ಎಲ್ಲ ಮಸೀದಿಗಳ ಕೆಳಗೂ ಶಿವಲಿಂಗವನ್ನು ಹುಡುಕುವುದು ಸರಿಯಲ್ಲ ಎಂದಿದ್ದರು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್. ಈ ಹೇಳಿಕೆ ನೀಡಿದ್ದು ಬಹಳ ಹಿಂದೆಯೇನೂ ಅಲ್ಲ, ಕೇವಲ ಎರಡು ವರ್ಷಗಳ ಕೆಳಗೆ. ಅವರ ಈ ಮಾತು ನಂಬಲು ಕಠಿಣವೆನಿಸಿತ್ತು. ಆದರೂ ದೂರದ ಕ್ಷೀಣ ಆಶಾಕಿರಣವೊಂದನ್ನು ಹುಟ್ಟಿಸಿತ್ತು. ಆದ̧ರೆ ಸಂಭಲ್‌ನ ದುರ್ಘಟನೆಯು ಈ ಕ್ಷೀಣ ಆಶಾಕಿರಣ ಕೇವಲ ಬಿಸಿಲುಕುದುರೆಯಷ್ಟೇ ಎಂದು ಸಾಬೀತು ಮಾಡಿದೆ.
ಉತ್ತರಪ್ರದೇಶದ ಸಂಭಲ್ ನಲ್ಲಿ ನಡೆದ ನಾಲ್ಕು ‘ಹತ್ಯೆ’ಗಳು ದೇಶದ ಆತ್ಮಸಾಕ್ಷಿಯನ್ನು ಕಲಕಬೇಕಿದೆ. ಮಸೀದಿಯೊಂದರ ಕುರಿತ ವಿವಾದ ಭುಗಿಲೆದ್ದು ಜರುಗಿದ ಹಿಂಸಾಚಾರಕ್ಕೆ ಈ ಯುವಕರು ಬಲಿಯಾದರು. ಈ ವರ್ಷದ ಆರಂಭದಲ್ಲಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರದ ಪ್ರಾಣಪ್ರತಿಷ್ಠೆಯನ್ನು ಅದ್ದೂರಿಯಾಗಿ ನಡೆಸಲಾಯಿತು. ಈ ಪ್ರಾಣಪ್ರತಿಷ್ಠೆಯಲ್ಲಿ ಸಶಕ್ತ ಸಂಕೇತವೊಂದು ಅಡಗಿದೆಯೆಂಬ ಎಂಬ ಭಾವನೆ ಮೂಡಿತ್ತು. ವರ್ಷಾಂತ್ಯದಲ್ಲಿ ನಡೆದಿರುವ ಸಂಭಲ್ ಹಿಂಸಾಚಾರ ಈ ಭಾವನೆಯನ್ನು ಅಲ್ಲಗಳೆದಿದೆ. ಅಂಧಕಾರವನ್ನು ಮೂಡಿಸಿದೆ.
ದೇಶವನ್ನು ದೀರ್ಘಕಾಲ ತಳಮಳದ ಆಳಗಳಿಗೆ ತಳ್ಳಿದ್ದ ಮಂದಿರ-ಮಸೀದಿ ಘರ್ಷಣೆಯನ್ನು ಸುಪ್ರೀಮ್ ಕೋರ್ಟು ಇತ್ಯರ್ಥಗೊಳಿಸಿ ಭವ್ಯ ರಾಮಮಂದಿರದ ಪ್ರಾಣಪ್ರತಿಷ್ಠೆಯೂ ನೆರವೇರಿತು. ರಾಮಜನ್ಮಭೂಮಿ ವಿವಾದ ಬಗೆಹರಿದದ್ದು ಉಳಿದ ವಿವಾದಗಳು ಭುಗಿಲೇಳದಂತೆ ಅವುಗಳಿಗೆ ಸದಾಕಾಲದ ವಿರಾಮ ನೀಡಲಿದೆ ಎಂದು ಬಗೆಯಲಾಗಿತ್ತು.
2019ರಲ್ಲಿ ಹೊರಬಿದ್ದ ಸುಪ್ರೀಮ್ ಕೋರ್ಟ್ ತೀರ್ಪು ರಾಮಮಂದಿರ ನಿರ್ಮಾಣದ ಪರವಾಗಿತ್ತು. ಆದರೆ ಬಾಬರಿ ಮಸೀದಿ ನೆಲಸಮ ಕೃತ್ಯವನ್ನು ‘ಘೋರ ಮತ್ತು ವಿಶ್ವಾಸಘಾತಕತನದ ಕಾನೂನು ಉಲ್ಲಂಘನೆ’ ಎಂದು ಖಂಡಿಸಿತ್ತು. ಪೂಜಾಸ್ಥಳಗಳ ಕಾಯಿದೆಯ ಖಾತರಿಯನ್ನು ಸಂವಿಧಾನದ ಮೂಲಸ್ವರೂಪದ ಭಾಗ ಎಂದು ಸಾರಿತ್ತು.
