷಿಸಿದ ಮತದಾನ ಪ್ರಮಾಣಕ್ಕೂ ಸುಮಾರು ಶೇಕಡ 5-6ರಷ್ಟು ವ್ಯತ್ಯಾಸ ಕಂಡುಬಂದಿದೆ.

ಇಷ್ಟು ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬಂದಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ವಿಪಕ್ಷಗಳು ಚುನಾವಣಾ ಆಯೋಗವನ್ನು ಪ್ರಶ್ನಿಸಿತ್ತು. ಆದರೆ ಇಸಿಐ ಮಾತ್ರ ನೆವ ಹೇಳಿ ಸರಿಯಾದ ದಾಖಲೆಗಳನ್ನು ಬಿಡುಗಡೆ ಮಾಡದೆ ಮಾಹಿತಿ ಮುಚ್ಚಿಟ್ಟಿತು. ಇಂದಿಗೂ ಫಾರ್ಮ್ 17ಸಿ ಮಾಹಿತಿ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಸರಿಯಾಗಿ ಉಲ್ಲೇಖಿಸಲಾಗಿಲ್ಲ.

ಇದನ್ನು ಓದಿದ್ದೀರಾ? ಲೋಕಸಭೆ ಸೋಲಿನ ಆರೇ ತಿಂಗಳಲ್ಲಿ ಮಹಾರಾಷ್ಟ್ರವನ್ನು ಬಿಜೆಪಿ ಗೆದ್ದಿದ್ದು ಹೇಗೆ?; 6 ಕಾರಣಗಳಿವು

ಈಗ ಮಹಾರಾಷ್ಟ್ರದಲ್ಲಿ ಕಂಡುಬಂದಿರುವ ಚಲಾವಣೆಯಾದ ಮತ ಪ್ರಮಾಣ ಮತ್ತು ಎಣಿಕೆಯಾದ ಮತ ಪ್ರಮಾಣದ ನಡುವಿನ ವ್ಯತ್ಯಾಸವು ಲೋಕಸಭೆ ಚುನಾವಣಾ ಫಲಿತಾಂಶದ ಮೇಲೆ ಅನುಮಾನ ಹುಟ್ಟಿಸಿದೆ. ಲೋಕಸಭೆ ಚುನಾವಣೆ ಸಂದರ್ಭದಲ್ಲೇ ಎಡಿಆರ್ ಸುಪ್ರೀಂ ಕೋರ್ಟ್ ಕದ ತಟ್ಟಿತ್ತು. ಪ್ರತಿ ಬೂತ್‌ನ ಮತ ಪಟ್ಟಿಯನ್ನು 48 ಗಂಟೆಗಳಲ್ಲಿ ಬಿಡುಗಡೆ ಮಾಡಲು ಆದೇಶಿಸುವಂತೆ ಮನವಿ ಮಾಡಿತ್ತು.

ಆದರೆ, ಸುಪ್ರೀಂ ಕೋರ್ಟ್ ‘ಇದು ಪ್ರಾಯೋಗಿಕವಲ್ಲ’ ಎಂದು ಹೇಳಿ ಅರ್ಜಿ ವಜಾಗೊಳಿಸಿತ್ತು. ಮತಪತ್ರ ಮೂಲಕ ಚುನಾವಣೆ ನಡೆಸುವಂತೆ ಕೋರಿ ಸಲ್ಲಿಸಿದ ಅರ್ಜಿಯನ್ನು ನವೆಂಬರ್ 26ರಂದು ಸುಪ್ರೀಂ ತಿರಸ್ಕರಿಸಿದೆ. “ನೀವು ಸೋತಾಗ ಇವಿಎಂ ದುರ್ಬಳಕೆಯಾಗಿದೆ ಎಂದು ಹೇಳುವುದು. ನೀವು ಗೆದ್ದಾಗ ಇವಿಎಂ ಸರಿ ಇರುತ್ತದೆಯೇ” ಎಂದು ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ಪ್ರಸನ್ನ ಬಿ ವರಾಲೆ ಅವರ ಪೀಠ ಪ್ರಶ್ನಿಸಿದೆ.

ಗೆಲುವು, ಸೋಲು ನಿರ್ಧರಿಸುವುದು ಹೇಗೆ?

ಚುನಾವಣಾ ಆಯೋಗದ ಪ್ರಕಾರ ಮಹಾರಾಷ್ಟ್ರದ ನವಾಪುರದಲ್ಲಿ (ಎಸ್‌ಟಿ ಕ್ಷೇತ್ರ) 2,95,786 ಮತದಾರರಿದ್ದಾರೆ. ನವೆಂಬರ್ 20ರಂದು ಶೇಕಡ 81.15ರಷ್ಟು ಮತದಾನವಾಗಿದೆ. ಅಂದರೆ 2,40,022 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಆದರೆ ಇಸಿಐ ಪ್ರಕಾರ ಒಟ್ಟು ಎಣಿಕೆಯಾದ ಮತ 2,41,193. ಈ ಕ್ಷೇತ್ರದಲ್ಲಿ ಗೆಲುವಿನ ಅಂತರ 1,122 ಮತಗಳು. ಹೀಗಿರುವಾಗ ಗೆಲುವು, ಸೋಲು ನಿರ್ಧರಿಸುವುದು ಹೇಗೆ?

