ಜಾತ್ಯತೀತತೆಗೆ ವಿರೋಧ; ಸ್ವಾತಂತ್ರ್ಯ ಚಳವಳಿಗೆ ಸೇರದವರ ವ್ಯರ್ಥ ಪ್ರಲಾಪ

Date:

Advertisements

ಸಮಾಜದಲ್ಲಿ ಜಾತಿಯ ಕಾರಣದಿಂದ ಯಜಮಾನಿಕೆಯನ್ನು ನಡೆಸುತ್ತಾ, ತನ್ನ ಶಕ್ತಿಗಿಂತಲೂ ಅನ್ಯರ ದೌರ್ಬಲ್ಯವನ್ನೇ ಬಂಡವಾಳವಾಗಿಸಿಕೊಂಡು ಆಯಕಟ್ಟಿನ ಜಾಗದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡವರಿಗೆ ಸಂವಿಧಾನ ನೀಡಿದ ಸಮಾನತೆ ಮತ್ತು ಜಾತ್ಯತೀತತೆ ಕಸಿವಿಸಿ ಉಂಟುಮಾಡಿದೆಯೇ?

ನಿನ್ನೆಯಷ್ಟೇ ನಮ್ಮ ದೇಶದ ಸಂವಿಧಾನ ದಿನ ಆಚರಿಸಿದ್ದೇವೆ. ಭೀಮ್ ರಾವ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ದೇಶದ ಜನರು ತಮ್ಮ ವರ್ತಮಾನ ಮತ್ತು ಭವಿಷ್ಯವನ್ನು ನಿರ್ಧರಿಸುವ ಅವಕಾಶವಿರುವ ಸಂವಿಧಾನವನ್ನು ತಮಗೆ ತಾವೇ ಕೊಟ್ಟುಕೊಂಡ ದಿನ. ಕಾಲದ ಅಗತ್ಯಕ್ಕೆ ತಕ್ಕಂತೆ ಸಂವಿಧಾನದಲ್ಲಿ ಕೆಲವೊಂದು ಬದಲಾವಣೆಯನ್ನು ಮಾಡಿಕೊಳ್ಳಲಾಗಿದೆ. ಆದರೆ ಕೆಲವೊಂದು ಜನರಿಗೆ ಇದರ ಮೂಲ ಸ್ವರೂಪದ ಬಗ್ಗೆ ಆಶಯದ ಬಗ್ಗೆ ಒಳಗೊಳಗೇ ಇದ್ದ ಅಸಹನೆ, ಅಪಸ್ವರ ಇತ್ತೀಚಿನ ದಿನಗಳಲ್ಲಿ ಕೊಂಚ ಜೋರಾಗಿಯೇ ನಮ್ಮೆಲ್ಲರ ಕಿವಿಗೆ ಬೀಳುತ್ತಿದೆ.

ಇಡೀ ವಿಶ್ವದಲ್ಲಿಯೇ ನಮ್ಮದು ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ. ಎಲ್ಲ ಮಿತಿಗಳೊಂದಿಗೆ ಕಾಲ, ಕಾಲಕ್ಕೆ ಚುನಾವಣೆಗಳು ನಡೆಯುತ್ತಿವೆ, ಆರ್ಥಿಕವಾಗಿ ದೇಶ ಪ್ರಗತಿಯತ್ತ ಮುನ್ನಡೆಯುತ್ತಲೂ ಇದೆ. ನಮ್ಮೊಂದಿಗೆ ಸ್ವಾತಂತ್ರ್ಯ ಪಡೆದ ಅನೇಕ ದೇಶಗಳು ಮುಗ್ಗರಿಸಿ ಬಿದ್ದಿವೆ. ಹಾಗಿರುವಾಗ ನಮ್ಮ ಸಾಧನೆ ಕಡಿಮೆಯನಲ್ಲ. ಆದಾಗ್ಯೂ ಮೊನ್ನೆಯಷ್ಟೇ ಪೇಜಾವರರ ನೇತೃತ್ವದಲ್ಲಿ ಕೆಲವು ಸ್ವಾಮಿಗಳು “ತಮಗೆ ಗೌರವ ನೀಡುವ ಸಂವಿಧಾನ ಬೇಕು” ಎನ್ನುವ ಅಪೇಕ್ಷೆ ವ್ಯಕ್ತಪಡಿಸಿ ರಾಜ್ಯಪಾಲರಿಗೆ ಮನವಿಯೊಂದನ್ನು ಕೊಟ್ಟರು. ಈ ಬೆಳವಣಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಆರೋಗ್ಯದ ದೃಷ್ಟಿಯಿಂದ ಅಪೇಕ್ಷಣೀಯ ಬೆಳವಣಿಗೆ ಅಲ್ಲವೆನ್ನುವುದು ನನ್ನನ್ನು ಸೇರಿಸಿದಂತೆ ಬಹಳಷ್ಟು ಜನರ ಅಭಿಪ್ರಾಯ.

Advertisements

ಈ ದೇಶದ ಜನ ಬಯಸುವ ಯಾವುದೇ ಗೌರವವನ್ನು ಪಡೆಯಲು ಈಗಿರುವ ಸಂವಿಧಾನದಲ್ಲಿ ಅವಕಾಶಗಳು ಬಹಳ ವಿಪುಲವಾಗಿಯೇ ಇವೆ. ಹೇಗೆ ಎನ್ನುವುದನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಅವರನ್ನು ಕೇಳಿದರೆ ಅವರು ಸರಿಯಾದ ಮಾರ್ಗದರ್ಶನ ಮಾಡಬಹುದೇನೋ. ಸಂವಿಧಾನದ ಶಕ್ತಿಯಿಂದ ಚಹಾ ಮಾರುತ್ತಿದ್ದ ಸಾಮಾನ ಹುಡುಗನೊಬ್ಬ ಒಂದಲ್ಲ ಮೂರು ಬಾರಿ ದೇಶದ ದೇಶದ ಪ್ರಧಾನಿಯಾಗುವ, ಆದಿವಾಸಿ ಹೆಣ್ಣುಮಗಳೊಬ್ಬರು ರಾಷ್ಟ್ರಪತಿಯಾಗಿರುವ ದೃಷ್ಟಾಂತ ನಮ್ಮ ಕಣ್ಣ ಮುಂದಿದೆ. ಇಂತಹ ಅದ್ಭುತ ಸಂವಿಧಾನವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಅವರ ತಂಡ ನಮಗೆ ನೀಡಿದ್ದಾರೆ. ಇನ್ನು ಇದಕ್ಕೂ ಮಿಕ್ಕಿದ ಸಂವಿಧಾನ ಯಾವುದು ಎನ್ನುವುದನ್ನು ಸ್ವಾಮಿಗಳು ಸೃಷ್ಟಪಡಿಸಿದರೆ ಒಳ್ಳೆಯದೇನೋ?

