ಕಾರವಾರ ಮೆಡಿಕಲ್ ಕಾಲೇಜಿನ ಡೀನ್-ಡೈರೆಕ್ಟರ್ ಡಾ.ಗಜಾನನ ನಾಯಕ್, ದಲಿತ ದೌರ್ಜನ್ಯದ ಎರಡೆರಡು ಪ್ರಕರಣದಲ್ಲಿ ತಪ್ಪಿತಸ್ಥನೆಂದು ಪಕ್ಕಾ ಆಗಿರುವುದರಿಂದ ಸರಿಯಾದ ಶಿಕ್ಷೆ ವಿಧಿಸುವಂತೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಿಂದ ಸರಕಾರಕ್ಕೆ ಪತ್ರ ಹೋಗಿ ಎರಡೂವರೆ ತಿಂಗಳೇ ಕಳೆದುಹೋಗಿದೆ. ಡೀನ್ ಡಾ.ನಾಯಕ್ ಮಾತ್ರ ನಿರಾತಂಕವಾಗಿ 'ಆಡಳಿತ' ನಡೆಸಿಕೊಂಡಿದ್ದಾರೆ. ಕ್ರಿಮ್ಸ್‌ನ ದಲಿತ ಸಿಬ್ಬಂದಿ ಆತಂಕದಲ್ಲಿ ದಿನ ದೂಡುತ್ತಿದೆ. ಬೆಕ್ಕಿಗೆ ಘಂಟೆ ಕಟ್ಟುವವರು ಯಾರು?
ಕಾರವಾರ ವೈದ್ಯಕೀಯ ಮಹಾವಿದ್ಯಾಲಯ(ಕ್ರಿಮ್ಸ್) ಒಂದಿಲ್ಲೊಂದು ಅಕ್ರಮ, ಅವ್ಯವಹಾರ ಮತ್ತು ಅವಾಂತರದಿಂದ ಸದಾ ಸುದ್ದಿ-ಸದ್ದು ಮಾಡುತ್ತಲೇ ಇದೆ. ಡಾ.ಗಜಾನನ ನಾಯಕ್ ಡೀನ್ ಕಮ್ ಡೈರೆಕ್ಟರ್ ಆಗಿ ಬಂದ ಬಳಿಕವಂತೂ ಕ್ರಿಮ್ಸ್‌ನ ಮಾನ ಪದೇ ಪದೆ ಬೀದಿಗೆ ಬೀಳುತ್ತಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್ಎಂಎ)ದ ನಿಯಮಾವಳಿಯಂತೆ ಡಾ.ನಾಯಕ್‌ಗೆ ಸರಕಾರಿ ಮೆಡಿಕಲ್ ಕಾಲೇಜೊಂದರ ಡೀನ್-ಡೈರೆಕ್ಟರ್ ಆಗುವ ಅರ್ಹತೆಯೇ ಇಲ್ಲ. ಆರೋಗ್ಯ ಇಲಾಖೆಯ ಸಿಬ್ಬಂದಿಯಾದ ಡಾ.ಶಿವಾನಂದ್ ಕುಡ್ತಕರ್‍ಗೆ ಮೆಡಿಕಲ್ ಕಾಲೇಜಿನ ವೈದ್ಯಕೀಯ ಅಧೀಕ್ಷಕನಾಗುವ ಶೈಕ್ಷಣಿಕ ಯೋಗ್ಯತೆ ಮತ್ತು ಅವಕಾಶ ಇಲ್ಲವೆಂಬುದನ್ನು ವೈದ್ಯಕೀಯ ಶಿಕ್ಷಣ ಇಲಾಖೆಯೇ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದೆ. ಈ ಡೈರೆಕ್ಟರ್-ಸೂಪರಿಂಡೆಂಟೆಂಟ್ ಜೋಡಿ ತಮ್ಮಂತಹದೇ ಅನೇಕ ಅನರ್ಹರನ್ನು ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯಾಗಿ ನೇಮಿಸಿಕೊಂಡಿದೆ ಎಂಬ ಆರೋಪ ಕಾಲೇಜಿನ ಆವರಣ ದಾಟಿ ವೈದ್ಯಕೀಯ ಶಿಕ್ಷಣ ಇಲಾಖೆಯ ಅಂಗಳದಲ್ಲಿ ಮೊಳಗುತ್ತಿದೆ. ಆದರೂ ಅಕ್ರಮಗಳಿಗೆ ಕಡಿವಾಣ ಬಿದ್ದಿಲ್ಲ. ಹೀಗಾಗಿ ಕಾರವಾರ ಮೆಡಿಕಲ್ ಕಾಲೇಜು ಎಂದರೆ ಅನರ್ಹರ ಅಡ್ಡೆ ಎಂದು ಜನರು ಮಾತಾಡಿಕೊಳ್ಳುವುದು ನಿಂತಿಲ್ಲ.
ಕ್ರಿಮ್ಸ್‌ನಲ್ಲಿ ಅಕಾಡೆಮಿಕ್ ಪರಿಸರವಿಲ್ಲ. ಬದಲಿಗೆ ಬೋಧಕ ಸಿಬ್ಬಂದಿಯ ಗುಂಪು ಗುದುಮುರಿಗೆಯಿಂದಾಗಿ ಕಲಹ ವಾತಾವರಣ ನೆಲೆಯಾಗಿದೆ. ಶಿಕ್ಷಕರಲ್ಲಿ ಮೂರು ಪಂಗಡಗಳಿವೆ. ಒಂದು, ಡೀನ್ ಮತ್ತವರ ವಂದಿಮಾಗಧರದು; ಮತ್ತೊಂದು, ಡೀನ್ ಬಳಗದ ಅಕ್ರಮಗಳನ್ನು ಪ್ರಶ್ನಿಸುವ ವಿರೋಧಿಗಳದು. ಇನ್ನೊಂದು, ಈ ಎರಡೂ ಬಣದ ಉಸಾಬರಿಯಿಂದ ದೂರವಿರುವ ತಟಸ್ಥರದು. ಸದ್ರಿ ಬಣ ಬಡಿದಾಟ ಅಮಾಯಕ ವಿದ್ಯಾರ್ಥಿಗಳ ಭವಿಷ್ಯವನ್ನು ಬರಡಾಗಿಸುತ್ತಿದೆ. ‘ಗುರು’ಗಳ ಗುಂಪುಗಾರಿಕೆಯಿಂದ ಅಮಾಯಕ ವಿದ್ಯಾರ್ಥಿ ಸಮೂಹದಲ್ಲೂ ತಂಡಗಳು ಹುಟ್ಟಿಕೊಂಡಿವೆ. ಈ ಜಿದ್ದಾಜಿದ್ದಿ ಎಂಥ ಅನಾಹುತಕಾರಿಯಾಗಿದೆ ಎಂದರೆ, ಡೀನ್ ಬಣ ತಮಗಾಗದ ಅಮಾಯಕ ವಿದ್ಯಾರ್ಥಿಗಳನ್ನು ನಪಾಸ್ ಮಾಡಿಸುವ ಕ್ರೌರ್ಯಕ್ಕೂ ಹೇಸುತ್ತಿಲ್ಲ. ಕ್ರಿಮ್ಸ್‌ನ ಆರ್ಥಿಕ ಅವ್ಯವಹಾರದ ಪುರಾಣವಂತೂ ಹಲವು ಕಂತುಗಳ ಧಾರಾವಾಹಿಯಾಗುವಷ್ಟಿದೆ ಎನ್ನಲಾಗುತ್ತಿದೆ.
ಕಾರವಾರ ಮೆಡಿಕಲ್ ಕಾಲೇಜಿನಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬ ಅಳಲು ತುಂಬಾ ಹಳೆಯದು. ಇಲ್ಲಿ ನಡೆಯುತ್ತಿರುವ ದಲಿತರ ದಮನಿಸುವ ಡೈರೆಕ್ಟರ್ ಡಾ.ನಾಯಕ್ ತಂಡದ ಸರಣಿ ದಾಳಿಗೆ ಮತ್ತೊಂದು ಪ್ರಕರಣ ಈಚೆಗೆ ಸೇರ್ಪಡೆಯಾಗಿರುವುದು ದೊಡ್ಡ ಸಂಚಲವನ್ನೇ ಸೃಷ್ಟಿಸಿದೆ. ದಲಿತ ವರ್ಗದ ಕಮ್ಯುನಿಟಿ ಮೆಡಿಸಿನ್ ವಿಭಾಗದ ಸೀನಿಯರ್ ಪ್ರೊ. ಹೇಮಗಿರಿ ಕೆ. ಎಂಬವರಿಗೆ ಲೈಂಗಿಕ ಕಿರುಕುಳದ ಕೇಸ್‌ನಲ್ಲಿ ಸಿಲುಕಿಸಿ ಜೈಲಿಗಟ್ಟುವ ಡೈರೆಕ್ಟರ್ ಡಾ.ನಾಯಕ್‌ರ ಗುಂಪಿನ ದ್ವೇಷಾಸೂಯೆ ಸಂಚು ಈಗ ತಿರುಗುಬಾಣವಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಎನ್ಎಂಸಿ ನಿಯಮ ಮತ್ತು ಅರ್ಹತೆ-ಅನುಭದ ಆಧಾರದಲ್ಲಿ ಹೇಮಗಿರಿ ಡೀನ್-ಡೈರೆಕ್ಟರ್ ಹುದ್ದೆಗೆ ಸಹಜ ಆಯ್ಕೆ ಆಗಬೇಕಿತ್ತು. ಆದರೆ ಡಾ.ಗಜಾನನ ನಾಯಕ್ ಒಳದಾರಿಗಳ ಲಾಬಿ ವ್ಯವಸ್ಥಿತವಾಗಿ ನಡೆಸಿ ಡೀನ್-ಡೈರೆಕ್ಟರ್ ಪೀಠದಲ್ಲಿ ಪ್ರತಿಷ್ಠಾಪನೆ ಆಗಿದ್ದಾರೆ.

ಹುಬ್ಬಳ್ಳಿ ಕ್ರಿಮ್ಸ್‌ನಲ್ಲಿದ್ದ ಡಾ.ನಾಯಕ್ ಕಾರವಾರ ಕ್ರಿಮ್ಸ್‌ನ ಡೀನ್-ಡೈರೆಕ್ಟರ್ ಎಂದು 19.8.2022ರಂದು ಪಡೆದುಕೊಂಡ ನೇಮಕಾತಿ ಆದೇಶ ಎಲ್ಲ ನೀತಿ, ನಿಯಮಾವಳಿ ಮತ್ತು ನೈತಿಕತೆಗೆ ತದ್ವಿರುದ್ಧವಾಗಿತ್ತು. ನ್ಯಾಯಯುತವಾಗಿ ಕ್ರಿಮ್ಸ್‌ನ ಡೀನ್-ಡೈರೆಕ್ಟರ್ ಹುದ್ದೆ ದೊರೆಯಬೇಕಿದ್ದ ಡಾ.ಹೇಮಗಿರಿ ಈ ಅಕ್ರಮ ನೇಕಾತಿಯನ್ನು ಹೈಕೋರ್ಟ್‌ನ ಧಾರವಾಡ ವಿಭಾಗೀಯ ಪೀಠದಲ್ಲಿ ಪ್ರಶ್ನಿಸಿ ರಿಟ್ ಅರ್ಜಿ(106120/2023) ಸಲ್ಲಿಸುತ್ತಾರೆ. ಇದಕ್ಕೆ ಸಮಾನಾಂತರವಾಗಿ ಕಾಲೇಜಿನಲ್ಲಿ ಡೀನ್-ಡೈರೆಕ್ಟರ್ ನಾಯಕ್‌ಗೆ ತಿರುಗಿ ನಿಂತು ಅಕ್ರಮ-ನ್ಯಾಯ-ಅವ್ಯಹಾರವನ್ನು ಎತ್ತಿ ಆಡತೊಡಗುತ್ತಾರೆ. ಇದರಿಂದಾಗಿ ಡಾ.ನಾಯಕ್ ಮತ್ತು ಡಾ.ಹೇಮಗಿರಿ ಮಧ್ಯೆ ಜಿದ್ದಾಜಿದ್ದಿ ಬೆಳೆಯುತ್ತದೆ.
