ವಕ್ಫ್ ವಿಚಾರವನ್ನು ಭಾರತೀಯ ಜನತಾ ಪಕ್ಷ ನಿಭಾಯಿಸಿದ ರೀತಿಯನ್ನು ಗಮನಿಸುವುದಾದರೂ, ಬಿಜೆಪಿಗೆ ವೈಚಾರಿಕ ಸ್ಪಷ್ಟತೆ ಇಲ್ಲ, ನಾಯಕರಲ್ಲಿ ನೈತಿಕತೆ ಇಲ್ಲ ಎನ್ನುವುದು ಎದ್ದು ಕಾಣುತ್ತದೆ. ಪಕ್ಷಕ್ಕೊಂದು ರೀತಿಯೂ ಇಲ್ಲ, ನೀತಿಯೂ ಇಲ್ಲ ಎಂದು ಜನ ಆಡಿಕೊಳ್ಳುವಂತಾಗಿದೆ.
ಅತ್ತ, ಕರ್ನಾಟಕದ 869 ಪ್ರಕರಣಗಳು ಸೇರಿದಂತೆ ದೇಶದ 58,929 ವಕ್ಫ್ ಆಸ್ತಿಗಳು ಒತ್ತುವರಿಯಾಗಿವೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ. ಇತ್ತ, ಕರ್ನಾಟಕ ವಕ್ಫ್ ಆಸ್ತಿಗಳ ಒತ್ತುವರಿ ತೆರವು ಮತ್ತು ಮರುವಶಕ್ಕೆ ಸಂಬಂಧಿಸಿದಂತೆ 2008ರಿಂದ 2024ರವರೆಗೆ ರಾಜ್ಯದಾದ್ಯಂತ ಒಟ್ಟು 3,519 ರೈತರು ಮತ್ತು ಭೂಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಅದರಲ್ಲಿ ಅತಿಹೆಚ್ಚು 2,001 ನೋಟಿಸ್‌ಗಳನ್ನು ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲೇ ನೀಡಲಾಗಿದೆ ಎಂದು ದಾಖಲೆಗಳು ಸತ್ಯ ಸಾರುತ್ತಿವೆ.
ಭಾರತೀಯ ಜನತಾ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರವೇ ಮುಂದೆ ನಿಂತು ವಕ್ಫ್ ವಿಚಾರವಾಗಿ ಲೋಕಸಭೆಗೆ ಒತ್ತುವರಿಯಾಗಿರುವುದು ನಿಜ ಎಂಬ ಮಾಹಿತಿ ನೀಡಿದೆ. ಸಾಲದು ಎಂದು ವಕ್ಫ್ ತಿದ್ದುಪಡಿ ಮಸೂದೆ ಪರಿಶೀಲನೆಗಾಗಿ ಜಂಟಿ ಸಂಸದೀಯ ಸಮಿತಿ ರಚಿಸಿದೆ. ಕರ್ನಾಟಕದಲ್ಲಿ ಅತಿಹೆಚ್ಚು ನೋಟಿಸ್ ನೀಡಿದ್ದು ಬಿಜೆಪಿ ಆಡಳಿತವಿದ್ದ ಅವಧಿಯಲ್ಲಿಯೇ ಜರುಗಿದೆ.
ಇಷ್ಟೆಲ್ಲ ದೇಶದ ಜನರ ಕಣ್ಮುಂದೆ ನಡೆಯುತ್ತಿದ್ದರೂ, ಬಿಜೆಪಿ ನಾಯಕರು ಬೀದಿಗಿಳಿದು ಹೋರಾಟ ಮಾಡುತ್ತಾರೆ ಎಂದರೆ, ಇವರು ಮನುಷ್ಯರಾ ಎಂದು ಪ್ರಶ್ನಿಸಬೇಕಾಗುತ್ತದೆ. ವಕ್ಫ್ ವಿಚಾರ ಸಾಮಾನ್ಯನಿಗೂ ಅರ್ಥವಾಗುವಂತಿದ್ದರೂ, ಮುಸ್ಲಿಮರ ಕಾರಣಕ್ಕಾಗಿ ಜನರ ನಡುವೆ ವಿಷ ಬಿತ್ತಿ ದ್ವೇಷ ಹರಡುವ ಬಿಜೆಪಿಗರನ್ನು ದುರಾತ್ಮರು ಎಂದರೆ ತಪ್ಪಾಗುತ್ತದೆಯೇ?
ಹಾವೇರಿ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಬುಧವಾರ ಕೇಳಿರುವ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಕೇಂದ್ರ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಕಿರಣ್ ರಿಜಿಜು, ‘ಒತ್ತುವರಿ ಬಗ್ಗೆ ರಾಜ್ಯ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಣಾಧಿಕಾರಿಯವರಿಗೆ ಕ್ರಮ ಕೈಗೊಳ್ಳುವ ಅಧಿಕಾರ ಇದೆ. ಒತ್ತುವರಿ ಬಗ್ಗೆ ದೂರುಗಳು ಬಂದರೆ ಕೇಂದ್ರ ಸರ್ಕಾರವು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿತ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡುತ್ತದೆ’ ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಕೇವಲ ಕಾಗದದ ಹುಲಿಯಾಯಿತೇ ಪೂಜಾಸ್ಥಳಗಳ ಕಾಯಿದೆ?