ದೇಶದ ಸಂವಿಧಾನದ ಪೀಠಿಕೆಯಲ್ಲಿ ಜಾತ್ಯತೀತ ಎನ್ನುವ ಪದವನ್ನು ಸಂವಿಧಾನ ತಿದ್ದುಪಡಿಯ ಮೂಲಕ ಸೇರಿಸಲಾಗಿದ್ದು ಅದನ್ನು ತೆಗೆದು ಹಾಕುವುದು ಒಳ್ಳೆಯದು ಎಂದು ಸುಪ್ರೀಂಕೋರ್ಟಿಗೆ ಮಾಡಲಾದ ಮನವಿಯನ್ನು ಸೋಮವಾರಷ್ಟೇ ಸುಪ್ರೀಂಕೋರ್ಟ್ ತಳ್ಳಿಹಾಕಿದೆ. ಪ್ರಪಂಚದ ಅತೀ ದೊಡ್ಡ ಪ್ರಜಾಪ್ರಭುತ್ವ ನಮ್ಮದು. ಬಹುಜಾತಿಗಳ, ಬಹು ಸಂಸ್ಕೃತಿಯ ವೈಶಿಷ್ಟ್ಯಪೂರ್ಣ ಸಮಾಜ ನಮ್ಮದು ಎಂದು ವಿದೇಶಗಳಲ್ಲಿ ಭಾಷಣ ಹೊಡೆದು ಚಪ್ಪಾಳೆಗಿಟ್ಟಿಸುವ ನಮಗೆ ಇಲ್ಲಿ ಬಂದಾಗ ನಮ್ಮ ಸಂವಿಧಾನ, ಸ್ವಾತಂತ್ರ್ಯ ಹೋರಾಟಗಾರರು, ನಮ್ಮಲ್ಲಿರುವ ಅಲ್ಪಸಂಖ್ಯಾತರು, ತಳವರ್ಗ, ಕೆಳವರ್ಗದವರ ಬಗ್ಗೆ ಇಲ್ಲಸಲ್ಲದ ಅಕ್ಷೇಪಗಳೆಲ್ಲ ಕಂಡು ಬರುವುದಕ್ಕೆ ಕಾರಣವಾದರೂ ಏನು? ಅದರಲ್ಲಿಯೂ ವಿಶೇಷವಾಗಿ ಜಾತ್ಯತೀತ ಪದದ ಬಗೆಗೆ ಯಾಕಿಷ್ಟು ಅಸಹನೆ, ಯಾಕಿಷ್ಟು ದ್ವೇಷ, ರೋಷ? ಇದರ ಹಿಂದಿನ ಕಾರಣಗಳು ಅನೇಕ ಇರಬಹುದಾದರೂ, ಪ್ರಮುಖವಾದದ್ದು ಇದು ಎಲ್ಲರಿಗೂ ಸಮಾನ ಅವಕಾಶಗಳನ್ನು ಕೊಟ್ಟಿರುವುದು ಮತ್ತು ಜಾತಿಯ ಕಾರಣದಿಂದ ಹೆಚ್ಚುವರಿ ಲಾಭದ ಸಂಭಾವ್ಯತೆಯನ್ನು ನಿರಾಕರಿಸಿರುವುದೇ ಆಗಿರಬಹುದೇ? ಕಾಲಾಂತರದಿಂದಲೂ ಸಮಾಜದಲ್ಲಿ ಜಾತಿಯ ಕಾರಣದಿಂದ ಯಜಮಾನಿಕೆಯನ್ನು ನಡೆಸುತ್ತಾ, ತನ್ನ ಶಕ್ತಿಗಿಂತಲೂ ಅನ್ಯರ ದೌರ್ಬಲ್ಯವನ್ನೇ ಬಂಡವಾಳವಾಗಿಸಿಕೊಂಡು ಸಾಮಾಜಿಕ ವ್ಯವಸ್ಥೆಯ ಆಯಕಟ್ಟಿನ ಜಾಗದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡವರಿಗೆ ಸಂವಿಧಾನ ನೀಡಿದ ಸಮಾನತೆ ಮತ್ತು ಜಾತ್ಯತೀತತೆ ಕಸಿವಿಸಿ ಉಂಟುಮಾಡಿದೆಯೇ?

ಪಾರಂಪರಿಕ ಶ್ರೇಣೀಕೃತ ವ್ಯವಸ್ಥೆಯಲ್ಲಿ ಏನು ಮಾಡಿದರೆ ಏನು, ರಾಗಿ ಬೀಸುವುದು ತಪ್ಪುತ್ತಿಲ್ಲ ಎಂದು ತಮ್ಮ ಕರ್ಮದ ಫಲವನ್ನು ಉಣ್ಣುತ್ತಾ ಇದ್ದ ಬಹುಜನರಿಗೆ ರಾಷ್ಟ್ರೀಯ ಚಳವಳಿ ನಾಗರಿಕ ಅಸ್ಮಿತೆಯ ಅವಕಾಶ ಕಲ್ಪಿಸುವ ಮೂಲಕ ನಾಳೆ ಸ್ವತಂತ್ರವಾಗುವ ದೇಶದಲ್ಲಿ ತಮ್ಮ ಮತ್ತು ಮಕ್ಕಳ ಭವಿಷ್ಯ ನಿರ್ಧರಿಸುವ ಅವಕಾಶ ಒದಗಿಸಿದ್ದೇ ಹಲವರ ಕಣ್ಣು ಕೆಂಪಾಗಲು ಕಾರಣವಾಗಿರಬಹುದೇ? ಬ್ರಿಟಿಷ್ ಆಡಳಿತವಾದರೂ ಆಗಬಹುದು. ನಮ್ಮ ಅಡಿಯಾಳುಗಳಾಗಿ ಕಾಲಲ್ಲಿ ತೋರಿಸಿದ್ದನ್ನು ತಲೆಯಲ್ಲಿ ಹೊತ್ತು ಮಾಡುವ ಮಂದಿಯ ಜೊತೆ ಸಮಸಮವಾಗಿ ಬದುಕುವುದನ್ನು ನಮ್ಮ ಸಮಾಜದ ಒಂದು ವರ್ಗದ ಜನ ಇಷ್ಟಪಡಲೇ ಇಲ್ಲ ಎನ್ನುವ ಒಂದು ಅಭಿಪ್ರಾಯವೂ ನಮ್ಮ ನಡುವೆ ಇದೆ. ಈ ರೀತಿಯ ಮನೋಭಾವನೆಯ ಜನರಿಗೆ ಸ್ವಾತಂತ್ರ್ಯ ಚಳವಳಿಯಲ್ಲೂ ತಮ್ಮವರ ಭಾಗವಹಿಸುವಿಕೆಯ ಬಗ್ಗೆ ಹೇಳಿಕೊಳ್ಳುವ ದಾಖಲೆಗಳಿಲ್ಲ ಎಂದೂ ಹೇಳಲಾಗುತ್ತಿದೆ.

