ವಂಚನೆ-ಭ್ರಷ್ಟಾಚಾರ ಪ್ರಕರಣದಲ್ಲಿ ‘NDTV’ಗೆ ಕ್ಲೀನ್‌ ಚಿಟ್; 7 ವರ್ಷಗಳ ಸಿಬಿಐ ತನಿಖೆಯ ಮರ್ಮವೇನು?

Date:

Advertisements
ಎನ್‌ಡಿ ಟಿವಿಯ ಸಂಸ್ಥಾಪಕರಾದ ಪ್ರಣಯ್ ಮತ್ತು ರಾಧಿಕಾ ರಾಯ್ ಅವರಿಗೆ ಸಿಬಿಐ ತನಿಖೆ, ವಿಚಾರಣೆ ಹೆಸರಿನಲ್ಲಿ ನಿರಂತರವಾಗಿ ಏಳು ವರ್ಷಗಳ ಕಾಲ ತೊಂದರೆ ಕೊಟ್ಟಿದೆ. ಎನ್‌ಡಿ ಟಿವಿಯಿಂದ ಹೊರನಡೆಯುವಂತೆ ನೋಡಿಕೊಳ್ಳಲಾಗಿದೆ. ಇದೀಗ, ಎನ್‌ಡಿ ಟಿವಿ ಸಂಸ್ಥೆಯನ್ನು ಮೋದಿ ಗೆಳೆಯ ಅದಾನಿ ಕೊಂಡುಕೊಂಡಿದ್ದಾರೆ. ಹೀಗಾಗಿ, ಎನ್‌ಡಿ ಟಿವಿ ವಿರುದ್ಧದ ಎಲ್ಲ ಪ್ರಕರಣಗಳನ್ನು, ತನಿಖೆಯನ್ನು ಸಿಬಿಐ ಕೈಬಿಟ್ಟಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ. 

ಎನ್‌ಡಿಟಿವಿ ಸಂಸ್ಥಾಪಕರಾದ ಪ್ರಣಯ್ ಮತ್ತು ರಾಧಿಕಾ ರಾಯ್ ವಿರುದ್ಧದ ಸಿಬಿಐ ದಾಖಲಿಸಿದ್ದ ಭ್ರಷ್ಟಾಚಾರ ಮತ್ತು ವಂಚನೆ ಪ್ರಕರಣವನ್ನು ಸ್ವತಃ ಸಿಬಿಐ ಮುಕ್ತಾಯಗೊಳಿಸಿದೆ. ಪ್ರಕರಣದಲ್ಲಿ ಯಾವುದೇ ಅಪರಾಧಗಳು ನಡೆದಿಲ್ಲವೆಂದು ಕ್ಲೀನ್‌ ಚಿಟ್‌ ಕೊಟ್ಟಿದೆ. ಆಗ ಪ್ರಕರಣ ದಾಖಲಿಸಿ, ಈಗ ಅಪರಾಧವೇ ನಡೆದಿಲ್ಲವೆಂದು ಹೇಳುತ್ತಿರುವ ಸಿಬಿಐ ತನಿಖೆಯ ಬಗ್ಗೆ ವ್ಯಾಪಕ ಅನುಮಾನಗಳು ವ್ಯಕ್ತವಾಗುತ್ತಿವೆ. ತನಿಖೆಯ ವಿಳಂಬದ ಬಗ್ಗೆಯೇ ಪ್ರಶ್ನೆಗಳು ಮುನ್ನೆಲೆ ಬಂದಿವೆ.

