ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರಕ್ಕೆ ಬಂದರೂ ಬಿಜೆಪಿ ನೇತೃತ್ವದ ಮಹಾಯುತಿ ಒಕ್ಕೂಟದಲ್ಲಿ ಮುಖ್ಯಮಂತ್ರಿ ಮತ್ತು ಮಂತ್ರಿ ಸ್ಥಾನ ಹಂಚಿಕೆ ವಿಚಾರದಲ್ಲಿ ಇನ್ನೂ ಒಮ್ಮತ ಮೂಡಿಲ್ಲವೇ ಎಂಬ ಪ್ರಶ್ನೆ ಎದ್ದಿದೆ.
ನಿಯೋಜಿತ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರು ಇಂದು ನಿಗದಿಯಾಗಿದ್ದ ಸಭೆಗಳನ್ನು ದಿಢೀರ್ ರದ್ದು ಮಾಡಿ ಅನಿರೀಕ್ಷಿತವಾಗಿ ಸತಾರಾ ಜಿಲ್ಲೆಯಲ್ಲಿರುವ ತಮ್ಮ ಗ್ರಾಮಕ್ಕೆ ತೆರಳಿದ್ದಾರೆ. ಬಿಜೆಪಿಯ ದೇವೇಂದ್ರ ಫಡ್ನವೀಸ್ ಮತ್ತು ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರೊಂದಿಗೆ ಶಿಂದೆ ಅವರು ಶುಕ್ರವಾರ ಬೆಳಗ್ಗೆ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ಜೊತೆ ಸಭೆ ನಡೆಸಿದ ಬಳಿಕ ಮುಂಬೈಗೆ ಆಗಮಿಸಿ ತಮ್ಮ ಗ್ರಾಮಕ್ಕೆ ಮರಳಿದ್ದಾರೆ.
ದೆಹಲಿ ಸಭೆ ಧನಾತ್ಮಕವಾಗಿದೆ ಎಂದು ಶಿಂದೆ ಹೇಳಿದ್ದರೂ ಈಗ ಎಲ್ಲ ಸಭೆಗಳನ್ನು ರದ್ದು ಮಾಡಿ ತಮ್ಮ ಸ್ವಗ್ರಾಮಕ್ಕೆ ತೆರಳಿದ್ದಾರೆ. ಶನಿವಾರ ಶಿಂದೆ ಮುಂಬೈಗೆ ಮರಳುವ ನಿರೀಕ್ಷೆಯಿದೆ. ದೆಹಲಿ ಸಭೆಯಲ್ಲಿ ಫಡ್ನವೀಸ್ ಮಹಾರಾಷ್ಟ್ರ ಮುಖ್ಯಮಂತ್ರಿಯಾಗುತ್ತಾರೆ. ನೀವು ಉಪ ಮುಖ್ಯಮಂತ್ರಿಯಾಗಬೇಕು ಎಂದು ತಿಳಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಚಂದ್ರಶೇಖರ ಸ್ವಾಮೀಜಿ ಬಾಯಿ ತಪ್ಪಲಿಲ್ಲ, ಮನಸಿನ ಮಾತೇ ಹೊರಬಿದ್ದಿದೆ
ಆರಂಭದಲ್ಲಿ ಶಿಂದೆ ಈ ಆಫರ್ ಸ್ವೀಕರಿಸಲು ಒಪ್ಪದೇ ಇದ್ದರೂ ನಂತರ ಅವರು ಒಪ್ಪಿಗೆ ಸೂಚಿಸಿದರು. ಅಷ್ಟೇ ಅಲ್ಲದೇ ತನಗೆ ಗೃಹ ಖಾತೆಯನ್ನು ನೀಡುವಂತೆ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಬ್ಬರು ಸಿಎಂ, ಇಬ್ಬರು ಡಿಸಿಎಂ ಹುದ್ದೆಗಳು ಮಹಾಯುತಿ ಸರ್ಕಾರದಲ್ಲಿ ಇರಲಿದೆ. ಬಿಜೆಪಿಗೆ 20 ಮಂತ್ರಿ ಸ್ಥಾನ ಸಿಗಲಿದೆ. ಎನ್‌ಸಿಪಿಗಿಂತ ಶಿವಸೇನೆಗೆ ಹೆಚ್ಚು ಮಂತ್ರಿ ಸ್ಥಾನ ದೊರೆಯಲಿದೆ.
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು 132 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಅದರ ಮಹಾಯುತಿ ಮಿತ್ರರಾದ ಶಿಂದೆ ಶಿವಸೇನೆ 57 ಕ್ಷೇತ್ರ, ಅಜಿತ್ ಎನ್‌ಸಿಪಿ 41 ಕ್ಷೇತ್ರಗಳಲ್ಲಿ ಜಯಗಳಿಸಿದೆ.
