ಬೆಂಕಿ ಉಗುಳುವ ದ್ವೇಷ ಭಾಷಣಗಳಿಂದಲೇ ಸುದ್ದಿಯಾಗಿರುವ ಬಿಜೆಪಿ ಬೆಂಬಲಿಗ ಯತಿ ನರಸಿಂಹಾನಂದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಹಿನ್ನೆಲೆ ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಝುಬೈರ್ ವಿರುದ್ಧ ದೇಶದ್ರೋಹಕ್ಕೆ ಸಮಾನವಾದ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಬಗ್ಗೆ ಸಾರ್ವಜನಿಕ ವಲಯದಿಂದ ತೀವ್ರ ಖಂಡನೆ ವ್ಯಕ್ತವಾಗಿದೆ.
ಅಸಲಿಗೆ ದ್ವೇಷ ಭಾಷಣದ ಅಪರಾಧವನ್ನು ಹಲವು ಬಾರಿ ಎಸಗಿರುವ ಯತಿ ನರಸಿಂಹಾನಂದ ವಿರುದ್ದ ದೇಶದ್ರೋಹ ಪ್ರಕರಣ ದಾಖಲಾಗಬೇಕಿತ್ತು. ಬದಲಾಗಿ ನರಸಿಂಹಾನಂದರ ಅಪರಾಧವನ್ನು ಸಾಕ್ಷ್ಯ ಸಹಿತ ಬಯಲು ಮಾಡಿರುವ ಝುಬೈರ್ ಅವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿರುವುದು ಸತ್ಯದ ಕಪಾಳಕ್ಕೆ ಬಾರಿಸಿರುವ ಬಹುದೊಡ್ಡ ವಿಡಂಬನೆಯಾಗಿದೆ.
ಅಕ್ಟೋಬರ್‌ನಲ್ಲಿ ಝುಬೈರ್ ವಿರುದ್ಧ ಸಲ್ಲಿಸಲಾದ ಎಫ್‌ಐಆರ್‌ನಲ್ಲಿ ಈಗ ‘ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ಅಪರಾಧವನ್ನು ಝುಬೈರ್ ಎಸಗಿದ್ದಾರೆ’ ಎಂದು ಹೊಸದಾಗಿ ಸೇರಿಸಲಾಗಿದೆ.
ಝುಬೈರ್ ವಿರುದ್ಧ ಹೊಸ ಆರೋಪವನ್ನು ಸೇರಿಸಿರುವುದಾಗಿ ಗಾಜಿಯಾಬಾದ್ ಪೊಲೀಸರು ಬುಧವಾರ ಅಲಹಾಬಾದ್ ಹೈಕೋರ್ಟ್‌ಗೆ ತಿಳಿಸಿದ್ದಾರೆ.
ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡುವುದರಿಂದಲೇ ಸುದ್ದಿಯಲ್ಲಿರುವ ನರಸಿಂಹಾನಂದರ ಹಳೆಯ ವೀಡಿಯೋ ತುಣುಕೊಂದನ್ನು ಝುಬೈರ್ ಹಂಚಿಕೊಂಡಿದ್ದರು. ಈ ಹಿನ್ನೆಲೆ ಝುಬೈರ್ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
ಅಕ್ಟೋಬರ್‌ನಲ್ಲಿ ತಮ್ಮ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಝುಬೈರ್ ಈಗಾಗಲೇ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ನಡೆಸುತ್ತಿದೆ. ಈ ನಡುವೆ ಪೊಲೀಸರು ಝಬೈರ್ ವಿರುದ್ಧ ದೇಶದ್ರೋಹದ ಹೊಸ ಪ್ರಕರಣಗಳನ್ನು ದಾಖಲಿಸಿದ್ದಾರೆ.
Alt News stands with Mohammed Zubair pic.twitter.com/kpVhN0io04
— Alt News (@AltNews) November 27, 2024
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಝುಬೈರ್ ಪರ ವಕೀಲೆ ವೃಂದಾ ಗ್ರೋವರ್, “ಸೋಮವಾರ ವಿಚಾರಣೆ ವೇಳೆ ಪೊಲೀಸರು ಎಫ್‌ಐಆರ್‌ನಲ್ಲಿ ಹೊಸ ಸೆಕ್ಷನ್‌ಗಳನ್ನು ಸೇರಿಸಲಾಗಿದೆ ಎಂದು ಹೇಳುತ್ತಲೇ ಇದ್ದರು. ನ್ಯಾಯಾಲಯ ಈ ಬಗ್ಗೆ ದಾಖಲೆ ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಿತು. ಅಫಿಡವಿಟ್ ಸಲ್ಲಿಸಿದಾಗ ಐಟಿ ಕಾಯ್ದೆಯ 152 ಮತ್ತು 66ರ ಎರಡು ಹೊಸ ಸೆಕ್ಷನ್‌ಗಳನ್ನು ಸೇರಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ” ಎಂದರು.
