ಸಮಾನತೆಯ ಕನಸು ಕಂಡ ಜೋತಿಬಾ ಫುಲೆ

Date:

Advertisements
ಇಂದು ಈ ದೇಶದ ನಿಜವಾದ 'ಮಹಾತ್ಮ' ಎಂದು ಬಾಬಾಸಾಹೇಬರಿಂದ ಕರೆಸಿಕೊಂಡ ಜೋತಿಬಾ ಫುಲೆಯವರು ನಿಧನರಾದ ದಿನ. ಬಾಬಾಸಾಹೇಬರು ತಮ್ಮ ಬದುಕಿನ ಮೂರು ಜನ ಮುಖ್ಯ ಗುರುಗಳಲ್ಲಿ ಜೋತಿಬಾ ಫುಲೆಯವರನ್ನು ಒಬ್ಬರೆಂದು ಒಪ್ಪಿಕೊಂಡಿದ್ದರು.

ಜೋತಿಬಾ ಫುಲೆ ಭಾರತಕ್ಕೆ ವಸಾಹತುಶಾಹಿ ಪರಿಚಯಿಸಿದ ಆಧುನಿಕತೆಯನ್ನು ತಳಸಮುದಾಯಗಳ ವಿಮೋಚನೆಯ ಮಾರ್ಗವನ್ನಾಗಿ ರೂಪಿಸಲು ಪ್ರಯತ್ನಿಸಿದ ಕ್ರಾಂತಿಕಾರಿ ಚಿಂತಕ, ಹೋರಾಟಗಾರ. ವಸಾಹತುಶಾಹಿಯ ಸಂದರ್ಭದಲ್ಲಿ ಸಮಾಜ ಸುಧಾರಣೆ, ರಾಷ್ಟ್ರೀಯವಾದಿ ಚಳವಳಿ, ಹಿಂದೂ ರಾಷ್ಟ್ರೀಯವಾದ ಮುಂತಾದವುಗಳ ಹೆಸರಿನಲ್ಲಿ ಬ್ರಾಹ್ಮಣರು ದೇಶವನ್ನು ಮುನ್ನಡೆಸುವಂತೆ ತೋರಿಸಿಕೊಳ್ಳುತ್ತಾ ಹಿಂದೂ ಧರ್ಮ ಪ್ರತಿಪಾದಿಸುವ ವರ್ಣಾಶ್ರಮ ಧರ್ಮವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಇವರೆಲ್ಲರ ಚಿಂತನೆ ಈ ದೇಶದ ತಳಸಮುದಾಯಗಳಿಗೆ ವಿಮೋಚನೆ ನೀಡುವುದಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ಪ್ರತಿಪಾದಿಸಿದರು‌.

ಹಿಂದೂ ಧರ್ಮ ಎನ್ನುವುದು ವೇದ, ಶಾಸ್ತ್ರ, ಪುರಾಣಗಳನ್ನು ಆಧಾರವಾಗಿಸಿಕೊಂಡು ದೇವರು, ಧರ್ಮಗಳ ಹೆಸರಿನಲ್ಲಿ ಬಹುಸಂಖ್ಯಾತರನ್ನು ಶೋಷಿಸಲು ಸೃಷ್ಟಿಯಾಗಿದೆ ಎನ್ನುವುದನ್ನು ಗುರುತಿಸಿದರು. ಬ್ರಾಹ್ಮಣರು ಪ್ರತಿಪಾದಿಸಿದ ಜನಾಂಗೀಯ ಶ್ರೇಷ್ಠತೆಯ ಆರ್ಯ-ದ್ರಾವಿಡ ಚರ್ಚೆಯನ್ನು ತಳಸಮುದಾಯದ ಕಣ್ಣಿನಿಂದ ವಿಶ್ಲೇಷಿಸಿ ಈ ಆರ್ಯರ ಶ್ರೇಷ್ಠತೆಯ ಮಿಥ್ ಕೇವಲ ಬಹುಸಂಖ್ಯಾತರನ್ನು ಶೋಷಿಸುವುದಕ್ಕಾಗಿಯೇ ಸೃಷ್ಟಿಸಿದ ಕುತಂತ್ರ ಎನ್ನುವುದನ್ನು ಗುರುತಿಸಿದರು.

ಒಂದು ಕಡೆ ಜಾತಿ ಸುಧಾರಣೆಯ ಹೆಸರಿನಲ್ಲಿ ಬ್ರಾಹ್ಮಣರ ಶ್ರೇಷ್ಠತೆಯ ಪ್ರತಿಷ್ಠಾಪನೆ ನಡೆಯುತ್ತಿದ್ದಾಗ ಬ್ರಾಹ್ಮಣ್ಯ ಮತ್ತು ಬ್ರಾಹ್ಮಣ್ಯದ ಉತ್ಪನ್ನವಾಗಿರುವ ಗಂಡಾಳ್ವಿಕೆ ಈ ದೇಶದ ತಳಸಮುದಾಯಗಳು ಮತ್ತು ಮಹಿಳೆಯರನ್ನು ಶೋಷಿಸುವುದಕ್ಕಾಗಿಯೇ ಸೃಷ್ಟಿಸಿರುವ ತಂತ್ರಗಳು ಎನ್ನುವುದನ್ನು ಗುರುತಿಸಿ ಅವುಗಳನ್ನು ನಿರ್ಮೂಲನೆ ಮಾಡುವುದಕ್ಕೆ ಹೋರಾಟ ರೂಪಿಸಿದರು. ಇದರ ಭಾಗವಾಗಿಯೇ ದಲಿತರು ಮತ್ತು ಮಹಿಳೆಯರ ಶಿಕ್ಷಣಕ್ಕೆ ಒತ್ತು ನೀಡಿದರು.