ಡಿಬಿಸಿ ಮತ್ತು ಇಂದಿರಾ ಗಾಂಧಿ

ಭಾರತ ದೇಶ ಸ್ವಾತಂತ್ರ್ಯ ಪಡೆದ ಎಪ್ಪತ್ತೈದು ವರ್ಷಗಳಲ್ಲಿ ಸ್ವರ್ಗ ಭೂಮಿಗೆ ಬಂದಿಲ್ಲದಿರಬಹುದು. ಆದರೆ ಬದುಕನ್ನು ರೂಪಿಸಿಕೊಳ್ಳುವ, ಕನಸು ಕಾಣುವ ಸಾಂವಿಧಾನಿಕ ಅವಕಾಶಗಳಂತೂ ಖಂಡಿತವಾಗಿಯೂ ಎಲ್ಲ ಜನ ವರ್ಗದವರಿಗೆ ದೊರಕಿದೆ. ನಿಗದಿತ ಗುರಿ ತಲುಪಲು ನಾವು ಸಾಗಬೇಕಿರುವ ದಾರಿ ಇನ್ನೂ ಇರಬಹುದು. ಆದರೆ ಪರಿವರ್ತನೆಯ ಹಾದಿಯಲ್ಲಿ ನಮ್ಮ ಪಯಣವಂತೂ ಆರಂಭವಾಗಿದೆ. ಗಾಂಧಿ ಹತ್ಯೆಯ ಮೈಲಿಗೆಯನ್ನು ತೊಳೆದುಕೊಳ್ಳಲು ಒದ್ದಾಡುತ್ತಿದ್ದ ರಾಜಕೀಯ ಗುಂಪುಗಳಿಗೆ ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ಪೋಷಿಸಿದ ತುರ್ತು ಪರಿಸ್ಥಿತಿ ಮತ್ತು ತುರ್ತು ಪರಿಸ್ಥಿತಿಯ ಅವಧಿಯಲ್ಲಿ ನಡೆದ ಅಧಿಕಾರ ದುರುಪಯೋಗದ ಘಟನೆಗಳು ಸುವರ್ಣ ಅವಕಾಶ ಒದಗಿಸಿತು ಕೂಡಾ. ಅಭಿವೃದ್ಧಿಯ ಕುರಿತು ಸಾಮಾಜಿಕ ಪರಿವರ್ತನೆಯ ಕುರಿತ ಯಾವ ಕಾರ್ಯಸೂಚಿಗಳೂ ಇಲ್ಲದ ವಿರೋಧ ಪಕ್ಷಗಳಿಗೆ ಜನ ಬಹಳ ಕಾಲ ಅಧಿಕಾರದ ಅವಕಾಶವನ್ನೇ ನೀಡಲಿಲ್ಲ. ಕೊನೆಗೂ ಅಯೋಧ್ಯೆಯ ರಾಮ, ತನ್ನಲ್ಲಿಗೆ ಇಟ್ಟಿಗೆ ತಂದವರಿಗೆ ಅವಕಾಶ ನೀಡಿದರೆ, ಅದರಿಂದ ಮಹತ್ತರವಾದುದೇನಾದರೂ ಸಾಧನೆಯಾಯಿತೇ?

