ರಾಯಚೂರು ಜಿಲ್ಲೆಯ ಆಹಾರ ಇಲಾಖೆಯ ಅಧಿಕಾರಿ ಪ್ರಕಾಶ ಪುಣ್ಯಶೆಟ್ಟಿ, ಬಾಬು ಹಾಗೂ ಅಮೃತಾ ಎಂಬುವವರು ಕರ್ತವ್ಯಲೋಪ ಎಸಗುತ್ತಿದ್ದು, ಕೂಡಲೇ ಈ ಮೂವರನ್ನು ಅಮಾನತು ಮಾಡಬೇಕು ಎಂದು ಪ್ರಗತಿಪರ ಕನ್ನಡಿಗರ ಸಮಿತಿಯ ಜಿಲ್ಲಾಧ್ಯಕ್ಷ ಎಸ್ ಈರೇಶ್ ಒತ್ತಾಯಿಸಿದರು.
ನಗರದ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿ, “ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಅಧಿಕಾರಿಗಳು, ಕುಡಿಯುವ ನೀರಿನ ಘಟಕ, ಬೇಕರಿ ಸೇರಿದಂತೆ ಇತರ ಅಂಗಡಿ ಮುಂಗಟ್ಟುಗಳ ಪರಿಶೀಲನೆ ನೆಪದಲ್ಲಿ ಮಾಲೀಕರಿಗೆ ಕಿರುಕುಳ ನೀಡುತ್ತಿದ್ದು, ರಾಯಚೂರು ಬಿರಿಯಾನಿ ಹೌಸ್ ವಿರುದ್ಧ ದೂರು ದಾಖಲಿಸಿದರು. ಸರಿಯಾಗಿ ವರದಿ ಪಡೆಯದೆ ಬೇಜವಾಬ್ದಾರಿ ಕಾರ್ಯ ನಿರ್ವಹಿಸುತ್ತಿದ್ದಾರೆ” ಎಂದು ಆರೋಪಿಸಿದರು.
“ನಗರದ ಅರಿಶಿಣ ಪುಡಿ ತಯಾರಿಕಾ ಘಟಕಗಳಲ್ಲಿ ಕಳಪೆ ಅರಿಶಿಣ ತಯಾರಿಸಲಾಗುತ್ತಿದೆ. ಟೀಪುಡಿ ಕಂಪನಿಯ ಪ್ರಾರಂಭದಿಂದ ಪರಿಶೀಲಸದೆ ಪರವಾನಿಗೆ ನೀಡಿ ಲಂಚದ ಹಣ ಪಡೆದು ಕರ್ತವ್ಯಲೋಪ ಎಸಗಿದ್ದಾರೆ ಹಾಗೂ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮದ್ದೂರು | ಸಂವಿಧಾನದ ಆಶಯಗಳ ಜಾರಿಗೆ ಕಟಿಬದ್ಧತೆಯಿಂದ ಶ್ರಮಿಸೋಣ: ಗ್ರಾ. ಪಂ. ಅಧ್ಯಕ್ಷೆ ಗೌರಮ್ಮ
“ಕಚೇರಿಗೆ ಸಮಯಕ್ಕೆ ಸರಿಯಾಗಿ ಬರದೇ ತಮಗೆ ಬೇಕಾದಾಗ ಬಂದು ಹಾಜರಿ ಹಾಕುತ್ತಾರೆ. ಪ್ರಶ್ನಿಸಿದರೆ ಉಡಾಫೆ ಉತ್ತರ, ಸುಳ್ಳು ಹೇಳಿ ಪಾರಾಗುತ್ತಾರೆ. ಕೂಡಲೇ ಮೇಲಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ಮಾಡಿ ಮೂವರನ್ನು ಕೂಡಲೇ ಅಮಾನತು ಮಾಡಬೇಕು” ಎಂದು ಆಗ್ರಹಿಸಿದರು.
ಈ ವೇಳೆ ಗೌರವಾಧ್ಯಕ್ಷ ವೆಂಕಟೇಶ ಸೇರಿದಂತೆ ಇತರರು ಇದ್ದರು.
