ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಸಂಘರ್ಷಗಳು ನಡೆಯುತ್ತಿವೆ. ಸಮಾಜದಲ್ಲಿ ವ್ಯವಹಾರಿಕತೆ, ಅಸಹನೀಯ ಪ್ರವೃತ್ತಿ ಹೆಚ್ಚುತ್ತಿದೆ. ಇಂತಹ ಹೊತ್ತಿನಲ್ಲಿ ಜೀವನ ಪ್ರೀತಿಯ ಅಗತ್ಯವಿದೆ. ಬುದ್ಧ ಮತ್ತು ಗಾಂಧಿಯ ಜೀವನ ಪ್ರೀತಿಯನ್ನು ನಾವು ಅಳವಡಿಸಿಕೊಳ್ಳಬೇಕಿದೆ ಎಂದು ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ. ಜಯಪ್ರಕಾಶ್ ಗೌಡ ಕರೆ ನೀಡಿದರು.
ಶ್ರೀ ನಟರಾಜ ಪ್ರತಿಷ್ಠಾನ, ಕನ್ನಡ ಸಾಹಿತ್ಯ ಕಲಾಕೂಟ ಹಾಗೂ ಸ್ಪಂದನ ಸಾಂಸ್ಕೃತಿಕ ಪರಿಷತ್ತಿನಿಂದ ನಟರಾಜ ಸಭಾಭವನದಲ್ಲಿ ನಡೆದ ವಿಚಾರ ಸಂಕಿರಣ ಮತ್ತು ಸಂವಾದ ಸಮಾರಂಭದ ಸಮಾರೋಪದಲ್ಲಿ ಸಾಹಿತಿ ಸಾತನೂರು ದೇವರಾಜ್ ಅವರನ್ನು ಅಭಿನಂದಿಸಿ ಮಾತನಾಡಿದರು.

“ಸಾಹಿತ್ಯ ಕ್ಷೇತ್ರವೂ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಸುಳ್ಳುಗಾರರು, ಅವಕಾಶವಾದಿಗಳು, ಭಂಡಗಾರರು ತುಂಬಿದ್ದಾರೆ. ಆದ್ದರಿಂದ, ರಾಜಕೀಯವೂ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಯೋಗ್ಯರನ್ನೂ ಆರಿಸಬೇಕು, ಬೆಂಬಲಿಸಬೇಕು. ಈ ಪ್ರಜ್ಞೆ ಜನರಲ್ಲಿ ಸದಾ ಇರಬೇಕು. ಇಲ್ಲದಿದ್ದರೆ ಪ್ರಜಾಪ್ರಭುತ್ವ, ಸತ್ಯ, ನ್ಯಾಯ, ಸಮತೆ ಉಳಿಯುವುದಿಲ್ಲ” ಎಂದು ಎಚ್ಚರಿಸಿದರು.
“ಹಲವರು ಪ್ರಶಸ್ತಿ ಮತ್ತು ಪುರಸ್ಕಾರಗಳನ್ನು ಹುಡುಕಿಕೊಂಡು ಹೋಗುತ್ತಾರೆ. ಇಂಥವರ ನಡುವೆ ಕೆಲವು ಸಂಭಾವಿತರು ತಮ್ಮಷ್ಟಕ್ಕೆ ತಾವು ಅಮೂಲ್ಯ ಸೇವೆಯನ್ನು ಸಲ್ಲಿಸುತ್ತ, ಅಗಾಧ ಸಾಧನೆ ಮಾಡಿರುತ್ತಾರೆ. ಯಾವತ್ತಿಗೂ ಪ್ರಶಸ್ತಿಯ ಹಿಂದೆ ಬೀಳುವುದಿಲ್ಲ. ಅಂತಹ ಅಪರೂಪದ ಸಾಹಿತ್ಯ ಸಾಧಕ ಸಾತನೂರು ದೇವರಾಜ್. ಇವರ ಕೊಡುಗೆ ವಿಜ್ಞಾನ ಸಾಹಿತ್ಯಕ್ಕೆ ಅಮೂಲ್ಯವಾಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ರಾಮನಗರ | ಶವಸಂಸ್ಕಾರಕ್ಕೆ ದಲಿತರಿಗೆ ಅಡ್ಡಿ; ಸ್ಮಶಾನ ಭೂಮಿ ಮಂಜೂರು ಮಾಡುವಂತೆ ಶವವಿಟ್ಟು ಪ್ರತಿಭಟನೆ
“ಸಾಹಿತ್ಯಕ್ಕೂ ವಿಜ್ಞಾನಕ್ಕೂ ಅಪಾರ ನಂಟಿದೆ. ವಿಜ್ಞಾನ ಪ್ರಕೃತಿ ರಹಸ್ಯ ಭೇದಿಸಿದರೆ, ಸಾಹಿತ್ಯ ಮನುಷ್ಯನ ಅಂತಃರಂಗವ ಭೇದಿಸುತ್ತದೆ. ಈ ಪ್ರಕ್ರಿಯೆ ಎಂದಿಗೂ ನಿಲ್ಲವುದಿಲ್ಲ. ವಿಜ್ಞಾನ ಕ್ಷೇತ್ರ ತುಂಬಾ ಮುಂದುವರಿದಿದೆ. ವಿಜ್ಞಾನ ನಿರಂತರ ತಿಳಿವಳಿಕೆ ಕೊಡುತ್ತದೆ. ಜೀವನದ ಹೊಸ ಹೊಸ ಸವಾಲುಗಳನ್ನು ಎದುರಿಸುವಂತೆ ಮಾಡುತ್ತದೆ. ಕೊರತೆಗಳನ್ನು ನೀಗಿಸುತ್ತದೆ. ಇದನ್ನು ಜನರು ಅರ್ಥ ಮಾಡಿಕೊಂಡಿಲ್ಲ” ಎಂದು ವಿಷಾದಿಸಿದರು.