ಬಿಎನ್‌ಎಸ್‌ನ ಸೆಕ್ಷನ್ 152 (ಭಾರತದ ಸಾರ್ವಭೌಮತ್ವದ ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡುವ ಕೃತ್ಯ) ಜಾಮೀನು ಪಡೆಯಲು ಸಾಧ್ಯವಾಗದ, ದೇಶದ್ರೋಹಕ್ಕೆ ಸಮಾನವಾದ ಪ್ರಕರಣ ಇದಾಗಿದೆ. ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಜಾರಿಗೆ ಬಂದಾಗಲೇ ಈ ಸೆಕ್ಷನ್ 152 ದುರ್ಬಳಕೆ ಸಾಧ್ಯತೆ ಬಗ್ಗೆ ಹಲವರು ಧ್ವನಿ ಎತ್ತಿದ್ದರು. ಇನ್ನು ಈಗಾಗಲೇ ಯತಿ ನರಸಿಂಹಾನಂದ ಸರಸ್ವತಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಉದಿತಾ ತ್ಯಾಗಿ ನೀಡಿದ ದೂರಿನ ಆಧಾರದಲ್ಲಿ ಹಲವು ಸೆಕ್ಷನ್‌ಗಳು ಝುಬೈರ್ ವಿರುದ್ಧ ದಾಖಲಾಗಿದೆ.
ಆಲ್ಟ್ ನ್ಯೂಸ್ ಟ್ವೀಟ್
ಪತ್ರಕರ್ತ ಝುಬೈರ್ ವಿರುದ್ಧ ಹೊಸ ಪ್ರಕರಣಗಳನ್ನು ದಾಖಲಿಸಿರುವುದರ ಬಗ್ಗೆ ಆಲ್ಟ್ ನ್ಯೂಸ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. “ಬಿಎನ್‌ಎಸ್‌ನ ಸೆಕ್ಷನ್ 152 ವಸಾಹತುಶಾಹಿ ಯುಗದಲ್ಲಿನ ದೇಶದ್ರೋಹ ಪ್ರಕರಣದ ಹೊಸ ಅವತಾರ. ಈ ಹಿಂದೆ ದೇಶದ್ರೋಹ ಪ್ರಕರಣದ ದುರ್ಬಳಕೆ ಮಾಡಿದಂತೆ ಈ ಸೆಕ್ಷನ್ ಅನ್ನು ಅಧಿಕಾರದಲ್ಲಿರುವವರು ಜನರ ಧ್ವನಿ ಅಡಗಿಸಲು ದುರ್ಬಳಕೆ ಮಾಡಬಹುದು ಎಂಬ ಅಂಶವನ್ನ ಈ ಹಿಂದೆಯೇ ಹಲವು ಟೀಕಾಕಾರರು ಹೇಳಿದ್ದರು. ಈ ಆತಂಕ ಹೇಗೆ ನಿಜವಾಗುತ್ತಿದೆ ಎಂಬುದಕ್ಕೆ ಝುಬೈರ್ ಪ್ರಕರಣವೇ ಸ್ಪಷ್ಟ ಉದಾಹರಣೆಯಾಗಿದೆ” ಎಂದು ಹೇಳಿದೆ.
“ದ್ವೇಷ ಮತ್ತು ತಪ್ಪು ಮಾಹಿತಿಯನ್ನು ಬಹಿರಂಗಪಡಿಸಲು ಬದ್ಧವಾಗಿರುವ ವ್ಯಕ್ತಿಗಳನ್ನು ಮತ್ತು ಸಂಸ್ಥೆಗಳನ್ನು ಬೆದರಿಸಲು ರಾಜ್ಯವು ಹೇಗೆ ಅಧಿಕಾರವನ್ನು ಬಳಸುತ್ತಿದೆ ಎಂಬುದಕ್ಕೆ ಇದು ಮತ್ತೊಂದು ನಿದರ್ಶನ” ಎಂದು ಹೇಳಿದೆ.
ಹಾಗೆಯೇ “ಸತ್ಯ ಮತ್ತು ಜವಾಬ್ದಾರಿಯನ್ನು ಎತ್ತಿಹಿಡಿಯುವ ನಮ್ಮ ಧ್ಯೇಯದಲ್ಲಿ ನಾವು ದೃಢವಾಗಿದ್ದೇವೆ. ನಾವು ಝುಬೈರ್ ಪರವಾಗಿ ನಿಲ್ಲುತ್ತೇವೆ” ಎಂದು ಆಲ್ಟ್ ನ್ಯೂಸ್ ತಿಳಿಸಿದೆ.
