ಕರ್ನಾಟಕದಲ್ಲಿ ವಕ್ಫ್ ಆಸ್ತಿ ವಿಚಾರವನ್ನು ಬಿಜೆಪಿ ವಿವಾದವಾಗಿ ಮಾರ್ಪಡಿಸಿದೆ. ಇದೇ ಸಮಯದಲ್ಲಿ, ಕೇಂದ್ರ ಸರ್ಕಾರವು ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ವಕ್ಫ್ ಮಸೂದೆ ಬಗ್ಗೆ ದೇಶಾದ್ಯಂತ ಚರ್ಚೆಗಳು ನಡೆಯುತ್ತಿವೆ. ಈ ಎಲ್ಲ ಬೆಳವಣಿಗೆಗಳ ನಡುವೆ, ಬಿಜೆಪಿ ನೇತೃತ್ವದ ಎನ್‌ಡಿಎ ಭಾಗವಾಗಿರುವ ಅಂಧ್ರದ ಟಿಡಿಪಿ ಸರ್ಕಾರ ಆಂಧ್ರ ಪ್ರದೇಶದಲ್ಲಿ ವಕ್ಫ್ ಬೋರ್ಡ್‌ನ ಮಂಡಳಿಯನ್ನು ವಜಾಗೊಳಿಸಿದೆ.
ಟಿಡಿಪಿ ನಾಯಕ, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ಆಂದ್ರ ಸರ್ಕಾರ, ವಕ್ಫ್ ಬೋರ್ಡ್‌ನ ಮಂಡಳಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಹಿಂದಿನ ಸರ್ಕಾರ, ಅಂದರೆ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರ ಸರ್ಕಾರ ವಕ್ಫ್ ಬೋರ್ಡ್‌ಗೆ ಮಂಡಳಿಯನ್ನು ರಚಿಸಿತ್ತು. ಇದೀಗ, ನಾಯ್ಡು ನೇತೃತ್ವದ ಸರ್ಕಾರ ಆ ಮಂಡಳಿಯನ್ನು ರದ್ದು ಮಾಡಿದೆ.
ಈ ಬಗ್ಗೆ ಕಾನೂನು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಎನ್.ಎಂ.ಡಿ ಫಾರೂಕ್ ಮಾಹಿತಿ ನೀಡಿದ್ದಾರೆ. “ಹಿಂದಿನ ಸರ್ಕಾರದ ಕ್ರಮಗಳಿಂದಾಗಿ ವಕ್ಫ್ ಬೋರ್ಡ್‌ನ ಮಂಡಳಿ ಹಲವಾರು ಕಾನೂನು ಮತ್ತು ಆಡಳಿತಾತ್ಮಕ ಸವಾಲುಗಳನ್ನು ಎದುರಿಸಿತ್ತು. ಇಂದಿನ ನಾಯ್ಡು ನೇತೃತ್ವದ ಸರ್ಕಾರವು ಆ ಸಮಸ್ಯೆಗಳನ್ನು ಪರಿಹರಿಸುವ ಗುರಿ ಹೊಂದಿದೆ. ವಕ್ಫ್ ಆಸ್ತಿಗಳನ್ನು ರಕ್ಷಿಸಲು ಮತ್ತು ಅದರ ಹೊಸ ನಿರ್ದೇಶನಗಳ ಅಡಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣವನ್ನು ಉತ್ತೇಜಿಸಲು ಸರ್ಕಾರವು ಬದ್ಧವಾಗಿದೆ” ಎಂದು ಹೇಳಿದ್ದಾರೆ.