ಸಂವಿಧಾನದ ಆಶಯಗಳ ಯಶಸ್ವಿ ಜಾರಿಗಾಗಿ ಕಟಿಬದ್ದತೆಯಿಂದ ಶ್ರಮಿಸುವ ಮೂಲಕ ಸಮಾನತೆ ಭಾತೃತ್ವಗಳ ಯಶಸ್ವಿ ಜಾರಿಯ ಮೂಲಕ ಸರ್ವಜನರ ಹಿತ ಕಾಯಬೇಕಾದ ಹೊಣೆ ಆಡಳಿತ ವರ್ಗಕ್ಕಿದೆ. ಅದಕ್ಕಾಗಿ ಕಟಿಬದ್ದತೆಯಿಂದ ಶ್ರಮಿಸೋಣ ಎಂದು ಗೊರವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌರಮ್ಮ ಕರೆ ನೀಡಿದರು.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೊರವನಹಳ್ಳಿ ಗ್ರಾಮ ಪಂಚಾಯಿತಿ ಹಾಗೂ ಅರಿವು ಕೇಂದ್ರ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆ ವೇಳೆ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
“ಸ್ವಾತಂತ್ರ್ಯ ಬಂದ ನಂತರ ಭಾರತ ತನ್ನದೇ ಸಂವಿಧಾನ ಹೊಂದುವ ಮೂಲಕ ಸರ್ವಜನಾಂಗದ ಹಿತಕ್ಕಾಗಿ ಶ್ರಮಿಸುತ್ತಿದೆ. ಇಂದು ಎಲ್ಲ ಜನರೂ ಮುಖ್ಯವಾಹಿನಿಗೆ ಬರಲು ಸಹಕಾರಿಯಾಗಿದೆ. ನವೆಂಬರ್ 26ರಂದು ಸಂವಿಧಾನ ಅಳವಡಿಕೆಗೆ ಚಾಲನೆ ಸಿಕ್ಕ ದಿನವಾಗಿದೆ. ಈ ದಿನವನ್ನು ಸಂವಿಧಾನ ದಿನವಾಗಿ ಆಚರಿಸಲಾಗುತ್ತಿದೆ. ಈ ದಿನದಂದು ಸಂವಿದಾನದ ಆಶಯ ಹಾಗೂ ಮೌಲ್ಯಗಳ ಕುರಿತು ಮನನ ಮಾಡಿಕ್ಕೊಳ್ಳುವ, ಗೌರವಿಸುವ ಮತ್ತು ಸಂವಿಧಾನದ ಯಶಸ್ವಿ ಜಾರಿಗಾಗಿ ಸಂಕಲ್ಪ ಬದ್ದರಾಗುವ ದಿನವಾಗಿದೆ” ಎಂದು ಪಿಡಿಒ ಪೂರ್ಣಿಮಾ ತಿಳಿಸಿದರು.
ಇದನ್ನು ಓದಿದ್ದೀರಾ? ಮಂಡ್ಯ | ಎತ್ತಂಗಡಿ ಭೀತಿಯಲ್ಲಿ ತಮಿಳು ಕಾಲೋನಿ ನಿವಾಸಿಗಳು: ‘ಜಾಗ ಬಿಟ್ಟು ಕದಲಲ್ಲ’ ಎಂದ ಜನ
ಅರಿವು ಕೇಂದ್ರದ ಮಾಹಿತಿದಾರ ಚನ್ನಸಂದ್ರ ವಿವೇಕ್ ಮಾತನಾಡಿ, “ಇಂದಿನ ಮಕ್ಕಳು ಸಂವಿಧಾನ ಓದು ಹಾಗೂ ಅಧ್ಯಯನ ಮಾಡುವ ಮೂಲಕ ಜವಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳಬೇಕು” ಎಂದು ಸಲಹೆ ನೀಡಿದರು.
ಇದೇ ವೇಳೆ ಗೊರವನಹಳ್ಳಿ ಸರ್ಕಾರಿ ಶಾಲೆಯ ಮಕ್ಕಳಿಗೆ ಸಂವಿಧಾನದ ಪೀಠಿಕೆ ಓದಿಸಿ ಸಂವಿಧಾನ ದಿನಾಚರಣೆಯನ್ನು ಆರ್ಥಪೂರ್ಣವಾಗಿ ಆಚರಿಸಿದರು.