ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಂಥ ವಿದ್ಯಾರ್ಥಿಗಳ ಭವಿಷ್ಯದ ಬುನಾದಿ ನಿರ್ಮಿಸುವ ಇಲಾಖೆಯ ಸಚಿವರಾಗಿರುವ ಮಧು ಬಂಗಾರಪ್ಪ, ಪ್ರಶ್ನೆಯ ಮಹತ್ವವನ್ನು ಮನಗಾಣದೆ, ಓರ್ವ ಶಾಲಾ ವಿದ್ಯಾರ್ಥಿಯ ಮೇಲೆ 'ಶಕ್ತಿ' ಪ್ರದರ್ಶಿಸಿದ್ದಾರೆ. ಆ ಮೂಲಕ ತಾವು ಶಿಕ್ಷಣ ಸಚಿವರಾಗಿರಲು ಸೂಕ್ತವೇ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದ್ದಾರೆ.
”ನನ್ನನ್ನೂ ಪ್ರಶ್ನಿಸದೆ ಒಪ್ಪಿಕೊಳ್ಳಬೇಡ” ಎಂದು ಬೋಧಿಸಿದ ಬುದ್ಧನ ಗುರು ಪರಂಪರೆಯ ದೇಶ ನಮ್ಮದು. ಪ್ರಶ್ನೆಯೇ ವೈಜ್ಞಾನಿಕ ಮನೋಭಾವದ ಮೂಲ ತಳಹದಿ. ಪ್ರಶ್ನೆಯೇ ಪ್ರಜಾತಂತ್ರದ ಆಧಾರಸ್ತಂಭ. ಆದರೆ, ಪ್ರಜಾತಾಂತ್ರಿಕ ಮಾರ್ಗದ ಮೂಲಕ ಚುನಾಯಿತರಾಗಿ ಶಾಸಕ, ಸಚಿವರಾಗಿರುವ ಮಧು ಬಂಗಾರಪ್ಪನವರಿಗೆ ಈ ಗುರು ಪರಂಪರೆಯ ಅರಿವೇ ಇದ್ದಂತಿಲ್ಲ. ಹೀಗಾಗಿಯೇ, ಅವರು ತಮಗೆ ಕನ್ನಡ ಬರುವುದಿಲ್ಲ ಎಂದು ಹೇಳಿದ ವಿದ್ಯಾರ್ಥಿಯ ಮೇಲೆ ಸಿಡಿಮಿಡಿಗೊಂಡಿದ್ದಾರೆ. ಮಾತ್ರವಲ್ಲ, ಆ ವಿದ್ಯಾರ್ಥಿಯನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕು ಎಂದೂ ಶಿಕ್ಷಣಾಧಿಕಾರಿಗಳು ಹಾಗೂ ಶಾಲಾ ಪ್ರಾಂಶುಪಾಲರಿಗೆ ತಾಕೀತು ಮಾಡಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಂಥ ವಿದ್ಯಾರ್ಥಿಗಳ ಭವಿಷ್ಯದ ಬುನಾದಿ ನಿರ್ಮಿಸುವ ಇಲಾಖೆಯ ಸಚಿವರಾಗಿರುವ ಮಧು ಬಂಗಾರಪ್ಪ, ಪ್ರಶ್ನೆಯ ಮಹತ್ವವನ್ನು ಮನಗಾಣದೆ, ಓರ್ವ ಶಾಲಾ ವಿದ್ಯಾರ್ಥಿಯ ಮೇಲೆ ‘ಶಕ್ತಿ’ ಪ್ರದರ್ಶಿಸಿದ್ದಾರೆ. ಆ ಮೂಲಕ ತಾವು ಶಿಕ್ಷಣ ಸಚಿವರಾಗಿರಲು ಸೂಕ್ತವೇ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದ್ದಾರೆ.
