ಶವಸಂಸ್ಕಾರ ಮಾಡಲು ಸ್ಮಶಾನ ಜಾಗ ನೀಡುವಂತೆ ಆಗ್ರಹಿಸಿ ದೇವರಹೊಸಹಳ್ಳಿ ಗ್ರಾಮದ ದಲಿತ ಮುಖಂಡರು ಗುರುವಾರ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕು ಕಚೇರಿ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ.
ತಾಲೂಕಿನ ದೇವರಹೊಸಹಳ್ಳಿ ಗ್ರಾಮದ ರಾಜೇಶ ಎಂಬ ಯುವಕ ಬುಧವಾರ ಬೈಕ್ ಅಪಘಾತದಲ್ಲಿ ಸಾವಿಗೀಡಾಗಿದ್ದ. ಶವ ಸಂಸ್ಕಾರ ಮಾಡಲು ಕುಟುಂಬದವರು ಶವವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗುವಾಗ ಸ್ಥಳೀಯರು ನಮ್ಮ ಜಮೀನಿನ ಮೇಲೆ ಹೋಗಬೇಡಿ ಎಂದು ಅಡ್ಡಿಪಡಿಸಿದ್ದರು.
ಸ್ಮಶಾನಕ್ಕೆ ಹೋಗಲು ಜಾಗವಿಲ್ಲದ ಕಾರಣ ಕುಪಿತಗೊಂಡ ಗ್ರಾಮಸ್ಥರು ಶವ ಮತ್ತು ಸೌದೆಯೊಂದಿಗೆ ಚನ್ನಪಟ್ಟಣಕ್ಕೆ ತೆರಳಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದ್ದು, “ಜಿಲ್ಲಾಧಿಕಾರಿ ಸ್ಥಳಕ್ಕೆ ಬರಬೇಕು. ಗ್ರಾಮದ ದಲಿತರಿಗೆ ಸ್ಮಶಾನ ಭೂಮಿ ಕಲ್ಪಿಸಬೇಕು. ಸ್ಮಶಾನಕ್ಕೆ ಹೋಗಲು ಜಾಗ ಕೊಡಿಸದಿದ್ದರೆ, ಕಚೇರಿ ಆವರಣದಲ್ಲೇ ಶವಸಂಸ್ಕಾರ ಮಾಡಲಾಗುವುದು” ಎಂದು ಎಚ್ಚರಿಸಿದರು.
ದೇವರಹೊಸಹಳ್ಳಿ ನಿವಾಸಿ ಹನುಮಂತ ಎಂಬುವವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಮೇಲ್ಜಾತಿ ವ್ಯಕ್ತಿಯೊಬ್ಬ ಗೋಮಾಳ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದು, ದಲಿತರು ಅಲ್ಲಿ ಓಡಾಡಲು ಬಿಡುತ್ತಿರಲಿಲ್ಲ. ಈ ಕುರಿತು ಮೂರ್ನಾಲ್ಕು ಬಾರಿ ತಹಶೀಲ್ದಾರರು ಬಂದು ಜಾಗ ಪರಿಶೀಲನೆ ಮಾಡಿ, ಅವರ ಬಳಿ ಜಾಗದ ದಾಖಲೆಗಳನ್ನು ಕೇಳಿದ್ದರು. ಆಗ ಯಾವುದೇ ದಾಖಲೆಗಳಿಲ್ಲವೆಂದಿದ್ದ ಆತ ಇದೀಗ ಅಕ್ರಮವಾಗಿ ಎಲ್ಲ ದಾಖಲೆಗಳನ್ನು ಅವರ ಹೆಸರಿಗೆ ಮಾಡಿಸಿಕೊಂಡಿದ್ದು, ಗೋಮಾಳ ಭೂಮಿಯನ್ನು ತನ್ನದಾಗಿಸಿಕೊಂಡಿದ್ದಾರೆ” ಎಂದು ಹೇಳಿದರು.
“ನಿನ್ನೆ ಶವಸಂಸ್ಕಾರ ಮಾಡಲೆಂದು ಮೃತದೇಹ ಕೊಂಡೊಯ್ಯುವಾಗ ಹೊಲದ ಮೇಲೆ ಹೋಗಬೇಡಿ ಅಂತ ತಗಾದೆ ತೆಗೆದರು. ಬಳಿಕ ತಾಲೂಕು ಕಚೇರಿ ಬಳಿ ಹೋಗಿ ಶವವಿಟ್ಟು ಪ್ರತಿಭಟನೆ ನಡೆಸಿದೆವು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ನರಸಿಂಹ ಮೂರ್ತಿ ದೇವರಹೊಸಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ”ಸ್ಮಶಾನಕ್ಕೆ ಜಾಗವಿದ್ದು, ಸ್ಮಶಾನಕ್ಕೆ ಹೋಗಲು ರಸ್ತೆಯಿಲ್ಲದ ಕಾರಣ ಸಮಸ್ಯೆ ಎದುರಾಗಿದೆ. ಸಮಸ್ಯೆ ಪರಿಹರಿಸುತ್ತೇವೆಂದು ಅಧಿಕಾರಿಗಳು ಭರವಸೆ ನೀಡಿದರು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ಬಗರ್ ಹುಕುಂ ಕಡತಗಳ ವಿಲೇವಾರಿಗೆ ಕ್ರಮ: ಶಾಸಕ ಸಿಮೆಂಟ್ ಮಂಜು
“ಸ್ಮಶಾನಕ್ಕೆ ಜಾಗ ನೀಡುವವರೆಗೆ ನಾವು ಸ್ಥಳದಿಂದ ಕದಲುವುದಿಲ್ಲವೆಂದು ಪ್ರತಿಭಟನೆ ಮುಂದುವರೆಸಿದ್ದೆವು. ಬಳಿಕ ಪೊಲೀಸ್ ಅಧಿಕಾರಿಗಳು, ತಹಶೀಲ್ದಾರ್ ಸೇರಿದಂತೆ ಹಲವು ಮಂದಿ ಅಧಿಕಾರಿಗಳು ಗ್ರಾಮಕ್ಕೆ ಬಂದರು. ಅಧಿಕಾರಿಗಳ ಬಂದೋಬಸ್ತ್‌ನಲ್ಲಿ ಶವಸಂಸ್ಕಾರ ಮಾಡಿದೆವು. ಇದೀಗ ಒತ್ತುವರಿಯಾಗಿರುವ ಸರ್ಕಾರಿ ಜಮೀನನ್ನು ತೆರವುಗೊಳಿಸಿ ದಲಿತರ ಸ್ಮಶಾನಕ್ಕೆ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದಾರೆ” ಎಂದು ಹೇಳಿದರು.