Advertisements

ಬಾಯಿಯಲ್ಲಿ ಕ್ರಾಂತಿಯ ಮಾತನಾಡುತ್ತ ಆಚರಣೆಯಲ್ಲಿ ಸಂಪ್ರದಾಯವಾದಿಗಳಾಗಿರುತ್ತಿದ್ದ ಬ್ರಾಹ್ಮಣ ಸುಧಾರಣಾವಾದಿಗಳಿಗಿಂತ ಭಿನ್ನವಾಗಿ ತಮ್ಮ ಪತ್ನಿ ಸಾವಿತ್ರಿಬಾಯಿ ಫುಲೆಯವರಿಗೆ ಅಕ್ಷರ ಕಲಿಸಿ ಶಿಕ್ಷಕಿಯಾಗಿ ರೂಪುಗೊಳ್ಳುವದಕ್ಕೆ ಕಾರಣರಾದರು.

ಇದನ್ನು ಓದಿದ್ದೀರಾ?: ಧರ್ಮಗಳಿಗೆ ಕೊಟ್ಟಿರುವ ಹಕ್ಕು, ಅವಕಾಶಗಳನ್ನು ಚಂದ್ರಶೇಖರನಾಥ ಸ್ವಾಮೀಜಿ ಓದಿಕೊಂಡಿಲ್ಲ: ಸಚಿವ ಪರಮೇಶ್ವರ್‌ ಕಿಡಿ

ಹಿಂದೂ ಧರ್ಮ ಒಂದು ಕಡೆ ಸಾಂಸ್ಕೃತಿಕವಾಗಿ ಮತ್ತೊಂದು ಕಡೆ ಆರ್ಥಿಕವಾಗಿ ಹೇಗೆ ತಳಸಮುದಾಯಗಳನ್ನು ಶೋಷಣೆ ಮಾಡುತ್ತಿದೆ ಎನ್ನುವುದನ್ನು ತಮ್ಮ ‘ಗುಲಾಮಗಿರಿ’ ಕೃತಿಯಲ್ಲಿ ವಿಶ್ಲೇಷಣೆ ಮಾಡಿದರು. ಸಾಂಸ್ಕೃತಿಕವಾಗಿ ಶೋಷಣೆ ಮಾಡುವ ಬ್ರಾಹ್ಮಣರು ಮತ್ತು ಆರ್ಥಿಕವಾಗಿ ಶೋಷಣೆ ಮಾಡುವ ಬನಿಯಾಗಳನ್ನು ತಳಸಮುದಾಯಗಳನ್ನು ಶೋಷಣೆ ಮಾಡುವ ‘ಭಟ್‌ಜಿ-ಶೇಟ್‌ಜಿ’ಗಳೆಂದು ಕರೆದು ಹಿಂದೂ ಧರ್ಮದ ಈ ಶೋಷಕ ಗುಣವನ್ನು ವಿಶ್ಲೇಷಣೆ ಮಾಡಿದ ಮೊದಲ ಆಧುನಿಕ ಜಾತಿವಿನಾಶದ ಚಿಂತಕ ಪುಲೆ ಎಂದರೆ ಅತಿಶಯೋಕ್ತಿಯಾಗಲಾರದು.

ತಳಸಮುದಾಯಗಳು ತಮ್ಮ ಮೇಲೆ ಶತಮಾನಗಳಿಂದ ಶೋಷಣೆ ಮಾಡುತ್ತಿರುವ ಪ್ರಬಲ ಬ್ರಾಹ್ಮಣ-ಬನಿಯಾ ಸಮುದಾಯಗಳ ವಿರುದ್ಧ ಹೋರಾಟ ಮಾಡಲು ಒಂದಾಗಬೇಕಾದ ಅನಿವಾರ್ಯತೆಯನ್ನು ತೋರಿಸಿದರು. ಶೋಷಿತ ಹಿಂದುಳಿದ ಜಾತಿಗಳನ್ನು ಶೂದ್ರರು ಮತ್ತು ದಲಿತರನ್ನು ಅತಿಶೂದ್ರರು ಎಂದು ಕರೆದು ಬ್ರಾಹ್ಮಣ್ಯ ಮತ್ತು ಪುರುಷಾಧಿಪತ್ಯದ ವಿರುದ್ಧ ಈ ಎರಡು ಬಹುಸಂಖ್ಯಾತ ಬಹುಜನ ಸಮುದಾಯಗಳನ್ನು ಒಂದುಮಾಡಲು ಪ್ರಯತ್ನಿಸಿದರು.

ಶೋಷಣೆಗೆ ಒಳಗಾಗುತ್ತಿರುವ ಜಾತಿಗಳು ಒಂದಾಗದಂತೆ ಸೃಷ್ಟಿಯಾಗಿರುವ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟದಲ್ಲಿ ಫುಲೆಯವರ ಚಿಂತನೆ ಮತ್ತು ಹೋರಾಟ ಹೆಚ್ಚು ಆಧುನಿಕವೂ, ವೈಜ್ಞಾನಿಕವೂ ಆಗಿದೆ. ಸ್ವಾತಂತ್ರ್ಯಾನಂತರ ಬಾಬಾಸಾಹೇಬರ ಚಿಂತನೆಯ ಜೊತೆಗೆ ಫುಲೆಯವರ ಚಿಂತನೆಯನ್ನು ಬೆಸೆಯಬೇಕಾಗಿತ್ತು. ಆದರೆ ಗಾಂಧಿ-ಲೋಹಿಯಾರಂತಹ ಸುಧಾರಣಾವಾದಿಗಳ ಚಿಂತನೆಗೆ ಕೊಟ್ಟ ಪ್ರಾಮುಖ್ಯತೆಯನ್ನು ದಲಿತ ಮತ್ತು ಹಿಂದುಳಿದ ಸಮುದಾಯಗಳು ಫುಲೆಯವರ ಚಿಂತನೆಗೆ ಕೊಡಲಿಲ್ಲ. ಜಾತಿವಿನಾಶವೇ ತಳಸಮುದಾಯಗಳ ಬಿಡುಗಡೆಯ ದಾರಿ ಎಂದು ಪ್ರತಿಪಾದಿಸಿದ ಫುಲೆಯವರನ್ನು ಅವರ ಕ್ರಾಂತಿಕಾರಿ ಚಿಂತನೆಯ ಕಾರಣಕ್ಕಾಗಿಯೇ ಬ್ರಾಹ್ಮಣ್ಯದ ಹಿಡಿತದಲ್ಲಿರುವ ಅಕಡೆಮಿಕ್ ವಲಯ ದೂರವಿಟ್ಟಿತು.
ವಿಸ್ಮೃತಿಗೆ ತಳ್ಳಿತು.

ಫುಲೆಯವರಂತಹ ಹಿಂದುಳಿದ ಸಮುದಾಯದಿಂದ ಬಂದ ಚಿಂತಕರನ್ನು ಪ್ರಸ್ತುತಗೊಳಿಸುವಲ್ಲಿ ಸೋತಿರುವುದರಿಂದಲೇ ಹಿಂದುಳಿದ ಸಮುದಾಯಗಳು ಜಾತಿ ವ್ಯವಸ್ಥೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಾಗದೆ ಹಿಂದುತ್ವಕ್ಕೆ ಬಲಿಯಾಗಿವೆ. ತಮ್ಮ ಮೇಲಾಗುತ್ತಿರುವ ಶೋಷಣೆಯನ್ನು ಮರೆತು ತಮಗೆ ಸಿಕ್ಕಿರುವ ಸಾಮಾಜಿಕವಾಗಿ ತಮಗಿಂತ‌ ಕೆಳಗಿರುವ ಸಮುದಾಯಗಳನ್ನು ಶೋಷಿಸುವ ಅವಕಾಶವನ್ನೆ ದೊಡ್ಡದಾಗಿ ಸಂಭ್ರಮಿಸುತ್ತಿವೆ.

ದಲಿತ ಮತ್ತು ಹಿಂದುಳಿದ ಸಮುದಾಯಗಳ ಜೊತೆಯಾಗಿ ಸೇರಿ ರಾಜಕಾರಣ ಮಾಡಬೇಕಾದ, ಜಾತಿವಿನಾಶ ಹೋರಾಟ ಕಟ್ಟಬೇಕಾದ ಅಗತ್ಯ ಇವತ್ತಿಗೆ ಹೆಚ್ಚು ಅನಿವಾರ್ಯವಾಗಿದೆ. ಅದಕ್ಕಾಗಿ ಜೋತಿಬಾ ಫುಲೆಯವರನ್ನು ಈ ಕಾಲದ ಕೈದೀವಿಗೆಯನ್ನಾಗಿಸಿಕೊಳ್ಳಬೇಕಾಗಿದೆ.

ಸಮಾನತೆಯ ಕನಸನ್ನು ಕಂಡು ಆ ಕನಸಿಗಾಗಿ ದುಡಿದ ಮಹಾತ್ಮ ಜೋತಿಬಾ ಫುಲೆಯವರಿಗೆ ನಮನಗಳು.

ಜೈ ಫುಲೆ, ಜೈ ಭೀಮ್.

?s=150&d=mp&r=g
ವಿ ಎಲ್ ನರಸಿಂಹಮೂರ್ತಿ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X