ಎನ್‌ಡಿಟಿವಿಯು ಸಂಸ್ಥೆಗಾಗಿ ಐಸಿಐಸಿಐ ಬ್ಯಾಂಕ್‌ನಲ್ಲಿ 375 ಕೋಟಿ ರೂ. ಸಾಲ ಪಡೆದಿತ್ತು. ಆ ಸಾಲದ ವಿಚಾರದಲ್ಲಿ ಬ್ಯಾಂಕ್‌ಗೆ ಎನ್‌ಡಿಟಿವಿ ಸಂಸ್ಥಾಪಕರು ವಂಚನೆ ಮಾಡಿದ್ದಾರೆ ಮತ್ತು ಭ್ರಷ್ಟಾಚಾರ ಪಿತೂರಿ ಹೆಣೆದಿದ್ದಾರೆ ಎಂದು 2017ರಲ್ಲಿ ಪ್ರಣಯ್ ಮತ್ತು ರಾಧಿಕಾ ರಾಯ್ ವಿರುದ್ಧ ಸಿಬಿಐ ಕ್ರಿಮಿನಲ್ ಪ್ರಕರಣ ದಾಖಲಿಸಿತ್ತು. ಇದೀಗ ತನಿಖೆಯನ್ನು ಮುಕ್ತಾಯಗೊಳಿಸಿದೆ.

 ”ರಾಯ್‌ ಅವರ ಸಂಸ್ಥೆ ‘M/s RRPR ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್‌/ಗೆ ಐಸಿಐಸಿಐ ಬ್ಯಾಂಕ್‌ 375 ಕೋಟಿ ರೂ. ಸಾಲವನ್ನು ಮಂಜೂರು ಮಾಡುವಲ್ಲಿ ಯಾವುದೇ ತಪ್ಪು ನಡೆದಿಲ್ಲ. ಸಾಮಾನ್ಯವಾದ ವ್ಯಾಪಾರ ಸಂಬಂಧಿ ವ್ಯವಹಾರಗಳು ನಡೆದಿವೆ. ಯಾವುದೇ ಕ್ರಿಮಿನಲ್ ಅಂಶಗಳು ಕಂಡುಬಂದಿಲ್ಲ. ಯಾವುದೇ ನಿಯಮದ ಉಲ್ಲಂಘನೆಯಾಗಿಲ್ಲ” ಎಂದು ಸಿಬಿಐ ತನ್ನ ಮುಕ್ತಾಯದ ವರದಿಯಲ್ಲಿ ಹೇಳಿದೆ.

Advertisements

ಅಲ್ಲದೆ, ಸಿಬಿಐ ತನ್ನ ತನಿಖೆಯಲ್ಲಿ ಐಸಿಐಸಿಐ ಬ್ಯಾಂಕ್‌ ವಿತರಿಸಿರುವ ಇತರ ಸಾಲಗಳನ್ನೂ ವಿಶ್ಲೇಷಿಸಿದೆ. ”ಎನ್‌ಡಿ ಟಿವಿ ಪ್ರಕರಣವೇನು ಪ್ರತ್ಯೇಕ ಪ್ರಕರಣವಲ್ಲ. ಬ್ಯಾಂಕ್‌ ಅಂತಹ ಸಾಲ ಸೌಲಭ್ಯವನ್ನು ಹಲವು ಕಂಪನಿಗಳಿಗೆ ಒದಗಿಸಿದೆ” ಎಂದು ಹೇಳಿದೆ.

ಸುಮಾರು 30 ಪ್ರಕರಣಗಳು…

ಸಿಬಿಐ ವರದಿಯು ಆರ್‌ಬಿಐ ಸ್ಪಷ್ಟೀಕರಣವನ್ನು ಹೊಂದಿದೆ. ಅಂತಹ ಹಲವಾರು ಸಾಲಗಳನ್ನು ಬ್ಯಾಂಕ್‌ನಿಂದ ಮಂಜೂರು ಮಾಡಲಾಗಿದೆ ಎಂಬುದನ್ನು ಉಲ್ಲೇಖಿಸಿದೆ.

ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಸೆಕ್ಷನ್ 19(2) ಮತ್ತು ಆರ್‌ಬಿಐನ 28.08.1998ರ ಸುತ್ತೋಲೆಯನ್ನು ಉಲ್ಲಂಘಿಸಿ ಸಾಲ ನೀಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ಎನ್‌ಡಿಯು-ಪಿಒಎ ವ್ಯವಸ್ಥೆ ಅಡಿಯಲ್ಲಿ ಸಾಲ ಮಂಜೂರು ಮಾಡುವುದು ಅಪರಾಧವಲ್ಲ ಎಂಬುದನ್ನು ಆರ್‌ಬಿಐ ಸ್ಪಷ್ಟಪಡಿಸಿದೆ ಎಂದು ಹೇಳಲಾಗಿದೆ.