ಆಗಿದ್ದಿಷ್ಟು: ಸಿಇಟಿ, ಜೆಇಇ ಹಾಗೂ ನೀಟ್ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಸುಮಾರು 25,000 ವಿದ್ಯಾರ್ಥಿಗಳಿಗಾಗಿ ಆನ್‌ಲೈನ್ ತರಬೇತಿ ಒದಗಿಸುವ ಉಪಕ್ರಮಕ್ಕೆ ಇತ್ತೀಚೆಗೆ ಕರ್ನಾಟಕ ಸರಕಾರ ಚಾಲನೆ ನೀಡಿತು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಈ ಕಾರ್ಯಕ್ರಮವನ್ನು ವರ್ಚುಯಲ್ ಆಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಯೋರ್ವ (ಅದು ವಿದ್ಯಾರ್ಥಿಯೊ ಅಥವಾ ಅಧಿಕಾರಿಯೊ ಎಂಬುದಿನ್ನೂ ಸ್ಪಷ್ಟವಾಗಿಲ್ಲ) ”ಶಿಕ್ಷಣ ಸಚಿವರಿಗೆ ಕನ್ನಡ ಬರುವುದಿಲ್ಲ” ಎಂದು ಕೂಗಿದ್ದಾನೆ. ಮಧು ಬಂಗಾರಪ್ಪನವರೇನಾದರೂ ಪ್ರಜಾತಾಂತ್ರಿಕ ವ್ಯಕ್ತಿಯಾಗಿದ್ದರೆ, ಅದನ್ನು ಕ್ರೀಡಾ ಮನೋಭಾವದಿಂದ ಸ್ಪೀಕರಿಸುತ್ತಿದ್ದರು. ಯಾಕೆಂದರೆ, ಮಧು ಬಂಗಾರಪ್ಪಗೆ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಲು, ಓದಲು, ಬರೆಯಲು ಬರುವುದಿಲ್ಲ ಎಂಬುದು ಅವರಿಗೆ ಮಾತ್ರವಲ್ಲ; ಸಚಿವ ಸಂಪುಟದ ಅವರ ಸಹೋದ್ಯೋಗಿಗಳಿಗೆಲ್ಲ ತಿಳಿದಿರುವ ಸತ್ಯ.
ಆದರೆ, ಸಚಿವ ಸ್ಥಾನದ ಅಹಂನಲ್ಲಿ ಆಸೀನರಾಗಿದ್ದ ಮಧು ಬಂಗಾರಪ್ಪಗೆ ವಿದ್ಯಾರ್ಥಿಯೋರ್ವನ ಈ ಮುಗ್ಧ ಮನಸ್ಸಿನ ಹೇಳಿಕೆಯನ್ನು ಅರಗಿಸಿಕೊಳ್ಳಲಾಗಿಲ್ಲ. ತಕ್ಷಣವೇ ಕುಪಿತರಾಗಿರುವ ಅವರು, ”ನಾನೇನು ಉರ್ದು ಮಾತನಾಡುತ್ತಿದ್ದೇನೆಯೆ? ಟಿವಿಯನ್ನು ಆನ್ ಮಾಡಿ ನೋಡಿ” ಎಂದು ಸಿಟ್ಟಾಗಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಅವರು, ”ನನಗೆ ಕನ್ನಡ ಬರುವುದಿಲ್ಲ ಎಂದು ಹೇಳಿದ ವಿದ್ಯಾರ್ಥಿಯನ್ನು ಗುರುತಿಸಿ, ಆತನ ವಿರುದ್ಧ ಕ್ರಮ ಕೈಗೊಳ್ಳಿ. ಇದು ತುಂಬಾ ಮೂರ್ಖತನ. ಯಾರೂ ಆ ವಿದ್ಯಾರ್ಥಿಯ ಶಿಕ್ಷಕರು? ಇದನ್ನು ಗಂಭೀರವಾಗಿ ಪರಿಗಣಿಸಿ” ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಇದನ್ನು ಓದಿದ್ದೀರಾ?: ಜಾತ್ಯತೀತತೆಗೆ ವಿರೋಧ; ಸ್ವಾತಂತ್ರ್ಯ ಚಳವಳಿಗೆ ಸೇರದವರ ವ್ಯರ್ಥ ಪ್ರಲಾಪ
ಸಣ್ಣ ವಯಸ್ಸಿನ ವಿದ್ಯಾರ್ಥಿಯೊಬ್ಬನ ಹೇಳಿಕೆಯನ್ನು ನಕ್ಕು ನಿರ್ಲಕ್ಷಿಸಬಹುದಾಗಿದ್ದ ಜನಪ್ರತಿನಿಧಿಯಾದ ಮಧು ಬಂಗಾರಪ್ಪ, ಅದನ್ನು ತಮ್ಮ ಪ್ರತಿಷ್ಠೆಯ ಪ್ರಶ್ನೆಯಾಗಿಸಿಕೊಂಡಿದ್ದಾರೆ. ಆ ಮೂಲಕ ಭಾರತದ ಬುದ್ಧನ ಗುರು ಪರಂಪರೆಗೆ ಅವಮಾನಿಸಿದ್ದಾರೆ.
