ಬಸವಣ್ಣ ಮತ್ತು ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕ್ಷಮೆ ಕೇಳಬೇಕು ಎಂದು ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವದಳ ಹಾಗೂ ಲಿಂಗಾಯತ ಸಮನ್ವಯ ಸಮಿತಿ ಒತ್ತಾಯಿಸಿವೆ.
ಬೀದರ್‌ನಲ್ಲಿ ವಕ್ಫ್ ಆಸ್ತಿ ವಿವಾದದ ಸಂಬಂಧ ನಡೆದ ಪ್ರತಿಭಟನೆಯಲ್ಲಿ ಲಿಂಗಾಯತ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ್ದ ಯತ್ನಾಳ್, ‘ನೀವೆಲ್ಲರೂ ಮುಸ್ಲಿಮರಾಗಬೇಕಾಗುತ್ತದೆ’ ಎಂದು ಹೇಳಿ, ಅವಹೇಳನಕಾರಿ ಸನ್ಹೆ ಮಾಡಿದ್ದರು.
ಯತ್ನಾಳ್ ಹೇಳಿಕೆಯನ್ನು ಖಂಡಿಸಿ ಚೆನ್ನಬಸವಾನಂದ ಸ್ವಾಮೀಜಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದರೆ. ”ಯತ್ನಾಳ್ ಅವರಿಗೆ ವಚನಗಳ ಅರಿವಿಲ್ಲ. ಅವರು ಯಾವಾಗಲೂ ಹಿಂದು, ಹಿಂದುತ್ವ ಎಂದು ತಿರುಗಾಡುವ ವೈದಿಕರ ಪಕ್ಷದಲ್ಲಿದ್ದಾರೆ. ಅವರು ವಚನ ಸಾಹಿತ್ಯವನ್ನು ಅಧ್ಯಯನ ಮಾಡಿಲ್ಲ. ಲಿಂಗಾಯತ ಧರ್ಮದ ಮಾಹಿತಿಯೂ ಇಲ್ಲ. ಅವರು ಬಸವಣ್ಣನವರ ಬಗ್ಗೆ ಅವಮಾನಕಾರಿಯಾಗಿ ಮಾತನಾಡಿರುವುದು ಅಕ್ಷಮ್ಯ ಅಪರಾಧ – ಬಸವ ಭಕ್ತರಲ್ಲಿ ಕೂಡಲೇ ಕ್ಷಮೆ ಕೇಳಬೇಕು” ಒತ್ತಾಯಿಸಿದ್ದಾರೆ.
ಇನ್ನು, ಲಿಂಗಾಯತ ಧರ್ಮ ಅಧ್ಯಯನ ಕೇಂದ್ರದ ಸಂಸ್ಥಾಪಕ ಶರಣ ಶ್ರೀಶೈಲ ಜಿ. ಮಸೂತೆ ಕೂಡ ಯತ್ನಾಳ್ ಹೇಳಿಕೆಯನ್ನು ಖಂಡಿಸಿದ್ದಾರೆ. ”ಜವಾಬ್ದಾರಿಯುತ ಚುನಾಯಿತ ಶಾಸಕ ಎಂಬುದನ್ನು ಮರೆತು ಯತ್ನಾಳ್ ಅವರು ಬಸವಣ್ಣನವರ ಬಗ್ಗೆ ಅಪಮಾನಕರ ಮಾತನ್ನಾಡಿದ್ದಾರೆ. ಯತ್ನಾಳ್ ಅವರ ಹೇಳಿಕೆ ತಪ್ಪು. ಅವರು ಕ್ಷಮೆಯಾಚಿಸಬೇಕು” ಎಂದು ಆಗ್ರಹಿಸಿದ್ದಾರೆ.
”ತಾವು ಹುಟ್ಟಿದ ಧರ್ಮವನ್ನೇ ಮರೆತು, ವಿವೇಕ, ವಿವೇಚನೆ ಇಲ್ಲದೆ ಯಾರನ್ನೋ ಮೆಚ್ಚಿಸಲು ಅನಾಗರಿಕವಾಗಿ ಮಾತನಾಡುತ್ತಿದ್ದಾರೆ. ಅವರೊಬ್ಬ ಮಾನಸಿಕ ಅಸ್ವಸ್ಥ ರಾಜಕಾರಣಿ” ಎಂದು ಕಿಡಿಕಾರಿದ್ದಾರೆ.