ಮಂಗಳೂರಿನಲ್ಲಿ ಪ್ರತಿಭಟನೆಗಳಿಗೆ ಅನುಮತಿ ನೀಡಲು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಯಾಕೆ ಹೆದರುತ್ತಿದ್ದಾರೆ? ಅಗ್ರವಾಲ್ ಏನಾದರೂ ಹೆದ್ದಾರಿಯ ಗುತ್ತಿಗೆ ತೆಗೆದು ಭ್ರಷ್ಟಾಚಾರ ಮಾಡಿದ್ದಾರೆಯೇ ಎಂದು ಡಿವೈಎಫ್ಐ ಉಳ್ಳಾಲ ತಾಲೂಕು ಅಧ್ಯಕ್ಷ, ನ್ಯಾಯವಾದಿ ನಿತಿನ್ ಕುತ್ತಾರ್ ಪ್ರಶ್ನಿಸಿದ್ದಾರೆ.
ಮಂಗಳೂರು ನಗರ ಕಮಿಷನರ್ ಅನುಪಮ್ ಅಗ್ರವಾಲ್ ವರ್ಗಾವಣೆಗೆ ಆಗ್ರಹಿಸಿ ಹರೇಕಳ ಗ್ರಾಮಚಾವಡಿಯಲ್ಲಿ ಸಿಪಿಐಎಂ ಮತ್ತು ಡಿವೈಎಫ್ಐ ನೇತೃತ್ವದಲ್ಲಿ ಧರಣಿ ನಡೆಸಲಾಯಿತು. ಈ ಧರಣಿಯನ್ನು ಉದ್ದೇಶಿಸಿ ನಡೆದ ಪ್ರತಿಭಟನೆಯನ್ನು ಉದ್ದೇಶಿ ನಿತಿನ್ ಕುತ್ತಾರ್ ಮಾತನಾಡಿದರು.

“ಅನುಪಮ್ ಅಗ್ರವಾಲರು ಯಾವ ಅಗ್ರಹಾರದಿಂದ ಬಂದಿದ್ದಾರೋ ತಿಳಿಯದು. ಆದರೆ ಅವರು ಮೊದಲು ನಮ್ಮ ಜಿಲ್ಲೆಯ ಎಡಪಂಥೀಯ ಚಳುವಳಿಗಳ ಬಗ್ಗೆ ಅರಿತುಕೊಳ್ಳಲಿ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಮಂಗಳೂರು | ಚೆಂಬುಗುಡ್ಡೆ ಘಟನೆ: ರಾತ್ರೋರಾತ್ರಿ ಶಾಸಕ ಯು ಟಿ ಖಾದರ್ ವಿರುದ್ಧ ಡಿವೈಎಫ್‌ಐ ಪ್ರತಿಭಟನೆ
ಇನ್ನು “ಬ್ರಿಟೀಷ್ ಅಧಿಕಾರಿ ಜನರಲ್ ಡಯರ್‌ನಂತೆ ವರ್ತಿಸುತ್ತಿರುವ ಅಗ್ರವಾಲರನ್ನು ಈ ಕೂಡಲೇ ವರ್ಗಾವಣೆ ಮಾಡದಿದ್ದರೆ ಜಿಲ್ಲೆಯಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು” ಎಂದು ನಿತಿನ್ ಕುತ್ತಾರ್ ಎಚ್ಚರಿಕೆ ನೀಡಿದರು.
ಇನ್ನು ಈ ಸಂದರ್ಭದಲ್ಲೇ ಮಾತನಾಡಿದ ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿಕೆ ಇಮ್ತಿಯಾಝ್, “ಜನಪರವಾದ ಹೋರಾಟಕ್ಕೆ ಅನುಮತಿಯನ್ನು ನಿರಾಕರಿಸುತ್ತಿರುವ ಕಮಿಷನರ್ ಅಗ್ರವಾಲ್ ಅವರನ್ನು ಎತ್ತಂಗಡಿ ಮಾಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ” ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸಿಪಿಐಎಂ ಮುಡಿಪು ವಲಯ ಕಾರ್ಯದರ್ಶಿ ರಫೀಕ್ ಹರೇಕಳ, ಹರೇಕಳ ಗ್ರಾಮ ಪಂಚಾಯತ್ ಸದಸ್ಯರಾದ ಅಶ್ರಫ್ ಹರೇಕಳ, ಕೆ.ಎಚ್ ಹಮೀದ್, ಉಮರಬ್ಬ ನ್ಯೂಪಡ್ಪು, ಡಿವೈಎಫ್ಐ ಮುಖಂಡರಾದ ರಝಾಕ್ ಮುಡಿಪು, ಬಶೀರ್ ಲಚ್ಚಿಲ್ ಮುಂತಾದವರು ಉಪಸ್ಥಿತರಿದ್ದರು. ಡಿವೈಎಫ್ಐ ಉಳ್ಳಾಲ ತಾಲೂಕು ಕಾರ್ಯದರ್ಶಿ ರಿಝ್ವಾನ್ ಹರೇಕಳ ಸ್ವಾಗತಿಸಿ ರಫೀಕ್ ಹರೇಕಳ ವಂದಿಸಿದರು.
