ತುರುವೇಕೆರೆ ತಾಲೂಕಿನ ಮಾಯಸಂದ್ರ ಹೋಬಳಿಗೆ ಸೇರಿದ ಗುಡ್ಡೇನಹಳ್ಳಿಯ ಸರ್ವೆ ನಂಬರ್ 7,8,15,16,27 ರಲ್ಲಿ ಹಲವಾರು ವರ್ಷಗಳಿಂದ ಅನುಭವದಲ್ಲಿರುವ ರೈತಾಪಿಗಳಿಗೇ ಜಮೀನನ್ನು ಮಂಜೂರು ಮಾಡಿಕೊಡಬೇಕೆಂದು ಗುಡ್ಡೇನಹಳ್ಳಿಯ ಗ್ರಾಮಸ್ಥರು ತಹಸೀಲ್ದಾರ್ ಎನ್.ಎ.ಕುಂಇ ಅಹಮದ್ ರವರಿಗೆ ಮನವಿ ಮಾಡಿಕೊಂಡಿದ್ದಾರೆ.
ಗುಡ್ಡೇನಹಳ್ಳಿಯಲ್ಲಿ ಸಾಕಷ್ಟು ಮಂದಿ ಬಡವರಿದ್ದಾರೆ. ಅವರಿಗೆ ಈಗಾಗಲೇ ಅನುಭವದಲ್ಲಿರುವ ಜಮೀನುಗಳೇ ಜೀವನಾಧಾರವಾಗಿದೆ. ಈಗ ರೈತರು ಅನುಭವದಲ್ಲಿರುವ ಜಮೀನುಗಳು ಅರಣ್ಯ ಇಲಾಖೆಗೆ ಸೇರಬೇಕೆಂದು ಹೇಳಿ ಕೆಲವರಿಗೆ ನೋಟಿಸ್ ಜಾರಿಗೊಳಿಸುತ್ತಿದ್ದಾರೆ. ಸುಮಾರು 30 ವರ್ಷಗಳಿಂದಲೂ ಅನುಭವದಲ್ಲಿರುವ ಹಲವಾರು ರೈತಾಪಿಗಳು ಆ ಜಮೀನಿನಲ್ಲಿ ತೆಂಗು, ಅಡಿಕೆ, ಮನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಈ ಜಮೀನುಗಳಿಗೆ ಸಂಬಂಧಿಸಿದಂತೆ 1998 ರಲ್ಲೇ ಸಂಬಂಧಿಸಿದ ಇಲಾಖೆಗಳಿಗೆ ಜಮೀನು ಮಂಜೂರು ಮಾಡುವಂತೆ ಮನವಿಯನ್ನೂ ಸಹ ಸಲ್ಲಿಸಲಾಗಿದೆ.
ಇದುವರೆಗೂ ಸುಮ್ಮನಿದ್ದ ಅರಣ್ಯ ಇಲಾಖೆ ಈಗ ಆ ಎಲ್ಲಾ ಜಮೀನುಗಳು ತಮ್ಮ ಇಲಾಖೆಗೆ ಸೇರಿದ್ದು ಎಂದು ಹೇಳುತ್ತಿರುವುದು ಸರಿಯಲ್ಲ. ಅನುಭವದಲ್ಲಿರುವ ಜಮೀನನ್ನು ಹೊರೆತುಪಡಿಸಿ ಇನ್ನೂ ಸಾಕಷ್ಟು ಸರ್ಕಾರಿ ಜಮೀನು ಇದೆ. ಇಲ್ಲಿ ಯಾರೂ ಉಳುಮೆ ಮಾಡಿಲ್ಲ. ಆ ಜಮೀನುಗಳತ್ತ ಅರಣ್ಯ ಇಲಾಖೆಯವರು ಗಮನ ಹರಿಸಿ ಉಳಿಸಿಕೊಳ್ಳಲಿ ಎಂದು ಗ್ರಾಮದ ಮುಖಂಡರಾದ ವಿಎಸ್‌ಎಸ್‌ಎನ್ ನ ಮಾಜಿ ಅಧ್ಯಕ್ಷರಾದ ಬಸವರಾಜು, ಗ್ರಾಮ ಪಂಚಾಯಿತಿ ಸದಸ್ಯರಾದ ಮುಕುಂದ್, ಕೆಂಚಪ್ಪ, ಕೃಷ್ಣಪ್ಪ ಸೇರಿದಂತೆ ಹಲವಾರು ಮಂದಿ ತಹಸೀಲ್ದಾರ್ ರವರಿಗೆ ಮನವಿ ಮಾಡಿಕೊಂಡಿದ್ದಾರೆ.
ಹಲವರು ವರ್ಷಗಳಿಂದ ಭೂಮಿಯ ಅನುಭವದಲ್ಲಿರುವ ರೈತರನ್ನು ಒಕ್ಕಲೆಬ್ಬಿಸಿದಲ್ಲಿ ರೈತರ ಜೀವನಕ್ಕೇ ಕೊಡಲಿ ಪೆಟ್ಟು ಹಾಕಿದಂತಾಗುತ್ತದೆ. ಆದ್ದರಿಂದ ಸದ್ಯ ಅನುಭವದಲ್ಲಿರುವ ಭುಮಿಯನ್ನು ಕೂಡಲೇ ಸಂಬಂಧಿಸಿದ ರೈತರಿಗೇ ಹಕ್ಕುಪತ್ರ ನೀಡುವ ಮೂಲಕ ಅವರಿಗಿರುವ ಆತಂಕವನ್ನು ದೂರಮಾಡಬೇಕೆಂದು ರೈತ ಮುಖಂಡರು ಮನವಿ ಮಾಡಿಕೊಂಡಿದ್ದಾರೆ.
ಈ ಸಂಧರ್ಭದಲ್ಲಿ ಗ್ರಾಮದ ಹಲವಾರು ಮುಖಂಡರು ತಹಸೀಲ್ದಾರ್ ರವರನ್ನು ಭೇಟಿಯಾಗಿದ್ದರು.
ವರದಿ- ಎಸ್. ನಾಗಭೂಷಣ್
