ದೇಶದ ಪ್ರಮುಖ ಮಾನವ ಹಕ್ಕುಗಳ ಹೋರಾಟಗಾರ ಮತ್ತು ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್) ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿ ನದೀಂ ಖಾನ್ ಅವರ ವಿರುದ್ಧ ದೆಹಲಿ ಪೊಲಿಸರು ಅಕ್ರಮವಾಗಿ ಕ್ರಮ ಕೈಗೊಂಡಿರುವುದನ್ನು ಭಾರತ್ ಜೋಡೋ ಅಭಿಯಾನ(ಬಿಜೆಎ) ಖಂಡಿಸಿದೆ.
ನದೀಂ ಖಾನ್ ಅವರು ಮುಖ್ಯವಾಗಿ ಅಲ್ಪಸಂಖ್ಯಾತರನ್ನು ಒಳಗೊಂಡ ನಮ್ಮ ನಾಗರಿಕರ ಕಾನೂನು ಹಾಗೂ ಸಾಂವಿಧಾನಿಕ ಹಕ್ಕುಗಳನ್ನು ಎತ್ತಿಹಿಡಿಯಲು ಹೋರಾಟ ನಡೆಸುತ್ತಿದ್ದಾರೆ. ದೆಹಲಿ ಪೊಲೀಸರು ಯಾವುದೇ ಬಂಧನ ವಾರಂಟ್ ಇಲ್ಲದೆ ನವೆಂಬರ್ 30 ರಂದು ಬೆಂಗಳೂರಿನ ಖಾಸಗಿ ನಿವಾಸದಲ್ಲಿ ಅಕ್ರಮವಾಗಿ ಬಂಧಿಸಲು ಯತ್ನಿಸಿದ್ದಾರೆ. ಇದಲ್ಲದೆ ದೆಹಲಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 196, 353(2) ಹಾಗೂ 61ರ ಅಡಿ ಎಫ್‌ಐಆರ್ ಕೂಡ ದಾಖಲಿಸಿದ್ದಾರೆ.
ನದೀಂ ಖಾನ್ ಅವರು ಕೋಮು ಪ್ರಚೋದನೆ ಕೆರಳಿಸಲು ಟ್ವೀಟ್ ಮಾಡಿದ್ದಾರೆ ಎಂದು ಹಿಂದೂ ಸಂಘಟನೆಗಳ ಆರೋಪವನ್ನು ಉಲ್ಲೇಖಿಸಿರುವುದು ಹಾಸ್ಯಾಸ್ಪದ.
ಎಫ್‌ಐಅರ್‌ನಲ್ಲಿ ಉಲ್ಲೇಖಿಸಿದಂತೆ ಖಾನ್ ಹಾಗೂ ಅವರ ಎಸಿಪಿಆರ್ ಸಂಸ್ಥೆ ವಿರುದ್ಧ ಮಾಡಲಾದ ಆರೋಪದಲ್ಲಿ ಯಾವುದೇ ಸತ್ಯವಿಲ್ಲ. ಭಾರತ್ ಜೋಡೋ ಸಂಸ್ಥೆಯು ಈ ಅಮಾನುಷ ಕೃತ್ಯವು ವಾಕ್‌ಸ್ವಾತಂತ್ರವನ್ನು ನಿಯಂತ್ರಿಸುತ್ತಿರುವುದು ದುರುದ್ದೇಶ ಹಾಗೂ ಉದ್ದೇಶಪೂರ್ವಕವಾದುದು ಎಂದು ಖಂಡಿಸುತ್ತೇವೆ. ನದೀಮ್ ಖಾನ್ ಹಾಗೂ ಅವರ ಎಸಿಪಿಆರ್ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ಅನ್ನು ತಕ್ಷಣ ರದ್ದುಗೊಳಿಸಬೇಕೆಂದು ನಾವು ಆಗ್ರಹಿಸುತ್ತೇವೆ.
