ಬ್ರಿಕ್ಸ್ ದೇಶಗಳು ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಡಾಲರ್ ಮೇಲಿನ ಅವಲಂಬನೆಯನ್ನು ತಗ್ಗಿಸುವ ಪ್ರಯತ್ನಗಳನ್ನು ಕೈಬಿಡದಿದ್ದರೆ ಅವುಗಳಿಗೆ ಶೇ.100ರಷ್ಟು ಸುಂಕವನ್ನು ವಿಧಿಸುವುದಾಗಿ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಆರಂಭದಲ್ಲಿ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳನ್ನು ಒಳಗೊಂಡಿದ್ದ ಬ್ರಿಕ್ಸ್‌ನಲ್ಲಿ ಬಳಿಕ ಇರಾನ್, ಸೌದಿ ಅರೇಬಿಯ, ಯುಎಇ, ಅರ್ಜೆಂಟೀನಾ, ಈಜಿಪ್ಟ್ ಮತ್ತು ಇಥಿಯೋಪಿಯಾ ಸೇರ್ಪಡೆಗೊಂಡಿವೆ.
‘ನಾವು ನೋಡುತ್ತಿರುವಂತೆ ಬ್ರಿಕ್ಸ್ ದೇಶಗಳು ಡಾಲರ್‌ನಿಂದ ದೂರ ಸರಿಯುವ ಕಲ್ಪನೆಗೆ ಇನ್ನು ಅವಕಾಶವಿಲ್ಲ’ ಎಂದು ಟ್ರಂಪ್ ಹೇಳಿದ್ದಾರೆ.
ನೂತನ ಮೀಸಲು ಕರೆನ್ಸಿಗಾಗಿ ಕರೆ ನೀಡುವಲ್ಲಿ ರಷ್ಯಾ ಮತ್ತು ಚೀನಾ ಮುಂಚೂಣಿಯಲ್ಲಿದ್ದು, ಡಾಲರ್‌ಗೆ ಪರ್ಯಾಯಗಳನ್ನು ಸೃಷ್ಟಿಸುವ ಕುರಿತು ಬ್ರಿಕ್ಸ್ ದೇಶಗಳು ಧ್ವನಿಯೆತ್ತಿವೆ. ಕಳೆದ ವರ್ಷ ದಕ್ಷಿಣ ಆಫ್ರಿಕಾದಲ್ಲಿ ಮತ್ತು ಅಕ್ಟೋಬರ್‌ನಲ್ಲಿ ರಷ್ಯಾದ ಕಝನ್‌ನಲ್ಲಿ ನಡೆದ ಶೃಂಗಸಭೆಗಳಲ್ಲಿ ಬ್ರಿಕ್ಸ್ ಕರೆನ್ಸಿ ಪ್ರಸ್ತಾವವನ್ನು ಚರ್ಚಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಉಕ್ರೇನ್ -ರಷ್ಯಾ ಕದನ | ಮೂರನೇ ಮಹಾಯುದ್ಧಕ್ಕೆ ವೇದಿಕೆ ನಿರ್ಮಿಸುತ್ತಿರುವ ಬೈಡನ್!
‘ನೂತನ ಬ್ರಿಕ್ಸ್ ಕರೆನ್ಸಿಯನ್ನು ಸೃಷ್ಟಿಸುವುದಿಲ್ಲ ಅಥವಾ ಪ್ರಬಲ ಡಾಲರ್ ಬದಲಿಗೆ ಇತರ ಯಾವುದೇ ಕರೆನ್ಸಿಯನ್ನು ಬೆಂಬಲಿಸುವುದಿಲ್ಲ ಎಂಬ ಬದ್ಧತೆ ಈ ದೇಶಗಳಿಂದ ನಮಗೆ ಅಗತ್ಯವಿದೆ. ಇಲ್ಲದಿದ್ದರೆ ಅವು ಶೇ.100ರಷ್ಟು ಸುಂಕಗಳನ್ನು ಎದುರಿಸಬೇಕಾಗುತ್ತದೆ. ಅಂತಾರಾಷ್ಟ್ರೀಯ ಅಮೆರಿಕದ ಡಾಲರ್ ಅನ್ನು ಬದಲಿಸಲು ಬ್ರಿಕ್ಸ್ ದೇಶಗಳಿಗೆ ಅವಕಾಶವಿಲ್ಲ ಮತ್ತು ಯಾವುದೇ ದೇಶವು ಅದಕ್ಕಾಗಿ ಪ್ರಯತ್ನಿಸಿದರೆ ಅದು ಅಮೆರಿಕದ ಅದ್ಭುತ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ವಿದಾಯ ಹೇಳಬೇಕಾಗುತ್ತದೆ’ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ಅಕ್ರಮ ವಲಸೆ ಮತ್ತು ಮಾದಕ ದ್ರವ್ಯ ಕಳ್ಳಸಾಗಣೆ ಸಮಸ್ಯೆಗಳಿಗಾಗಿ ಕಳೆದ ವಾರ ಮೆಕ್ಸಿಕೊ,ಕೆನಡಾ ಮತ್ತು ಚೀನಾಗಳನ್ನು ದೂಷಿಸಿದ್ದ ಟ್ರಂಪ್,ಈ ದೇಶಗಳಿಂದ ಆಮದಾಗುವ ಸರಕುಗಳ ಮೇಲಿನ ಸುಂಕವನ್ನು ಹೆಚ್ಚಿಸುವುದಾಗಿ ಹೇಳಿದ್ದರು.