ಇದೇ ಎನ್‌ಡಿಯು-ಪಿಒಎ ವ್ಯವಸ್ಥೆ ಅಡಿಯಲ್ಲಿ 2009ರ ಅಕ್ಟೋಬರ್‌ವರೆಗೆ ಐಸಿಐಸಿಐ ಬ್ಯಾಂಕ್‌ ಸುಮಾರು 30 ಸಂಸ್ಥೆಗಳಿಗೆ ಸಾಲ ಒದಗಿಸಿದೆ. ಆ 30 ಸಾಲಗಾರರ ಒಟ್ಟು ಸಾಲದ ಮೊತ್ತವು ಬರೋಬ್ಬರಿ 15,000 ಕೋಟಿ ರೂ.ಗಳು. ಹೆಚ್ಚುವರಿಯಾಗಿ, ಬ್ಯಾಂಕ್ ಎನ್‌ಡಿಯು-ಪಿಒಎ ಅಡಿಯಲ್ಲಿ 65 ಸಾಲಗಾರರಿಗೆ ಸಾಲ ನೀಡಿದೆ.

‘NDU-POA’ ಎಂದರೆ ‘ನಾನ್ ಡಿಸ್ಪೋಸಲ್ ಅಂಡರ್‌ಟೇಕಿಂಗ್-ಪವರ್ ಆಫ್ ಅಟಾರ್ನಿ’. ಇದು, ಶೇರುದಾರರಿಂದ ಕಂಪನಿಯ ಶೇರುಗಳ ಮಾರಾಟವನ್ನು ತಡೆಯುವ ಒಪ್ಪಂದವಾಗಿರುತ್ತದೆ.

‘ಸೆಬಿಯಿಂದ ಅನುಮತಿ ಪಡೆಯುವ ಅಗತ್ಯವಿಲ್ಲ…’

ಪ್ರಣಯ್ ರಾಯ್ ಅವರು ರೆಗ್ಯುಲೇಟರಿ ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾಕ್ಕೆ ಶೇರುಗಳನ್ನು ಬಹಿರಂಗಪಡಿಸಲು ವಿಫಲರಾಗಿದ್ದಾರೆ. ವ್ಯವಹಾರ ಸಂಬಂಧ ಸೆಬಿಯಿಂದ ಅನುಮತಿ ಪಡೆಯಲಾಗಿಲ್ಲ ಎಂಬ 2ನೇ ಆರೋಪವನ್ನೂ ಸಿಬಿಐ ದಾಖಲಿಸಿತ್ತು. ಆದರೆ, ಇದೀಗ ತನ್ನ ವರದಿಯಲ್ಲಿ, ‘ಸಾಲ ಪಡೆಯುವ ವ್ಯವಹಾರದಲ್ಲಿ ಸೆಬಿಯಿಂದ ಅನುಮತಿ ಅಗತ್ಯವಿಲ್ಲ’ ಎಂದು ಹೇಳಿದೆ.

ಸೆಬಿ, ತನ್ನ 04.08.2017ರ ಪತ್ರದಲ್ಲಿ ಸ್ಪಷ್ಟಪಡಿಸಿದಂತೆ, ಶೇರುಗಳ ಸ್ವತ್ತು ಮರುಸ್ವಾಧೀನ ಘೋಷಣೆಗಳಿಗೆ ಸಂಬಂಧಿಸಿದ ನಿಬಂಧನೆಯನ್ನು ಸೆಬಿಯು 2009ರಲ್ಲಿ ಸೇರಿಸಲಾಗಿದೆ. ಆದರೆ, ಎನ್‌ಡಿ ಟಿವಿಯ ಸಾಲದ ವ್ಯವಹಾರವು 2008ರಲ್ಲಿ ನಡೆದಿದ್ದು, ಈ ವ್ಯವಹಾರಕ್ಕೆ ಸೆಬಿಯ ನಿಯಮ ಅನ್ವಯವಾಗುವುದಿಲ್ಲ. ಹಾಗಾಗಿ, NDU-POA ವ್ಯವಸ್ಥೆ ಅಡಿಯಲ್ಲಿ ಸಾಲವನ್ನು ಪಡೆದುಕೊಳ್ಳುವ ಒಪ್ಪಂದಕ್ಕಾಗಿ ಸೆಬಿಯಿಂದ ಅನುಮತಿ ತೆಗೆದುಕೊಳ್ಳುವ ಅಗತ್ಯವಿಲ್ಲ.