2023ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು, ಸಂಪುಟ ಪುನಾರಚನೆಯ ಕಸರತ್ತು ನಡೆದಾಗ, ತಮ್ಮ ಬದ್ಧ ವೈರಿ ಬಿ.ಕೆ.ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ತಪ್ಪಿಸಲು ಸಿದ್ದರಾಮಯ್ಯ ಈಡಿಗರ ಕೋಟಾದಲ್ಲಿ ಆಯ್ಕೆ ಮಾಡಿದ ವ್ಯಕ್ತಿಯೇ ಈ ಮಧು ಬಂಗಾರಪ್ಪ. ಸಚಿವರಾದ ಹೊಸದರಲ್ಲಿ ಒಂದಿಷ್ಟು ಹುರುಪಿನಿಂದ ಕೆಲಸ ಮಾಡಿದ ಮಧು ಬಂಗಾರಪ್ಪ, ಇಲಾಖೆ ಹಿಡಿತಕ್ಕೆ ಸಿಕ್ಕುತ್ತಿದ್ದಂತೆಯೆ ದರ್ಪವನ್ನು ಮೈಗೂಡಿಸಿಕೊಂಡರು. ಅದರ ಪರಿಣಾಮವೇ ಸಣ್ಣ ಬಾಲಕನ ಟೀಕೆಯನ್ನೂ ಸಹಿಸದ ಸ್ಥಿತಿ ತಲುಪಿರುವುದು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯಲ್ಲಿ ಮಾಡಬೇಕಾದ ಸುಧಾರಣೆಗಳು ಬೆಟ್ಟದಷ್ಟಿವೆ. ಮುಖ್ಯವಾಗಿ, ಶಾಲಾ ಕಾಲೇಜುಗಳಲ್ಲಿ 2021-22ನೇ ಸಾಲಿನಲ್ಲಿ 1,41,358 ಶಿಕ್ಷಕರ ಹುದ್ದೆಗಳು ಖಾಲಿ ಇದ್ದವು. ಪ್ರೌಢ ಶಾಲೆಗಳಲ್ಲಿ ಪ್ರಮುಖ ವಿಷಯಗಳನ್ನು ಬೋಧಿಸುವ ಕೇವಲ ಶೇ. 68ರಷ್ಟು ಶಿಕ್ಷಕರು ಮಾತ್ರ ಇದ್ದಾರೆ. ಇನ್ನು ಶಿಕ್ಷಣ ಪ್ರಗತಿಯಲ್ಲಿ ಕಲ್ಯಾಣ ಕರ್ನಾಟಕ ತೀವ್ರವಾಗಿ ಹಿಂದುಳಿದಿದೆ. ವಿಮೋಚನೆಯ ಅಸ್ತ್ರವಾದ ಶಿಕ್ಷಣವನ್ನು ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳ ಬಳಿಗೆ ಕೊಂಡೊಯ್ಯುವ ಮಹತ್ವಾಕಾಂಕ್ಷೆ ಇರುವ ಯಾವುದೇ ಶಿಕ್ಷಣ ಸಚಿವರ ಪಾಲಿಗೆ ಈ ವಿಷಯಗಳು ಆದ್ಯತೆಯ ಸಂಗತಿಯಾಗಿರುತ್ತಿದ್ದವು. ಆದರೆ, 2023-24ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶವು ಗ್ರಾಮೀಣ ಭಾಗಗಳಲ್ಲಿನ ಕಳಪೆ ಗುಣಮಟ್ಟದ ಶಿಕ್ಷಣಕ್ಕೆ ಕನ್ನಡಿ ಹಿಡಿದಿದೆ. ಅದಕ್ಕೆ ಪ್ರಮುಖ ಕಾರಣ, ನುರಿತ ಶಿಕ್ಷಕರ ನೇಮಕಾತಿಗೆ ಮೀನಾಮೇಷ ಎಣಿಸುತ್ತಿರುವುದು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ ಘನತೆ ಮತ್ತು ಮನ್ನಣೆ ತಂದುಕೊಟ್ಟವರು ಎಚ್.ಜಿ.ಗೋವಿಂದೇಗೌಡ. ಎಚ್.ಡಿ.ದೇವೇಗೌಡ ಹಾಗೂ ಜೆ.ಎಚ್.ಪಟೇಲರ ಸಚಿವ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದ ಅವರು, ಬರೋಬ್ಬರಿ ಒಂದು ಲಕ್ಷ ಶಿಕ್ಷಕರನ್ನು ನೇಮಕ ಮಾಡಿದ್ದರು. ಅದೂ ಒಂದು ಪೈಸೆ ಲಂಚ ಇಲ್ಲದ ಪಾರದರ್ಶಕ ವ್ಯವಸ್ಥೆ ರೂಪಿಸುವ ಮೂಲಕ. ಹೀಗಾಗಿಯೇ ಅವರನ್ನು ಈಗಲೂ ಕೆಲ ಶಿಕ್ಷಕರು ಕೈಮುಗಿದು ಸ್ಮರಿಸುತ್ತಾರೆ. ಮಕ್ಕಳನ್ನು ನೈತಿಕವಾಗಿ ರೂಪಿಸುವ, ಅವರನ್ನು ದೇಶದ ಭವಿಷ್ಯದ ಆಸ್ತಿಯನ್ನಾಗಿಸುವ ಹೊಣೆಗಾರಿಕೆ ಹೊಂದಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ ಬೇಕಿರುವುದು ಗೋವಿಂದೇಗೌಡರಂಥ ನಿಸ್ಪೃಹ ಸಚಿವರೇ ಹೊರತು, ಅಧಿಕಾರದ ಮದವನ್ನು ನೆತ್ತಿಗೇರಿಸಿಕೊಂಡಿರುವ ಮಧು ಬಂಗಾರಪ್ಪನಂಥವರಲ್ಲ.
ಇಂದು ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರು ಪಾಠ ಮಾಡುವುದಕ್ಕಿಂತ ರಿಯಲ್ ಎಸ್ಟೇಟ್ ವ್ಯವಹಾರ, ಅಧಿಕಾರಸ್ಥರ ಮರ್ಜಿಯಲ್ಲಿ ಮುಳುಗಿರುವುದೇ ಹೆಚ್ಚು. ಇಂತಹ ಶಿಕ್ಷಕರು ಪ್ರಶ್ನಿಸುವ ಮನೋಭಾವ ಹೊಂದಿರುವ ಸುಶಿಕ್ಷಿತ ವಿದ್ಯಾರ್ಥಿಗಳನ್ನು ರೂಪಿಸುವುದು ಹೇಗೆ ಸಾಧ್ಯ? ಅಂದಮೇಲೆ ಶಿಕ್ಷಣ ಇಲಾಖೆ ಪ್ರಗತಿ ಸಾಧಿಸುವುದಾದರೂ ಹೇಗೆ ಸಾಧ್ಯ?

