ವಿಶೇಷ ತಳಿಯ ಕೊಂಡುಕುರಿ ರಂಗಯ್ಯನದುರ್ಗ ಮೀಸಲು ಅರಣ್ಯ ಪ್ರದೇಶದಲ್ಲಿ ಕಚ್ಚಾಬಾಂಬ್ ಸ್ಫೋಟಿಸಿದ ಪರಿಣಾಮ ಹಸುವೊಂದು ತೀವ್ರವಾಗಿ ಗಾಯಗೊಂಡು ಅಸುನೀಗಿದ ಘಟನೆ ನಡೆದಿದೆ.
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಕೊಂಡುಕುರಿ ಅಭಯಾರಣ್ಯದಲ್ಲಿ ಕಾಡುಪ್ರಾಣಿಗಳ ಬೇಟೆಗಾರರು ಅಥವಾ ವನ್ಯಜೀವಿ ಕಳ್ಳಸಾಗಣೆದಾರರು ಇರಿಸಿದ ಕಚ್ಚಾಬಾಂಬ್ ಸಿಡಿದು ಮುಗ್ಧ ಹಸುವೊಂದು ದುರ್ಮರಣಕ್ಕೀಡಾಗಿದೆ. ಜೊತೆಯಲ್ಲಿದ್ದ ರೈತ ರಂಗನಾಥ್ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳೀಯರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಹಂದಿ, ಕೊಂಡುಕುರಿ ಅಥವಾ ಇತರ ಕಾಡುಪ್ರಾಣಿಗಳ ಬೇಟೆಗಾಗಿ ವನ್ಯಜೀವಿಗಳ ಬೇಟೆಗಾರರು ಅಥವಾ ಕಳ್ಳಸಾಗಣೆದಾರರು ಕಚ್ಚಾಬಾಂಬ್ ಇರಿಸಿರಬಹುದು. ಮುಗ್ಧ ಹಸು ಅದನ್ನು ತಿನ್ನಲು ಹೋಗಿ ಸ್ಪೋಟಗೊಂಡು ದವಡೆಯ ಭಾಗದಲ್ಲಿ, ಕುತ್ತಿಗೆಯ ಭಾಗದಲ್ಲಿ ತೀವ್ರ ಗಾಯಗಳಾಗಿ, ಮಾಂಸ ಖಂಡಗಳು ಕಿತ್ತುಬಂದಿದ್ದವು. ಇದರಿಂದ ಅಮಾಯಕ ಪ್ರಾಣಿಯೊಂದು ಬಲಿಯಾಗಿದೆ. ಈ ಕೃತ್ಯ ಮಾಡಿದ ದುರುಳರನ್ನು ಪತ್ತೆ ಹಚ್ಚಿ ಅವರನ್ನು ತೀವ್ರ ಶಿಕ್ಷೆಗೆ ಒಳಪಡಿಸಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ರಂಗಯ್ಯನದುರ್ಗ ಅರಣ್ಯ ಪ್ರದೇಶ ವಿಶೇಷ ಜಿಂಕೆ ಪ್ರಭೇದದ ವಿರಳ ಕೊಂಡುಕುರಿ ಪ್ರಾಣಿಗಳು ಇರುವ ಪ್ರದೇಶವಾಗಿದೆ. ಸಂರಕ್ಷಿತ ವನ್ಯಜೀವಿ ಅರಣ್ಯ ವಲಯವಾಗಿದೆ. ಇದು ದೇಶದಲ್ಲಿ ಬೇರೆಡೆ ಇಲ್ಲದ ವಿಶೇಷತಳಿಯಾಗಿದೆ. ಸಾಮಾನ್ಯವಾಗಿ ಜಿಂಕೆಗಳಲ್ಲಿ ಎರಡು ಕೊಂಬುಗಳಿದ್ದರೆ, ಜಿಂಕೆ-ಕೃಷ್ಣಮೃಗದ ರೀತಿಯಲ್ಲಿ ಕಂಡುಬರುವ ಕೊಂಡುಕುರಿಯಲ್ಲಿ ಎರಡು ಚಿಕ್ಕ ಕೊಂಬುಗಳು ಸೇರಿ ನಾಲ್ಕು ಕೊಂಬುಗಳಿರುತ್ತವೆ. ಇದರ ಸಂರಕ್ಷಣೆಗಾಗಿ ಅರಣ್ಯವನ್ನು ಕಾಯ್ದಿರಿಸಲಾಗಿದೆ. ಇಂತಹ ಸ್ಥಳದಲ್ಲಿ ಕಚ್ಚಾಬಾಂಬ್ ಸ್ಫೋಟಗೊಂಡಿರುವುದು ವಿಶೇಷತಳಿ ಅಭಿವೃದ್ಧಿಗೆ ಮತ್ತು ವನ್ಯಜೀವಿ ಸಂರಕ್ಷಣೆಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಕಳ್ಳಸಾಗಾಣಿಕೆ ಬೇಟೆಗಾರರ ತಂಡಗಳು ಸಕ್ರಿಯವಾಗಿವೆ ಎನ್ನುವ ಸಂದೇಶ ಅರಣ್ಯ ಇಲಾಖೆಗೆ ರವಾನೆಯಾಗಿದ್ದು, ಈ ಕುರಿತು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕಾಗಿದೆ” ಎಂದರು.