ಒಂಚೂರು ತರಲೆ ಸ್ವಭಾವದವರು ಎನ್ನಲಾಗುತ್ತಿರುವ ಡಾ.ಹೇಮಗಿರಿ ತನ್ನ ಸಮುದಾಯ ವೈದ್ಯಕೀಯ ಶಾಸ್ತ್ರ(Community Medicine) ವಿಭಾಗದಲ್ಲಿ ಸೀನಿಯರ್ ರೆಸಿಡೆಂಟ್ ಆಗಿದ್ದ ಪ್ರಶಿಕ್ಷಣಾರ್ಥಿನಿ(Trainee) ಓರ್ವಳಿಗೆ ಕಿರಿಕ್ ಮಾಡಿದ್ದರು. 2022ರಲ್ಲಿ ಕ್ರಿಮ್ಸ್‌ನಲ್ಲಿ ನಡೆದ ಸಮಾರಂಭವೊಂದರ ಸಂದರ್ಭದಲ್ಲಿ ಈ ಪ್ರಶಿಕ್ಷಣಾರ್ಥಿನಿ ವಸ್ತ್ರಸಂಹಿತೆ ಪಾಲಿಸಲಿಲ್ಲವೆಂದು ತರಾಟೆಗೆ ತೆಗೆದುಕೊಂಡಿದ್ದರು. ಈ ಸಂಘರ್ಷ ದ್ವೇಷಕ್ಕೆ ತಿರುಗುತ್ತದೆ. ಪ್ರಶಿಕ್ಷಣಾರ್ಥಿನಿ ಡಾ.ಹೇಮಗಿರಿಯಿಂದ ತನಗೆ ಕಿರಿಕಿರಿ ಆಗುತ್ತಿದೆ ಎಂದು ಡೀನ್‌ಗೆ ದೂರುತ್ತಾಳೆ. ತನ್ನ ಡೀನ್-ಡೈರೆಕ್ಟರ್ ಕುರ್ಚಿಗೆ ಕಂಟಕನಾಗುಗಿರುವ ಡಾ.ಹೇಮಗಿರಿಯನ್ನು ಹಣಿಯಲು ಇಂಥದೊಂದು ಸಂದರ್ಭಕ್ಕಾಗಿ ಹವಣಿಸುತ್ತಿದ್ದ ಡಾ.ನಾಯಕ್ ಟ್ರೈನಿ ವೈದ್ಯೆ ಪ್ರಕರಣ ಮಹಿಳಾ ಪೊಲೀಸ್ ಠಾಣೆ ತಲುಪುವಂತೆ ತಂತ್ರಗಾರಿಕೆ ಮಾಡುತ್ತಾರೆ. ಆದರೆ ಆಕೆ ಡೀನ್‌ಗಾಗಲಿ ಅಥವಾ ಪೊಲೀಸರಿಗಾಗಲಿ ನೀಡಿದ ದೂರಿನಲ್ಲೆಲ್ಲೂ ತಾನು ಕೆಲಸ ಮಾಡುತ್ತಿರುವ ಸಮುದಾಯ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥ(ಎಚ್ಒಡಿ) ಡಾ.ಹೇಮಗಿರಿಂದ ಲೈಂಗಿಕ ಕಿರುಕುಳ ಆಗುತ್ತಿದೆ ಎಂದು ಆರೋಪ ಮಾಡಿರುವುದಿಲ್ಲ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಭಾರತೀಯ ಜನತಾ ಪಕ್ಷಕ್ಕೆ ನೀತಿಯೂ ಇಲ್ಲ, ರೀತಿಯೂ ಇಲ್ಲ
ವಾಸ್ತವವಾಗಿ ಡೀನ್ ಹಂತದಲ್ಲೇ ಇತ್ಯರ್ಥವಾಗುವಂಥ ತೀರ ಸಣ್ಣ ತಗಾದೆ ಇದಾಗಿತ್ತು. ಕ್ರಿಮ್ಸ್‌ನಲ್ಲಿದ್ದ ಜೆಂಡರ್ ಹೆರಾಸ್ಮೆಂಟ್ ಕಮಿಟಿ(ಲಿಂಗ ತಾರತಮ್ಯ ಸಮಿತಿ) ಮುಂದೆ ವಿಚಾರಣೆಗೆ ಅವಕಾಶವೂ ಇತ್ತು. ಆದರೆ ಇದ್ಯಾವುದೂ ಡೀನ್-ಡೈರೆಕ್ಟರ್ ಡಾ.ನಾಯಕ್ ಬೇಕಾಗಿರಲಿಲ್ಲ. ಮಗ್ಗಲು ಮುಳ್ಳಾಗಿರುವ ಡಾ.ಹೇಮಗಿರಿಯವರನ್ನು ಬಗ್ಗು ಬಡಿಯುವುದೊಂದೆ ಡಾ.ನಾಯಕ್ ಗುರಿಯಾಗಿತ್ತು. ಡೀನ್ ಡಾ.ನಾಯಕ್ ಕ್ಷುಲ್ಲಕ ಡ್ರೆಸ್ ಕೋಡ್ ಕಿತ್ತಾಟಕ್ಕೆ ಗಂಭೀರ ಲೈಂಗಿಕ ಕಿರುಕುಳದ ಆಯಾಮ ಕೊಡುತ್ತಾರೆ. ದೆಹಲಿಯ ನಿರ್ಭಯಾ ಪ್ರಕರಣದ ಹಿನ್ನಲೆಯಲ್ಲಿ ರಚಿಸಲಾಗಿದ್ದ ನ್ಯಾ.ಜೆ.ಎಸ್.ವರ್ಮಾ ಸಮಿತಿಯ ವರದಿಯಂತೆ ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳವಾದ ದೂರು ಬಂದರೆ ಆಂತರಿಕ ತನಿಖಾ ಸಮಿತಿಯಿಂದ ವಿಚಾರಣೆ ನಡೆಸಬೇಕಾಗುತ್ತದೆ. ಇದನ್ನೇ ಅಸ್ತ್ರ ಮಾಡಿಕೊಂಡ ಡೀನ್ ಡಾ.ನಾಯಕ್ ತನ್ನ ಎದುರಾಳಿ ಡಾ.ಹೇಮಗಿರಿಯನ್ನು ಮಟ್ಟಹಾಕುವ ಒಳ ಉದ್ದೇಶದಿಂದ ‘ಆಂತರಿಕ ತನಿಖಾ ಸಮಿತಿ’ಯೊಂದನ್ನು ರಚಿಸುತ್ತಾರೆ.
ಈ ಸಮಿತಿ ನಿಷ್ಪಕ್ಷಪಾತವಾಗಿರಲಿಲ್ಲ. ಡಾ.ನಾಯಕ್ ರ ಹಂಗು-ಗುಂಗಿನವರೇ ಸಮಿತಿಯಲ್ಲಿ ತುಂಬಿಕೊಂಡಿದ್ದರು. ನಿಯಮದಂತೆ ಆಂತರಿಕ ತನಿಖಾ ಸಮಿತಿಯಲ್ಲಿ ಸಂಸ್ಥೆಯ ಹಿರಿಯ ಮಹಿಳಾ ಉದ್ಯೋಗಿ ಅಧ್ಯಕ್ಷೆಯಾಗಿರಬೇಕು. ಸಮಿತಿಯಲ್ಲ ಕನಿಷ್ಠ ನಾಲ್ಕು ಸದಸ್ಯರಿರಬೇಕು. ಇದರಲ್ಲಿ ಶೇ.50ರಷ್ಟು ಮಹಿಳಾ ಸದಸ್ಯೆಯರಿರಬೇಕು. ಮಹಿಳೆಯರ ಕಲ್ಯಾಣಕ್ಕಾಗಿ ಕೆಲಸಮಾಡುವ ಎನ್ಜಿಒ ಒಂದರ ಸದಸ್ಯೆ ಇರಬೇಕು. ಈ ನಿಯಮ ಉಲ್ಲಂಘಿಸಿ ಡೀನ್ ಡಾ.ನಾಯಕ್ ತನ್ನ ಋಣದಲ್ಲಿರುವ ನಿಷ್ಠಾವಂತ ಅನುಯಾಯಿಗಳಾದ ಡಾ.ಸರಿತಾ, ಡಾ.ಶಿವಕುಮಾರ್, ಡಾ.ಮಹಾಲಕ್ಷೀ ಕರ್ಲವಾಡ್, ಡಾ.ಶಿಲ್ಪಾ ಮತ್ತು ಕಾರವಾರದ ಸಮಾಜ ಸೇವಕನೆಂದುಕೊಳ್ಳುವ ಗುತ್ತಿಗೆದಾರ ಮಾಧವ್ ನಾಯ್ಕ್‌ರ ಟೀಮ್ ಕಟ್ಟಿ ಅದಕ್ಕೆ ‘ತನಿಖಾ ಸಮಿತಿ’ ಎಂದು ನಾಮಕರಣ ಮಾಡುತ್ತಾರೆ.