ಭಾರತವು 2 ಸಾವಿರ ವರ್ಷಗಳ ಕಾಲ ಹಿಂದುಳಿದಿದ್ದೇ ಶಿಕ್ಷಣ ನಿರಾಕರಣೆ ಹಾಗೂ ಪ್ರಶ್ನಿಸುವ ಮನೋಭಾವವನ್ನು ಹತ್ತಿಕ್ಕಿದ್ದರಿಂದ, ಶಿಕ್ಷಣಾರ್ಥಿಗಳಿಂದ ಗುಲಾಮಗಿರಿಯನ್ನು ಬಯಸಿದ್ದರಿಂದ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನವು ಬುದ್ಧನ ಗುರು ಪರಂಪರೆಯಿಂದ ಸ್ಫೂರ್ತಿ ಪಡೆದಿದ್ದು, ಪ್ರಶ್ನಿಸುವ ಮನೋಧರ್ಮವನ್ನು ಪ್ರೋತ್ಸಾಹಿಸುತ್ತದೆ. ಇದರೊಂದಿಗೆ ವೈಜ್ಞಾನಿಕ ಮನೋಭಾವಕ್ಕೆ ಹೆಚ್ಚು ಒತ್ತು ನೀಡಿದೆ. ಇಂತಹ ಸಂವಿಧಾನದ ಬಲದಿಂದ ಶಾಸಕ, ಸಚಿವರಾಗಿರುವ ಮಧು ಬಂಗಾರಪ್ಪ, ವಿದ್ಯಾರ್ಥಿಯೊಬ್ಬ ತನ್ನ ಕನ್ನಡದ ಕುರಿತು ಪ್ರಶ್ನಿಸಿದ ಎಂಬ ಒಂದೇ ಕಾರಣಕ್ಕೆ ಸಿಡಿಮಿಡಿಗೊಂಡಿರುವುದು ಅವರಿಗೂ ಶೋಭೆಯಲ್ಲ; ಅವರು ಹೊಂದಿರುವ ಶಿಕ್ಷಣ ಖಾತೆಗೂ ಶೋಭೆಯಲ್ಲ.
ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಹೋದಲ್ಲಿ, ಬಂದಲ್ಲೆಲ್ಲ ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೊದಲು ತಮ್ಮ ಸಚಿವ ಸಂಪುಟದ ಸಹೋದ್ಯೋಗಿಯಾದ ಮಧು ಬಂಗಾರಪ್ಪನವರಿಗೆ ಅದರ ಮೊದಲ ಪಾಠವನ್ನು ಮಾಡಬೇಕಿದೆ. ಇಲ್ಲವಾದರೆ, ಪ್ರಜಾತಂತ್ರದ ಬುನಾದಿಯಾದ ಪ್ರಶ್ನಿಸುವ ಮನೋಧರ್ಮವನ್ನೇ ಹತ್ತಿಕ್ಕಲು ಹೊರಟಿರುವ ಮಧು ಬಂಗಾರಪ್ಪ ಕೇವಲ ಶಿಕ್ಷಣ ಇಲಾಖೆಗೆ ಮಾತ್ರ ಹಾನಿಯುಂಟು ಮಾಡುವುದಿಲ್ಲ; ಬದಲಿಗೆ ಸಾಂವಿಧಾನಿಕ ಆಶಯಗಳನ್ನೂ ನಾಶಗೊಳಿಸಿ, ಪ್ರಜಾತಂತ್ರಕ್ಕೇ ಅಪಾಯ ತಂದೊಡ್ಡಲಿದ್ದಾರೆ.

ಸದಾನಂದ ಗಂಗನಬೀಡು
ಪತ್ರಕರ್ತ, ಲೇಖಕ