‘MIBನಿಂದ ಅನುಮತಿ ಪಡೆಯುವ ಅಗತ್ಯವಿಲ್ಲ…’

ಶೇರುಗಳನ್ನು ಒತ್ತೆ ಇಡಲು ಎನ್‌ಡಿಟಿವಿ ಸಂಸ್ಥಾಪಕರು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ (ಎಂಐಬಿ) ಅನುಮತಿ ಪಡೆದಿಲ್ಲ ಎಂಬ ಆರೋಪ ಮಾಡಿದ್ದ ಸಿಬಿಐ, ಈಗ ಈ ಅನುಮತಿಯ ಅಗತ್ಯವೂ ಇಲ್ಲ ಎಂದು ಹೇಳಿದೆ.

”ಎಂಐಬಿ ಅಧೀನ ಕಾರ್ಯದರ್ಶಿ ಬರೆದಿದ್ದ 04.07.2017ರ ಪತ್ರದ ಪ್ರಕಾರ, ಎಂಐಬಿ ಮಾರ್ಗಸೂಚಿಗಳ ಪ್ರಕಾರ ಕಂಪನಿಯು ಯಾವುದೇ ಹಣಕಾಸು ಕಂಪನಿಯೊಂದಿಗೆ ಶೇರುಗಳನ್ನು ಒತ್ತೆ ಇಟ್ಟು ಸಾಲ ತೆಗೆದುಕೊಳ್ಳಲು ಎಂಬಿಐ ಅನುಮತಿ ತೆಗೆದುಕೊಳ್ಳುವ ಅಗತ್ಯವಿಲ್ಲ.’,

‘ಬಡ್ಡಿ ದರ ಕಡಿತವು ಪ್ರತ್ಯೇಕ ಪ್ರಕರಣವಲ್ಲ…’

ಕಡಿಮೆ ಬಡ್ಡಿದರದೊಂದಿಗೆ ICICI ಬ್ಯಾಂಕ್‌ಗೆ ಸಾಲದ ಮುಂಗಡ ಪಾವತಿಯು ಅಪರಾಧವೆಂದು ಪ್ರಕರಣ ದಾಖಲಿಸಿದ್ದಾಗ ಸಿಬಿಐ ಆರೋಪಿಸಿತ್ತು. ಆದರೆ, ಈಗ ಅದು ಅಪರಾಧವೂ ಅಲ್ಲ. ಪ್ರಕರಣವೂ ಅಲ್ಲವೆಂದು ಹೇಳಿದೆ.

”ಪ್ರಣಯ್ ರಾಯ್ ಅವರ ಸಂಸ್ಥೆಯು ನಿಯಮಿತವಾಗಿ ಬ್ಯಾಂಕಿಗೆ ಸಾಲದ ಮೊತ್ತಕ್ಕೆ ಬಡ್ಡಿಯನ್ನು ಪಾವತಿಸುತ್ತಿಲ್ಲ. ಅದಕ್ಕಾಗಿ, ಐಸಿಐಸಿಐ ಬ್ಯಾಂಕ್‌ನ ನಿರ್ದೇಶಕರ ಸಮಿತಿಯು 9 ತಿಂಗಳ ಬಡ್ಡಿಯ ಬದಲಿಗೆ 6 ತಿಂಗಳ ಬಡ್ಡಿ ಪಾವತಿಸುವಂತೆ DSRA (ಸಾಲ ಸೇವೆ ಕಾಯ್ದಿರಿಸಿದ ಖಾತೆ) ಅಡಿಯಲ್ಲಿ ಸೂಚನೆ ನೀಡಿದೆ. ಬಡ್ಡಿಯನ್ನು ಕಡಿತಗೊಳಿಸುವ ಪ್ರಸ್ತಾಪವನ್ನು ಶಿಫಾರಸು ಮಾಡಿದೆ. ಅಲ್ಲದೆ, ಪ್ರಸ್ತಾಪವನ್ನು ಬ್ಯಾಂಕ್‌ನ ಸಾಲ ಸಮಿತಿಯು ಅನುಮೋದಿಸಿದೆ. ಇದು ಅಪರಾಧ” ಎಂದು ಸಿಬಿಐ ಪ್ರಕರಣದಲ್ಲಿ ಆರೋಪಿಸಿತ್ತು.