ಹಾಗೊಮ್ಮೆ ನ್ಯಾಯೋಚಿತವಾಗಿ ಆಂತರಿಕ ಪರಿಶೀಲನಾ ಸಮಿತಿ ರಚಿಸುವುದೇ ಆಗಿದ್ದರೆ ಅದಕ್ಕೆ ಕ್ರಿಮ್ಸ್‌ನ ಹಿರಿಯ ಪ್ರಾಧ್ಯಾಪಕಿ ಡಾ.ಪೂರ್ಣಿಮಾ ಅಧ್ಯಕ್ಷರಾಗಬೇಕಿತ್ತು. ಈ ಡಾ.ಪೂರ್ಣಿಮಾ ಆರಂಭದಿಂದಲೂ ಡೀನ್ ಡಾ.ನಾಯಕ್‌ರ ಅಡ್ಡಕಸುಬನ್ನೆಲ್ಲ ವಿರೋಧಿಸಿಕೊಂಡೇ ಬಂದವರು. ಹಾಗಾಗಿ ಡಾ.ಪೂರ್ಣಿಮಾರಿಗೆ ತನಿಖೆಯ ಮುಂದಾಳತ್ವ ಕೊಡುವ ಧೈರ್ಯ ಡಾ.ನಾಯಕ್‌ರಿಗೆ ಇರಲಿಲ್ಲ. ದಂತ ವೈದ್ಯೆ ಡಾ.ಸರಿತಾರಿಗೆ ಆಂತರಿಕ ತನಿಖಾ ಸಮಿತಿಯ ಅಧ್ಯಕ್ಷತೆ ಕೊಡಲಾಗಿತ್ತು. ಈ ಡಾ.ಸರಿತಾರ ಸೇವಾ ದಾಖಲೆ ಆಕ್ಷೇಪಾರ್ಹವಾಗಿದೆ. ಅಂದಿನ ಎಂಸಿಐ(ಮೆಡಿಕಲ್ ಕೌಸಿಲ್ ಆಫ್ ಇಂಡಿಯಾ) ಅಂದರೆ ಈಗಿನ ಎನ್ಎಂಸಿ(ನ್ಯಾಷನಲ್ ಮೆಡಿಕಲ್ ಕಮಿಷನ್) ವೈದ್ಯಕೀಯ ಕಾಲೇಜಿನಲ್ಲಿ ಬೋಧನಾ ಅನುಭವವಿಲ್ಲದ ಡಾ.ಸರಿತಾರಿಗೆ ಅಸೋಸಿಯೇಟ್ ಪ್ರೊಫೆಸರ್ ಆಗಿ ನೇಮಿಸಿರುವುದು ತಪ್ಪು ಎಂದು ಹೇಳಿತ್ತು. ಇಂಥವರಿಗೆ ಡೈರೆಕ್ಟರ್ ಡಾ.ನಾಯಕ್ ನಿಯಮ ಮೀರಿ ಪ್ರೊಫೆಸರ್ ಹುದ್ದೆಗೆ ಭಡ್ತಿ ಕೊಟ್ಟಿದ್ದಾರೆ. ಪ್ರಮೋಷನ್ ಕೂಡ ನಿಯಮಬಾಹೀರವೇ. ಪ್ರೊಫೆಸರ್ ಆಯ್ಕೆ ಹೊತ್ತಲ್ಲಿ ಡಾ.ಸರಿತಾರನ್ನು ‘ಸಾಮಾನ್ಯ ಗ್ರಾಮೀಣ ಅಭ್ಯರ್ಥಿ’ ಎಂದು ಪರಿಗಣಿಸಲಾಗಿದೆ. ಗ್ರಾಮೀಣ ಅಭ್ಯರ್ಥಿಯಾಗಲು ವಾರ್ಷಿಕ ಆದಾಯ 8 ಲಕ್ಷದ ಮಿತಿಯಲ್ಲಿರಬೇಕೆಂಬ ಷರತ್ತಿದೆ. ಆದರೆ ಈಗಾಗಲೆ ಅಸೋಸಿಯೇಟ್ ಪ್ರೊಫೆಸರ್ ಆಗಿದ್ದ ಡಾ.ಸರಿತಾರ ವಾರ್ಷಿಕ ಉತ್ಪನ್ನ 8 ಲಕ್ಷಕ್ಕಿಂತ ಜಾಸ್ತಿಯಿತ್ತು. ಈ ಅನರ್ಹತೆ ಮರೆಮಾಚಿ ಡೈರೆಕ್ಟರ್ ಡಾ.ನಾಯಕ್ ಮುಂಭಡ್ತಿ ದಯಪಾಲಿಸಿದ್ದರು. ಈ ಋಣ ಭಾರ ಡಾ.ಸರಿತಾರ ಮೇಲಿದೆ.
ಇದೇ ರೀತಿ ‘ತನಿಖಾ ನಾಟಕ ತಂಡ’ದ ಮತ್ತೊಬ್ಬ ಸದಸ್ಯೆ ಡಾ.ಮಹಾಲಕ್ಷ್ಮೀ ಕರ್ಲವಾಡ್ ಕೂಡ ಡೈರೆಕ್ಟರ್ ಡಾ.ನಾಯಕ್‌ರ ಕೃಪಾಕಟಾಕ್ಷದಿಂದ ಅರ್ಹತೆಗಳಿಲ್ಲದಿದ್ದರೂ ಉಪನ್ಯಾಸಕಿಯಾಗಿ ನೇಮಕಾತಿ ಪಡೆದುಕೊಂಡವರು. ಈ ಅಕ್ರಮ ನೇಮಕಾತಿ ವಿವಾದ ಇವತ್ತಿಗೂ ನಡೆಯುತ್ತಲೇ ಇದೆ. ಡಾ.ಮಹಾಲಕ್ಷ್ಮೀ ಕರ್ಲವಾಡ್ ಡೈರೆಕ್ಟರ್ ಡಾ.ನಾಯಕ್ ರ ಆಜ್ಞಾನುಧಾರಿ ಶಿಷ್ಯೆ ಎಂದೆ ಪರಿಗಣಿಸಲ್ಪಟ್ಟವರು. ಇನ್ನು ಮಹಿಳಾ ಸಬಲೀಕರಣ ಕಾರ್ಯಕ್ರಮ ಹಮ್ಮಿಕೊಳ್ಳುವ ಸರ್ಕಾರೇತರ ಸ್ವಯಂ ಸೇವಕ ಸಂಸ್ಥೆ(ಎನ್ಜಿಒ)ಯ ‘ಮಹಿಳಾ ಮೆಂಬರ್’ ಕೋಟಾದಲ್ಲಿ ತನಿಖಾ ತಂಡಕ್ಕೆ ಸೇರಿಸಲಾಗಿರುವ ‘ಪುರುಷ ಮೆಂಬರ್’ ಮಾಧವ ನಾಯ್ಕ್ ಡೀನ್ ಡಾ.ನಾಯಕ್‌ರ ಪರಮಾಪ್ತನೆಂದೇ ಕಾರವಾರದಲ್ಲಿ ಜನಜನಿತರಾಗಿರುವವರು. ಮಾಧವ ನಾಯ್ಕ್ ಹಿಂದಿನ ಡೀನ್-ಡೈರೆಕ್ಟರ್ ಡಾ.ದೊಡ್ಮನಿಯವರನ್ನು ಎತ್ತಂಗಡಿ ಮಾಡಿ ಆ ಹುದ್ದೆಗೆ ಡಾ.ನಾಯಕ್‌ರನ್ನು ತರಲು ಲಾಬಿ ನಡೆಸಿದ್ದು ಬಹಿರಂಗ ರಹಸ್ಯ.
