ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ರಾಜ್ಯಾಧ್ಯಕ್ಷರಾಗಿ ಅಬ್ದುಲ್ ಮಜೀದ್ ಮೈಸೂರು ಪುನರಾಯ್ಕೆಯಾಗಿದ್ದಾರೆ.
ಮೈಸೂರು ನಗರದಲ್ಲಿ ಎಸ್‌ಡಿಪಿಐ ಕರ್ನಾಟಕ ಪಕ್ಷದ ಎರಡು ದಿನಗಳ ರಾಜ್ಯ ಪ್ರತಿನಿಧಿ ಸಭೆ ಮತ್ತು 2024-27ನೇ ಸಾಲಿನ ನೂತನ ಸಮಿತಿ ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಜೀದ್ ಫೈಝಿ ನೂತನ ರಾಜ್ಯ ಸಮಿತಿ ಮತ್ತು ಮೊಹಮ್ಮದ್ ಅಶ್ರಫ್ ಅವರು ನೂತನ ಪದಾಧಿಕಾರಿಗಳನ್ನು ಘೋಷಿಸಿದರು.
ರಾಜ್ಯಾಧ್ಯಕ್ಷರಾಗಿ ಅಬ್ದುಲ್ ಮಜೀದ್ ಮೈಸೂರು, ಉಪಾಧ್ಯಕ್ಷರಾಗಿ ಅಬ್ದುಲ್ ಹನ್ನಾನ್, ದೇವನೂರ ಪುಟ್ಟನಂಜಯ್ಯ, ಶಾಹಿದಾ ತಸ್ನೀಮ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿ ಮುಜಾಹಿದ್ ಪಾಷ, ಇಬ್ರಾಹಿಂ ಮಜೀದ್ ತುಂಬೆ, ಬಿ ಆರ್ ಭಾಸ್ಕರ್ ಪ್ರಸಾದ್, ಅಫ್ಸರ್ ಕೊಡ್ಲಿಪೇಟೆ, ರಾಜ್ಯ ಕಾರ್ಯದರ್ಶಿಗಳಾಗಿ ಅಫ್ಸರ್ ಕೆ ಆರ್ ನಗರ, ಅಂಗಡಿ ಚಂದ್ರು, ಮೌಲಾನ ಅಕ್ರಮ್, ರಂಜಾನ್ ಕಡಿವಾಳ್, ರಿಯಾಝ್ ಕಡಂಬು ಮತ್ತು ರಾಜ್ಯ ಕೋಶಾಧಿಕಾರಿಯಾಗಿ ಅಮ್ಜದ್ ಖಾನ್ ಮೈಸೂರು ಆಯ್ಕೆಯಾಗಿದ್ದಾರೆ. ಜತೆಗೆ 17 ಮಂದಿಯನ್ನು ರಾಜ್ಯ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ.
ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು:
ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರದ ಜನದ್ರೋಹಿ ನಡೆಗಳಾದ ಒಳಮೀಸಲಾತಿ ಜಾರಿಗೆ ನಿರಾಕರಣೆ, ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ನಿರಾಕರಣೆ, ಜಾತಿ ಜನಗಣತಿ ವರದಿ ಬಿಡುಗಡೆಗೆ ನಿರಾಕರಣೆಯಂತಹ ವಿಚಾರಗಳ ವಿರುದ್ಧ ರಾಜ್ಯವ್ಯಾಪಿ ಜನ ಚಳವಳಿಗಳನ್ನು ರೂಪಿಸಿ ಈ ವಿಚಾರಗಳಲ್ಲಿ ನ್ಯಾಯ ಸಿಗುವವರೆಗೂ ಹೋರಾಟ ನಡೆಸಬೇಕು.
ರಾಜ್ಯದಲ್ಲಿನ ಶೋಷಿತ ಸಮುದಾಯಗಳಿಗೆ ಅವರ ಸಂವಿಧಾನಬದ್ಧ ಹಕ್ಕುಗಳನ್ನು ದೊರಕಿಸಿಕೊಡಲು ನಮ್ಮ ಪಕ್ಷ ಶಾಸನ ಸಭೆಗೆ ಪ್ರವೇಶಿಸಲೇಬೇಕಾದ ಅನಿವಾರ್ಯತೆಯಿದೆ. ಇದನ್ನು ಸಾಧಿಸಲು ನಿರಂತರ ರಾಜಕೀಯ ಹೋರಾಟದ ಜತೆಗೆ ಜನರಲ್ಲಿ ಜಾಗೃತಿ ಮೂಡಿವಂತಹ ಚಳವಳಿಗಳು ಮತ್ತು ಕಾರ್ಯತಂತ್ರಗಳನ್ನು ರೂಪಿಸಬೇಕು.
ಬಿಜೆಪಿ ಕಾಲದ ಎಲ್ಲ ಹಗರಣಗಳು, ವಿಶೇಷವಾಗಿ ಕೋವಿಡ್ ಹಗರಣಗಳಿಗೆ ಸಂಬಂಧಪಟ್ಟಂತೆ ಕಾಂಗ್ರೆಸ್ ರಾಜ್ಯ ಸರ್ಕಾರ ಕೇವಲ ಹೇಳಿಕೆಗಳಿಗೆ ಮಾತ್ರ. ಜನರು ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಸಮಯದಲ್ಲೂ ಭ್ರಷ್ಟಾಚಾರದ ಮೂಲಕ ರಾಜ್ಯದ ಖಜಾನೆ ಕೊಳ್ಳೆ ಹೊಡೆದ ಬಿಜೆಪಿಯ ವಿರುದ್ಧ ದಿಟ್ಟ ಮತ್ತು ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರವನ್ನು ಒತ್ತಾಯಿಸಬೇಕು.
