ಬಿಹಾರದ ಬೋಧ್ ಗಯಾ ಜಗತ್ತಿನ ಬೌದ್ಧರಿಗೆಲ್ಲ ಪರಮ ಪವಿತ್ರವಾದ ಸ್ಥಳ. ರಾಜಕುಮಾರ ಸಿದ್ಧಾರ್ಥ ಬೋಧಿಜ್ಞಾನ ಪಡೆದು ಭಗವಾನ್ ಬುದ್ಧನಾದ ಪಾವನ ಸ್ಥಳ. ಈ ಕ್ಷೇತ್ರ ಬುದ್ಧನ ಕಾಲದಿಂದಲೂ ಪೂಜನೀಯವಾಗಿದೆ. ಹಾಗಾಗಿ ಬಿ ಟಿ ಆಕ್ಟ್ 1949ರ ಕಾಯ್ದೆಯನ್ನು ರದ್ದುಪಡಿಸಬೇಕು ಎಂದು ದಸಂಸ ವಿಜಯಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜು ಕಂಬಾಗಿ ಆಗ್ರಹಿಸಿದರು.
ವಿಜಯಪುರ ಜಿಲ್ಲೆಯ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ಭೀಮವಾದ)ದಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಟಿ ಭೂಬಾಲನ್ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ ಮಾತನಾಡಿದರು.
“ಸಾಮ್ರಾಟ್ ಅಶೋಕನು ಸೇರಿದಂತೆ ಈ ದೇಶದ ಅನೇಕ ರಾಜ ಮಹಾರಾಜರು ಮತ್ತು ಬರ್ಮಾ, ಶ್ರೀಲಂಕಾ, ಥೈಲ್ಯಾಂಡ್, ಜಪಾನ್ ಮತ್ತು ಇನ್ನಿತರ ದೇಶಗಳ ರಾಜರು ಹಾಗೂ ಉಪಾಸಕರು ಈ ಕ್ಷೇತ್ರ ವೃದ್ಧಿಗಾಗಿ ಶ್ರದ್ದಾಪೂರ್ವಕ ಕೊಡುಗೆ ನೀಡಿರುವುದು ಇತಿಹಾಸ. ಭಾರತದಲ್ಲಿ ಹುಟ್ಟಿ ಏಷ್ಯಾ ಖಂಡದ ಎಲ್ಲ ದೇಶಗಳಲ್ಲಿ ಪ್ರಪಂಚಾದ್ಯಂತ ವಿಜೃಂಭಿಸಿದೆ” ಎಂದು ಹೇಳಿದರು.
“ಏಷ್ಯಾದ ಬೆಳಕು ಎಂದು ಪ್ರಖ್ಯಾತವಾದ ಬೌದ್ಧಧರ್ಮ ಕಾಲಾನುಕ್ರಮದಲ್ಲಿ ಮಾತೃಭೂಮಿಯಲ್ಲಿ ಮುಸ್ಲಿಂ ಮತ್ತು ಹಿಂದೂಗಳ ಆಕ್ರಮಣಕ್ಕೆ ತುತ್ತಾಗಿ ಕಣ್ಮರೆಯಾಗಿದೆ. ಪ್ರಬುದ್ಧ ಭಾರತದ ಮಹಾಭೂತಿ ಮಹಾವಿಹಾರದ ಮುಕ್ತಿ ಆಂದೋಲನವನ್ನು 1992ರಂದು ಬಂದ ಆರ್ಯ ನಾಗಾರ್ಜುನ ಸುರೈ ಸಸಾಯಿಯವರ ನೇತೃತ್ವದಲ್ಲಿ ಅಂಬೇಡ್ಕರ್ ಅನುಯಾಯಿಗಳು ಮುಂದುವರೆಸಿದರು” ಎಂದು ತಿಳಿಸಿದರು.