ಖಾನ್ ಹಾಗೂ ಅವರ ಸಿಬ್ಬಂದಿಯ ವಿರುದ್ಧ ಯಾವುದೇ ವಾರಂಟ್ ಇಲ್ಲದೆ ದೆಹಲಿ ಪೊಲೀಸರು ದಾಳಿ ನಡೆಸಿರುವುದು ಅಕ್ಷಮ್ಯವಾಗಿದೆ. ನಾವು ನಮ್ಮ ಸಾಂವಿಧಾನಿಕ ಮೌಲ್ಯಗಳ ರಕ್ಷಣೆಗಾಗಿ ಅವರ ಹಾಗೂ ಅವರ ಹೋರಾಟದ ಪರವಾಗಿ ಸದಾ ನಿಲ್ಲುತ್ತೇವೆ ಎಂದು ಭಾರತ್ ಜೋಡೋ ಅಭಿಯಾನದ ವಕ್ತಾರರಾದ ವಿಜಯ್ ಮಹಾಜನ್ ಹಾಗೂ ಯೋಗೇಂದ್ರ ಯಾದವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೆಹಲಿಯ ಶಾಹೀನ್ ಬಾಗ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) ಸೇರಿದಂತೆ ನಾಲ್ವರು ಅಧಿಕಾರಿಗಳು ವಾರಂಟ್ ಅಥವಾ ಪೂರ್ವ ಸೂಚನೆಯಿಲ್ಲದೆ ಶನಿವಾರ ಸಂಜೆ 5ರ ಸುಮಾರಿಗೆ ನದೀಂ ಖಾನ್ ಅವರ ಬೆಂಗಳೂರಿನ ನಿವಾಸಕ್ಕೆ ಬಂದಿದ್ದರು. ಆ ಬಳಿಕ ರಾತ್ರಿ 10.45 ಕ್ಕೆ ಅಧಿಕಾರಿಗಳು ಬಿಎನ್ಎಸ್ಎಸ್ ಸೆಕ್ಷನ್ 35 (3) ರ ಅಡಿಯಲ್ಲಿ ನೋಟಿಸ್ ಅಂಟಿಸಿ, ಶಾಹೀನ್ ಬಾಗ್ ಪೊಲೀಸ್ ಠಾಣೆಗೆ ಹಾಜರಾಗುವಂತೆ ತಿಳಿಸಿದ್ದರು.
ಈ ಸುದ್ದಿ ಓದಿದ್ದೀರಾ? ದೆಹಲಿ ಪೊಲೀಸರಿಂದ ಬೆಂಗಳೂರಿನಲ್ಲಿ ಅಕ್ರಮ ಚಟುವಟಿಕೆ : ದೂರು ದಾಖಲು
ಕೋಮುಗಳ ನಡುವೆ ದ್ವೇಷ ಹರಡುತ್ತಿರುವ ಸುಳ್ಳು ಆರೋಪ ಹೊರಿಸಿ ದೆಹಲಿಯ ಶಾಹೀನ್ ಬಾಗ್ ಪೊಲೀಸ್ ಠಾಣೆಯ ಪೊಲೀಸರು ಶನಿವಾರ ಮಧ್ಯಾಹ್ನ 12:48 ಕ್ಕೆ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಎಫ್‌ಐಆರ್ ದಾಖಲಾದ ಕೆಲವೇ ಗಂಟೆಗಳಲ್ಲಿ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿದ್ದ ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) ಸೇರಿದಂತೆ ನಾಲ್ವರು ಅಧಿಕಾರಿಗಳು, ನದೀಮ್ ಖಾನ್ ಅವರನ್ನು ಬಂಧಿಸಲು ಯತ್ನಿಸಿದ್ದರು.
ಪೊಲೀಸರು, ರಾತ್ರಿ 10.30ರ ಸುಮಾರಿಗೆ ಮನೆಗೆ ನೋಟಿಸ್ ಅಂಟಿಸಿ ತೆರಳಿದ್ದಾರೆ. ನದೀಂ ಖಾನ್ ಅವರ ಮನೆಗೆ ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿದೆ. ಆದರೂ ಕೂಡ ದೆಹಲಿಯಿಂದ ಬಂದಿದ್ದ ಪೊಲೀಸರು ಸ್ಥಳೀಯ ಪೊಲೀಸರಿಗೆ ಯಾವುದೇ ಮಾಹಿತಿ ಕೂಡ ನೀಡಿರಲಿಲ್ಲ.