ಈ ನಡುವೆ ಹಣಕೇಂದ್ರಿತ ಆರ್ಥಿಕತೆಯ ಮಾರುತ ಜಾಗತಿಕವಾಗಿ ಬಲ ಪಡೆಯುತ್ತಲೇ ಜಗತ್ತನಾದ್ಯಂತ ಬಲಪಂಥೀಯತೆಯ ಪ್ರಭಾವ ದಟ್ಟವಾಗುತ್ತಲೇ ಬರುತ್ತಿದೆ. ಮೇಲ್ನೋಟಕ್ಕೆ ಜಾಗತೀಕರಣ, ಮಾರುಕಟ್ಟೆ ನಿಯಂತ್ರಿತ ವ್ಯವಸ್ಥೆ ಆರ್ಥಿಕ ಉದಾರೀಕರಣ ಎನ್ನುವ ಮುಖವಾಡದ ಹಿಂದೆ ಕುಣಿಯುತ್ತಿರುವುದು ಮಾತ್ರ ಕುರುಡು ಕಾಂಚಾಣವೇ? ಬಲಪಂಥೀಯತೆಯ ಶಕ್ತಿ ಇರುವುದೇ ಅಸಮಾನತೆಯಲ್ಲಿ, ಅಸಹನೆಯಲ್ಲಿ, ತನ್ನ ಶಕ್ತಿಗಿಂತಲೂ ಇನ್ನೊಬ್ಬರ ದೌರ್ಬಲ್ಯದಲ್ಲಿ. ಹಾಗಾಗಿ ಅಧಿಕಾರದ ಕೇಂದ್ರಗಳು ಜಾತಿ ಧರ್ಮಗಳಿಗಿಂತ ದೂರವಿರಬೇಕು, ನಾಗರಿಕ ಹಕ್ಕು ಕರ್ತವ್ಯಗಳ ಆಧಾರದಲ್ಲಿ ಆಡಳಿತ ವ್ಯವಸ್ಥೆ ನಡೆಯಬೇಕು ಎನ್ನುವ ಆಕಾಂಕ್ಷೆಯ ಹಿಂದಿರುವುದು ಯುರೋಪಿನಲ್ಲಿ ನಡೆದ ಪುನರುತ್ಥಾನದ ಕಥನ. ಅಲ್ಲಿ ಧರ್ಮದ ಕಬಂಧ ಬಾಹುಗಳು ಅಧಿಕಾರದ ಗದ್ದುಗೆಗಳನ್ನು ಆಕ್ರಮಿಸಿ ಜನಸಾಮಾನ್ಯರನ್ನು ಇನ್ನಿಲ್ಲದಂತೆ ಸತಾಯಿಸಿದ ಪರಿಣಾಮವಾಗಿ ಕ್ರಾಂತಿಕಾರಕ ಬದಲಾವಣೆಗಳು ನಡೆದುಹೋದವು. ಧರ್ಮ ಮತ್ತು ರಾಜಕಾರಣ ಉಂಟುಮಾಡಿದ ಪರಿಣಾಮದ ಭೀಕರತೆಯ ಕಾರಣದಿಂದ ಪ್ರಜಾ ಪ್ರಭುತ್ವವೆನ್ನುವ ಧರ್ಮರಹಿತ ಅಧಿಕಾರದ ಹೊಸ ತಳಿಯೊಂದರ ಅನ್ವೇಷಣೆಯಾಯಿತು.

