ದಿವಂಗತ ಆರ್.ಕೆ. ಲಕ್ಷ್ಮಣ್ ಹೆಸರು ಕೇಳದವರು ಬಹಳ ಮಂದಿ ಇರಲಿಕ್ಕಿಲ್ಲ. ಭಾರತ ಕಂಡ ಅತ್ಯಂತ ಹರಿತ ವ್ಯಂಗ್ಯಚಿತ್ರಕಾರರಾಗಿದ್ದರು ಅವರು. ಅವರು ರಚಿಸಿದ ನೂರಾರು ವ್ಯಂಗ್ಯಚಿತ್ರಗಳು ದೇಶಕಾಲಗಳ ಆಚೆಗೂ ಅತ್ಯಂತ ಪ್ರಸ್ತುತವಾಗಿ ಉಳಿದಿವೆ.
1962ರ ಡಿಸೆಂಬರ್ 26ರಂದು ಅವರು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ಬರೆದಿದ್ದ ಪಾಕೆಟ್ ಕಾರ್ಟೂನ್ ಇಂತಹುದೇ ಒಂದು ದೇಶಾತೀತ ಕಾಲಾತೀತ ವ್ಯಂಗ್ಯಚಿತ್ರ.
ಸಾಧಾರಣ ವ್ಯಕ್ತಿಯೊಬ್ಬನನ್ನು ಪೊಲೀಸಪ್ಪ ಕುತ್ತಿಗೆ ಪಟ್ಟಿ ಹಿಡಿದು ಎಳೆದು ಒಯ್ಯುತ್ತಿದ್ದಾನೆ. ‘ಇಲ್ಲ, ಇಲ್ಲಯ್ಯಾ..ನೀನು ವದಂತಿ ಹಬ್ಬಿಸುತ್ತಿದ್ದೀಯಾ ಅಂತ ನಿನ್ನನ್ನು ಹಿಡಿದೊಯ್ಯುತ್ತಿಲ್ಲ. ಬದಲಾಗಿ ವಾಸ್ತವಾಂಶಗಳನ್ನು ಹರಡುತ್ತಿರುವ ಆಪಾದನೆ ನಿನ್ನ ಮೇಲಿದೆ’ ಎಂದು ಪೊಲೀಸ್ ಹೇಳುತ್ತಾನೆ. ಬೀದಿ ಬದಿಯಲ್ಲಿ ಜನ ನಿಂತು ನೋಡುತ್ತಿದ್ದಾರೆ. ಅವರ ಪೈಕಿ ಲಕ್ಷ್ಮಣ್ ಅವರ ಮಿ.ಸಿಟಿಝನ್ ಅಥವಾ ಶ್ರೀಸಾಮಾನ್ಯ ದಂಗು ಬಡಿದು ಗಮನಿಸುತ್ತಿದ್ದಾನೆ.
ಇದನ್ನು ಓದಿದ್ದೀರಾ? ಪತ್ರಕರ್ತ ಝುಬೈರ್ ವಿರುದ್ಧ ‘ದೇಶದ್ರೋಹ ಸಮಾನ’ ಪ್ರಕರಣ ದಾಖಲು; ಜೈಲಿಗೆ ತಳ್ಳುವ ಸಂಚು
ಅರವತ್ತು ವರ್ಷಗಳ ಹಿಂದಿನ ಈ ಸದಾಹಸಿರುವ ವಂಗ್ಯಚಿತ್ರ ಮತ್ತೆ ಮತ್ತೆ ನಿಜವಾಗುತ್ತಲೇ ನಡೆದಿದೆ. ಈ ಹಿಂದೆ 70ರ ದಶಕದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹೇರಿದ್ದ ತುರ್ತುಪರಿಸ್ಥಿತಿಯಲ್ಲಿ ಈ ವ್ಯಂಗ್ಯಚಿತ್ರ ಸತ್ಯದ ಸಾಕ್ಷ್ಯ ನುಡಿದಿತ್ತು. ಕಳೆದ ಹತ್ತು ವರ್ಷಗಳ ಮೋಶಾ ಆಡಳಿತದಲ್ಲಿ ತುರ್ತುಪರಿಸ್ಥಿತಿ ಹಿತ್ತಿಲ ಬಾಗಿಲಿನಿಂದ ನುಸುಳಿ ಕಾರ್ಯಭಾರ ನಡೆಸಿದೆ.
ರಾಜಕೀಯ ಬೇಳೆ ಬೇಯಿಸಿಕೊಂಡು ನಿರಂತರ ಅಧಿಕಾರದಲ್ಲಿರಲು ಬಿಜೆಪಿ ಮತ್ತು ಅದರ ಐಟಿ ಸೆಲ್ ಅಪ್ಪಟ ಸುಳ್ಳುಗಳು, ಅರೆಸುಳ್ಳುಗಳನ್ನು ಬೇಕೆಂದೇ ಹೊಸೆದು ಪ್ರಚಾರಸಮರವನ್ನೇ ಹೂಡಿದೆ.
