ಮಕ್ಕಳು ಮಾನಸಿಕ ಮತ್ತು ದೈಹಿಕವಾಗಿ ವಿಕಾಸ ಹೊಂದಬೇಕಾದರೆ ಮೊಬೈಲ್ ಬಳಕೆಯಿಂದ ದೂರವಾಗಿ ಪುಸ್ತಕದ ಸಂಗ ಬೆಳಸಿಕೊಳ್ಳಬೇಕು ಎಂದು ವಿಜಯಪುರದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಗಂಗಾಧರ ಸೋನಾರ ಹೇಳಿದರು.
ನಗರದ ಸಂತ ಜೋಸೆಫ್ ಆರೋಗ್ಯ ಮತ್ತು ಸಮುದಾಯ ಕೇಂದ್ರದ ಸಭಾಭವನದಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿದ ಅವರು, ಮಕ್ಕಳು ದೇಶದ ಆಸ್ತಿಯಾಗಿದ್ದು, ಇಂದಿನ ಮಕ್ಕಳೇ ದೇಶದ ಭಾವಿ ಪ್ರಜೆಗಳಾಗಿದ್ದಾರೆ ಎಂದು ಹೇಳುತ್ತೇವೆ. ಮಕ್ಕಳು ಮಾನಸಿಕ ಮತ್ತು ದೈಹಿಕವಾಗಿ ವಿಕಾಸ ಹೊಂದಬೇಕಾದರೆ ಮೊಬೈಲ್ ಬಳಕೆಯಿಂದ ದೂರವಾಗಿ ಪುಸ್ತಕದ ಸಂಗ ಬೆಳಸಿಕೊಳ್ಳಬೇಕು. ಇಂದಿನ ಮಕ್ಕಳು ಜಂಕ್ ಫುಡ್ ಗಳಂತಹ ಆಹಾರಕ್ಕೆ ಜೋತು ಬಿದ್ದು ಆರೋಗ್ಯದ ಮೇಲೆ ದುಷ್ಪರಿಣಾಮವನ್ನುಂಟು ಮಾಡಿಕೊಳ್ಳುತ್ತಿದ್ದಾರೆ. ಪೋಷಕರು ಈ ಕುರಿತು ಎಚ್ಚರಗೊಂಡು ಮಕ್ಕಳು ಮನೆಯಲ್ಲಿ ತಯಾರಿಸಿದ ಆಹಾರ ಸೇವನೆ ಮಾಡುವಂತೆ ನೋಡಿಕೊಳ್ಳಬೇಕು. ಮೊಬಾಯಿಲ್ ಬಳಕೆಯಿಂದ ಮಕ್ಕಳ ಮೇಲೆ ಅನೇಕ ದುಷ್ಪರಿಣಾಮಗಳು ಬೀರುತ್ತಿವೆ. ಈ ಬಗ್ಗೆ ಪಾಲಕರು ಗಮನಹರಿಸಬೇಕು ಎಂದರು.
ಅನೌಪಚಾರಿಕ ಶಿಕ್ಷಣ ಸಂಸ್ಥೆಯ ಸಾಮಾಜಿಕ ಕಾರ್ಯಕರ್ತೆ ಸುನಿತಾ ಮೋರೆ ಮಾತನಾಡಿ, ನಗರದ ಶಿಕ್ಷಣ ವಂಚಿತ ಸಮುದಾಯಗಳ ಮಕ್ಕಳಿಗೆ ಶಿಕ್ಷಣ ನೀಡಿ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಅಭಿವೃದ್ಧಿಗೊಳಿಸುತ್ತಿರುವುದು ತುಂಬಾ ಶ್ಲಾಘನೀಯವಾಗಿದೆ. ಮಕ್ಕಳು ಸರ್ಕಾರದ ವಿವಿಧ ಯೋಜನೆ ಮತ್ತು ಸವಲತ್ತು ಪಡೆದುಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಶಿಸ್ತು ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಈ ವರದಿ ಓದಿದ್ದೀರಾ? ಧಾರವಾಡ | ಸಂವಿಧಾನವು ನಮ್ಮ ರಕ್ಷಾ ಕವಚವಾಗಿದೆ: ನ್ಯಾ. ಪರಶುರಾಮ ದೊಡಮನಿ
ವಕೀಲ ಶ್ರೀಧರ್ ಕುಲಕರ್ಣಿ ಮಾತನಾಡಿ, ವಿಶ್ವಸಂಸ್ಥೆ ಘೋಷಣೆಯಂತೆ ಮಕ್ಕಳ ಹಕ್ಕುಗಳನ್ನು ಅನುಷ್ಠಾನಗೊಂಡಿವೆ. ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ಹಲವು ಕಾನೂನು ಜಾರಿಯಲ್ಲಿವೆ. ಮಕ್ಕಳು ಉತ್ತಮ ಸಂಸ್ಕೃತಿಯಿಂದ ಬೆಳೆಯಬೇಕು. ದೇಶವನ್ನು ಉನ್ನತಕ್ಕೆ ತೆಗೆದುಕೊಂಡು ಹೋಗುವಂತಹ ವಿಚಾರ ಅವರಲ್ಲಿ ಬೆಳೆಸಬೇಕು ಎಂದರು.
ಈ ಸಂದರ್ಭದಲ್ಲಿ ಸಿಸ್ಟರ್ ಅಮಲಾ ರಾಣಿ, ದಾನಯ್ಯ ಹಿರೇಮಠ, ಶೀಲಾ, ಜಯಶ್ರೀ, ಸಿಸ್ಟರ್ ಬಿಂದು, ಸಿಸ್ಟರ್ ರಕ್ಷಿ ಉಪಸ್ಥಿತರಿದ್ದರು.