1991ರ ಪೂಜಾಸ್ಥಳಗಳ ಕಾಯಿದೆ (ಪಿಒಡಬ್ಲ್ಯೂ-ದಿ ಪ್ಲೇಸಸ್ ಆಫ್ ವರ್ಶಿಪ್ ಆಕ್ಟ್-1991) ಈ ದೇಶದಲ್ಲಿ ಇನ್ನೂ ರದ್ದೇನೂ ಆಗಿಲ್ಲ, ಈಗಲೂ ಜೀವಂತವಾಗಿದೆ. ಈ ಕಾಯಿದೆಯ ಪ್ರಕಾರ ದೇಶದ ಎಲ್ಲ ಪೂಜಾಸ್ಥಳಗಳನ್ನೂ 1947ರ ಆಗಸ್ಟ್ 15ರಂದು ಇದ್ದ ಸ್ಥಿತಿಯಲ್ಲಿಯೇ ಇರಿಸಬೇಕು. ಅವುಗಳ ಮತಾಂತರ ಸಲ್ಲದು. ಅಯೋಧ್ಯೆಯೊಂದಕ್ಕೆ ಮಾತ್ರ ಈ ಕಾಯಿದೆಯಿಂದ ರಿಯಾಯಿತಿ ನೀಡಲಾಯಿತು.
ಈ ಕಾಯಿದೆಯ ಸಂವಿಧಾನಬದ್ಧತೆಯನ್ನು ಸುಪ್ರೀಮ್ ಕೋರ್ಟಿನಲ್ಲಿ ಪ್ರಶ್ನಿಸಲಾಗಿದೆ. ಕೇಂದ್ರ ಸರ್ಕಾರ ಮತ್ತು ನ್ಯಾಯಾಲಯ ಈ ಅಂಶವನ್ನು ಆದ್ಯತೆಯ ಮೇರೆಗೆ ಇತ್ಯರ್ಥಗೊಳಿಸಬೇಕಿತ್ತು. ವಿಳಂಬವಾಗುತ್ತಿದೆ. ಆದರೆ ವಾರಾಣಸಿ ಮತ್ತು ಮಥುರಾ ವಿವಾದಗಳಲ್ಲಿ ಮಾಡಿರುವಂತೆ ಅಧೀನ ನ್ಯಾಯಾಲಯಗಳು ಇತರೆ ಮಂದಿರ-ಮಸೀದಿ ವಿವಾದಗಳ ಮಹಾ ಪ್ರವಾಹದ್ವಾರಗಳನ್ನೇ ತೆರೆಯುತ್ತಲಿವೆ. ಸಂಭಲ್ ನ ಮಸೀದಿಯನ್ನು ದೇವಾಲಯದ ಅವಶೇಷಗಳ ಮೇಲೆ ಕಟ್ಟಲಾಗಿದೆ ಎಂದು ಕೆಳಹಂತದ ನ್ಯಾಯಾಲಯವೊಂದರಲ್ಲಿ ತಕರಾರು ಅರ್ಜಿ ಸಲ್ಲಿಸಲಾಯಿತು. ನ್ಯಾಯಾಲಯ ಸರ್ವೇ ಆದೇಶ ನೀಡಿತು. ಸರ್ವೇ ಏಜೆನ್ಸಿಯ ತರಾತುರಿಗೆ ಜಿಲ್ಲಾಡಳಿತವೂ ಕೈ ಜೋಡಿಸಿತು. ಪರಿಸ್ಥಿತಿ ಭುಗಿಲೆದ್ದು ಹಿಂಸಾಚಾರಕ್ಕೆ ಹತ್ಯೆಗಳಿಗೆ ದಾರಿ ಮಾಡಿದೆ. ಹೈಕೋರ್ಟು, ಸುಪ್ರೀಮ್ ಕೋರ್ಟುಗಳು ಗಮನ ಹರಿಸಿಲ್ಲ. ಪೂಜಾಸ್ಥಳಗಳ ಕಾಯಿದೆಯನ್ನು ಕಾಗದದ ಹುಲಿಯಾಗಿ ಮಾಡಲಾಗಿದೆ. ಗ್ಯಾನವಾಪಿ ಮಸೀದಿಯ ಸರ್ವೆಗೆ ಆದೇಶ ನೀಡಿದ ಸುಪ್ರೀಮ್ ಕೋರ್ಟ್ ಪೀಠದಲ್ಲಿದ್ದ ಡಿ.ವೈ.ಚಂದ್ರಚೂಡ್ ಅವರೇ ಈ ಕಾಯಿದೆಯ ಪತನದ ಹಾದಿಯನ್ನು ತೆರೆದವರು.
ಎಲ್ಲ ಮಸೀದಿಗಳ ಕೆಳಗೂ ಶಿವಲಿಂಗವನ್ನು ಹುಡುಕುವುದು ಸರಿಯಲ್ಲ ಎಂದಿದ್ದರು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್. ಈ ಹೇಳಿಕೆ ನೀಡಿದ್ದು ಬಹಳ ಹಿಂದೆಯೇನೂ ಅಲ್ಲ, ಕೇವಲ ಎರಡು ವರ್ಷಗಳ ಕೆಳಗೆ. ಅವರ ಈ ಮಾತು ನಂಬಲು ಕಠಿಣವೆನಿಸಿತ್ತು. ಆದರೂ ದೂರದ ಕ್ಷೀಣ ಆಶಾಕಿರಣವೊಂದನ್ನು ಹುಟ್ಟಿಸಿತ್ತು. ಆದರೆ ಸಂಭಲ್ ನ ದುರ್ಘಟನೆಯು ಈ ಕ್ಷೀಣ ಆಶಾಕಿರಣ ಕೇವಲ ಬಿಸಿಲುಕುದುರೆಯಷ್ಟೇ ಎಂದು ಸಾಬೀತು ಮಾಡಿದೆ.
