ಉಪಚುನಾವಣೆಯಲ್ಲಿ ಮೂರೂ ಕ್ಷೇತ್ರಗಳಲ್ಲಿ ಗೆದ್ದು ಬೀಗುತ್ತಿರುವ ಕಾಂಗ್ರೆಸ್, ವಕ್ಫ್ ಸೇರಿದಂತೆ ನಾನಾ ವಿವಾದಗಳನ್ನು ಮೆಟ್ಟಿ ಮುಂದೆ ಹೋಗುವ ಬಗ್ಗೆ ಕಾರ್ಯತಂತ್ರ ರೂಪಿಸುತ್ತಿದೆ. ಪಕ್ಷವನ್ನು ಪ್ರಬಲವಾಗಿ ಒಗ್ಗಟ್ಟಿನಿಂದ ಮುನ್ನಡೆಸುವ ಕುರಿತು ಚಿಂತಿಸುತ್ತಿದೆ. ಇದೇ ಸಮಯದಲ್ಲಿ, ಬಿಜೆಪಿ-ಜೆಡಿಎಸ್ ಮೈತ್ರಿ ಮತ್ತು ಪಕ್ಷಗಳಲ್ಲಿನ ಆಂತರಿಕ ಒಡಕು, ಭಿನ್ನಾಭಿಪ್ರಾಯಗಳು ಮುನ್ನೆಲೆಗೆ ಬಂದಿವೆ. ಚನ್ನಪಟ್ಟಣದಲ್ಲಿ ನಿಖಿಲ್ ಸೋಲಲು ಬಿಜೆಪಿಗರೂ ಕಾರಣವೆಂಬ ಆರೋಪಗಳು ಒಂದೆಡೆಯಾದರೆ, ಬಿಜೆಪಿಯೊಳಗೆ ಬಣ ರಾಜಕಾರಣ, ಜೆಡಿಎಸ್ ಒಳಗೆ ಬಂಡಾಯದ ಕಾವು ಹೆಚ್ಚಾಗಿದೆ. ಜೊತೆಗೆ, ಆಪರೇಷನ್ ಹಸ್ತದ ಆತಂಕವೂ ಜೆಡಿಎಸ್‌ಅನ್ನು ಕಾಡುತ್ತಿದೆ.
ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಗೆದ್ದು ಎಚ್.ಡಿ ಕುಮಾರಸ್ವಾಮಿ ಅವರು ಸಂಸತ್‌ಗೆ ಆಯ್ಕೆಯಾದ ಬಳಿಕ, ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕತ್ವದ ಸ್ಥಾನ ತೆರವಾಗಿತ್ತು. ಆ ಸ್ಥಾನಕ್ಕೆ ಜಿ.ಟಿ ದೇವೇಗೌಡ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಆ ಹುದ್ದೆ ಅವರ ಕೈಗೆ ಸಿಗದೆ ಸಿಟ್ಟಾಗಿದ್ದಾರೆ. ಜೆಡಿಎಸ್ ನಾಯಕರ ವಿರುದ್ಧ ಕಿಡಿಕಾರುತ್ತಿದ್ದಾರೆ. ತಮಗೆ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಕೈತಪ್ಪಲು ಸಾರಾ ಮಹೇಶ್ ಕಾರಣವೆಂದು ಆರೋಪ ಮಾಡಿದ್ದಾರೆ.
ಅಲ್ಲದೆ, ಮೈಸೂರು ದಸರಾ ಸಮಯದಲ್ಲಿ ಅವರ ಸಿಟ್ಟು ಸಾರ್ವಜನಿಕವಾಗಿ ವ್ಯಕ್ತವಾಗಿತ್ತು. ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪಿತೂರಿ ನಡೆದಿದೆ ಎಂದು ದಸರಾ ಉದ್ಘಾಟನೆಯ ವೇದಿಕೆ ಮೇಲೆ ದೇವೇಗೌಡ ಅಬ್ಬರಿಸಿದ್ದರು. ಬಿಜೆಪಿ-ಜೆಡಿಎಸ್ ಮೈತ್ರಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇನ್ನು, ಉಪಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಸ್ಪರ್ಧಿಸಿದ್ದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಪ್ರಚಾರಕ್ಕೂ ಜೆ.ಡಿ ದೇವೇಗೌಡ ಭಾಗಿಯಾಗಿರಲಿಲ್ಲ.
ಇದೀಗ, ಮಾಜಿ ಸಚಿವ ಎಚ್.ಡಿ ರೇವಣ್ಣ ಅವರ ಹೇಳಿಕೆ ಜೆಡಿಎಸ್ ಒಳಗೆ ಸಂಚಲ ಮೂಡಿಸಿದೆ. “ಕುಮಾರಸ್ವಾಮಿ ಇಲ್ಲದಿದ್ದರೆ ಜಿ.ಡಿ ದೇವೇಗೌಡ ಜೈಲಿಗೆ ಹೋಗುತ್ತಿದ್ದರು. ಜಿ.ಟಿ ದೇವೇಗೌಡರನ್ನು ಜೈಲಿಗಟ್ಟಲು ಸಿದ್ದರಾಮಯ್ಯ ಮುಂದಾಗಿದ್ದರು” ಎಂದು ರೇವಣ್ಣ ಆರೋಪಿಸಿದ್ದರು. ಅವರ ಈ ಹೇಳಿಕೆ ಜಿ.ಟಿ ದೇವೇಗೌಡರನ್ನು ಕೆರಳಿಸಿದೆ. “ನನ್ನ ಸಾರ್ವಜನಿಕ ಬದುಕಿನಲ್ಲಿ ನನ್ನ ವಿರುದ್ಧ ಯಾವುದೇ ಆರೋಪ, ಪ್ರಕರಣಗಳಿಲ್ಲ. ಸಿದ್ದರಾಮಯ್ಯ ನನ್ನನ್ನು ರಾಜಕೀಯವಾಗಿ ಸೋಲಿಸಲು ಯತ್ನಿಸಬಹುದು. ಆದರೆ, ವೈಯಕ್ತಿಕವಾಗಿ ಅವರು ಎಂದೂ ನನ್ನನ್ನು ದ್ವೇಷಿಸಿಲ್ಲ” ಎಂದು ಸಮರ್ಥಿಸಿಕೊಂಡಿದ್ದಾರೆ.
ಇತ್ತೀಚಿನ ಎಲ್ಲ ಬೆಳವಣಿಗೆಗಳು ಜಿ.ಟಿ ದೇವೇಗೌಡ ತಮ್ಮ ಒಂದು ಕಾಲನ್ನು ಜೆಡಿಎಸ್‌ನಿಂದ ಹೊರಗಿಟ್ಟಿರುವಂತೆ ಕಾಣಿಸುತ್ತಿದೆ. ಬಹುಶಃ ಅವರು ಕಾಂಗ್ರೆಸ್ ಸೇರಬಹುದಾದ ಎಲ್ಲ ಸಾಧ್ಯತೆಗಳೂ ಇವೆ. ಅವರ ಜೊತೆಗೆ, ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಕೂಡ ಕಾಂಗ್ರೆಸ್ ಎಡೆಗೆ ಹೊರಳುವ ಸಾಧ್ಯತೆಗಳಿವೆ. ಚನ್ನಪಟ್ಟಣ ಚುನಾವಣೆ ವೇಳೆ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಪರ ಪ್ರಚಾರ ಸಭೆಯಲ್ಲಿ ಸೋಮಶೇಖರ್ ಕಾಣಿಸಿಕೊಂಡಿದ್ದರು. ಜಿ.ಟಿ ದೇವೇಗೌಡ, ಸೋಮಶೇಖರ್ ಮಾತ್ರವಲ್ಲದೆ, ಹಲವು ಜೆಡಿಎಸ್ ಶಾಸಕರನ್ನು ಸಿ.ಪಿ ಯೋಗೇಶ್ವರ್ ಸಂಪರ್ಕಿಸಿದ್ದಾರೆ. ಕಾಂಗ್ರೆಸ್‌ಗೆ ಕರೆತರುವ ಪ್ರಯತ್ನದಲ್ಲಿದ್ದಾರೆ ಎಂದೂ ಹೇಳಲಾಗುತ್ತಿದೆ.
ಈ ವರದಿ ಓದಿದ್ದೀರಾ?: ಮಹಾರಾಷ್ಟ್ರ | ಬಿಜೆಪಿ ಗೆಲುವಿನಲ್ಲಿ ಆರ್‌ಎಸ್‌ಎಸ್ ಪಾತ್ರ; ಕಾಂಗ್ರೆಸ್ ಕಲಿಯಬೇಕಾದ ಪಾಠ
ಜೆಡಿಎಸ್ ಶಾಸಕರಿಗೆ ಕಾಂಗ್ರೆಸ್‌ನಲ್ಲಿ ಮತ್ತು ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ, 2028ರ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಖಾತ್ರಿ ಸೇರಿದಂತೆ ನಾನಾ ಭರವಸೆಗಳನ್ನು ನೀಡಲಾಗುತ್ತಿದೆ. ಶೀಘ್ರದಲ್ಲೇ ಜೆಡಿಎಸ್‌ನ ಕೆಲವು ಶಾಸಕರು ಕಾಂಗ್ರೆಸ್‌ಗೆ ಬರುವ ಸಾಧ್ಯತೆಗಳಿವೆ ಎಂಬ ಮಾತುಗಳಿವೆ. ಕಾಂಗ್ರೆಸ್ ಆಮಿಷಕ್ಕೆ ಒಳಗಾಗಗದಂತೆ ತಮ್ಮ ಶಾಸಕರಿಗೆ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ. ತಮ್ಮ ಶಾಸಕರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳಲು ಮನವೊಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ, ವಿಧಾನಸಭೆಯಲ್ಲಿ 17 ಮಂದಿ ಜೆಡಿಎಸ್ ಶಾಸಕರಿದ್ದಾರೆ. ಅವರಲ್ಲಿ ಅರ್ಧಕ್ಕಿಂತ ಹೆಚ್ಚು ಶಾಸಕರು ಒಟ್ಟಿಗೆ ಪಕ್ಷ ತೊರೆದು, ಕಾಂಗ್ರೆಸ್ ಸೇರಿದರೆ ಅದು ಪಕ್ಷಾಂತರವಾಗುವುದಿಲ್ಲ. ವಿಲೀನವೆಂದು ಹೇಳಲಾಗುತ್ತದೆ. ಹೀಗೆ ಮಾಡಿದರೆ, ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವ ಅಗತ್ಯವಾಗಲೀ, ಉಪಚುನಾವಣೆ ನಡೆಸುವ ಸಂದರ್ಭವಾಗಲೀ ಎದುರಾಗುವುದಿಲ್ಲ. ಹೀಗಾಗಿ, ಕನಿಷ್ಠ 9 ಮಂದಿ ಜೆಡಿಎಸ್ ಶಾಸಕರಿಗೆ ಕಾಂಗ್ರೆಸ್ ಗಾಳ ಹಾಕುತ್ತಿದೆ ಎಂದು ಹೇಳಲಾಗಿದೆ.