ಇನ್ನು ಮಾವಲ್ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 3,86,172. ಶೇಕಡ 72.59 ಮತದಾನವಾಗಿದ್ದು 2,80,319 ಮಂದಿ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾದಂತಾಯಿತು. ಆದರೆ, ಮತ ಎಣಿಕೆ ವೇಳೆ ಒಟ್ಟು 2,79,081 ಮತಗಳ ಲೆಕ್ಕಾಚಾರವನ್ನು ಚುನಾವಣಾ ಆಯೋಗ ಮಾಡಿದ್ದು 1,238 ಮತಗಳ ಕಡಿಮೆಯಾಗಿದೆ. ಆದರೆ ಇದರ ಬಗ್ಗೆ ಪ್ರಶ್ನೆ ಎತ್ತಿದಾಗ ‘ಸೋತ ಹತಾಶೆಯಲ್ಲಿ ವಿಪಕ್ಷಗಳು ಗೊಂದಲ ಸೃಷ್ಟಿಸುತ್ತಿದೆ’ ಎಂಬುದನ್ನು ಮತದಾರರ ತಲೆಗೆ ತುಂಬಿಸಿ ಬಾಯಿ ಮುಚ್ಚಿಸಲಾಗುತ್ತದೆ.

ಚುನಾವಣೆಯಲ್ಲಿ ಗೆಲುವು-ಸೋಲು, ಜನ ಬೆಂಬಲವನ್ನು ನಿರ್ಧರಿಸಲು ಒಂದು ಮತವೂ ಮುಖ್ಯ. ಹಾಗಿರುವಾಗ ಬರೋಬ್ಬರಿ 5 ಲಕ್ಷಕ್ಕೂ ಅಧಿಕ ಮತಗಳ ವ್ಯತ್ಯಾಸ ಖಂಡಿತವಾಗಿಯೂ ಮಹಾರಾಷ್ಟ್ರ ಚುನಾವಣೆ ಫಲಿತಾಂಶದ ಮೇಲೆ ಪ್ರಭಾವ ಬೀರಿರುತ್ತದೆ. ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ನಡುವೆ ಭಾರೀ ಪೈಪೋಟಿ ನಡೆದಿದೆ. ಕೆಲವೇ ಮತಗಳ ಅಂತರದಲ್ಲಿ ಸೋಲು/ ಗೆಲುವಾಗಿದೆ. ಅಂತಹ ಕ್ಷೇತ್ರಗಳಲ್ಲಿ ಈ ಹೆಚ್ಚುವರಿ ಮತಗಳು ಖಂಡಿತ ಪ್ರಭಾವ ಬೀರಿರುತ್ತದೆ. ಗೆಲುವಿಗೆ ಹೆಚ್ಚುವರಿ ಮತ ಕಾರಣವಾಗಿರಬಹುದು ಅಥವಾ ಸೋಲಿಗೆ ಕಡಿಮೆ ಮತ ಎಣಿಕೆಯೇ ನಿಮಿತ್ತವಾಗಿರಬಹುದು.

ಈ ಮತ ಪ್ರಮಾಣ ಫಲಿತಾಂಶದ ಮೇಲೆ ಹೆಚ್ಚು ಪ್ರಭಾವ ಬೀರಲ್ಲ ಎಂದುಕೊಂಡರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇರಬೇಕಾದ ಪಾರದರ್ಶಕತೆ, ನಿಖರತೆಯ ಪ್ರಶ್ನೆಯೇನು? ಇವಿಎಂ ದುರ್ಬಳಕೆಯಾಗಿಲ್ಲ, ಸರಿಯಾದ ಮಾಹಿತಿಯನ್ನು ನೀಡುವಲ್ಲಿ ಚುನಾವಣಾ ಆಯೋಗದ ತಪ್ಪಾಗಿದೆ ಎಂದೇ ನಾವು ಭಾವಿಸೋಣ ಬಿಡಿ. ಆ ತಪ್ಪನ್ನು ಸರಿಪಡಿಸಿ, ಸ್ಪಷ್ಟನೆ ನೀಡಬೇಕಾಲ್ಲವೇ? ಚುನಾವಣಾ ಆಯೋಗ, ರಾಜಕಾರಣಿಗಳ ಆಟದ ನಡುವೆ ನಾಗರಿಕರಿಗೆ ಇರುವ ಮತವೆಂಬ ಏಕೈಕ ಅಸ್ತ್ರಕ್ಕೆ ಬೆಲೆಯೇ ಇಲ್ಲದಂತಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ರಸ್ತೆ ತುಂಬಾ ತಗ್ಗು ಗುಂಡಿಗಳದ್ದೇ ಕಾರುಬಾರು; ಸವಾರರ ಜೀವಕ್ಕೆ ‘ಗ್ಯಾರಂಟಿ’ಯೇ ಇಲ್ಲ!

ರಾಯಚೂರಿನ ಅನ್ವರಿ - ಹಟ್ಟಿ ಚಿನ್ನದ ಗಣಿ ಪಟ್ಟಣಕ್ಕೆ ಹೋಗುವ ಮುಖ್ಯ...

Download Eedina App Android / iOS

X