ಸಂಭಲ್ ಘರ್ಷಣೆಯಲ್ಲಿ ಎರಡು ಸಮುದಾಯಗಳು ಭಾಗಿಯಾಗಿದ್ದರೂ, ಘರ್ಷಣೆಯ ಹೊಣೆಯನ್ನು ಸಂಪೂರ್ಣವಾಗಿ ಮುಸ್ಲಿಂ ಸಮುದಾಯದ ಮೇಲೆಯೇ ಹೇರಲು ಯೋಗಿ ಸರ್ಕಾರ ಮುಂದಾಗಿದೆ. ಸಾರ್ವಜನಿಕ ಆಸ್ತಿ ನಷ್ಟದ ಹೆಸರಿನಲ್ಲಿ ಮುಸ್ಲಿಂ ಸಮುದಾಯದ ಆಸ್ತಿಯನ್ನೂ ಕಸಿದುಕೊಳ್ಳಲು, ಅರ್ಥಾತ್ ಬುಲ್ಡೋಜರ್ ನ್ಯಾಯವನ್ನು ಮತ್ತೊಂದು ರೀತಿಯಲ್ಲಿ ಜಾರಿಗೊಳಿಸಲು ಸರ್ಕಾರ ಯತ್ನಿಸುತ್ತಿದೆ.
ಯೋಗಿ ಆದಿತ್ಯನಾಥ್ ಆಡಳಿತದಲ್ಲಿ ಉತ್ತರ ಪ್ರದೇಶ ಪೊಲೀಸ್ ರಾಜ್ಯವಾಗಿ ಮಾರ್ಪಟ್ಟಿದೆ. ನ್ಯಾಯಾಲಯವನ್ನು ಬದಿಗೊತ್ತಿ ತಾವೇ ನ್ಯಾಯ ಕೊಡುತ್ತೇವೆ, ನಾವು ‘ಹೇಳಿದ್ದೇ ತೀರ್ಪು – ಮಾಡಿದ್ದೇ ನ್ಯಾಯ’ ಎಂಬ ಧೋರಣೆಯಿಂದ ವರ್ತಿಸುತ್ತಿದೆ. ‘ಬುಲ್ಡೋಜರ್ ನ್ಯಾಯ’ ಎಂಬ ಅಸಂವಿಧಾನಿಕ ಕ್ರಮದ ಮೂಲಕ ಪ್ರಕರಣಗಳಲ್ಲಿ ದಲಿತರು, ಅಲ್ಪಸಂಖ್ಯಾತರು ಆರೋಪಿಗಳಾಗಿದ್ದರೆ, ಅವರ ಮನೆಗಳನ್ನು ನೆಲಸಮಗೊಳಿಸುವ ದಬ್ಬಾಳಿಕೆ ನಡೆಸುತ್ತಿತ್ತು. ಬುಲ್ಡೋಜರ್ ನ್ಯಾಯವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಆದರೆ, ಯೋಗಿ ಸರ್ಕಾರದ ಅಟ್ಟಹಾಸ ಇನ್ನೂ ನಿಂತಿಲ್ಲ.
ಕಳೆದ ನಾಲ್ಕೈದು ದಿನಗಳಿಂದ ಉತ್ತರ ಪ್ರದೇಶದ ಸಂಭಲ್ ಸುದ್ದಿಯಲ್ಲಿದೆ. ಸಂಭಲ್‌ನ ಗಾರ್ವಿ ಪ್ರದೇಶದಲ್ಲಿರುವ ಶಾಹಿ ಜಾಮಾ ಮಸೀದಿಯಲ್ಲಿ ಸರ್ವೇ ನಡೆಸಲು ನ್ಯಾಯಾಲಯವು ಅನುಮತಿ ನೀಡಿದ್ದು, ಮುಸ್ಲಿಂ ಸಮುದಾಯದಲ್ಲಿ ಆತಂಕ ಹುಟ್ಟುಹಾಕಿದೆ. ಬಾಬ್ರಿ ಮಸೀದಿಯಂತೆ ಈ ಜಾಗವನ್ನು ಹಿಂದುತ್ವವಾದಿಗಳು ಕಸಿದುಕೊಳ್ಳಬಹುದು ಎಂಬ ಭಯವನ್ನು ಆವರಿಸಿದೆ. ಹೀಗಾಗಿ, ಸರ್ವೇ ನಡೆಸದಂತೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಭಾನುವಾರ ನಡೆದ ಪ್ರತಿಭಟನೆ ವೇಳೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಬಳಿಕ, ಕಲ್ಲು ತೂರಾಟ, ಘರ್ಷಣೆಗಳು ನಡೆದಿವೆ. ಗಾರ್ವಿ ಪ್ರದೇಶದಲ್ಲಿ ಸಾಕಷ್ಟು ಸಾರ್ವಜನಿಕ ಆಸ್ತಿಗಳಿಗೆ ಹಾನಿಯಾಗಿದೆ. ನಷ್ಟವಾಗಿದೆ. ಮುಸ್ಲಿಂ ಸಮುದಾಯವು ಘರ್ಷಣೆ ನಡೆಸಿದೆ ಎಂದು ಆರೋಪಿಸಲಾಗುತ್ತಿದೆಯಾದರೂ, ಹಿಂದುತ್ವವಾದಿಗಳೂ ಭಾಗಿಯಾಗಿದ್ದಾರೆ ಎಂಬ ಮಾಹಿತಿಯೂ ಇದೆ.