ಡಾ.ನಾಯಕ್ ಕ್ರಿಮ್ಸ್‌ಗೆ ಬರುತ್ತಿದ್ದಂತೆಯೇ ಮಾಧವ ನಾಯ್ಕ ಸನ್ಮಾನಿಸಿದ್ದರು. ಇದಕ್ಕೆ ಪ್ರತಿಫಲವಾಗಿ ಮೆಡಿಕಲ್ ಕಾಲೇಜಿನ ಕ್ಯಾಂಟೀನ್ ಗುತ್ತಿಗೆ ಮತ್ತಿತರ ಬೇನಾಮಿ ಉಸ್ತವಾರಿಕೆ ಹಿಡಿದಿದ್ದಾರೆ. ಮಹಾನ್ ಭ್ರಷ್ಟಾಚಾರ ವಿರೋಧಿ ಆಂದೋಲನಕಾರ ತಾನೆಂದು ಹೇಳಿಕೊಳ್ಳುವ ಮಾಧವ ನಾಯ್ಕ್ ಕ್ರಿಮ್ಸ್‌ನಲ್ಲಿ ಕೋಟ್ಯಂತರ ರೂ. ಅವ್ಯವಹಾರ ಆಗುತ್ತಿದ್ದರೂ ಕಣ್ಣು ಮುಚ್ಚಿಕೊಂಡಿದ್ದಾರೆ ಎಂಬ ಆರೋಪಗಳು ಕಾಲೇಜಿನ ಕಾರಿಡಾರಿನಲ್ಲಿದೆ. ತಮಾಷೆಯೆಂದರೆ, ಈ ಮಾಧವ ಮಹಿಳಾ ಕಲ್ಯಾಣಕ್ಕೆ ದುಡಿಯುವುದಿರಲಿ, ಕ್ರಿಮ್ಸ್‌ನಲ್ಲಿ ಮೆಡಿಲ್ ಸೂಪರಿಂಡೆಂಟೆಂಟ್ ಡಾ.ಶಿವಾನಂದ ಕುಡ್ತರ್ಕರ್ ಮತ್ತವರ ಮಗನ ಅಚಾತುರ್ಯದಿಂದ ಬಾಣಂತಿ ಗೀತಾ ಬಾನಾವಳಿ ಸಾವಿಗೀಡಾದಾಗ ಪ್ರತಿಭಟನೆ ನಡೆಸಿದ ಮಹಿಳೆಯರ ವಿರುದ್ಧವೇ ‘ಹೋರಾಡಿದವರು’ ಎಂದು ಕಾರವಾರಿಗರು ಹೇಳುತ್ತಾರೆ.
ಡೀನ್-ಡೈರೆಕ್ಟರ್ ಡಾ.ಗಜಾನನ ನಾಯಕ್ ಕೃಪಾಪೋಷಿತ ತನಿಖಾ ನಾಟಕ ಮಂಡಳಿ ಡಾ.ಹೇಮಗಿರಿಯವರನ್ನು ಲೈಂಗಿಕ ಹಗರಣದಲ್ಲಿ ಸಿಲುಕಿಸಿ ನೈತಿಕವಾಗಿ ಕುಗ್ಗಿಸುವ, ಅವಮಾನಿಸುವ ರಹಸ್ಯ ಕಾರ್ಯಸೂಚಿ ಇಟ್ಟುಕೊಂಡು ಹುಸಿ ವಿಚಾರಣಾ ಪ್ರಕ್ರಿಯೆ ನಡೆಸಿದೆ ಎಂಬುದು ಅದು ತಯಾರಿಸಿದ ಬೋಗಸ್ ವರದಿಯೇ ಸಾರಿ ಹೇಳುವಂತಿದೆ. ಆಂತರಿಕ ಪರಿಶೀಲನಾ ಸಮಿತಿ ಅರೆ ನ್ಯಾಯಾಂಗೀಯ(Quasi Juidicial) ವ್ಯವಸ್ಥೆಯಂತೆ ಕಾರ್ಯನಿರ್ವಹಿಸಬೇಕಿತ್ತು. ಎರಡೂ ಕಡೆಯವರನ್ನು ನೈಸರ್ಗಿಕ ನ್ಯಾಯ ತತ್ವದಂತೆ ವಿಚಾರಣೆಗೆ ಒಳಪಡಿಸಬೇಕಿತ್ತು. ಮೊದಲು ಇಬ್ಬರಿಗೂ ನೋಟಿಸ್ ನೀಡಬೇಕಿತ್ತು. ಇಬ್ಬರ ಹೇಳಿಕೆ ಪಡೆದುಕೊಳ್ಳಬೇಕಿತ್ತು. ದಾಖಲೆ, ಸಾಕ್ಷ್ಯಗಳನ್ನು ಕಲೆಹಾಕಬೇಕಿತ್ತು. ಇದರ ಆಧಾರದಲ್ಲಿ ಸಕಾರಣಗಳೊಂದಿಗೆ ವರದಿ ಸಿದ್ದಪಡಿಸಬೇಕಿತ್ತು. ಇದ್ಯಾವ ನ್ಯಾಯ ಪ್ರಕ್ರಿಯೆ ನಡೆಯಲೇ ಇಲ್ಲ. ಅಸಲಿಗೆ ದೂರುದಾರೆ-ಆರೋಪಿಗೆ ನೋಟಿಸ್ ಜಾರಿಯಾಗಲಿಲ್ಲ. ವಿಚಾರಣೆಯಂತೂ ಆಗಲೇ ಇಲ್ಲ.