ಲೋಕಸಭೆಯಲ್ಲಿ ತಮ್ಮದೇ ಪಕ್ಷದ ಕೇಂದ್ರ ಸಚಿವರಿಂದ ಪಡೆದ ಉತ್ತರಕ್ಕೆ ಉಸಿರೆತ್ತದ ಬೊಮ್ಮಾಯಿಯವರು, ತಾವೇ ಮುಖ್ಯಮಂತ್ರಿಗಳಾಗಿರುವಾಗ ಸಾವಿರಾರು ನೋಟಿಸ್ ಕೊಟ್ಟಿರುವ ದಾಖಲೆಗಳಿದ್ದರೂ, ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರುತ್ತಾರೆ. ಇದು ತಮ್ಮ ವ್ಯಕ್ತಿತ್ವಕ್ಕೆ ತಾವೇ ಮಸಿ ಬಳಿದುಕೊಂಡಂತಲ್ಲವೇ?
ಇನ್ನು ಪಕ್ಷದ ಹಿರಿಯ ನಾಯಕ ಬಿ.ಎಸ್ ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರರ ವಿರುದ್ಧವಿರುವ ಬಸನಗೌಡ ಪಾಟೀಲ ಯತ್ನಾಳ್ ನೇತೃತ್ವದ ಬಿಜೆಪಿಯ ಭಿನ್ನಮತೀಯರ ಗುಂಪು, ಬೀದರ್‌ನಿಂದ ವಕ್ಫ್ ಹೋರಾಟ ಹಮ್ಮಿಕೊಂಡಿದೆ. ‘ವಿಜಯೇಂದ್ರ ವಕ್ಫ್ ವಿರುದ್ಧ ಎಲ್ಲಿ ಹೋರಾಟ ಮಾಡಿದ್ದಾನೆ? ಯಾವ ಹಳ್ಳಿಗೆ ಹೋಗಿ ರೈತರ ಮನವಿ ಸ್ವೀಕರಿಸಿದ್ದಾನೆ? ರಾತ್ರಿಯಾದ್ರೆ ಸಾಕು ಡಿಕೆ-ಸಿದ್ದರಾಮಯ್ಯ ಮನೆಯಲ್ಲಿ ಇರ್ತಾನೆ’ ಎಂದು ಹೊಂದಾಣಿಕೆ ರಾಜಕಾರಣವನ್ನು ಬಿಡಿಸಿಟ್ಟಿದ್ದಾರೆ. ಮುಂದುವರೆದು, ‘ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಬೇಸತ್ತಿರುವ ಜನ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲಿದ್ದು, ನಮ್ಮ ತಂಡದವರೇ ಮುಖ್ಯಮಂತ್ರಿಯಾಗಲಿದ್ದಾರೆ’ ಎಂದು ಭ್ರಮೆಯನ್ನು ಬಹಿರಂಗವಾಗಿಯೇ ಬಿಚ್ಚಿಟ್ಟಿದ್ದಾರೆ.
ಮೂರು ಉಪಚುನಾವಣೆಗಳಲ್ಲಿ ಹೀನಾಯವಾಗಿ ಸೋತಿರುವ ಸಂದರ್ಭದಲ್ಲಿಯೇ, ಸಾರ್ವಜನಿಕವಾಗಿ ಈ ರೀತಿಯ ಮಾತುಗಳನ್ನಾಡುತ್ತಾರೆಂದರೆ, ರಾಜಕಾರಣಿ ಎಂದಾಕ್ಷಣ ಜನ ಏಕೆ ಗೇಲಿ ಮಾಡಿಕೊಂಡು ನಗುತ್ತಾರೆ ಎಂಬುದಕ್ಕೆ ಉತ್ತರ ಸಿಗುತ್ತದೆ.
ಯತ್ನಾಳ್ ಎಂಬ ‘ಉಗ್ರ’ ಹೋರಾಟಗಾರನ ಮಾತಿಗೆ ವಿಚಲಿತರಾಗಿರುವ ಬಿಜೆಪಿಯ ಹಿರಿಯ ನಾಯಕ ಯಡಿಯೂರಪ್ಪನವರು, ‘ಬಿಜೆಪಿಯಲ್ಲಿ ಒಡಕು ಇರುವುದು ನಿಜ. ಕೆಲವರು ಒಡಕು ಸೃಷ್ಟಿಸುತ್ತಿರುವ ವಿಚಾರ ಕೇಂದ್ರದ ನಾಯಕರ ಗಮನಕ್ಕೆ ಬಂದಿದೆ. ಯತ್ನಾಳ ಅವರು ಸ್ವಪ್ರತಿಷ್ಠೆಯಿಂದ ಹೋರಾಟ ಮಾಡುತ್ತಿರುವುದು ಅವರಿಗೆ ಶೋಭೆ ತರುವುದಿಲ್ಲ. ಉಪಚುನಾವಣೆಗಳಲ್ಲಿ ಈ ರೀತಿ ಹಿನ್ನಡೆ ಆಗಬಹುದು ಎಂಬುದನ್ನು ಊಹಿಸಿರಲಿಲ್ಲ. ಈ ಸೋಲಿಗೆ ವಿಜಯೇಂದ್ರ ಕಾರಣ ಅನ್ನೋ ಪ್ರಶ್ನೆ ಬರುವುದಿಲ್ಲ’ ಎಂದು ಮಗನ ನಾಯಕತ್ವವನ್ನು ಸಮರ್ಥಿಸಿಕೊಳ್ಳಲು ಹೆಣಗಾಡಿದ್ದಾರೆ.