ಇದೀಗ, ಉತ್ತರ ಪ್ರದೇಶ ಸರ್ಕಾರವು ಘರ್ಷಣೆಯಿಂದ ಸಾರ್ವಜನಿಕ ಆಸ್ತಿ ನಷ್ಟಕ್ಕೆ ಪ್ರತಿಭಟನಾಕಾರರನ್ನು ಹೊಣೆಗಾರರನ್ನಾಗಿ ಮಾಡಹೊರಟಿದೆ. “ಸಂಭಲ್ ಸಂಘರ್ಷದಲ್ಲಿ ಉಂಟಾದ ನಷ್ಟಕ್ಕೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವರನ್ನೇ ಹೊಣೆ ಮಾಡಲು ಸರ್ಕಾರ ನಿರ್ಧರಿಸಿದೆ. ಆಸ್ತಿ ನಷ್ಟವನ್ನು ಅವರಿಂದಲೇ ವಸೂಲಿ ಮಾಡುತ್ತದೆ. ಕಲ್ಲು ತೂರಾಟಗಾರರು ಮತ್ತು ಅಶಿಸ್ತಿನಿಂದ ವರ್ತಿಸಿದವರ ಚಿತ್ರಗಳನ್ನು ಪೋಸ್ಟರ್‌ಗಳ ಮೂಲಕ ಸಾರ್ವಜನಿಕವಾಗಿ ಪ್ರದರ್ಶಿಸಲಾಗುತ್ತದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರತಿಭಟನಾಕಾರರು ಎಂದು ಹೇಳುತ್ತಿರುವ ಸರ್ಕಾರದ ನೇರ ಗುರಿ ಮುಸ್ಲಿಂ ಸಮುದಾಯ. ಘರ್ಷಣೆಯಲ್ಲಿ ಎರಡು ಸಮುದಾಯಗಳು ಭಾಗಿಯಾಗಿದ್ದರೂ, ಘರ್ಷಣೆಯ ಹೊಣೆಯನ್ನು ಸಂಪೂರ್ಣವಾಗಿ ಮುಸ್ಲಿಂ ಸಮುದಾಯದ ಮೇಲೆಯೇ ಹೇರಲು ಮುಂದಾಗಿದೆ. ಸಾರ್ವಜನಿಕ ಆಸ್ತಿ ನಷ್ಟದ ಹೆಸರಿನಲ್ಲಿ ಮುಸ್ಲಿಂ ಸಮುದಾಯದ ಆಸ್ತಿಯನ್ನೂ ಕಸಿದುಕೊಳ್ಳಲು, ಅರ್ಥಾತ್ ಬುಲ್ಡೋಜರ್ ನ್ಯಾಯವನ್ನು ಮತ್ತೊಂದು ರೀತಿಯಲ್ಲಿ ಜಾರಿಗೊಳಿಸಲು ಸರ್ಕಾರ ಯತ್ನಿಸುತ್ತಿದೆ.
ಒಂದಿಲ್ಲೊಂದು ಮಾರ್ಗದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮೇಲೆ ದಮನ ಮಾಡಲು ಯೋಗಿ ಸರ್ಕಾರ ಎದುರು ನೋಡುತ್ತಿದೆ. ಅದಕ್ಕಾಗಿ, ನಷ್ಟ ವಸೂಲಿ ಅಸ್ತ್ರವನ್ನು ಪ್ರಯೋಗಿಸಲು ಮುಂದಾಗಿದೆ.