ಸ್ಥಳೀಯ ಪತ್ರಕರ್ತ ಅಜ್ಜಯ್ಯ ಮದಕರಿ ಮಾಹಿತಿ ನೀಡಿ, “ಸಂರಕ್ಷಿತ ಕೊಂಡುಕುರಿ ಅರಣ್ಯ ಪ್ರದೇಶದಲ್ಲಿ ಇದು ವಿಶೇಷ ತಳಿಯಾಗಿದ್ದು, ಇಲ್ಲಿ ಕಚ್ಚಾಬಾಂಬ್ ಸ್ಫೋಟಿಸಿ ಹಸು ಮರಣ ಹೊಂದಿರುವುದು ಆಘಾತ ತರಿಸಿದೆ. ಇದರ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಬಾಂಬ್ ನಿಷ್ಕ್ರಿಯ ದಳ ತಪಾಸಣೆಯನ್ನು ನಡೆಸಿದ್ದು, ಇತರ ಯಾವುದೇ ಬಾಂಬ್‌ಗಳು ಸಿಕ್ಕಿರುವ ವರದಿಯಾಗಿಲ್ಲ. ಕೂಡಲೇ ಅರಣ್ಯ ಇಲಾಖೆ ಕಚ್ಚಾಬಾಂಬ್ ಇರಿಸಿದ ದುಷ್ಟರನ್ನು ಬಂಧಿಸಿ, ಅರಣ್ಯ ರಕ್ಷಣೆಗೆ, ವಿಶೇಷ ತಳಿ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಗುಡುಗು-ಸಿಡಿಲು ಸಹಿತ ಮಳೆ : ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್ ಘೋಷಣೆ : ಜಿಲ್ಲಾಧಿಕಾರಿ
ಈ ಬಗ್ಗೆ ಅರಣ್ಯ ಸಂರಕ್ಷಣಾಧಿಕಾರಿ ಶಶಿಧರ್ ಮಾಹಿತಿ ನೀಡಿ “ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಕುರಿತಂತೆ ಜನರಿಗೆ ಸಾಕಷ್ಟು ಜಾಗೃತಿ ಮೂಡಿಸಿದರೂ ಕೂಡಾ ಇಂತಹ ಘಟನೆ ನಡೆದಿರುವುದು ತೀವ್ರ ಬೇಸರದ ಸಂಗತಿ. ವಲಯ ಅರಣ್ಯಾಧಿಕಾರಿಯವರಿಗೆ ಕಾಡಂಚಿನ ಗ್ರಾಮಗಳ ಜನರಿಗಾಗಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲು ಸೂಚನೆ ನೀಡಿದ್ದು, ಮುಂದೆ ಇಂತಹ ಘಟನೆ ಮರುಕಳಿಸದಂತೆ ಕ್ರಮ ವಹಿಸಲು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಸೂಚನೆ ನೀಡಲಾಗಿದೆ” ಎಂದು ತಿಳಿಸಿದರು.
ಈ ದಿನ.ಕಾಮ್ ಕೊಂಡುಕುರಿ, ಅರಣ್ಯ ವನ್ಯಜೀವಿ ಪರಿಪಾಲಕ ಟಿ ಜಿ ರವಿಕುಮಾರ್ ಅವರನ್ನು ಸಂಪರ್ಕಿಸಿದಾಗ ಪರ್ತಿಕ್ರಿಯಿಸಿದ್ದು, “ಕಚ್ಚಾಬಾಂಬ್‌ನಿಂದ ಹಸು ತೀರಿಹೋಗಿರುವುದು ನಿಜವಾಗಿಯೂ ತೀವ್ರ ನೋವುಂಟು ಮಾಡಿದೆ. ಕೊಂಡುಕುರಿ ಸೇರಿದಂತೆ ಅಳಿವಿನಂಚಿನಲ್ಲಿರುವ ಅನೇಕ ಪ್ರಭೇದಗಳು ಕೊಂಡುಕುರಿ ಅರಣ್ಯ ಪ್ರದೇಶದಲ್ಲಿದ್ದು, ಅವುಗಳ ಸಂರಕ್ಷಣೆಯಾಗಬೇಕಿದೆ. ಅಂತಾರಾಷ್ಟ್ರೀಯ ವನ್ಯಜೀವಿಗಳ ಕಳ್ಳಸಾಗಣೆದಾರರ ಜಾಲ ಹೆಚ್ಚಾಗಿದ್ದು, ಇದರ ಬಗ್ಗೆ ಸಂಪೂರ್ಣ ತನಿಖೆಯಾಗಬೇಕಿದೆ” ಎಂದರು.

ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು