ಅರೆ ಮಲೆನಾಡು ಎಂದೆನಿಸಿಕೊಂಡಿರುವ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕು ಹಸಿರಿನಿಂದ ಕೂಡಿದ್ದು, ಅನೇಕ ಪ್ರವಾಸಿ ತಾಣಗಳಿಗೆ ಹೆಸರುವಾಸಿಯಾಗಿದೆ. ಇತ್ತೀಚಿಗೆ ರಾಜ್ಯದ ಮುಖ್ಯಮಂತ್ರಿ ಹಾಗೂ ಉಸ್ತುವಾರಿ ಸಚಿವರು ಸೇರಿದಂತೆ ಹಲವಾರು ನಾಯಕರು ಒಗ್ಗೂಡಿ ಎತ್ತಿನಹೊಳೆ ಯೋಜನೆಯನ್ನು ಉದ್ಘಾಟನೆ ಮಾಡಿದ್ದರು.

ಎತ್ತಿನಹೊಳೆ ಯೋಜನೆಯ ಮೂಲಕ ಅರ್ಧ ರಾಜ್ಯಕ್ಕೆ ಕುಡಿಯುವ ನೀರು ಕೊಟ್ಟ ಹೆಗ್ಗಳಿಕೆ ಸಕಲೇಶಪುರ ತಾಲೂಕಿಗೆ ಇದೆ. ಆದರೆ, ತಾಲೂಕಿನ ಬ್ಯಾಕರವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಾನೆಕೆರೆ ಗ್ರಾಮದಲ್ಲಿ ವಾಸಿಸುವ ನಿವಾಸಿಗಳು ಮಾತ್ರ ನೀರಿಲ್ಲದೆ ಪರದಾಡುವಂತಹ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಸಕಲೇಶಪುರ ಪಟ್ಟಣದಿಂದ ಕೇವಲ ಐದಾರು ಕಿಲೋಮೀಟರ್ ದೂರದಲ್ಲಿ ಜಾನೆಕೆರೆ ಎಂಬ ಗ್ರಾಮವಿದೆ. ಈ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ವಾಸಿಸುತ್ತಿರುವ ಮೂಲ ನಿವಾಸಿಗಳು, ಒಕ್ಕಲಿಗ, ಶೆಟ್ಟಿ, ಲಿಂಗಾಯತ ಹಾಗೂ ದಲಿತ ಸಮುದಾಯದವರು ಸೇರಿದಂತೆ 25ರಿಂದ 30 ಕುಟುಂಬದವರು ವಾಸ ಮಾಡುತ್ತಿದ್ದಾರೆ. ಆದರೆ ಮೂಲಭೂತ ಸೌಕರ್ಯ ಮಾತ್ರ ಶೂನ್ಯವಾಗಿದೆ.

“ಕುಡಿಯುವ ನೀರು ಸೇರಿದಂತೆ, ಆನೇಕ ಸೌಲಭ್ಯದಿಂದ ಗ್ರಾಮಸ್ಥರು ವಂಚಿತರಾಗಿದ್ದಾರೆ. ಪ್ರತಿದಿನ ಕುಡಿಯುವ ನೀರಿಗಾಗಿ ಒಂದೆರಡು ಕಿಲೋಮೀಟರ್ ಅಲೆದಾಡಿ ಬಿಂದಿಗೆಗಳಿಗೆ ನೀರು ತುಂಬಿಸಿ ತಲೆಯ ಮೇಲೆ ಬಿಂದಿಗೆ ಹೊತ್ತು ಅಥವಾ ಬೈಕ್‌ಗಳ ಮೂಲಕ ನೀರು ಹೊತ್ತೊಯ್ಯುವ ಪರಿಸ್ಥಿತಿ ಎದುರಾಗಿದೆ” ಎಂದು ಗ್ರಾಮಸ್ಥ ಸಾಗರ್ ಈ ದಿನ.ಕಾಮ್ ಜತೆಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಸಕಲೇಶಪುರ ತಾಲೂಕಿನಿಂದ ಎತ್ತಿನಹೊಳೆ ಯೋಜನೆಯ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ನೂರಾರು ಕಿಲೋಮೀಟರ್‌ವರೆಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಇಲ್ಲಿನ ನಿವಾಸಿಗಳು ಕುಡಿಯುವ ನೀರಿಗೆ ಪರದಾಡುವಂತಹ ಪರಿಸ್ಥಿತಿ ಈ ಗ್ರಾಮದಲ್ಲಿ ನಿರ್ಮಾಣವಾಗಿರುವುದು ನಿಜಕ್ಕೂ ದುರದೃಷ್ಟವೇ ಎನ್ನಬಹುದು.
ಇದನ್ನೂ ಓದಿದ್ದೀರಾ?ಹಾಸನ l ಪ್ರೇಯಸಿ ಕೊಲೆಗೆ ಯತ್ನ; ಆರೋಪಿ ಮೋಹಿತ್ ಬಂಧನ
“ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಅಷ್ಟೇ ಅಲ್ಲದೆ, ವಿದ್ಯುತ್ ಕಂಬದಲ್ಲಿ ದೀಪ, ರಸ್ತೆ ಸಂಪರ್ಕವಿಲ್ಲದೆ ಸ್ಥಳೀಯರು ಮೂಲಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಆದರೆ, ಇಲ್ಲಿ ದಲಿತ ಸಮುದಾಯಕ್ಕೆ ಸೇರಿದ ನಾಲ್ಕು ಕುಟುಂಬಗಳು ಮಾತ್ರ ಹೆಚ್ಚಿನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಲವಾರು ಸಮಸ್ಯೆಗಳಿಂದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಬೇಸರ ತಂದಿದೆ. ಈ ವಿಚಾರ ಕುರಿತು ಸಂಬಂಧಪಟ್ಟ ಕ್ಷೇತ್ರದ ಶಾಸಕರು ಹಾಗೂ ಅಧಿಕಾರಿಗಳು ಆದಷ್ಟು ಬೇಗ ಈ ಭಾಗದ ಸಮಸ್ಯೆಯನ್ನು ಬಗೆಹರಿಸಬೇಕು” ಎಂದು ಸ್ಥಳೀಯರು ಒತ್ತಾಯಿಸಿದರು.