ಅಂದಹಾಗೆ, ಶಾಹಿ ಜಾಮಾ ಮಸೀದಿಯ ಜಾಗವು ಕೇಲಾ ದೇವಿ ದೇವಸ್ಥಾನಕ್ಕೆ ಸೇರಿದ್ದು. ಮಸೀದಿಯು ಮೂಲತಃ ಹರಿಹರ ದೇವಸ್ಥಾನವಾಗಿತ್ತು. 1529ರಲ್ಲಿ ಬಾಬರ್ ಆಳ್ವಿಕೆಯಲ್ಲಿ ದೇವಸ್ಥಾನವನ್ನು ಮಸೀದಿಯಾಗಿ ಪರಿವರ್ತಿಸಲಾಗಿದೆ ಎಂದು ದೇವಸ್ಥಾನ ಸಮಿತಿ ಸದಸ್ಯರು ಆರೋಪಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಚಂದೌಸಿಯ ಸಿವಿಲ್ ನ್ಯಾಯಾಲಯವು ಮಸೀದಿ ಆವರಣದಲ್ಲಿ ಸಮೀಕ್ಷೆ ನಡೆಸಲು ಕಳೆದ ವಾರ ಆದೇಶಿಸಿತ್ತು.
ಗಮನಾರ್ಹ ಸಂಗತಿ ಎಂದರೆ, ಪೂಜಾ ಸ್ಥಳ (ವಿಶೇಷ ನಿಬಂಧನೆಗಳು) ಕಾಯಿದೆ-1991ರ ಪ್ರಕಾರ, ಭಾರತವು ಸ್ವತಂತ್ರಗೊಂಡ 1947ರ ಸಂದರ್ಭದಲ್ಲಿ ಯಾವ ಸ್ಥಳದಲ್ಲಿ, ಯಾವ ಪೂಜಾ ಸ್ಥಳ ಅಥವಾ ಕಟ್ಟಡ (ದೇವಾಲಯ, ಮಸೀದಿ, ಚರ್ಜ್, ಸ್ತೂಪ, ಬಸದಿ) ಇದ್ದಿತೋ, ಆ ಸ್ಥಳ, ಅದೇ ಧಾರ್ಮಿಕ ಸಮುದಾಯಕ್ಕೆ ಸೇರಿರುತ್ತದೆ. ಆದರೆ, ಈ ಕಾಯ್ದೆಯು ಬಾಬ್ರಿ ಮಸೀದಿ ವಿಚಾರದಲ್ಲಿ ಮಾತ್ರವೇ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ಅಂದಮೇಲೆ, ದೇಶವು ಸ್ವತಂತ್ರಗೊಂಡ ಸಂದರ್ಭದಲ್ಲಿ ಅಲ್ಲಿ ಮಸೀದಿ ಇದ್ದರೆ, ಆ ಭೂಮಿ ಮಸೀದಿಯದ್ದೇ, ದೇವಾಲಯವಿದ್ದರೆ, ಅದು ದೇವಾಲಯದ್ದೆ ಆಗಿರುತ್ತದೆ. ಆದರೂ, ಆರ್‌ಎಸ್‌ಎಸ್ ಸೇರಿದಂತೆ ಹಿಂದುತ್ವವಾದಿ ಸಂಘಟನೆಗಳು ಉದ್ದೇಶಪೂರ್ವಕವಾಗಿ ಹಲವಾರು ಮಸೀದಿಗಳು ಮತ್ತು ಅವುಗಳ ಸ್ಥಳಗಳನ್ನು ವಿವಾದಕ್ಕೆ ಸಿಲುಕಿಸಲು ನಿರಂತರವಾಗಿ ಯತ್ನಿಸುತ್ತಿವೆ. ಈಗಾಗಲೇ, ವಾರಣಾಸಿಯ ಕಾಶಿಯಲ್ಲಿರುವ ಜ್ಞಾನವಾಪಿ ಸಮೀದಿ, ಮಥುರಾದ ಜಮಾ ಮಸೀದಿ ವಿಚಾರದಲ್ಲಿ ವಿವಾದ ಎಬ್ಬಿಸಲು ಹಿಂದುತ್ವವಾದಿಗಳು ಹವಣಿಸುತ್ತಿದ್ದಾರೆ. ಕರ್ನಾಟಕದ ಶ್ರೀರಂಗಪಟ್ಟಣದ ಮಸೀದಿಯ ಮೇಲೂ ಆರ್‌ಎಸ್‌ಎಸ್-ಬಿಜೆಪಿ ಕಣ್ಣಿಟ್ಟಿವೆ. ಜೊತೆಗೆ, ಸಂಭಲ್‌ನ ಶಾಹಿ ಜಾಮಾ ಮಸೀದಿಯನ್ನೂ ಭಾನುವಾರ ನಡೆದ ಘರ್ಷಣೆಯೊಂದಿಗೆ ವಿವಾದಿತ ಸ್ಥಳವನ್ನಾಗಿ ಮಾರ್ಪಡಿಸಿವೆ.