“ಕನ್ನಡದಲ್ಲಿ ವಿಜ್ಞಾನದ ವಿಚಾರಗಳನ್ನು ಸರಳವಾಗಿ ಬರೆಯುವ ಕೆಲಸ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಜಿ ಟಿ ನಾರಾಯಣರಾವ್ ಅವರ ಕೊಡುಗೆ ಅಪಾರ. ಅವರ ಹಾದಿಯಲ್ಲಿ ಸಾಗುತ್ತಿರುವ ಸಾತನೂರು ದೇವರಾಜ್ ಸರಳವಾದ ಭಾವ ಮತ್ತು ಭಾಷೆಯಲ್ಲಿ ಆಕರ್ಷಕವಾಗಿ ವಿಜ್ಞಾನ ಸಾಹಿತ್ಯ ಬರೆಯುತ್ತಿರುವುದು ಅಭಿನಂದನಾರ್ಹ ಕಾರ್ಯ” ಎಂದರು.
ಲೇಖಕ ಸಾತನೂರು ದೇವರಾಜ್ ಅಭಿನಂದನೆ ಸ್ವೀಕರಿಸಿ ಮಾತನಾಡಿ, “ಸಾಹಿತ್ಯ ರಚನೆಗೆ ಹೊರಗಿನ ಒತ್ತಡಗಳು ಮತ್ತು ಒಳಗಿನ ಪ್ರೇರಣೆ ಎರಡೂ ಬೇಕು. ಹಾಗೆಯೇ ನನ್ನ ಬದುಕಿನಲ್ಲೂ ಒತ್ತಡ ಮತ್ತು ಪ್ರೇರಣೆ ಈ ಎರಡೂ ಸಿಕ್ಕ ಕಾರಣ ನಾನು ಲೇಖಕನಾಗಲು ಸಾಧ್ಯವಾಯಿತು” ಎಂದು ಸ್ಮರಿಸಿದರು.

“ಕನ್ನಡದಲ್ಲಿ ಸಾಮಾನ್ಯ ವಿಜ್ಞಾನ ಸಾಹಿತ್ಯದ ಕೃತಿಗಳ ಲಭ್ಯತೆ ಕಡಿಮೆ ಇದೆ. ಇರುವವೂ ಕೂಡ ಸ್ವಲ್ಪ ಸಂಕೀರ್ಣವಾಗಿವೆ. ಇದನ್ನು ಮನಗಂಡು ವಿದ್ಯಾರ್ಥಿಗಳಲ್ಲಿ ಮತ್ತು ಜನಸಾಮಾನ್ಯರಲ್ಲಿ ವಿಜ್ಞಾನದ ಅರಿವನ್ನು ಮೂಡಿಸಲು ‘ವಿಜ್ಞಾನ ಸಾಹಿತ್ಯ’ ಕೃಷಿ ಮಾಡುತ್ತಿರುವೆ. ಇಂದಿನ ಸಮಾಜಕ್ಕೆ ಜೈವಿಕ ವಿಜ್ಞಾನ ಕುರಿತಾದ ಪುಸ್ತಕಗಳು ಹೆಚ್ಚು ಬರುವ ಅಗತ್ಯವಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆ ವತಿಯಿಂದ ವಾರ್ಷಿಕ ಕ್ರೀಡಾಕೂಟ
ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಡಾ.ಎಸ್. ಶಿವರಾಜಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಟಿ ಸತೀಶ್ ಜವರೇಗೌಡ ಸಮಾರೋಪ ನುಡಿಗಳನ್ನಾಡಿದರು. ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ವಿಶ್ರಾಂತ ನಿರ್ದೇಶಕ ಪ್ರೊ. ಕೆ ಟಿ ವೀರಪ್ಪ ಅಭಿನಂದನಾ ಭಾಷಣ ಮಾಡಿದರು.
ವೇದಿಕೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ ಚಂದ್ರಶೇಖರ್, ನಂಜನಗೂಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕಿ ಡಾ ಡಿ ಕೆ ಉಷಾ, ವಾತ್ಸಲ್ಯ, ಬಿಇಡಿ ಕಾಲೇಜಿನ ಪ್ರಾಂಶುಪಾಲ ಡಾ. ಮಹೇಶ್ ದಳಪತಿ ಇದ್ದರು.