ನಟಿ ನಯನತಾರ ಬದುಕು ಆಧರಿಸಿದ ನೆಟ್‌ಫ್ಲಿಕ್ಸ್ ಸಾಕ್ಷ್ಯಚಿತ್ರ ‘ನಯನತಾರ: ಬಿಯಾಂಡ್ ದ ಫೇರಿಟೇಲ್ʼನಲ್ಲಿ ನಾನುಮ್ ರೌಡಿ ದಾನ್ ಚಲನಚಿತ್ರದ ತುಣುಕನ್ನು ಒಪ್ಪಿಗೆ ಪಡೆಯದೆ ಬಳಸಲಾಗಿದೆ ಎಂದು ಆರೋಪಿಸಿ ನಟ ಧನುಷ್ ಅವರು ದಂಪತಿಗಳಾದ ನಯನತಾರ ಹಾಗೂ ವಿಘ್ನೇಶ್ ಶಿವನ್ ವಿರುದ್ಧ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
‘ನಾನುಮ್ ರೌಡಿ ಧಾನ್’ ಚಿತ್ರವನ್ನು ವಂಡರ್ ಬಾರ್ ಫಿಲ್ಮ್ ಸಂಸ್ಥೆಯ ಬ್ಯಾನರ್ ಅಡಿಯಲ್ಲಿ ಧನುಷ್ ನಿರ್ಮಿಸಿದ್ದರು. ಚಿತ್ರದಲ್ಲಿ ನಯನತಾರಾ ನಾಯಕಿಯಾಗಿದ್ದಾರೆ. ಈ ಸಿನಿಮಾದ ದೃಶ್ಯವನ್ನು ಸಾಕ್ಷ್ಯಚಿತ್ರದಲ್ಲಿ ಬಳಸಲಾಗಿದೆ. ಆದರೆ ಅನುಮತಿ ಪಡೆದಿಲ್ಲ ಎಂಬುದು ಧನುಷ್ ಆರೋಪ. ಇದು ನಯನತಾರಾ ಅವರ ಜೀವನ, ನಟನಾ ವೃತ್ತಿ ಮತ್ತು ಅವರ ವಿವಾಹದ ಕುರಿತಾದ ಸಾಕ್ಷ್ಯಚಿತ್ರವಾಗಿದೆ.
ಇದನ್ನು ಓದಿದ್ದೀರಾ? ನಟ ಧನುಷ್ ವಿರುದ್ಧ ಬಹಿರಂಗ ಪತ್ರ ಬರೆದ ನಟಿ ನಯನತಾರಾ
ನ್ಯಾಯಮೂರ್ತಿ ಅಬ್ದುಲ್ ಖುದ್ದೋಸ್ ಅವರ ನೇತೃತ್ವದ ಪೀಠಕ್ಕೆ ಬುಧವಾರ ವಂಡರ್‌ಬಾರ್ ಸಲ್ಲಿಸಿರುವ ಸಿವಿಲ್ ಮೊಕದ್ದಮೆಯನ್ನು ಸಲ್ಲಿಸಿದೆ.
ಇನ್ನು ನೆಟ್‌ಫ್ಲಿಕ್ಸ್‌ನ ಮಾತೃ ಸಂಸ್ಥೆಯಾದ ಲಾಸ್ ಗಟೋಸ್ ಪ್ರೊಡಕ್ಷನ್ ಸರ್ವಿಸಸ್ ಇಂಡಿಯಾ ಲಿಮಿಟೆಡ್ ಅನ್ನು ಕೂಡಾ ಪಕ್ಷಕಾರರನ್ನಾಗಿಸಲು ವಂಡರ್‌ಬಾರ್ ಪರ ಹಾಜರಾದ ರಿಯ ವಕೀಲ ಪಿಎಸ್ ರಾಮನ್ ಹೈಕೋರ್ಟ್ ಅನುಮತಿ ಕೋರಿದ್ದಾರೆ. ಇದಕ್ಕೆ ನಯನತಾರಾ ಪರ ವಕೀಲ ಸತೀಶ್ ಪರಾಸರನ್ ಮತ್ತು ನೆಟ್‌ಫ್ಲಿಕ್ಸ್ ಇಂಡಿಯಾ ಪರ ವಕೀಲ ಆರ್ ಪಾರ್ಥಸಾರಥಿ ವಿರೋಧ ವ್ಯಕ್ತಪಡಿಸಿದರು. ಆದರೆ ಹೈಕೋರ್ಟ್ ಲಾಸ್ ಗಟೋಸ್‌ಗೆ ಅರ್ಜಿ ಸಲ್ಲಿಸಲು ಅನುಮತಿ ನೀಡಿದರು.
ಈ ಹಿಂದೆ ತಮ್ಮ ಸಿನಿಮಾದ ದೃಶ್ಯಗಳನ್ನು ಬಳಸಿಕೊಂಡಿದ್ದಾರೆಂದು ಆರೋಪಿಸಿ ನಟಿ ನಯನತಾರಾ ಅವರಿಗೆ ನಟ ಧನುಷ್ ಲೀಗಲ್ ನೋಟಿಸ್ ಕಳಿಸಿದ್ದರು. ಪರಿಹಾರವಾಗಿ 10 ಕೋಟಿ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದರು. ತಮಗೆ ನೋಟಿಸ್ ಕಳಿಸಿರುವ ಧನುಷ್ ವಿರುದ್ಧ ನಯನತಾರಾ ಆಕ್ರೋಶ ವ್ಯಕ್ತಪಡಿಸಿದ್ದರು.
“ಅಭಿಮಾನಿಗಳು ನೋಡುವ ಧನುಷ್‌ಗೂ, ಅಸಲಿ ಧನುಷ್‌ಗೂ ವ್ಯತ್ಯಾಸಗಳಿವೆ. ಅವರು ಇಷ್ಟು ಕೀಳುಮಟ್ಟಕ್ಕೆ ಇಳಿದಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಯಾವುದೇ ಹಿನ್ನೆಲೆಯಿಲ್ಲದೆ, ಅಭಿಮಾನಿಗಳ ಬೆಂಬಲದಿಂದ ಒಂಟಿ ಮಹಿಳೆಯಾಗಿ ಈ ಮಟ್ಟಕ್ಕೆ ಬೆಳೆದು ಬಂದಿದ್ದೇನೆ. ಧನುಷ್ ಅವರ ನೋಟಿಸ್‌ಗೆ ತಕ್ಕ ಪ್ರತ್ಯುತ್ತರ ನೀಡುತ್ತೇನೆ” ಎಂದು ನಯನತಾರಾ ಹೇಳಿದ್ದರು.
