ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ವೇಳೆ ತಲೆಗೆ ಪೆಟ್ಟುಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ದೆಹಲಿಯ ಮಾಯಾಪುರಿಯಲ್ಲಿ ನಡೆದಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಮೃತ ಯುವಕ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದನು. ಪರಿಣಾಮ, ಆತ ತನ್ನ ಸುರಕ್ಷತೆಯ ಬಗ್ಗೆ ಮತಿಭ್ರಮಣೆಗೆ ಒಳಗಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಾಯಾಪುರಿಯಲ್ಲಿನ ಮನೆಯೊಂದರಿಂದ ಡಕಾಯಿತರು ತಮ್ಮ ಮನೆಗೆ ನುಗ್ಗಿದ್ದಾರೆಂದು ಪೊಲೀಸರಿಗೆ ಕರೆ ಬಂದಿತ್ತು. ಪೊಲೀಸರು ತಕ್ಷಣವೇ ಆ ಮನೆಗೆ ಧಾವಿಸಿದ್ದಾರೆ. ಆದರೆ, ಅಲ್ಲಿ ಯಾವುದೇ ಡಕಾಯಿತರು ಇರಲಿಲ್ಲ. ಬದಲಾಗಿ, ಯುವಕನೇ ತಮ್ಮ ಮನೆಗೆ ಕಳ್ಳರು ನುಗ್ಗಿದ್ದಾರೆಂದು ಭಾವಿಸಿ, ತನ್ನ ಪೋಷಕರ ಮೇಲೆಯೇ ದಾಳಿ ಮಾಡಿದ್ದಾನೆ. ತನ್ನ ತಂದೆ ಮತ್ತು ಚಿಕ್ಕಪ್ಪನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ ಎಂದು ಡಿಸಿಪಿ (ಪಶ್ಚಿಮ) ವಿಚಿತ್ರ ವೀರ್ ಹೇಳಿದ್ದಾರೆ.
ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ, ವಿಚಾರಣೆಗಾಗಿ ಮಾಯಾಪುರಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿದ್ದ ಯುವಕ ಇದ್ದಕ್ಕಿದ್ದಂತೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. 3-4 ಅಡಿ ಎತ್ತರದ ಗೋಡೆಯ ಮೇಲೆ ಹತ್ತಲು ಹೋಗಿ, ಕೆಳಗೆ ಬಿದ್ದಿದ್ದಾನೆ. ಪರಿಣಾಮ, ತಲೆಗೆ ಬಲವಾದ ಪೆಟ್ಟುಬಿದ್ದಿದೆ. ಆತನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ಧಾನೆ ಎಂದು ಪೊಲೀಸರು ವಿವರಿಸಿದ್ದಾರೆ.