ಆದರೆ, ಈಗ ಬಡ್ಡಿದರದ ಕಡಿತವು ಸಾಮಾನ್ಯ ಸಂಗತಿ ಎಂದು ಸಿಬಿಐನ ವರದಿ ಹೇಳುತ್ತಿದೆ, “ಐಸಿಐಸಿಐ ಬ್ಯಾಂಕ್‌, 2007-08, 2008-09 ಮತ್ತು 2009-10 ಆರ್ಥಿಕ ವರ್ಷಗಳಲ್ಲಿ 83 ಸಾಲದ ಖಾತೆಗಳಿಗೆ ಸಂಬಂಧಿಸಿದಂತೆ ಬಡ್ಡಿದರವನ್ನು ಕಡಿಮೆ ಮಾಡಿದೆ. ಬಡ್ಡಿದರವನ್ನು ಕಡಿಮೆ ಮಾಡುವುದು ಪ್ರತ್ಯೇಕ ಪ್ರಕರಣವಲ್ಲ. ICICI ಬ್ಯಾಂಕ್‌ಗೆ ಕಡಿಮೆ ಬಡ್ಡಿಯೊಂದಿಗೆ ಸಾಲದ ಹಣವನ್ನು ಮರುಪಾವತಿ ಮಾಡುವ ಪ್ರಸ್ತಾಪವನ್ನು ಸಂಸ್ಥೆಯು ಸ್ವೀಕರಿಸಿರುವುದೂ ಅಪರಾಧವಲ್” ಎಂದಿದೆ.

ಈ ವರದಿ ಓದಿದ್ದೀರಾ?: ಲೋಕಸಭೆ ಸೋಲಿನ ಆರೇ ತಿಂಗಳಲ್ಲಿ ಮಹಾರಾಷ್ಟ್ರವನ್ನು ಬಿಜೆಪಿ ಗೆದ್ದಿದ್ದು ಹೇಗೆ?; 6 ಕಾರಣಗಳಿವು

ಜೊತೆಗೆ, ”ಸಾಲದ ಮರುಪಾವತಿಗಾಗಿ 2009ರ ಆಗಸ್ಟ್ 5 ರಂದು ಅನುಮೋದಿಸಿದಂತೆ ಬಡ್ಡಿದರವನ್ನು 19% ರಿಂದ 9.65% ಕ್ಕೆ ಇಳಿಸುವಿಕೆಯು ಸಾಲಗಾರನ ಅಸಮರ್ಥತೆ, ಸಮಯೋಚಿತ ಪಾವತಿ, NDTVಯ ದುರ್ಬಲ ಆರ್ಥಿಕ ಕಾರ್ಯಕ್ಷಮತೆ, ಷೇರು ಬೆಲೆಯಲ್ಲಿ ಕುಸಿತ ಹಾಗೂ ಮುಂತಾದ ವಿವಿಧ ಅಂಶಗಳನ್ನು ಆಧರಿಸಿದೆ. ಹಾಗಾಗಿ, ಅಂತಹ ಬಡ್ಡಿದರದ ಕಡಿತವು ಅಪರಾಧವಲ್ಲ” ಎಂದೂ ಹೇಳಿದೆ.