ಆದರೆ ಭಾರತೀಯ ಉಪಖಂಡದ ಪರಿಸ್ಥಿತಿ ಯುರೋಪಿನದ್ದಕ್ಕಿಂತ ಭಿನ್ನವಾಗಿದೆ. ಇಲ್ಲಿ ಧರ್ಮದ ಹಿಡಿತ ಅಧಿಕಾರಶಾಹಿಯ ಮೇಲೆ ಯುರೋಪಿನಲ್ಲಿ ಇದ್ದಂತೆ ಇರಲೇ ಇಲ್ಲ. ಜನ ಸಮುದಾಯದ ಮೇಲೆ, ಮುಖ್ಯವಾಹಿನಿಯ ರಾಜಕಾರಣದ ಮೇಲೆ ಧರ್ಮಭಾರ ಹೊರಿಸಿದಾಗಲೆಲ್ಲ ಸುಧಾರಣಾವಾದಿ ಮಾರ್ಗಗಳು ತೆರೆದುಕೊಂಡಿವೆ. ಕಬೀರ, ತುಕಾರಾಮ, ಶರಣ ಚಳವಳಿ, ಪೆರಿಯಾರ್, ನಾರಾಯಣ ಗುರುಗಳು ಪ್ರಜಾಪ್ರಭುತ್ವದ ಪ್ರಾಥಮಿಕ ಪರಿಚಯದ ಬೀಜಗಳನ್ನು ಬಿತ್ತುತ್ತಾ ಬಂದಿರುವ ದೃಷ್ಟಾಂತ ನಮ್ಮ ಕಣ್ಣ ಮುಂದಿದೆ. ನಮ್ಮಲ್ಲಿ ರಾಜಧರ್ಮದ ಮುಖ್ಯ ಲಕ್ಷಣ ಪ್ರಜೆಗಳ ಕಲ್ಯಾಣವೇ ಹೊರತು, ಬೇರೇನೂ ಅಲ್ಲ ಎನ್ನುವುದು ಇತಿಹಾಸ ಹೇಳಿದ ಸಂದೇಶ ಕೂಡಾ.

ಇಂದು ನಮ್ಮೆದುರು ಕಾಣುವ ಧರ್ಮ ಪರಿವರ್ತನೆಗೊಂಡಿದೆ. ನಮ್ಮೆಲ್ಲರಿಗೆ ಇರುವುದು ಧರ್ಮದ ಪೋಷಾಕಿನಲ್ಲಿರುವ ಹಣಕೇಂದ್ರಿತ ವ್ಯವಹಾರ ಚಾತುರ್ಯವನ್ನು ಅರೆದು ಕುಡಿದಿರುವ ಅಧಿಕಾರದ ಕೇಂದ್ರವೇ ಹೊರತು ಪರಂಪರೆಯ ಧರ್ಮವಲ್ಲ. ಪ್ರಜಾಪ್ರಭುತ್ವದಲ್ಲಿ ಜನಮತ ಗಳಿಕೆಗೆ ಇರುವ ಎಲ್ಲ ದಾರಿಗಳನ್ನೂ ಅಧಿಕಾರದ ಕೇಂದ್ರಗಳು ಪಕ್ಷಬೇಧವಿಲ್ಲದೇ ಎಲ್ಲರೂ ಬಹಳ ಪರಿಣಾಮಕಾರಿಯಾಗಿ ಬಳಸುತ್ತಾ ಬಂದಿರುವುದನ್ನು ಕಾಣಬಹುದು. ಧಾರ್ಮಿಕ ಅಸ್ಮಿತೆಯನ್ನು ಮುಂದು ಮಾಡಿಕೊಂಡು ಅಧಿಕಾರಕ್ಕೇರಿದ ರಾಜಕೀಯ ಪಕ್ಷಗಳಿಗೆ, ಹತ್ತಿರವಿರುವ ಧಾರ್ಮಿಕ ಮುಖಂಡರು ಮತ ಗಳಿಕೆಯ ಹೊಸ ಸಮೀಕರಣದಲ್ಲಿ ಒಂದು ಮಟ್ಟದಲ್ಲಿ ಪ್ರಮುಖರಾದದ್ದು ಹೌದಾದರೂ ಅದಕ್ಕೆ ಮುಖ್ಯ ಕಾರಣ ಅರ್ಥವೇ ಹೊರತು ‘ಧರ್ಮ’ವಲ್ಲ ಎನ್ನುವುದನ್ನು ಮರೆಯುವ ಹಾಗಿಲ್ಲ.