The visionary RK Laxman's prophecy comes true yet again. #IStandWithZubair pic.twitter.com/JzSQ8VsyUG
— S☕oirse (@SaoirseAF) November 28, 2024
ವಾಟ್ಸ್ಯಾಪ್ ಸುಳ್ಳಿನ ಕಾರ್ಖಾನೆಗಳನ್ನು ದೇಶದ ತುಂಬ ಕಟ್ಟಿ ನಿಲ್ಲಿಸಿದೆ. ಸಾಮಾಜಿಕ ಸಮರಸದ ಸೂಕ್ಷ್ಮ ನೇಯ್ಗೆಯನ್ನು ಹರಿದು ಧ್ವಂಸಗೊಳಿಸಲಾಗುತ್ತಿದೆ. ಈ ಸುಳ್ಳುಗಳು ಸೃಷ್ಟಿಸುವ ಕೃತಕ ಕತ್ತಲೆಯನ್ನು, ಭುಗಿಲೆಬ್ಬಿಸಿ ನಿಲ್ಲಿಸುವ ದ್ವೇಷದ ಸುಂಟರಗಾಳಿಗೆ ಎದುರೇ ಇಲ್ಲವಾಗಿದೆ. ಇಂತಹ ಸ್ಥಿತಿಯಲ್ಲಿ ಅಲ್ಲಲ್ಲಿ ಮಿನುಗುವ ಸತ್ಯದ ದೀಪದ ಕುಡಿಗಳು ಫ್ಯಾಕ್ಟ್ ಚೆಕ್ ವ್ಯವಸ್ಥೆಗಳ ವ್ಯಕ್ತಿಗತ ಸಾಹಸಗಳು. ಭಾರತದಂತಹ ವಿಶಾಲ ಉಪಖಂಡದಲ್ಲಿ ಇಂತಹ ಪ್ರಯತ್ನಗಳು ಬೆರಳೆಣಿಕೆಯವು. ಕತ್ತಲನ್ನು ದೂರುತ್ತ ಹಲುಬುವ ಬದಲು ಕಿರುಹಣತೆಯನ್ನಾದರೂ ಹಚ್ಚು ಎಂಬ ಸೂಕ್ತಿಗೆ ನಿದರ್ಶನಗಳು ಈ ಪ್ರಯತ್ನಗಳು. ಅಭಿನಂದನೆಗೆ ಅರ್ಹವಾಗಿರುವ ಮತ್ತು ನೀರೆರೆದು ಗೊಬ್ಬರವಿಟ್ಟು ಪೋಷಿಸಬೇಕಿರುವ ಸಸಿಗಳಿವು. ಸುಂಟರಗಾಳಿಗೆ ಆರಿ ಹೋಗದಂತೆ ಬೊಗಸೆ ಅಡ್ಡ ಹಿಡಿದು ಕಾಪಿಡಬೇಕಿರುವ ಬೆಳಕಿನ ಹಣತೆಗಳು.
ಇದನ್ನು ಓದಿದ್ದೀರಾ? ಆಲ್ಟ್ ನ್ಯೂಸ್ ಪತ್ರಕರ್ತ ಝುಬೈರ್‌ಗೆ ‘ಜಿಹಾದಿ’ ಹಣೆಪಟ್ಟಿ : ಕ್ಷಮೆ ಯಾಚಿಸಲು ವ್ಯಕ್ತಿಗೆ ದೆಹಲಿ ಹೈಕೋರ್ಟ್ ಆದೇಶ
ಈ ಪೈಕಿ ನಿರ್ಝರಿ ಸಿನ್ಹಾ-ಪ್ರತೀಕ್ ಸಿನ್ಹಾ- ಮಹಮ್ಮದ್ ಝುಬೇರ್ ಬಹುಕಷ್ಟದಿಂದ ಪೋಷಿಸಿಕೊಂಡು ಬಂದಿರುವ ಫ್ಯಾಕ್ಟ್ ಚೆಕ್ ಸಂಸ್ಥೆ ಆಲ್ಟ್ ನ್ಯೂಸ್.ಕಾಂ. ಈ ಸಂಸ್ಥೆ ಮತ್ತು ವಿಶೇಷವಾಗಿ ಮಹಮ್ಮದ್ ಝುಬೇರ್ ಮೇಲೆ ಪ್ರಭುತ್ವ ಮತ್ತು ಹಿಂದುತ್ವವಾದಿಗಳು ತೀವ್ರ ದಾಳಿ ನಡೆಸುತ್ತಲೇ ಬಂದಿದ್ದಾರೆ.
ಆದರೂ ಜಗ್ಗದೆ ಸುಳ್ಳನ್ನು ಸುಳ್ಳೆಂದು ಕರೆಯುವ ಝುಬೇರ್ ಮತ್ತು ಆಲ್ಟ್ ನ್ಯೂಸ್ ದಿಟ್ಟತನ ಕೊಂಚವೂ ಕುಂದಿಲ್ಲ. ಅವರನ್ನು ಜೈಲಿಗೆ ದೂಡುವ ಹಲವು ಪ್ರಯತ್ನಗಳು ಈ ಹಿಂದೆ ನಡೆದಿವೆ. ಇದೀಗ ಅವರ ಮೇಲೆ ದೇಶದ್ರೋಹಕ್ಕೆ ಸಮನಾದ ಗಂಭೀರ ಮಿಥ್ಯಾರೋಪ ಹೊರಿಸಲಾಗಿದೆ.
ಸತ್ಯ ಹೇಳುವುದು ದೇಶಪ್ರೇಮ. ಸಾಮಾಜಿಕ ಸಾಮರಸ್ಯ ಕಾಪಾಡುವುದು ದೇಶಪ್ರೇಮ. ಜಾತಿಪದ್ಧತಿಯನ್ನು ಆಚರಿಸುವುದು ದೇಶದ್ರೋಹ. ಅಸ್ಪೃಶ್ಯತೆ ಆಚರಣೆ ದೇಶದ್ರೋಹ, ಮಾನವ ಮಲವನ್ನು ಸಹಮಾನವರಿಂದ ಬಳಿಸಿ ಹೊರಿಸುವುದು ದೇಶದ್ರೋಹ, ಅಸಮಾನತೆ ಆಚರಣೆ ದೇಶದ್ರೋಹ, ಸಂವಿಧಾನವನ್ನು ವಿರೋಧಿಸುವುದು ದೇಶದ್ರೋಹ.