ದೂರುದಾರ ಪ್ರಶಿಕ್ಷಣ ವೈದ್ಯೆ ಡಾ.ಹೇಮಗಿಯವರಿಂದ ತನಗೆ ಲೈಂಗಿಕ ಕಿರುಕುಳ ಆಗಿದೆಯೆಂದು ಹೇಳಿರದಿದ್ದರಿಂದ ಕಾರವಾರದ ಮಹಿಳಾ ಠಾಣೆಯಲ್ಲಿ ಎನ್ಸಿಆರ್(ನಾನ್ ಕಾಗ್ನಿಜಿಬಲ್ ರಿಪೋರ್ಟ್) ಮಾತ್ರ ದಾಖಲಿಸಲಾಗಿತ್ತು. ನಂತರ ದೂರುದಾರೆಯೇ ಪ್ರಕರಣವನ್ನು ಮುಕ್ತಾಯ ಮಾಡುವಂತೆ ಹೇಳಿದ್ದರಿಂದ ಕೇಸ್ ವಿಲೆಗೆ ತರಲಾಗಿತ್ತು. ಅಲ್ಲದೆ ಕ್ರಿಮ್ಸ್‌ಗೂ ಪ್ರಕರಣಕ್ಕೆ ಮಂಗಳ ಹಾಡುವಂತೆ ಆಕೆ ಕೇಳಿಕೊಂಡಿದ್ದಳು. ಇದೆಲ್ಲವನ್ನು ಪ್ರಜ್ಞಾಪೂರ್ವಕ ಕಡೆಗಣಿಸಿದ ‘ತನಿಖಾ ಮಂಡಳಿ’ ಡೀನ್ ಕಚೇರಿ ಒದಗಿಸಿದ ಒಂದಿಷ್ಟು ಖೋಟಾ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು ಡಾ.ಹೇಮಗಿರಿ ಲೈಂಗಿಕ ದೌರ್ಜನ್ಯದ ಅಪರಾಧಿ ಎಂಬಂತೆ ಬಿಂಬಿಸುವ ಏಕಪಕ್ಷೀಯ ‘ತನಿಖಾ ಕತೆ’ ಹೆಣೆಯಿತು. ಈ ಕಪೋಲಕಲ್ಪಿತ ವರದಿಯನ್ನು ಡೀನ್ ಡಾ.ನಾಯಕ್ ತರಾತುರಿಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸುತ್ತಾರೆ. ವೈದ್ಯಕೀಯ ಇಲಾಖೆಯ ಅಧಿಕಾರಿಗಳು ಸದ್ರಿ ವರದಿಯ ಸತ್ಯಾಸತ್ಯತೆ ಪರಿಶೀಲಿಸದೆ ಡಾ.ಹೇಮಗಿರಿಗೆ ನೋಟಿಸ್ ಜಾರಿಗೊಳಿಸುತ್ತಾರೆ. ಒಟ್ಟಿನಲ್ಲಿ ದಲಿತ ಸಮುದಾಯದ ನಿರಪರಾಧಿ ಹಿರಿಯ ಪ್ರೊಫೆಸರ್ ಡಾ.ಹೇಮಗಿರಿಗೆ ಲೈಂಗಿಕ ಅಪರಾಧದ ಖೆಡ್ಡಾಕ್ಕೆ ಕೆಡವಲಾಗುತ್ತದೆ.
ಇದನ್ನು ಓದಿದ್ದೀರಾ?: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರಶ್ನೆಪತ್ರಿಕೆಯ ವಿನ್ಯಾಸದಲ್ಲಿ ಯಾವುದೇ ಬದಲಾವಣೆಯಿಲ್ಲ: ಪರೀಕ್ಷಾ ಮಂಡಳಿ ಸ್ಪಷ್ಟನೆ
ಸರಣಿ ದಾಳಿಯಿಂದ ಕಂಗಾಲಾದ ಡಾ.ಹೇಮಗಿರಿ ಡೀನ್-ಡೈರೆಕ್ಟರ್ ಡಾ.ಗಜಾನನ ನಾಯಕ್ ಮತ್ತವರ ಸಹಚರರು ದಲಿತನೆಂಬ ಕಾರಣಕ್ಕೆ ತನ್ನ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಯಕ್ಕೆ ವಿವರವಾದ ದೂರು ಕೊಡುತ್ತಾರೆ. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್ ಇನ್‌ಸ್ಪೆಕ್ಟರ್(ಪಿಐ) ರಘು ಕೇಸ್ ಕೈಗೆತ್ತಿಕೊಂಡು ಡೀನ್ ಡಾ.ನಾಯಕ್ ಮತ್ತವರು ರಚಿಸಿದ್ದ ‘ಆಂತರಿಕ ತನಿಖಾ ಮಂಡಳಿ’ ಸದಸ್ಯರಾದ ಡಾ.ಸರಿತಾ, ಡಾ.ಶಿವಕುಮಾರ್, ಡಾ.ಮಹಾಲಕ್ಷೀ ಕರ್ಲವಾಡ, ಡಾ.ಶಿಲ್ಪಾ ಮತ್ತು ‘ಸಮಾಜಸೇವಕ’ ಮಾಧವ ನಾಯ್ಕ್ ವಿರುದ್ಧ ಕಟ್ಟುನಿಟ್ಟಿನ ತನಿಖೆ ನಡೆಸುತ್ತಾರೆ. ನಾಗರಿಕ ಹಕ್ಕು ಜಾರಿ ನಿರ್ದೇಶನಾಯದ ಪಿಐ ಮತ್ತು ಡಿವೈಎಸ್ಪಿ ಸಿದ್ಧಪಡಿಸಿರುವ ತನಿಖಾ ವರದಿಯಲ್ಲಿ ಡಾ.ಹೇಮಗಿರಿ ಮೇಲೆ ಹೊರಿಸಲಾಗಿರುವ ಆರೋಪಗಳೆಲ್ಲ ಸುಳ್ಳು. ಡಾ.ಹೇಮಗಿರಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂಬ ಅಂಶವನ್ನು ದೂರುದಾರೆಯೂ ಒಳಗೊಂಡಂಡಂತೆ ಯಾರೂ ವ್ಯಕ್ತಪಡಿಸಿಲ್ಲ. ಇದೊಂದು ಡೀನ್ ಡಾ.ನಾಯಕ್ ತಮ್ಮ ಆಪ್ತ ವೈದ್ಯರನ್ನು ಬಳಸಿಕೊಂಡು ಡಾ.ಹೇಮಗಿರಿಯವರನ್ನು ಲೈಂಗಿಕ ಹಗರಣದಲ್ಲಿ ಸಿಲುಕಿಸಲು ಮಾಡಿದ ವ್ಯವಸ್ಥಿತ ಸಂಚು ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.