ಈ ನಡುವೆ ದೆಹಲಿ ಪೊಲೀಸರ ವಿರುದ್ಧ ನದೀಂ ಖಾನ್ ಕುಟುಂಬಸ್ಥರು ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದು, ದೂರು ದಾಖಲಿಸಿಕೊಂಡಿರುವ ಸಂಪಿಗೆಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ಬೆಳವಣಿಗೆಯ ಬಗ್ಗೆ ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸರಿಗೆ ದೂರು ನೀಡಿರುವ ಸಾಮಾಜಿಕ ಕಾರ್ಯಕರ್ತ ನದೀಮ್ ಖಾನ್ ಸಹೋದರ, “ಶನಿವಾರ ಸಂಜೆ 5ರ ಸುಮಾರಿಗೆ ದೆಹಲಿಯ ಶಾಹೀನ್ ಬಾಗ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) ಎಂದು ಹೇಳಿಕೊಂಡು ಬಂದ ನಾಲ್ವರು ಅಧಿಕಾರಿಗಳು ಅಕ್ರಮವಾಗಿ ಪ್ರವೇಶಿಸಿದ್ದಾರೆ. ವಾರಂಟ್ ಅಥವಾ ಪೂರ್ವ ಸೂಚನೆಯಿಲ್ಲದೆ ಬಂದಿದ್ದಲ್ಲದೇ, ನಮ್ಮನ್ನು ಬೆದರಿಸಿದ್ದಾರೆ. ಯಾಕೆ ಬಂದಿದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ ನದೀಂ ಖಾನ್ ಅವರ ವಿರುದ್ಧ ನಮ್ಮ ಠಾಣೆಯಲ್ಲಿ ಶನಿವಾರ ಮಧ್ಯಾಹ್ನ 12:48 ಕ್ಕೆ ಎಫ್‌ಐಆರ್ ದಾಖಲಿಸಿಕೊಂಡಿದ್ದೇವೆ. ಅವರನ್ನು ಹುಡುಕಿಕೊಂಡು ಬಂದಿದ್ದೇವೆ ಎಂದು ತಿಳಿಸಿದ್ದರು. ದಾಖಲೆ ಕೇಳಿದಾಗ ಆನ್‌ಲೈನ್ ಪ್ರತಿಯನ್ನು ತೋರಿಸಿದ್ದಾರೆ” ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
“ಮನೆಗೆ ನುಗ್ಗಿದ ವೇಳೆ ಯಾವುದೇ ಸಮವಸ್ತ್ರದಲ್ಲಿ ಇರಲಿಲ್ಲ. 8 ಗಂಟೆ ಸುಮಾರಿಗೆ, ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣೆಯ 3 ಪೊಲೀಸ್ ಅಧಿಕಾರಿಗಳು ಕೂಡ ನನ್ನ ನಿವಾಸಕ್ಕೆ ಬಂದರು. ದೆಹಲಿ ಪೊಲೀಸರು ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಿಲ್ಲ ಎಂಬುದು ನಂತರ ಸ್ಪಷ್ಟವಾಯಿತು. ರಾತ್ರಿ 9 ಗಂಟೆಯವರೆಗೆ ಮನೆಯ ಮೊದಲ ಮಹಡಿಯ ಹಾಲ್‌ನಲ್ಲಿ ಕುಳಿತು ತನಿಖೆಗೆ ನದೀಂ ಖಾನ್ ಅವರನ್ನು ತಮ್ಮೊಂದಿಗೆ ದೆಹಲಿಗೆ ಬರುವಂತೆ ಒತ್ತಾಯಿಸಿದ್ದರು. ಯಾವುದೇ ಸಮನ್ಸ್, ನೋಟಿಸ್, ವಾರಂಟ್ ಇಲ್ಲದಿದ್ದರೂ, ಎಸ್‌ಎಚ್‌ಒ ಮತ್ತು ಇತರ ಪೊಲೀಸ್ ಅಧಿಕಾರಿಗಳು ಮನೆಯಲ್ಲೇ ಐದು ಗಂಟೆಗಳ ಕಾಲ ನಮ್ಮನ್ನು ಬೆದರಿಸಿದ್ದಾರೆ” ಎಂದು ತಿಳಿಸಿದ್ದಾರೆ.