1991ರ ಹೊತ್ತಿಗೆ ವಿಚಾರಣೆಗೆ ಬಾಕಿ ಇದ್ದ ಯಾವುದೇ ಪೂಜಾಸ್ಥಳದ ಮತಾಂತರ ಅಥವಾ ಅದರ ಧಾರ್ಮಿಕ ಸ್ವರೂಪ ಬದಲಾಯಿಸುವ ಸಂಬಂಧದ ಕೇಸುಗಳು ಅಸಿಂಧು-ಅನೂರ್ಜಿತವಾಗುತ್ತವೆ. 1991ರ ಪಿಒಡಬ್ಲ್ಯೂ ಕಾಯಿದೆಯ ನಂತರ ಮತಾಂತರ ಕೋರುವ ಯಾವುದೇ ಕೇಸುಗಳನ್ನು ಹೂಡಲು ಅವಕಾಶ ಇಲ್ಲ. 1947ರ ಆಗಸ್ಟ್ 15ರ ನಂತರ ಯಾವುದೇ ಪೂಜಾಸ್ಥಳವನ್ನು ಮತಾಂತರಿಸಲಾಗಿದ್ದು, ಯಾರಾದರೊಬ್ಬರು ಈ ಸಂಬಂಧ ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡಿದ್ದರೆಂದುಕೊಳ್ಳೋಣ. ಆಗ ನ್ಯಾಯಾಲಯವು ಸದರಿ ಪೂಜಾಸ್ಥಳದ ಸ್ವರೂಪ 1947ರ ಆಗಸ್ಟ್ 15ರಂದು ಏನಿತ್ತು ಎಂಬುದನ್ನು ಆಧರಿಸಿ ತೀರ್ಪು ಹೇಳಬೇಕಾಗುತ್ತದೆ. ಅರ್ಥಾತ್ ಸಂಬಂಧಪಟ್ಟ ಪೂಜಾಸ್ಥಳದ ಸ್ವರೂಪವನ್ನು 1947ರ ಆಗಸ್ಟ್ 15ರಂದು ಇದ್ದ ಸ್ಥಿತಿಗೆ ಮರುಸ್ಥಾಪಿಸಬೇಕಾಗುತ್ತದೆ.
ಸಾಮಾಜಿಕ ಕಳಕಳಿಯುಳ್ಳ ಅಸಾಧಾರಣ ಪ್ರತಿಭಾವಂತ ಯುವ ಪತ್ರಕರ್ತ ಸೌರವ್ ದಾಸ್ ಅವರು ಈ ಕಾಯಿದೆಯನ್ನು ಮತ್ತು ಅದರ ದುರ್ಬಳಕೆಯನ್ನು ಸವಿವರವಾಗಿ, ಅತ್ಯಂತ ಸೂಕ್ಷ್ಮವಾಗಿ ವಿಶ್ಲೇಷಿಸಿದ್ದಾರೆ.
1947ರ ಆಗಸ್ಟ್ 15ರಂದು ಇದ್ದ ಪರಿಸ್ಥಿತಿಯ ಪ್ರಕಾರ ಹಿಂದುಗಳು ಮತ್ತು ಮುಸ್ಲಿಮರು ಇಬ್ಬರೂ ಪೂಜಿಸಿ ಪ್ರಾರ್ಥಿಸುವ ಪೂಜಾಸ್ಥಳದ ಧಾರ್ಮಿಕ ಸ್ವರೂಪ ಏನಾಗಿರಬೇಕು ಎಂಬ ಪ್ರಶ್ನೆ ಎತ್ತಿ ಉತ್ತರಗಳಿಗಾಗಿ ತಡಕಾಡಿದ್ದಾರೆ.
ಉದಾಹರಣೆಗೆ ಗ್ಯಾನವಾಪಿ ಮಸೀದಿಯಲ್ಲಿ ಪೂಜೆಗೆ ಅವಕಾಶ ನೀಡುವಂತೆ ವ್ಯಕ್ತಿಯೊಬ್ಬನು ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡಿದ ಎಂದುಕೊಳ್ಳೋಣ. ಈ ವ್ಯಾಜ್ಯವು ಪೂಜಾಸ್ಥಳದ ಧಾರ್ಮಿಕ ಸ್ವರೂಪವನ್ನು ಮುಸ್ಲಿಮ್ ಧರ್ಮದಿಂದ ಹಿಂದು ಧರ್ಮಕ್ಕೆ ಬದಲಾಯಿಸುವಂತೆ ಕೋರಿ ಹೂಡಿದ್ದಾಗಿರುತ್ತದೆ. ಆಗ ನ್ಯಾಯಾಲಯ ಈ ವ್ಯಾಜ್ಯವನ್ನು ವಜಾಗೊಳಿಸಿ 1947ರ ಆಗಸ್ಟ್ 15ರಂದು ಇದ್ದ ಪರಿಸ್ಥಿತಿಯನ್ನು ಎತ್ತಿ ಹಿಡಿಯಬೇಕಾಗುತ್ತದೆ. ಆದರೆ ಪೂಜಾಸ್ಥಳದ ಧಾರ್ಮಿಕ ಸ್ವರೂಪವೇ ನಿಚ್ಚಳವಿಲ್ಲ ಎಂಬ ಆಕ್ಷೇಪ ತಲೆಯೆತ್ತಬಹುದು.