2017ರಲ್ಲಿ ಮಾತ್ರ ನಿಯಮವನ್ನು ಅಳವಡಿಸಲಾಗಿದೆ…

NDTV ಸಂಸ್ಥಾಪಕರು ಕಾರ್ಪೊರೇಟ್ ವ್ಯವಹಾರಗಳ ಕಾನೂನನ್ನು ಉಲ್ಲಂಘಿಸಿ M/s VCPL ಕಂಪನಿಯಿಂದ ಸಾಲ ಪಡೆದಿದ್ದಾರೆ ಎಂದೂ ಸಿಬಿಐ ಆರೋಪಿಸಿತ್ತು. ಆದರೆ, ಈಗ ಆ ಕಾನೂನುಗಳನ್ನು 2017ರಲ್ಲಿ ಜಾರಿಗೆ ತಂದಿದ್ದು, ಹಿಂದಿನ ಸಾಲಕ್ಕೆ ಈ ನಿಮಯ ಅನ್ವಯಿಸುವುದಿಲ್ಲ ಎಂದು ಸಿಬಿಐ ತೀರ್ಮಾನಿಸಿದೆ.

“M/s VCPL ಕಂಪನಿಯಿಂದ ರಾಯ್‌ ಅವರ ಸಂಸ್ಥೆಯು 21.07.2009ರಂದು ನಡೆದ ಒಪ್ಪಂದದ ಅಡಿಯಲ್ಲಿ 05.08.2009 ರಂದು 350 ಕೋಟಿ ರೂ.ಗಳನ್ನು ಸಾಲ ಪಡೆದಿದೆ. ಜೊತೆಗೆ, 25.01.2010ರಂದಿನ ಸಾಲ ಒಪ್ಪಂದದ ಆಧಾರದ ಮೇಲೆ M/s Shenano Retail pvt lmt., ರಿಲಯನ್ಸ್ ಸ್ಟ್ರಾಟೆಜಿಕ್ ಇನ್ವೆಸ್ಟ್ಮೆಂಟ್ ಪ್ರೈ. ಲಿಮಿಟೆಡ್, ರಿಲಯನ್ಸ್ ವೆಂಚರ್ಸ್ ಲಿಮಿಟೆಡ್ ಇತ್ಯಾದಿ ಕಂಪನಿಗಳಿಂದ 53.75 ಕೋಟಿ ರೂ.ಗಳನ್ನು ಸಾಲ ಪಡೆದಿದೆ.”

“ಆದರೆ, ಬ್ಯಾಂಕಿಂಗ್ ಕಂಪನಿಗಳು, ಹಣಕಾಸು ಕಂಪನಿಗಳು, ವಿಮಾ ಕಂಪನಿಗಳು, ಸರ್ಕಾರಿ ಕಂಪನಿಗಳು ಇತ್ಯಾದಿಗಳನ್ನು ಹೊರತುಪಡಿಸಿ ಯಾವುದೇ ಕಂಪನಿಯು ಎರಡು ಲೇಯರ್‌ಗಳಿಗಿಂತ ಹೆಚ್ಚಿನ ಸಬ್ಸಿಡಿಗಳನ್ನು ಹೊಂದಿರಬಾರದು ಎಂಬ ನಿಯಮವನ್ನು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು 21.09.2017ರಂದು ತನ್ನ ಗೆಜೆಟ್ ಅಧಿಸೂಚನೆಯಲ್ಲಿ ಹೊರಡಿಸಿದೆ. ಹೀಗಾಗಿ, ಈ ನಿಯಮಗಳು ಎನ್‌ಡಿ ಟಿವಿ ನಡೆಸಿದ್ದ 2009ರ ವ್ಯವಹಾರಕ್ಕೆ ಅನ್ವಯವಾಗುವುದಿಲ್ಲ.”

