ಗಂಭೀರವಾದ ಓದು ಅಧ್ಯಯನದಿಂದ ಬದುಕು ಹಾಗೂ ಸಮಾಜವನ್ನು ಹಲವು ಆಯಾಮಗಳಲ್ಲಿ ಗ್ರಹಿಸಬಹುದು ಎಂದು ಬಸವಕಲ್ಯಾಣದ ಶ್ರೀ ಬಸವೇಶ್ವರ ಪದವಿ ಕಾಲೇಜು ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಹೇಳಿದರು.
ಹುಮನಾಬಾದ್ ಪಟ್ಟಣದ ಎಸ್‌ಬಿಸಿಎಸ್ ಕಲಾ ಮತ್ತು ಎಸ್‌ವಿ ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪದವಿ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳ ಸ್ವಾಗತ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ʼಜಗತ್ತಿನ ಶ್ರೇಷ್ಠ ಕೃತಿಗಳನ್ನು ಅನುಸಂಧಾನ ಮಾಡುವ ಮೂಲಕ ಸಂವೇದನಾಶೀಲತೆ ಬೆಳೆಯುತ್ತದೆʼ ಎಂದರು.
ʼಬಹುಶಿಸ್ತೀಯ ಮತ್ತು ಅಂತರ್ಶಿಸ್ತೀಯ ಅಧ್ಯಯನದಿಂದ ಹೊಸ ತಿಳುವಳಿಕೆ ಹುಟ್ಟುತ್ತವೆ. ಗಾಢವಾದ ಅಧ್ಯಯನದಿಂದ ಲೋಕದರ್ಶನ ಕಂಡುಕೊಳ್ಳಲು ಸಾಧ್ಯ. ಸಾಮಾಜಿಕ ಬದುಕನ್ನು ಹೇಗೆ ಪ್ರವೇಶಿಸಬೇಕು ಎಂಬ ಅರಿವು ವಿದ್ಯಾರ್ಥಿಗಳಲ್ಲಿ ಶಿಕ್ಷಣ ಮೂಡಿಸುತ್ತದೆ. ವಿಜ್ಞಾನ, ತಂತ್ರಜ್ಞಾನ, ,ಮಾನವಿಕ ವಿಭಾಗಗಳಲ್ಲಿ ಈ ಕಾಲದಲ್ಲಿ ನಡೆಯುವ ಹೊಸ ಆವಿಷ್ಕಾರ, ಸಂಶೋಧನೆಗಳು ತಿಳಿದುಕೊಳ್ಳುವ, ಹೊಸ ಅಧ್ಯಯನಗಳು ಅರಿಯುವ ಮೂಲಕ ನಮ್ಮ ಜ್ಞಾನ ವಿಸ್ತರಿಸಿಕೊಳ್ಳಬೇಕಿದೆʼ ಎಂದರು.
ʼನಮ್ಮ ಓದು ಸಮಾಜದ ಹಲವು ತಾರತಮ್ಯಗಳು ನೀಗಿಸುವ ದಾರಿಯಾಗಬೇಕು. ವೈಚಾರಿಕ ಚಿಂತನೆ, ಪರಿಸರ ಪ್ರಜ್ಞೆ, ಬದುಕಿನ ಬಗ್ಗೆ ಆಳದ ಪ್ರೀತಿ ಮೂಡಿಸುವ ಕೆಲಸ ಶಿಕ್ಷಣದಿಂದ ಸಾಧ್ಯವಾಗುತ್ತದೆ. ಚರಿತ್ರೆ ನೆನಪು ಮತ್ತು ಸಮಕಾಲೀನ ಸ್ಪಂದನೆಗಳು ಸೃಷ್ಟಿಸುವ ಪ್ರಕ್ರಿಯೆ ಶಿಕ್ಷಣದಲ್ಲಿ ನಿರಂತರ ನಡೆಯಬೇಕುʼ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಪ್ರೊ. ರವೀಂದ್ರನಾಥಪ್ಪ ಶಾಯಪ್ಪ ಮಾತನಾಡಿ, ʼಶಿಸ್ತು, ಸಂಯಮ, ನಿರಂತರ ಅಧ್ಯಯನದಿಂದ ನಮ್ಮ ವ್ಯಕ್ತಿತ್ವದ ಬೆಳವಣಿಗೆಯಾಗುತ್ತದೆ. ಈ ಕಾಲದಲ್ಲಿ ಎದುರಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಸಿದ್ದರಾಗಬೇಕು. ಓದು-ಬರಹಗಳು ವಿದ್ಯಾರ್ಥಿಗಳ ಬದುಕು ರೂಪಿಸಿಕೊಳ್ಳಲು ಮಾರ್ಗವಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಾಲೇಜು ವೇದಿಕೆಯಾಗಿದೆʼ ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಸ್ನಾತಕೋತ್ತರ ಪದವೀಧರ ಗ್ರಾಮ ಪಂಚಾಯತ್ ಸದಸ್ಯನಾಗಿ ಆಯ್ಕೆ
ಈ ಸಂದರ್ಭದಲ್ಲಿ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಐಕ್ಯೂಎಸಿ ಸಂಯೋಜಕ ಪ್ರೊ. ಕ್ರಾಂತಿ ಕುಮಾರ್ ಪಂಚಾಳ ಮಾತನಾಡಿದರು. ಪ್ರೊ.ಚಂದ್ರಕಾಂತ ಲದ್ದೆ, ಪ್ರೊ. ಸಂಗ್ರಾಮ್ ರೆಡ್ಡಿ, ಪ್ರೊ.ಅವಿನಾಶ ಪಾಟೀಲ, ಡಾ.ಅರವಿಂದ ರಾಠೋಡ, ಡಾ.ಪ್ರವೀಣ ಕಲಬುರ್ಗಿ, ಡಾ.ವಿಕಾಸ ಪೋಸ್ತೆ, ಡಾ.ರಮಾದೇವಿ, ಪ್ರೊ. ದೀಪಕ ಕಲಬುರ್ಗಿ ಸೇರಿದಂತೆ ಹಲವರಿದ್ದರು. ಮೆಹಕ್ ಸ್ವಾಗತಿಸಿದರು. ನಿತಿನ್ ನಿರೂಪಿಸಿದರು. ಮಹಾದೇವ ವಂದಿಸಿದರು.