ಗ್ಯಾನವಾಪಿ ಕೇಸಿನಲ್ಲಿ ಮಸೀದಿಯ ನೆಲಮಹಡಿಯಲ್ಲಿ ಹಿಂದೂಗಳು 1993ರ ತನಕ ಪೂಜೆ ಮಾಡುತ್ತಿದ್ದರು ಎಂಬುದು ಹಿಂದೂ ಪಕ್ಷದ ದಾವೆ. ಆದರೆ ಈ ಸ್ಥಳವನ್ನು ಲಾಗಾಯತಿನಿಂದ ತಾವು ಮಾತ್ರವೇ ಬಳಸುತ್ತಿದ್ದುದಾಗಿ ಮುಸಲ್ಮಾನ ಪಕ್ಷ ಹೇಳುತ್ತದೆ. ಆಗ ನ್ಯಾಯಾಲಯ 1947ರ ಆಗಸ್ಟ್ 15ರಂದು ಈ ಸ್ಥಳದ ಸ್ವರೂಪ ಏನಿತ್ತೆಂದು ತೀರ್ಮಾನಿಸಬೇಕಾಗುತ್ತದೆ. ಈ ಮಸೀದಿ 1947ರ ಆಗಸ್ಟ್ 15ರಂದೂ ಮಸೀದಿಯೇ ಆಗಿತ್ತೆಂದು ಕಂಡು ಬಂದಲ್ಲಿ ಪಿಒಡಬ್ಲ್ಯೂ ಕಾಯಿದೆ ಅನ್ವಯಿಸುತ್ತದೆ. ಪೂಜೆಗೆ ಅವಕಾಶ ಬೇಕೆಂಬ ಕೇಸನ್ನು ವಜಾ ಮಾಡಬೇಕಾಗುತ್ತದೆ. ಇಲ್ಲದೆ ಹೋದಲ್ಲಿ ವ್ಯಾಜ್ಯ ಯಶಸ್ಸು ಕಾಣುತ್ತದೆ. ಹಿಂದೂ ಕಟ್ಟರ್ ವಾದ ಭಾರತದಲ್ಲಿ ಇದೇ ತರಲೆಯಲ್ಲಿ ತೊಡಗಿದೆ.
ಪೂಜಾಸ್ಥಳವೊಂದನ್ನು ಮತಾಂತರ ಮಾಡಿಕೊಡಿ ಎಂದು ಯಾರೂ ನ್ಯಾಯಾಲಯವನ್ನು ಕೇಳುತ್ತಿಲ್ಲ. ಬದಲಾಗಿ 1947ರ ಆಗಸ್ಟ್ 15ರಂದು ಅದರ ಸ್ವರೂಪ ಏನಿತ್ತು ಎಂಬುದನ್ನಷ್ಟೇ ತೀರ್ಮಾನಿಸಿ ಎಂದಷ್ಟೇ ಕೇಳುತ್ತಿದ್ದೇವೆ ಎಂಬುದು ಹಿಂದೂ ಕಟ್ಟರ್ ಪಂಥೀಯರ ವಾದ. ಗ್ಯಾನವಾಪಿ ಮಸೀದಿಯ ವಿವಾದದ ವಿಚಾರಣೆ ನಡೆಸಿದ್ದಾಗ ಈ ಹಿಂದೆ ಮುಖ್ಯ ನ್ಯಾಯಮೂರ್ತಿಯಾಗಿದ್ದ ಡಿ.ವೈ.ಚಂದ್ರಚೂಡ್ ಅನುಸರಿಸಿದ್ದು ಇದೇ ತರ್ಕವನ್ನು. ಯಾವುದೇ ಸ್ಥಳದ ಧಾರ್ಮಿಕ ಸ್ವರೂಪ ಏನಿತ್ತು ಎಂದು ನ್ಯಾಯಾಲಯ ತೀರ್ಮಾನಿಸುವುದನ್ನು 1991ರ ಪೂಜಾಸ್ಥಳ ಕಾಯಿದೆಯು ಯಾವುದೇ ರೀತಿಯಲ್ಲಿ ತಡೆಯುವುದಿಲ್ಲ.
1947ರಲ್ಲಿ ನಿರ್ದಿಷ್ಟ ಪೂಜಾಸ್ಥಳವು ಯಾವ ಧರ್ಮಕ್ಕೆ ಸಮರ್ಪಿತವಾಗಿತ್ತು ಎಂಬುದೇ 1991ರ ಪೂಜಾಸ್ಥಳ ಕಾಯಿದೆಯ ಗ್ರಹಿಕೆ. ಅದೇ ಆ ಸ್ಥಳದ ‘ಧಾರ್ಮಿಕ ಸ್ವರೂಪ’ ಎಂದು ಸುಪ್ರೀಮ್ ಕೋರ್ಟು ಸಾರಿಬಿಡಬಹುದಿತ್ತು. ಗುಮ್ಮಟ ಕಂಡಿತ್ತೇ ಅಥವಾ ಮಂದಿರದ ಕಂಬ ಕಾಣಿಸಿತ್ತೇ, ನಮಾಜು ನಡೆದಿತ್ತೇ ಅಥವಾ ಒಳಗೆ ಮೂರ್ತಿ ಮತ್ತು ಹೊರಗೆ ಗಂಟೆಗಳಿದ್ದವೇ ಎಂಬುದಷ್ಟೇ ಮುಖ್ಯ. 1947ರಲ್ಲಿಯೂ ಇದೇ ಧಾರ್ಮಿಕ ಸ್ವರೂಪ ಇತ್ತೆಂದು ಸಾರಿ ಇಂತಹ ವಿವಾದಗಳನ್ನು ಅಂತ್ಯಗೊಳಿಸಬೇಕು.