ಪೇಜಾವರ
ಪೇಜಾವರ ಸ್ವಾಮಿ ದಲಿತರ ಕೇರಿಯಲ್ಲಿ

ಆರ್ಥಿಕವಾಗಿ ಪ್ರಬಲವಾಗಿರುವ ಧಾರ್ಮಿಕ ಕೇಂದ್ರಗಳು ಮತ್ತು ಆರ್ಥಿಕವಾಗಿ ಪ್ರಬಲರಾಗಿರುವ ಸಮುದಾಯಗಳನ್ನು ಒಟ್ಟಾಗಿರಿಸಿ ಧಾರ್ಮಿಕ ಮುಖಂಡರು ಈಗ ದಕ್ಕಿರುವ ಅವಕಾಶಗಳನ್ನು ಇನ್ನಷ್ಟು ಗಟ್ಟಿ ಮಾಡಿಕೊಳ್ಳಲು ಬಯಸುತ್ತಿರುವ ವಿದ್ಯಮಾನವನ್ನು ನಾವು ನೋಡುತ್ತಿದ್ದೇವೆ. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥರ ನಂತರ, ಹಲವು ಸಂತರಿಗೆ, ಸಂತನ ಖಾವಿ ಮತ್ತು ಖಾದಿ ಎರಡರ ಸುಖವನ್ನೂ ನೀಡುವ ಸುಲಭದ ಮಾರ್ಗವೆನಿಸಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಹಾಗೆ ನೋಡಿದರೆ ಅಧಿಕಾರದ ಮೊಗಸಾಲೆಗೆ ಇದು ಬಹಳ ಹತ್ತಿರದ ದಾರಿ ಕೂಡಾ. ಈಗಾಗಲೇ ನಮ್ಮ ನಡುವೆ ಧಾರ್ಮಿಕ ನಾಯಕತ್ವ ಮತ್ತು ರಾಜಕೀಯ ನಾಯಕತ್ವವನ್ನು ಅನುಭವಿಸುವ ಬಹಳಷ್ಟು ಜನರ ಉದಾಹರಣೆಗಳಿವೆ. ಆದರೆ ಪ್ರಜಾಪ್ರಭುತ್ವದಲ್ಲಿ ಸಾರ್ವಜನಿಕ ಜೀವನವನ್ನು ಪ್ರವೇಶಿಸಿದ ಕೂಡಲೇ, ಯಾವುದಾದರೂ ಒಂದು ಕಡೆ ಗುರುತಿಸಿಕೊಳ್ಳಲೇಬೇಕು. ಹಾಗೆ ಗುರುತಿಸಿಕೊಂಡಾಕ್ಷಣ ಉಳಿದ ಗುಂಪುಗಳ ಟೀಕೆ, ಆಕ್ರಮಣವನ್ನು ಎದುರಿಸಬೇಕು, ಪ್ರಜಾಪ್ರಭುತ್ವದಲ್ಲಿ ತಾಂತ್ರಿಕವಾಗಿಯಾದರೂ ಪ್ರಭುಗಳಾಗಿರುವ ಪ್ರಜೆಗಳು ಎತ್ತುವ ಪ್ರಶ್ನೆಗಳಿಗೆ ಉತ್ತರ ನೀಡಬೇಕಾದ ಅನಿವಾರ್ಯತೆ ಬಂದೇ ಬರುತ್ತದೆ. ಆದರೆ ಸದಾ ತಮ್ಮನ್ನು ಹೊಗಳಿ ಹೊಗಳಿ ಹೊನ್ನ ಶೂಲಕ್ಕೆ ಏರಿಸುವ ಭಕ್ತ ಗಡಣದ ಜಯಕಾರವನ್ನೇ ಕೇಳಿ ಅಭ್ಯಾಸವಿರುವ ಧಾರ್ಮಿಕ ಮುಖಂಡರ ಕಿವಿಗೆ ಜನರ ಟೀಕೆ, ಕಿವಿಗಳಿಗೆ ಹೊಯ್ಯುವ ಕಾದ ಸೀಸದಂತೆ ಅನ್ನಿಸುವುದು ಸಹಜವೇ. ಅದಕ್ಕಾಗಿಯೇ ಮಿಕ್ಕವರಿಗಿಂತ ತಾವು ಎತ್ತರದಲ್ಲಿದ್ದೇವೆ ಎನ್ನುವುದನ್ನು ಖಾತರಿಪಡಿಸುವ ಸಂವಿಧಾನದ ನಿರೀಕ್ಷೆಯಲ್ಲಿ ಧಾರ್ಮಿಕ ಗುರುಗಳಿರುವುದು ಸಹಜವೇ. ಇದಕ್ಕೆ ಯಾವ ಧರ್ಮದ ಧಾರ್ಮಿಕ ಮುಖಂಡರೂ ಅತೀತರಾಗಿಲ್ಲ.