ಈ ವರದಿಯನ್ನು ಆಧಾರವಾಗಿಟ್ಟುಕೊಂಡು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಐಜಿ-ಐಪಿಎಸ್ ಅಧಿಕಾರಿ ಆನಂದಕುಮಾರ್ 3.9.2024ರಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ನಿರ್ದೇಶಕರಿಗೆ ಪತ್ರ(ಅರ್ಜಿ/17/ಮಂ.ಪ್ರಾ/ನಾಹಜಾನಿ/2023) ಬರೆದು ದಲಿತ ಸಮುದಾಯದ ಡಾ.ಹೇಮಗಿರಿ ಮೇಲೆ ದೌರ್ಜನ್ಯ ನಡೆಸಿರುವ ಕ್ರಿಮ್ಸ್ ಡೀನ್ ಡಾ.ನಾಯಕ್ ಮತ್ತು ಆಂತರಿಕ ಪರಿಶೀಲನಾ ತಂಡದ ಐವರು ಸದಸ್ಯರ ವಿರುದ್ಧ ಸೂಕ್ತ ಕ್ರಮ ಜರುಗಿಸಿ 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ಹೇಳಿದ್ದಾರೆ. ಇದೇ ಪತ್ರದಲ್ಲಿ ಡೀನ್ ಡಾ.ನಾಯಕ್‌ರ ಮತ್ತೊಂದು ಗಂಭೀರ ಲೋಪ-ದೋಷ ಎತ್ತಿ ತೋರಿಸಲಾಗಿದೆ. ಕ್ರಿಮ್ಸ್‌ನ ಡಿಆರ್ಪಿ ಕಾರ್ಯಕ್ರಮದಲ್ಲಿ ತಾನು ಪರಿಶಿಷ್ಟ ಜಾತಿಯವನೆಂಬ ಕಾರಣಕ್ಕೆ ಡೀನ್ ಡಾ.ನಾಯಕ್ ತಾರತಮ್ಯ ಮಾಡಿ ಅವಮಾನಿಸಿದ್ದಾರೆಂದು ಡಾ.ಹೇಮಗಿರಿ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗಕ್ಕೆ ದೂರಿದ್ದರು. ಇದರ ವಿಚಾರಣೆಯನ್ನು ಆಯೋಗದ ಅಧ್ಯಕ್ಷ, ಸದಸ್ಯರು ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಉಪನಿರ್ದೇಶಕರು 21.2.2024ರಂದು ನಡೆಸಿದ್ದರು. ಡಾ.ಹೇಮಗಿರಿ ಆರೋಪ ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಆಯೋಗವು ಡಾ.ನಾಯಕ್ ಮೇಲೆ ”It is requested to take action on the erring Deen Director sri Gajanana Nayak” ಎಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿರುವುದರತ್ತ ಸರಕಾರದ ಗಮನ ಸೆಳೆಯಲಾಗಿದೆ.
ದಲಿತ ದೌರ್ಜನ್ಯದ ಎರಡೆರಡು ಪ್ರಕರಣದಲ್ಲಿ ಡೀನ್-ಡೈರೆಕ್ಟರ್ ಡಾ.ಗಜಾನನ ನಾಯಕ್ ತಪ್ಪಿತಸ್ಥನೆಂದು ಪಕ್ಕಾ ಆಗಿರುವುದರಿಂದ ಸರಿಯಾದ ಶಿಕ್ಷೆ ವಿಧಿಸುವಂತೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಿಂದ ಸರಕಾರಕ್ಕೆ ಪತ್ರ ಹೋಗಿ ಎರಡೂವರೆ ತಿಂಗಳೇ ಕಳೆದುಹೋಗಿದೆ. ಡೀನ್ ಡಾ.ನಾಯಕ್ ಮಾತ್ರ ನಿರಾತಂಕವಾಗಿ ‘ಆಡಳಿತ’ ನಡೆಸಿಕೊಂಡಿದ್ದಾರೆ. ಕ್ರಿಮ್ಸ್‌ನ ದಲಿತ ಸಿಬ್ಬಂದಿ ಆತಂಕದಲ್ಲಿ ದಿನ ದೂಡುತ್ತಿದೆ. ಬೆಕ್ಕಿಗೆ ಘಂಟೆ ಕಟ್ಟುವವರು ಯಾರು?
-ನಹುಷ