ಆದರೆ ಹಿಂದು-ಮುಸ್ಲಿಮರಿಬ್ಬರೂ ಹಂಚಿಕೊಂಡಿರುವ ಪೂಜಾಸ್ಥಳಗಳ ಸಂಬಂಧದಲ್ಲಿ ಹೀಗೆ ಮಾಡುವುದು ಸಾಧ್ಯವಿಲ್ಲ. 1947ರ ಆಗಸ್ಟ್ 15ರಂದು ಹಿಂದೂಗಳು-ಮುಸಲ್ಮಾನರು ಇಬ್ಬರೂ ಜಂಟಿಯಾಗಿ ಪೂಜಿಸಿ ಪ್ರಾರ್ಥಿಸಿದ್ದ ಮಸೀದಿಗಳು ಕೆಲವೇ ಕೆಲವಾಗಿದ್ದರೂ ಅಂಕಿ-ಅಂಶ ಲಭ್ಯವಿಲ್ಲ. ಇಂತಹ ಕೇಸುಗಳಲ್ಲಿ 1947ರ ಆಗಸ್ಟ್ 15ರಂದು ಇದ್ದ ಪರಿಸ್ಥಿತಿ ಏನೆಂದು ನ್ಯಾಯಾಲಯ ತೀರ್ಮಾನಿಸಬೇಕು. ಈ ಪ್ರಕ್ರಿಯೆಯಲ್ಲಿ ತಾಂತ್ರಿಕವಾಗಿ ನ್ಯಾಯಾಲಯ ಪೂಜಾಸ್ಥಳವನ್ನು ಮತಾಂತರಗೊಳಿಸುತ್ತಿಲ್ಲ. ಅಂತಹ ಮತಾಂತರವನ್ನು ಪೂಜಾಸ್ಥಳಗಳ ಕಾಯಿದೆಯು ನಿಷೇಧಿಸಿದೆ. ಆದರೆ ಇಲ್ಲಿ ರಾಜಕೀಯ ಉದ್ದೇಶಗಳಿಗಾಗಿ ಚೇಷ್ಟೆ ಮಾಡಲು ಮಿತಿಯೇ ಇಲ್ಲದಷ್ಟು ವ್ಯಾಪ್ತಿ ಇದೆ.
ಆದರೆ, ಎಲ್ಲೆಲ್ಲಿ ಜಂಟಿ ಆರಾಧನೆಯ ಸನ್ನಿವೇಶಗಳು ಇರಲಿಲ್ಲವೋ ಅಲ್ಲೆಲ್ಲ ರಾಜಕೀಯ ಚೇಷ್ಟೆ-ಕುಚೇಷ್ಟೆಗೆ ಅಮಿತ ಅವಕಾಶವಿದೆ. ಇಂತಹ ಸ್ಥಳಗಳ ಧಾರ್ಮಿಕ ಸ್ವರೂಪವನ್ನು ತೀರ್ಮಾನಿಸುವಂತೆ ನ್ಯಾಯಾಲಯಗಳಲ್ಲಿ ಕೇಸುಗಳನ್ನು ಹೂಡಿದಾಗ ರಾಜಕೀಯ ಚೇಷ್ಟೆ-ಕುಚೇಷ್ಟೆಗೆ ಇನ್ನಿಲ್ಲದಷ್ಟು ಅವಕಾಶವಿದೆ.
ವಿಶ್ವಹಿಂದು ಪರಿಷತ್ತು ತಾನು ಮತಾಂತರಿಸಲು ಬಯಸುವ 3000 ಮಸೀದಿಗಳ ಪಟ್ಟಿ ಮಾಡಿದೆ. ಸೈದ್ಧಾಂತಿಕವಾಗಿ ಭವ್ಯ ಹಿಂದುತ್ವ ಯೋಜನೆಯ ಪರವಾಗಿ ಬಾಗುವ ಪಕ್ಷಪಾತೀಯ ನ್ಯಾಯಾಧೀಶರಿಗೆ ಈಗ ಬರ ಇಲ್ಲ. ಪೂಜಾಸ್ಥಳವೊಂದರ ಧಾರ್ಮಿಕ ಸ್ವರೂಪದ ತೀರ್ಮಾನಕ್ಕೆ ಆದೇಶ ನೀಡುವ ನ್ಯಾಯಾಲಯದ ಅಧಿಕಾರವನ್ನು ಉದಾರವಾಗಿ ಬಳಸಿದ್ದೇ ಆದರೆ ದೇಶದಲ್ಲಿ ಹಾಹಾಕಾರ ಭುಗಿಲೆದ್ದೀತು. ಮಸೀದಿಯೊಂದು ಹೂತು ಹೋದ ಮಂದಿರಗಳ ಅವಶೇಷಗಳ ಮೇಲೆ ನಿಂತಿದೆಯೆಂದು ಯಾರು ಬೇಕಾದರೂ ಯಾವೊತ್ತು ಬೇಕಾದರೂ ದಾವೆ ಹೂಡಬಹುದು. ಈ ಸ್ಥಳದಲ್ಲಿ 500, ಸಾವಿರ, ಐದು ಸಾವಿರ ವರ್ಷಗಳ ಹಿಂದೆ ಹಿಂದೂಗಳು ಪ್ರಾರ್ಥಿಸುತ್ತಿದ್ದರು ಎಂದು ವಾದಿಸಬಹುದು. ಧಾರ್ಮಿಕ ಸ್ವರೂಪ ಕುರಿತು ನ್ಯಾಯಾಲಯ ತೀರ್ಮಾನ ಹೇಳಬೇಕೆಂದು ಕೋರಬಹುದು. ಮುಸಲ್ಮಾನರು ಕೇವಲ ತಾವು ಮಾತ್ರ ಈ ಸ್ಥಳವನ್ನು ಬಳಸುತ್ತಿದ್ದುದಾಗಿ ಹೇಳಬಹುದು. ಆದರೆ ಎರಡೂ ಕಡೆಯಿಂದ ದಾವೆಗಳು ಇರುವ ಪ್ರಯುಕ್ತ 1947ರಲ್ಲಿ ಇದ್ದ ಧಾರ್ಮಿಕ ಸ್ವರೂಪ ಏನೆಂದು ತೀರ್ಮಾನಿಸಿಯೇ ಬಿಡೋಣ ಎಂದು ನ್ಯಾಯಾಲಯ ಸಾರಿಬಿಡಬಹುದು. ಹೀಗೆ ಜರುಗಿದಲ್ಲಿ ಈ ಭುಗಿಲು ಎಲ್ಲಿಗೆ ಮುಟ್ಟಬಹುದು? ಎಲ್ಲಿ ನಿಲ್ಲಬಹುದು? ಮೂರು ಸಾವಿರ ಮಸೀದಿಗಳು ಮಾತ್ರವೇ ಅಲ್ಲ, ಎಲ್ಲ ಮಸೀದಿಗಳೂ ಈ ಬೆದರಿಕೆ ಎದುರಿಸಲಿವೆ.
