ಗುಬ್ಬಿ ತಾಲ್ಲೂಕಿನ ಬಡ ಕುಟುಂಬದ ರೈತನ ಮಗನಾಗಿ ಬಸವ ಟಿವಿ ದೃಶ್ಯ ಮಾದ್ಯಮದ ಮೂಲಕ ಸಾಧನೆಗೈದು ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿ ಮೇಘಾಲಯದ ರಾಜ್ಯಪಾಲರಿಂದ ಪ್ರಶಸ್ತಿ ಮುಡಿಗೇರಿಸಿಕೊಂಡ ಸಾಧಕರು ಗುಬ್ಬಿ ತಾಲ್ಲೂಕಿನ ಕಡಬ ಹೋಬಳಿಯ ಬಿ.ಕೋಡಿಹಳ್ಳಿಯ ಈ.ಕೃಷ್ಣಪ್ಪ ಎಂಬುದು ಹೆಮ್ಮೆಯ ವಿಷಯವಾಗಿದೆ.
ತಾಲ್ಲೂಕಿನ ಕಡಬ ಹೋಬಳಿಯ ಬಿ.ಕೋಡಿಹಳ್ಳಿಯ ಈರಯ್ಯ ಮತ್ತು ಗಂಗಮ್ಮ ಎಂಬ ದಂಪತಿಯ ಪುತ್ರನಾಗಿ ಜನಿಸಿ ನಾಡು ನುಡಿ ಭಾಷೆ ಇನ್ನಿತರ ವಿಷಯಗಳಲ್ಲಿ ಆಸಕ್ತಿ ಹೊಂದಿದ ಇವರು ಅರ್ಥಪೂರ್ಣ ಬದುಕಿನ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸ್ವಂತ ಆಸ್ತಿಯನ್ನೇ ಮಾರಿಕೊಂಡು ಸಮಾಜದ ದ್ಯೆಯೋದ್ದೇಶಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಬಸವ ಟಿವಿ ಎಂಬ ದೃಶ್ಯ ಮಾದ್ಯಮದ ಸಂಸ್ಥಾಪಕರಾಗಿ ಹಗಲಿರುಳು ಸಮಾಜಕ್ಕೆ ದುಡಿದ ಇವರನ್ನು ಮತ್ತು ಇವರ ಸಾಧನೆಯನ್ನು ಗುರುತಿಸಿ ಘನವೆತ್ತ ರಾಜ್ಯಪಾಲರಿಂದ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.
ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನಡೆದ 45 ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವದಲ್ಲಿ ನಾಲ್ವರು ಗಣ್ಯರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಮಾಡಲಾಗಿದ್ದು ಬೆಂಗಳೂರಿನ ಡಾ.ಕೆ.ಎಸ್ ರಾಜಣ್ಣ ನವರಿಗೆ ಅನುಭವ ಮಂಟಪದ ರಾಷ್ಟ್ರೀಯ ಪ್ರಶಸ್ತಿ, ಬೆಂಗಳೂರು ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರಿಗೆ ಡಾ.ಎಂ.ಎಂ ಕಲಬುರ್ಗಿ ಸಾಹಿತ್ಯ ಸಂಶೋಧನಾ ರಾಷ್ಟ್ರೀಯ ಪ್ರಶಸ್ತಿ, ಮಹಾರಾಷ್ಟ್ರ ಬಸವ ಪರಿಷತ್ ನ ರಾಜ್ಯಾಧ್ಯಕ್ಷರಾದ ಬಿ.ಎಂ ಪಾಟೀಲ್ ಗೆ ಬಸವ ಭಾಸ್ಕರ್ ರಾಷ್ಟ್ರೀಯ ಪ್ರಶಸ್ತಿ, ಹಾಗೂ ಗುಬ್ಬಿ ತಾಲ್ಲೂಕಿನ ಬಸವ ಟಿವಿ ಸಂಸ್ಥಾಪಕರಾದ ಈ.ಕೃಷ್ಣಪ್ಪ ಅವರಿಗೆ ಅನುಭವ ಮಂಟಪದ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವ ಸಲ್ಲಿಸಲಾಯಿತು.
ಪ್ರಶಸ್ತಿ ಪಡೆದ ಈ.ಕೃಷ್ಣಪ್ಪ ಸುದ್ದಿಗಾರರ ಜತೆ ಮಾತನಾಡಿ ಸಮಾಜ ಸೇವಾಕಾರ್ಯವನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ನಡೆಸಿಕೊಂಡು ಬಂದಿದ್ದೇವೆ. ಮಾಧ್ಯಮ ಮೂಲಕ ವಿನೂತನ ಸಮಾಜ ಕೆಲಸ ಮಾಡುವ ನಿಟ್ಟಿನಲ್ಲಿ ಬಸವ ಟಿವಿ ಸಂಸ್ಥಾಪಕರಾಗಿ ಸೇವೆ ಮಾಡಿದ್ದೇವೆ. ಬಡ ಮಧ್ಯಮ ವರ್ಗದ ಪರ ನಿಂತು ಜಾತ್ಯತೀತ ಕೆಲಸ ಮಾಡಿದ್ದರ ಫಲ ಅನುಭವ ಮಂಟಪ ಗುರುತಿಸಿ ಪ್ರಶಸ್ತಿ ನೀಡಿ ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ ಎಂದರು.