ಪ್ರಜಾಪ್ರಭುತ್ವದಲ್ಲಿ ಆಡಳಿತ ನಡೆಸುವವರಿಗೆ ತನ್ನನು ಆರಿಸಿದ, ತನಗೆ ಅಧಿಕಾರ ನಡೆಸಲು ಅವಕಾಶ ನೀಡಿದ ಪ್ರತಿಯೊಬ್ಬನಿಗೂ ಅಧಿಕಾರ ಬಳಸಿ ತಾನು ಮಾಡಿದ ಮತ್ತು ಮಾಡದ ಕೆಲಸದ ಕುರಿತು ವಿವರಿಸುವ ಒಂದು ಉತ್ತರದಾಯಿತ್ವ ಇದೆ. ಆದರೆ ಪ್ರಭುತ್ವದಲ್ಲಿ, ಅಥವಾ ಅಂತಹದೇ ಇತರ ವ್ಯವಸ್ಥೆಗಳಲ್ಲಿ ಅದು ಇಲ್ಲ. ಯಾಕೆಂದರೆ ಅಲ್ಲಿ ಅವರಿಗೆ ಅಧಿಕಾರ ದತ್ತವಾಗುವುದು ಜನರಿಂದ ಅಲ್ಲ. ಸಮಾಜದಲ್ಲಿ ಹುಟ್ಟಿದ ಜಾತಿಯ ಕಾರಣದಿಂದ ಅಥವಾ ಇನ್ನಿತರ ಕಾರಣಗಳಿಂದ ಅಧಿಕಾರ ಸಿಕ್ಕಿರುವ ಕಾರಣ ಅವರು ಜನರಿಗೆ ಉತ್ತರಿಸುವ ಅಗತ್ಯವಿರುವುದಿಲ್ಲ.

ಪ್ರಜಾಪ್ರಭುತ್ವದಲ್ಲಿ ಜನರು ನೆಮ್ಮದಿಯಿಂದ ಶಾಂತಿಯಿಂದ ಬದುಕಬೇಕಿದ್ದಲ್ಲಿ ಶಾಶ್ವತವಾಗಿ ಎಲ್ಲ ಧರ್ಮಗಳೂ ಸಾರ್ವಜನಿಕ ಬದುಕಿನಿಂದ ದೂರವಿದ್ದು ಖಾಸಗಿ ವಿಷಯವಾಗಿದ್ದರೆ ಧರ್ಮದ ಪಾವಿತ್ರ್ಯವೂ ಉಳಿದು ಪ್ರಜಾಪ್ರಭುತ್ವವೂ ಪರಿಣಾಮಕಾರಿಯಾಗಿ ಕೆಲಸ ಮಾಡಬಹುದು.

ಇದನ್ನೂ ಓದಿ ಬಹುಸಂಖ್ಯಾತ ಹಿಂದೂಗಳ ಬಗೆಗಿನ ಅಸಹಿಷ್ಣುತೆಯೇ ಪೇಜಾವರರ ‘ನಮ್ಮನ್ನು ಗೌರವಿಸದ ಸಂವಿಧಾನ’ ಹೇಳಿಕೆ !

ಇದನ್ನೂ ಓದಿ ಮಹಾರಾಷ್ಟ್ರ | ಗೆದ್ದ 187 ಮಂದಿ ಕ್ರಿಮಿನಲ್‌ ಆರೋಪಿಗಳು! ಮೂವರು ಕೊಲೆ, ಒಬ್ಬ ಅತ್ಯಾಚಾರ ಆಪಾದಿತ

ಉದಯಕುಮಾರ್
ಡಾ ಉದಯ್‌ ಕುಮಾರ್‌ ಇರ್ವತ್ತೂರು
+ posts

ನಿವೃತ್ತ ಪ್ರಾಂಶುಪಾಲರು, ಮಂಗಳೂರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ ಉದಯ್‌ ಕುಮಾರ್‌ ಇರ್ವತ್ತೂರು
ಡಾ ಉದಯ್‌ ಕುಮಾರ್‌ ಇರ್ವತ್ತೂರು
ನಿವೃತ್ತ ಪ್ರಾಂಶುಪಾಲರು, ಮಂಗಳೂರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X