ಪಿಒಡಬ್ಲ್ಯೂ ಕಾಯಿದೆ ತಂದ ಮೂಲ ಉದ್ದೇಶವೇ ಯಥಾಸ್ಥಿತಿಯನ್ನು ಕಾಯ್ದುಕೊಂಡು ಇಂತಹ ದಾವೆಗಳಿಗೆ ಪೂರ್ಣವಿರಾಣ ಇರಿಸುವುದಾಗಿತ್ತು. ಈ ಕಾಯಿದೆಯು ತ್ವೇಷ, ಬೇಗುದಿ, ಉದ್ವಿಗ್ನತೆ, ತಳಮಳವನ್ನು ಹತ್ತಿಕ್ಕುತ್ತದೆಯೇ ವಿನಾ ನಿವಾರಿಸುವುದಿಲ್ಲ ಎಂದು ವಾದಿಸಲೂಬಹುದು. ಆದರೆ ಇದನ್ನು ಬಿಟ್ಟರೆ ಬೇರೆ ಉಪಾಯ ಅಥವಾ ಪರಿಹಾರವಾದರೂ ಏನಿದೆ?
ಪೂಜಾಸ್ಥಳಗಳ ಧಾರ್ಮಿಕ ಸ್ವರೂಪವನ್ನು ತೀರ್ಮಾನಿಸಲು ಸರ್ವೇಗಳನ್ನು ನಡೆಸಬೇಕು, ಮಸೀದಿಗಳ ಅಡಿಯನ್ನು ಅಗೆದು ಉತ್ಖನನ ಮಾಡಬೇಕು ಎಂದು ನ್ಯಾಯಾಲಯಗಳು ಆದೇಶಗಳನ್ನು ಹೊರಡಿಸಲು ಶುರು ಮಾಡಿದವು ಎಂದುಕೊಳ್ಳಿ. ಆಗ ಪರಿಸ್ಥಿತಿ ಏನಾದೀತು?
ನಾಳೆ ಸರ್ವೆಗಳು ಮತ್ತು ಉತ್ಖನನಗಳ ನಂತರ ಮಸೀದಿಯ ಕೆಳಗೆ 5000 ವರ್ಷಗಳಷ್ಟು ಹಳೆಯ ಮಂದಿರದಂತಹ ನಿರ್ಮಿತಿಯೊಂದು ಪತ್ತೆಯಾಯಿತು ಅಥವಾ ಮಂದಿರದ ಕೆಳಗೆ ಮಸೀದಿಯಂತಹ ನಿರ್ಮಿತಿಯೊಂದು ಕಂಡುಬಂದಿತು ಎಂದೇ ಇಟ್ಟುಕೊಳ್ಳೋಣ. ಆಗ ಜನ ಧಾರ್ಮಿಕ ಸ್ವರೂಪ ‘ತೀರ್ಮಾನ’ಕ್ಕಷ್ಟೇ ತೃಪ್ತರಾಗಿ ಸುಮ್ಮನಿರುವರೇ? ಇಂತಹ ಸ್ಥಳಗಳನ್ನು ಮತಾಂತರಿಸಬೇಕು ಎಂದು ಆಗ್ರಹಿಸುವುದಿಲ್ಲ ಎಂಬ ಖಾತರಿಯಾದರೂ ಏನು?
ತಳದಲ್ಲಿ ಕಂಡು ಬರುವ ಕೆಲ ನಿರ್ಮಿತಿಗಳು ಮಂದಿರ ಅಥವಾ ಮಸೀದಿಯ ‘ಧಾರ್ಮಿಕ ಸ್ವರೂಪ’ವನ್ನು ಬದಲಿಸಬಲ್ಲವೇ? ಕೋಮುವಾದಿ ಭಾವನೆಗಳಿಂದ ಕೆರಳಿ ಕ್ರೋಧತಪ್ತರಾದ ಜನಸಮೂಹಗಳನ್ನು ಈ ಕುರಿತು ಮನವರಿಕೆ ಮಾಡಿಸುವವರಾದರೂ ಯಾರು?
