ಬಾಂಗ್ಲಾದೇಶದಲ್ಲಿ ‘ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್’ (ಇಸ್ಕಾನ್)ನ ಚಟುವಟಿಕೆಗಳನ್ನು ನಿಷೇಧಿಸಲು ಬಾಂಗ್ಲಾ ಹೈಕೋರ್ಟ್ ನಿರಾಕರಿಸಿದೆ. ಇಸ್ಕಾನ್‌ನ ಇತ್ತೀಚಿನ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸರ್ಕಾರವು ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ಒದಗಿಸುವಂತೆ ನ್ಯಾಯಾಲಯವು ಅಟಾರ್ನಿ ಜನರಲ್‌ಗೆ ಸೂಚನೆ ನೀಡಿದೆ.
ಇತ್ತೀಚೆಗೆ, ದೇಶದ್ರೋಹದ ಆರೋಪದ ಮೇಲೆ ಹಿಂದು ಸಂಘಟನೆಯ ಮುಖಂಡ ಚಿನ್ಮೋಯ್ ಕೃಷ್ಣ ದಾಸ್ ಎಂಬಾತನನ್ನು ಬಂಧಿಸಲಾಗಿತ್ತು. ಆತನನ್ನು ಈ ಹಿಂದೆ ಇಸ್ಕಾನ್‌ನಿಂದ ಹೊರಹಾಕಲಾಗಿತ್ತು. ಆತನನ್ನು ಬಂಧಿಸಿದ ಕಾರಣಕ್ಕೆ ಆತನ ಬೆಂಬಲಿಗರು ಮತ್ತು ಭದ್ರತಾ ಸಿಬ್ಬಂದಿಗಳ ನಡುವೆ ಘರ್ಷಣೆ ನಡೆದು, ವಕೀಲರೊಬ್ಬರು ಸಾವನ್ನಪ್ಪಿದ್ದರು. ಘರ್ಷಣೆ ನಡೆಸಿದ ಸಂಘಟನೆಗೆ ಇಸ್ಕಾನ್ ಜೊತೆ ನೇರ ಸಂಬಂಧವಿದ್ದು, ಇಸ್ಕಾನ್‌ಅನ್ನು ದೇಶದಲ್ಲಿ ನಿಷೇಧಿಸಬೇಕೆಂದು ಕೆಲ ವಕೀಲರು ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು.
ಗುರುವಾರ ಹೈಕೋರ್ಟ್ ಕಲಾಪ ಆರಂಭವಾದಾಗ, ಅಟಾರ್ನಿ ಜನರಲ್ ಕಚೇರಿಯು, “ವಕೀಲ ಸೈಫುಲ್ ಇಸ್ಲಾಂ ಅಲಿಫ್ ಹತ್ಯೆ ಮತ್ತು ಇಸ್ಕಾನ್ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪ್ರಕರಣಗಳಲ್ಲಿ 33 ಆರೋಪಿಗಳನ್ನು ಬಂಧಿಸಲಾಗಿದೆ” ಎಂದು ನ್ಯಾಯಾಲಯಕ್ಕೆ ತಿಳಿಸಿದೆ.
“ಇಸ್ಕಾನ್‌ಅನ್ನು ನಿಷೇಧಿಸಲು ಸಾಧ್ಯವಿಲ್ಲ. ನಿಷೇಧದ ಕ್ರಮ ತೆಗೆದುಕೊಳ್ಳಲು ಅಂತಹ ಯಾವುದೇ ಪುರಾವೆಗಳಿಲ್ಲ. ಆದಾಗ್ಯೂ, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಬಾಂಗ್ಲಾದೇಶದ ಜನ ಜೀವನ ಮತ್ತು ಆಸ್ತಿಯನ್ನು ರಕ್ಷಿಸುವ ಬಗ್ಗೆ ಸರ್ಕಾರವು ಜಾಗರೂಕರಾಗಿರಬೇಕು. ಹಿಂದು ಸೇರಿದಂತೆ ಇತರ ಎಲ್ಲ ಅಲ್ಪಸಂಖ್ಯಾತ ಸಮುದಾಯಗಳ ಸುರಕ್ಷತೆ ಮತ್ತು ಭದ್ರತೆಯನ್ನು ಸರ್ಕಾರವು ಖಾತ್ರಿಪಡಿಸಬೇಕು” ಎಂದು ಹೈಕೋರ್ಟ್ ಹೇಳಿದೆ.
ಈ ನಡುವೆ, ಸುಪ್ರೀಂ ಕೋರ್ಟ್ ವಕೀಲರ ಸಂಘವು ಬುಧವಾರ ಬಾಂಗ್ಲಾ ಸರ್ಕಾರಕ್ಕೆ ಲೀಗಲ್ ನೋಟಿಸ್ ಕಳುಹಿಸಿದೆ. “ಇಸ್ಕಾನ್ಅನ್ನು ‘ತೀವ್ರಗಾಮಿ ಸಂಘಟನೆ’ ಎಂದು ಘೋಷಿಸಿ, ನಿಷೇಧಿಸಬೇಕು” ಎಂದು ಒತ್ತಾಯಿಸಿದೆ.
“ಇಸ್ಕಾನ್ ಬಾಂಗ್ಲಾದೇಶದಲ್ಲಿ ತೀವ್ರಗಾಮಿ ಸಂಘಟನೆಯಾಗಿ ಕಾರ್ಯನಿರ್ವಹಿಸುತ್ತಿದೆ. ಕೋಮುಗಲಭೆಯನ್ನು ಪ್ರಚೋದಿಸುವ ತಂತ್ರಗಳನ್ನು ಎಣೆಯುವ ಚಟುವಟಿಕೆಗಳಲ್ಲಿ ತೊಡಗಿದೆ. ಪಂಥೀಯ ಹಿಂಸಾಚಾರವನ್ನು ಪ್ರಚೋದಿಸುವ ಉದ್ದೇಶದಿಂದ ಸಾಂಪ್ರದಾಯಿಕ ಹಿಂದು ಸಮುದಾಯಗಳ ಮೇಲೆ ತನ್ನ ನಂಬಿಕೆಗಳನ್ನು ಹೇರುವ ಕೆಲಸ ಮಾಡುತ್ತಿದೆ” ಎಂದು ನೋಟಿಸ್‌ನಲ್ಲಿ ಆರೋಪಿಸಲಾಗಿದೆ.