ದ್ವೇಷ ಭಾಷಣಕಾರರ ವಿರುದ್ಧ ಮತ್ತು ಸಮಾಜದಲ್ಲಿ ಸುಳ್ಳುಗಳನ್ನು ಹೇಳಿ ತಪ್ಪು ಸಂದೇಶಗಳನ್ನು ನೀಡುವುದರ ಮೂಲಕ ಅಶಾಂತಿ ಹರಡುತ್ತಿರುವ ಕೆಲವು ಮಾಧ್ಯಮಗಳ ವಿರುದ್ಧ ಸರ್ಕಾರ ತೀವ್ರ ನಿಗಾ ಇಡಬೇಕು. ಅಗತ್ಯ ಬಿದ್ದಲ್ಲಿ ಇಂತಹ ಸಮಾಜ ವಿರೋಧಿ ವ್ಯಕ್ತಿಗಳು ಮತ್ತು ಮಾಧ್ಯಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯಬಾರದೆಂದು ಸರ್ಕಾರಕ್ಕೆ ಆಗ್ರಹಿಸಬೇಕು.
ಗೋ ಹತ್ಯಾ ನಿಷೇಧ ಕಾಯ್ದೆಯನ್ನು ಹಿಂಪಡೆಯಬೇಕು. ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಪಡಿಸಬೇಕು ಮತ್ತು ಹಿಜಾಬ್ ನಿಷೇಧ ಆದೇಶವನ್ನು ಹಿಂಪಡೆಯಬೇಕು. ವಕ್ಫ್ ಮಂಡಳಿಯ ಸ್ವಾಯತ್ತತೆಗೆ ಧಕ್ಕೆಯುಂಟು ಮಾಡುವ ಕೋಮುವಾದಿ ಶಕ್ತಿಗಳ ಯಾವುದೇ ಷಡ್ಯಂತ್ರಗಳಿಗೆ ರಾಜ್ಯ ಸರ್ಕಾರವು ಮಣಿಯಬಾರದು.
ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯ ಮಾದರಿಯಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು ರಚಿಸುವಂತೆ ಸರ್ಕಾರವನ್ನು ಒತ್ತಾಯಿಸಬೇಕು.
ಕರಾವಳಿ ಕರ್ನಾಟಕದಲ್ಲಿ ನಿರುದ್ಯೋಗ ಕೊನೆಗೊಳಿಸಿ ಸ್ಥಳೀಯ ಯುವಕರಿಗೆ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಹಾಗೂ ಇನ್ನಿತರ ಅವಕಾಶ ಇರುವಂತಹ ವಲಯಗಳಿಗೆ ಪ್ರಾಧಾನ್ಯತೆ ನೀಡಿ ವಿಶೇಷ ಯೋಜನೆಯನ್ನು ರೂಪಿಸುವುದು, ಇದಕ್ಕಾಗಿ ಮುಂದಿನ ಬಜೆಟ್‌ನಲ್ಲಿ ಕನಿಷ್ಠ ಮೂರು ಸಾವಿರ ಕೋಟಿ ರೂಪಾಯಿ ಮೀಸಲಿಡುವಂತೆ ಸರ್ಕಾರವನ್ನು ಒತ್ತಾಯಿಸುವಂತೆ ಸಭೆಯಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಮಂಗಳೂರು ಬಾಗಲಕೋಟೆ, ಉತ್ತರ ಕನ್ನಡ ಇತ್ಯಾದಿ ಜಿಲ್ಲೆಗಳಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಮತ್ತು ಸರ್ಕಾರಿ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸುವಂತೆ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ.
ಈ ಸುದ್ದಿ ಓದಿದ್ದೀರಾ? ಹಾಸನ | ಬಗರ್ ಹುಕುಂ ಕಡತಗಳ ವಿಲೇವಾರಿಗೆ ಕ್ರಮ: ಶಾಸಕ ಸಿಮೆಂಟ್ ಮಂಜು
ಈ ವೇಳೆ ರಾಜ್ಯ ಸಮಿತಿ ಘೋಷಣೆಯ ನಂತರ ರಾಷ್ಟ್ರೀಯ ಪ್ರತಿನಿಧಿ ಸಭೆಯಲ್ಲಿ ಭಾಗವಹಿಸಬೇಕಾದ 11 ಮಂದಿ ಕೌನ್ಸಿಲರ್‌ಗಳನ್ನು ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಪರಂಗಿಪೇಟೆ ಘೋಷಣೆ ಮಾಡಿದರು.
ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಬಿ ಎಂ ಕಾಂಬ್ಳೆ, ಪಕ್ಷದ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ತುಂಬೆ, ರಾಷ್ಟೀಯ ಕಾರ್ಯದರ್ಶಿ ಅಲ್ಫಾನ್ಸ್ ಫ್ರಾಂಕೊ, ರಾಷ್ಟೀಯ ಸಮಿತಿ ಸದಸ್ಯ ಡಾ. ಮೆಹಬೂಬ್ ಶರೀಫ್ ಇದ್ದರು.