ಮತ್ತು ಬಹುಮುಖ್ಯವಾಗಿ ಇಂದಿನ ದಿನಮಾನದ ಮಂದಿರ-ಮಸೀದಿಯ ಧಾರ್ಮಿಕ ಸ್ವರೂಪವನ್ನು ತೀರ್ಮಾನವನ್ನು ನ್ಯಾಯಾಲಯ ನಿರ್ದಿಷ್ಟವಾಗಿ ಹೇಗೆ ಮಾಡುತ್ತದೆ? ಪವಿತ್ರಗ್ರಂಥಗಳು ಅಥವಾ ಪವಿತ್ರ ಬರೆಹಗಳನ್ನು ಆಧರಿಸಲಿದೆಯೇ? ಪ್ರವಾಸಿಗರ ಕಥನವನ್ನು ಅವಲಂಬಿಸಿಯೇ? ಬಾಬರಿ ಮಸೀದಿ-ಅಯೋಧ್ಯೆ ಕೇಸಿನಲ್ಲಿ ಸುಪ್ರೀಮ್ ಕೋರ್ಟು ಪ್ರವಾಸಿಗರ ಕಥನವನ್ನು ಆಧರಿಸಿದ ನಡೆ ವಿಶ್ವಾಸಾರ್ಹ ಅಲ್ಲ ಎಂದು ಪ್ರಸಿದ್ಧ ಇತಿಹಾಸಕಾರರ ಅಭಿಪ್ರಾಯ. ಕೋಮು ಭಾವನೆಗಳೇ ಮುನ್ನಡೆಸುವ ಕೇಸಿನಲ್ಲಿ ‘ಪ್ರಸಿದ್ಧ ಇತಿಹಾಸಕಾರ’ ಎಂದರೆ ಯಾರು? ನ್ಯಾಯಾಲಯಗಳು ಇಂಥದ್ದಕ್ಕೆಲ್ಲ ಕೈ ಹಾಕಬೇಕೇ?
ವಿಡಿಯೋಗ್ರಾಫಿಕ್ ಸರ್ವೆಯ ನಂತರ ಮಸೀದಿಯೊಂದರಲ್ಲಿ ಹಿಂದುಗಳ ಪಕ್ಷದ ಪಾಲಿಗೆ ಶಿವಲಿಂಗವೆಂದು ತೋರುವ, ಮುಸಲ್ಮಾನರ ಪ್ರಕಾರ ಕಾರಂಜಿ ಆಗಿರುವ (ಗ್ಯಾನವಾಪಿ ಕೇಸಿನಲ್ಲಿ) ನಿರ್ಮಿತಿ ಕಂಡು ಬಂದಿತು ಎಂದಿಟ್ಟುಕೊಳ್ಳೋಣ. ಆಗ ಪರಿಸ್ಥಿತಿಯೇನು? ನ್ಯಾಯಾಲಯ ವಾಸ್ತವಾಂಶ ಅಥವಾ ವಸ್ತುಸ್ಥಿತಿಯನ್ನು ಆಧರಿಸಿ ತೀರ್ಮಾನಿಸುವುದೇ ಅಥವಾ ಧಾರ್ಮಿಕ ಭಾವನೆಗಳನ್ನು ಆಧಾರವಾಗಿ ಇಟ್ಟುಕೊಂಡು ತೀರ್ಮಾನಿಸುವುದೇ? ಅದು ವಾಸ್ತವಾಂಶವನ್ನೇ ಆಧರಿಸಬೇಕು. ಆದರೆ ಅಯೋಧ್ಯೆಯ ತೀರ್ಪಿನಲ್ಲಿ ನ್ಯಾಯಾಲಯ ವಸ್ತುಸ್ಥಿತಿಯನ್ನು ಆಧರಿಸಲಿಲ್ಲ ಎಂಬುದು ನಿಚ್ಚಳ. ನಿಜಸ್ಥಿತಿ ಏನೆಂದರೆ ಭಾರತದ ಇಂದಿನ ನ್ಯಾಯಾಲಯಗಳು ಈ ಕೆಲಸವನ್ನು ಮಾಡಲು ಯೋಗ್ಯವಾಗಿಲ್ಲ. ಭಾರತ ಮತ್ತು ಅದರ ಜನತಾಂತ್ರಿಕ, ಜಾತ್ಯತೀತ ನೇಯ್ಗೆಗೆ ಇದು ಮಾಡುವ ಹಾನಿ ಕಲ್ಪನೆಗೂ ನಿಲುಕದು.