ಅಂದರೆ, ಉಪಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದ್ದು ಜನರಲ್ಲ, ಬಿಜೆಪಿ ನಾಯಕರು. ಪಕ್ಷವನ್ನು ಸೋಲಿಸಿ, ರಾಜ್ಯಾಧ್ಯಕ್ಷ ನಾಲಾಯಕ್ ಎನ್ನುವುದನ್ನು ದೆಹಲಿ ನಾಯಕರಿಗೆ ತಿಳಿಸುವ ಇರಾದೆ ಇದರ ಹಿಂದಿದೆ. ಈ ಷಡ್ಯಂತ್ರದ ಹಿಂದೆ ಯಡಿಯೂರಪ್ಪನವರನ್ನು ಕಂಡರಾಗದ ಆರ್‍ಎಸ್ಎಸ್ ನಾಯಕ ಬಿ.ಎಲ್. ಸಂತೋಷರಿದ್ದಾರೆ. ಅವರ ಕುಮ್ಮಕ್ಕಿನಿಂದ ಬಿಜೆಪಿಯಲ್ಲಿ ನೂರೆಂಟು ಗುಂಪುಗಳಾಗಿವೆ. ಯಾವ ಗುಂಪೂ ಯಾರ ಮಾತನ್ನೂ ಕೇಳದಾಗಿದೆ. ಪಕ್ಷದಲ್ಲಿ ಶಿಸ್ತು ಎನ್ನುವುದು ಅಟ್ಟ ಸೇರಿ ವರ್ಷವೇ ಆಗಿದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಒಕ್ಕಲಿಗರಿಗೆ ಪರ್ಯಾಯ ನಾಯಕತ್ವದ ಅಗತ್ಯವಿದೆಯೇ?
ಒಟ್ಟಿನಲ್ಲಿ ರಾಜ್ಯ ಬಿಜೆಪಿಯಲ್ಲಿ ಅರಾಜಕತೆ ಮನೆ ಮಾಡಿದೆ. ಮೋದಿಯಂತಹ ವರ್ಚಸ್ವಿ ನಾಯಕನಿದ್ದರೂ, ಆ ವರ್ಚಸ್ಸನ್ನು ಬಳಸಿಕೊಂಡು ಚುನಾವಣೆಯನ್ನು ಗೆಲ್ಲಲಾಗದ ಅಸಮರ್ಥರು, ಸ್ವಾರ್ಥಿಗಳು, ಭ್ರಷ್ಟರು, ಹೊಂದಾಣಿಕೆವೀರರು ಪಕ್ಷದಲ್ಲಿ ತುಂಬಿ ತುಳುಕುತ್ತಿದ್ದಾರೆ. ಗುಂಪುಗಾರಿಕೆ, ಭಿನ್ನಮತ, ಕಾಲೆಳೆದಾಟ ಮಿತಿ ಮೀರಿದೆ.
ವಕ್ಫ್ ವಿಚಾರವನ್ನು ಬಿಜೆಪಿ ನಿಭಾಯಿಸಿದ ರೀತಿಯನ್ನು ಗಮನಿಸುವುದಾದರೂ, ಬಿಜೆಪಿಗೆ ವೈಚಾರಿಕ ಸ್ಪಷ್ಟತೆ ಇಲ್ಲ, ನಾಯಕರಲ್ಲಿ ನೈತಿಕತೆ ಇಲ್ಲ ಎನ್ನುವುದು ಎದ್ದು ಕಾಣುತ್ತದೆ. ಪಕ್ಷಕ್ಕೊಂದು ರೀತಿಯೂ ಇಲ್ಲ, ನೀತಿಯೂ ಇಲ್ಲ ಎಂದು ಜನ ಆಡಿಕೊಳ್ಳುವಂತಾಗಿದೆ. ದೇವರು-ಧರ್ಮದ ವಿಚಾರದಲ್ಲಿ ಜನರನ್ನು ನಿರಂತರವಾಗಿ ವಂಚಿಸುವುದು, ತಪ್ಪು ದಾರಿಗೆಳೆಯುವುದು, ಸಮಸ್ಯೆಯ ಸುಳಿಗೆ ಸಿಲುಕಿಸುವುದು- ಪಕ್ಷಕ್ಕೂ ತಿರುಗುಬಾಣವಾಗುತ್ತದೆ. ಅಂತಹ ಸ್ಥಿತಿ ರಾಜ್ಯ ಬಿಜೆಪಿಗೂ ಒದಗಿ ಬಂದಿದೆ.