“ರಾಷ್ಟ್ರಮಟ್ಟದಲ್ಲಿ ಹಲವು ಸುತ್ತಿನ ಹೋರಾಟಗಳು ಜರುಗಿದವು. ಬಿ ಟಿ ಆಕ್ಟ್ 1949ರ ಕಾಯ್ದೆಯಲ್ಲಿ ಹಾಗೂ ಬಿಟಿಎಂಸಿಯಲ್ಲಿ ಕೆಲವು ಬದಲಾವಣೆಗಳಾದವೇ ಹೊರತು ಸಂಪೂರ್ಣ ರದ್ದಾಗಲಿಲ್ಲ. ಈ ಸಂಬಂಧ ಕಳೆದ 15 ವರ್ಷಗಳಿಂದ ಬೌದ್ಧರು ನಡೆಸಿದ ಕಾನೂನು ಹೋರಾಟಕ್ಕೆ ಇನ್ನೂ ಜಯ ಸಿಕ್ಕಿಲ್ಲ. ಪ್ರಸ್ತುತ ಅಖಿಲ ಭಾರತ ಬೌದ್ಧ ವೇದಿಕೆ ಜಿಲ್ಲಾ ವಿಚಾರಧಾರೆಯ ಬೌದ್ಧ ಸಂಘ ಸಂಸ್ಥೆಗಳು ಹಾಗೂ ದೇಶದ ಅಂಬೇಡ್ಕರ್ ಅನುವಾಯಿಗಳನ್ನು ಒಂದೇ ವೇದಿಕೆಗೆ ತಂದು ಹೋರಾಟ ಆರಂಭಿಸಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಬಿಳಿಕೆರೆ ಕಂದಾಯ ನಿರೀಕ್ಷಕ ಮಂಜುನಾಥ್ ವಿರುದ್ಧ ಶಿಸ್ತು ಕ್ರಮಕ್ಕೆ ರೈತರ ಆಗ್ರಹ
ರಾಜ್ಯ ಮಹಿಳಾ ಸಂಘಟನಾ ಸಂಚಾಲಕಿ ಪ್ರತಿಭಾ ಹೊಸಮನಿ ಮಾತನಾಡಿ, “ಈ ದೇಶದ ಬೌದ್ಧ ಸಮುದಾಯ ಮತ್ತು ಅಂಬೇಡ್ಕರ್ ಅನುಯಾಯಿಗಳು ಸಂವಿಧಾನದತ್ತ ಧಾರ್ಮಿಕ ಅವಕಾಶಗಳಿಂದ ವಂಚಿತರಾಗಿದ್ದಾರೆ. ಬಿಟಿ ಆಕ್ಟ್ 1949ನ್ನು ರದ್ದುಪಡಿಸಿ ಬೋಧ್ ಗಯಾದ ಮಹಾಬೋಧಿ ಮಹಾವಿಹಾರದ ಆಡಳಿತ ಸಂಪೂರ್ಣವಾಗಿ ಬೌದ್ಧರಿಗೆ ನೀಡಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಒಕ್ಕೂಟ ಜಲ ಸಂಚಾಲಕಿ ಕವಿತಾ ವಗ್ಗರ, ಜಿಲ್ಲಾ ಸಂಘಟಕರಾದ ಯಲ್ಲಪ್ಪ ಕಾಂಬಳೆ, ಚೈತನ ತೊರವಿ ಜಿಲ್ಲಾ ಸಂಘಟನಾ ಸಂಚಾಲಕ ಶಂಕರ ಚಲವಾದಿ, ನಗರ ಸಂಚಾಲಕ ನಕೂಶಾ ಹೊಸಮನಿ, ಪ್ರದೀಪ ಚಲವಾದಿ, ಭೀಮಣ್ಣ ಹಂಚಿನಾಳ, ಸುರೇಶ ಬಬಲೇಶ್ವರ, ಭಾಸ್ಕರ ಬೋರಗಿ, ಸುಖದೇವ ಕಟ್ಟಿಮನಿ, ತುಕಾರಾಮ ಮಮದಾಪುರ, ದತ್ತಾತ್ರೆಯ ಆಲ್ ಮೇಲಕರ ಮತ್ತಿತರ ಉಪಸ್ಥಿತರಿದ್ದರು.