ನಿಚ್ಚಳವಾಗಿ ಇದೇ ಕಾರಣಕ್ಕಾಗಿ ಈ ಸಂಗತಿಯನ್ನು ಎಲ್ಲ ಕಾಲಕ್ಕೂ ‘ರಜೆ’ ಅಥವಾ ‘ವಿಶ್ರಾಂತಿ’ಯಲ್ಲಿ ಇರಿಸಲು ಬಯಸಿತ್ತು ಸಂಸತ್ತು. ಆದರೆ ‘ಧಾರ್ಮಿಕ ಸ್ವರೂಪ’ ಎಂದರೆ ಏನೆಂದು ವ್ಯಾಖ್ಯೆ ನೀಡುವಲ್ಲಿ ವಿಫಲವಾಯಿತು. ಕಡೆಗೆ ಕಳಪೆ ಕೆಲಸ ಮಾಡಿತು. ಪ್ರಭುತ್ವದೊಂದಿಗೆ ಶಾಮೀಲಾಗಿರುವ ಕೆಲ ನ್ಯಾಯಾಧೀಶರು ಕೋಮುವಾದಿ ಭಾವನೆಗಳನ್ನು ಮತ್ತೆ ಕೆರಳಿಸಲು ಬಯಸಬಹುದು. ಆಗ ಪರಿಸ್ಥಿತಿ ಏನಾದೀತು? ಸಮಸ್ಯೆ ಇರುವುದು ಧಾರ್ಮಿಕ ಸ್ವರೂಪವನ್ನು ತೀರ್ಮಾನಿಸುವ ಕೋರ್ಟುಗಳ ಅಧಿಕಾರದ ಕುರಿತು ಅಲ್ಲ. ಆದರೆ ಪ್ರತಿಯೊಂದು ಕೇಸಿನಲ್ಲೂ ಅಂತಹ ಆದೇಶಗಳ ಸಾಧಕಬಾಧಕಗಳೇ ಅಸಲಿ ಸಮಸ್ಯೆ. ನ್ಯಾಯಾಲಯದಲ್ಲಿ ನೈಸರ್ಗಿಕ ನ್ಯಾಯ ತತ್ವಗಳನ್ನು ಉಲ್ಲಂಘಿಸಿ, ಭಾರೀ ವೇಗದಲ್ಲಿ ಸಂಭಲ್ ಸರ್ವೆ ನಡೆದ ವೈಖರಿಯೇ ಈ ಮಾತಿಗೆ ಉದಾಹರಣೆ. ಮುಖ್ಯ ನ್ಯಾಯಮೂರ್ತಿಯಾಗಿದ್ದ ಚಂದ್ರಚೂಡರಿಗೆ ಇದು ಚೆನ್ನಾಗಿ ಗೊತ್ತಿತ್ತು. ಆದರೂ ಸಮಸ್ಯೆಯನ್ನು ಇತ್ಯರ್ಥಗೊಳಿಸಿ ದೇಶದಲ್ಲಿ ಸ್ಥಿರತೆಯನ್ನು ಕಾಪಾಡಲು ಬಯಸಲಿಲ್ಲ.
ತೀರಾ ತಡವಾಗುವ ಮೊದಲೇ ಇಂದಿನ ಸುಪ್ರೀಮ್ ಕೋರ್ಟು ಮಧ್ಯಪ್ರವೇಶ ಮಾಡಬೇಕು. ಪೂಜಾಸ್ಥಳದ ಧಾರ್ಮಿಕ ಸ್ವರೂಪವನ್ನು ತೀರ್ಮಾನಿಸುವ ನ್ಯಾಯಾಲಯದ ಅಧಿಕಾರದ ಉದಾರ ವ್ಯಾಖ್ಯಾನವು ಭಾರೀ ಅಧ್ವಾನ- ಅನಾಹುತವನ್ನು ಉಂಟು ಮಾಡಲಿದೆ. ‘ಧಾರ್ಮಿಕ ಸ್ವರೂಪ’ ಕುರಿತು ಕಿರಿದಾದ ಮತ್ತು ಹೆಚ್ಚು ಅಗಲವಿಲ್ಲದ ವ್ಯಾಖ್ಯಾನವನ್ನೇ ಸುಪ್ರೀಮ್ ಕೋರ್ಟು ಒದಗಿಸಬೇಕು. ಉದಾರ ವ್ಯಾಖ್ಯಾನವು ಈ ದೇಶದ ಭವಿಷ್ಯವನ್ನು ಹೇಗೆಲ್ಲ ಬಾಧಿಸಲಿದೆ, ಎಂತೆಂತಹ ಪರಿಣಾಮಗಳು ಆಗಲಿವೆ ಎಂಬುದನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ಈ ದೇಶದ ಒಳಿತಿಗಾಗಿ ಹೀಗೆ ಮಾಡಲೇಬೇಕು.
ಸೌರವ್ ದಾಸ್ ಅವರ ಈ ಕಣ್ಣು ತೆರೆಸುವ ವಿಶ್ಲೇಷಣೆ ಮತ್ತು ಆಳದ ಕಳಕಳಿ ಸ್ತುತ್ಯಾರ್ಹ. ದೇಶವನ್ನು ಆಳುವವರು ದೇಶಹಿತಕ್ಕೆ ಮೊದಲ ಆದ್ಯತೆ ಎನ್ನುತ್ತಾರೆ. ಆದರೆ, ಅದು ಕೇವಲ ತುಟಿ ಮೇಲಿನ ಮಾತಾಗಿ ಉಳಿದಿದೆ. ಕಿಂಚಿತ್ತೂ ಆಚರಣೆಗೆ ಬಂದಿಲ್ಲ. ಸಮಾಜವನ್ನು ಒಡೆದು ಛಿದ್ರಗೊಳಿಸಿಯಾದರೂ ಸರಿ, ತಾವು ಅಧಿಕಾರದಲ್ಲಿರಬೇಕೆಂಬ ಕಡು ಸ್ವಾರ್ಥ ಅವರದು. ಈ ಕಟುಸತ್ಯವನ್ನು ಸಮಾಜ ಎಷ್ಟು ಬೇಗ ಅರಿತರೆ ಅಷ್ಟು ಒಳಿತು.
ಇದನ್ನೂ ಓದಿ ಜಾತ್ಯತೀತತೆಗೆ ವಿರೋಧ; ಸ್ವಾತಂತ್ರ್ಯ ಚಳವಳಿಗೆ ಸೇರದವರ ವ್ಯರ್ಥ ಪ್ರಲಾಪ