ಐಸಿಐಸಿಐ ಬ್ಯಾಂಕ್‌ಗೆ 48 ಕೋಟಿ ರೂಪಾಯಿ ನಷ್ಟ ಮತ್ತು ಎನ್‌ಡಿಟಿವಿಯ ಪ್ರವರ್ತಕರು ಲಾಭ ಪಡೆದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಐಸಿಐಸಿಐ ಬ್ಯಾಂಕಿನ ಅಧಿಕಾರಿಗಳು ಯಾವುದೇ ರಹಸ್ಯ ಅಥವಾ ಕ್ರಿಮಿನಲ್ ಪಿತೂರಿ ಅಥವಾ ಅಧಿಕೃತ ಸ್ಥಾನದ ದುರುಪಯೋಗ ಮಾಡಿಕೊಂಡಿಲ್ಲ ಎಂದು ಸಿಬಿಐ ತನ್ನ ಮುಕ್ತಾಯದ ವರದಿಯಲ್ಲಿ ಹೇಳಿದೆ.

ಸಿಬಿಐ ವರದಿಯ ಪ್ರಕಾರ, ರಾಯ್‌ ಅವರ ಸಂಸ್ಥೆಗೆ ಐಸಿಐಸಿಐ ಬ್ಯಾಂಕ್‌ನಿಂದ ಸಾಲದ ಮಂಜೂರಾತಿಯು ಯಾವುದೇ ಕಾನೂನು ಮತ್ತು ಮಾನದಂಡಗಳನ್ನು ಉಲ್ಲಂಘಿಸಿಲ್ಲ ಮತ್ತು ಯಾವುದೇ ಅಪರಾಧವನ್ನು ಸಾಬೀತು ಮಾಡಲು ಸಾಧ್ಯವಾಗಿಲ್ಲ.

ಇಷ್ಟಲ್ಲಾ ಆಗಿದ್ದು ಹೇಗೆ?

ಪ್ರಕರಣವನ್ನು ಸಿಬಿಐ ಮುಚ್ಚಿದೆ. ಆದರೆ, ಎನ್‌ಡಿ ಟಿವಿಯ ಸಂಸ್ಥಾಪಕರಾದ ಪ್ರಣಯ್ ಮತ್ತು ರಾಧಿಕಾ ರಾಯ್ ಅವರಿಗೆ ಸಿಬಿಐ ತನಿಖೆ, ವಿಚಾರಣೆ ಹೆಸರಿನಲ್ಲಿ ನಿರಂತರವಾಗಿ ಏಳು ವರ್ಷಗಳ ಕಾಲ ತೊಂದರೆ ಕೊಟ್ಟಿದೆ. ಎನ್‌ಡಿ ಟಿವಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದ್ದೇ ಸಂಸ್ಥೆಯು ಪ್ರಧಾನಿ ಮೋದಿ ಮತ್ತು ಬಿಜೆಪಿ-ಆರ್‌ಎಸ್‌ಎಸ್‌ನ ಕೋಮುವಾದಿ, ಜನ ವಿರೋಧಿ ನೀತಿಗಳನ್ನು ತೀಕ್ಷ್ಣವಾಗಿ ಖಂಡಿಸುತ್ತಿದ್ದ ಕಾರಣಕ್ಕೆ ಎಂಬುದು ಜಗಜ್ಜಾಹೀರಾಗಿದ್ದ ವಿಚಾರ. ಇದೀಗ, ಎನ್‌ಡಿ ಟಿವಿಯನ್ನು ಮೋದಿ ಅವರ ಅತ್ಯಾಪ್ತ ಅದಾನಿ ಕೊಂಡುಕೊಂಡಿದ್ದಾರೆ. ಈಗ ಎನ್‌ಡಿ ಟಿವಿ ಅದಾನಿ ಸುಪರ್ದಿಯಲ್ಲಿದೆ, ಅವರ ಕೈಗೊಂಬೆಯಾಗಿ ಮಾರ್ಪಟ್ಟಿದೆ. ಮೋದಿ ಮೀಡಿಯಾಗಳ ಪಟ್ಟಿಯಲ್ಲಿದೆ. ಹೀಗಾಗಿ, ಎನ್‌ಡಿ ಟಿವಿ ವಿರುದ್ಧದ ಎಲ್ಲ ಪ್ರಕರಣಗಳನ್ನು, ಪ್ರಕರಣಗಳ ತನಿಖೆಯನ್ನು ಸಿಬಿಐ ಕೈಬಿಟ್ಟಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

Download Eedina App Android / iOS

X