ಬಂಗಾಳಕೊಲ್ಲಿಯಲ್ಲಿ ಶನಿವಾರ ಸೃಷ್ಟಿಯಾಗಿರುವ ಫೆಂಗಲ್ ಚಂಡಮಾರುತವು ತಮಿಳುನಾಡಿನ ಪುದುಚೇರಿ ಕರಾವಳಿಗೆ ಅಪ್ಪಳಿಸಿದೆ. ಇದರಿಂದಾಗಿ ತಮಿಳುನಾಡು, ಚೆನ್ನೈ ಮಾತ್ರವಲ್ಲದೇ, ಕರ್ನಾಟಕ ಒಳನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಕರಾವಳಿ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಸೈಕ್ಲೋನಿಕ್ ಚಂಡಮಾರುತ ನೆಲೆಗೊಂಡಿದೆ. ಇಲ್ಲಿ ಭಾನುವಾರ ಬೆಳಗ್ಗೆ 6 ಗಂಟೆಗಳ ಅವಧಿಯಲ್ಲಿ ಸ್ಥಿರವಾಗಿದ್ದರ ಬಗ್ಗೆ ಬೆಂಗಳೂರು ಐಎಂಡಿ ಕಚೇರಿ ಹವಾಮಾನ ತಜ್ಞ ಸಿ ಎಸ್ ಪಾಟೀಲ್ ಖಚಿತಪಡಿಸಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಮುಂಜಾನೆಯಿಂದಲೂ ಸೋನೆ ಮಳೆಯಂತೆ ಸುರಿಯಿತ್ತಿದ್ದು, ರಾಜ್ಯದಲ್ಲಿ ಡಿಸೆಂಬರ್ 05ರವರೆಗೆ ಮೈ ಕೊರೆವ ಚಳಿ ಸಹಿತ ಧಾರಾಕಾರ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಕೆಲವು ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್, ಆರೆಂಜ್ ಅಲರ್ಟ್’ ಸೂಚಿಸಲಾಗಿದೆ.
“ಫೆಂಗಲ್ ಚಂಡಮಾರುತ ಉಂಟಾಗಿರುವುದರಿಂದ ಡಿಸೆಂಬರ್ 2, 3 ಮತ್ತು 4ರಂದು ಕರಾವಳಿಯ ಉಡುಪಿ ದಕ್ಷಿಣ ಕನ್ನಡ ಜಿಲ್ಲೆ, ರಾಮನಗರ, ಮಂಡ್ಯ ಮೈಸೂರು, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ ಜಿಲ್ಲೆಗಳಲ್ಲಿ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ” ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
“ಡಿಸೆಂಬರ್ 3ರಂದು ಮಾತ್ರ ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ಶಿವಮೊಗ್ಗ ಜಿಲ್ಲೆಗಳಿಗೆ ವಿಪರೀತ ಗಾಳಿ ಸಹಿತ ಭಾರೀ ಮಳೆ ಆರ್ಭಟ ಕಂಡುಬರಲಿದೆ. ಹೀಗಾಗಿ ಈ ಜಿಲ್ಲೆಗಳಿಗೆ ಒಂದು ದಿನ ‘ಆರೆಂಜ್ ಅಲರ್ಟ್’ ನೀಡಲಾಗಿದೆ” ಎಂದು ಐಎಂಡಿ ಹವಾಮಾನ ವರದಿ ತಿಳಿಸಿದೆ.
“ಡಿಸೆಂಬರ್ 6ರಂದು ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ, ಇದೇ ದಿನ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಲಘು ಮಳೆ ನಿರೀಕ್ಷೆಯಿದೆ. ಉಳಿದ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ” ಎಂದು ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಫೆಂಗಲ್ ಚಂಡಮಾರುತ | ವಿಮಾನ ಲ್ಯಾಂಡಿಂಗ್‌ಗೆ ಹರಸಾಹಸ; ವಿಡಿಯೋ ವೈರಲ್
“ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮುಂದಿನ ನಾಲ್ಕೈದು ದಿನ ಈ ಚಂಡಮಾರುತದ ಅಬ್ಬರ ಕಂಡುಬರಲಿದೆ. ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಸಾಧಾರಣ ಮಳೆ, ಕೆಲವೊಮ್ಮೆ ಭಾರೀ ಮಳೆಯಾಗಲಿದೆ. ಕೆಲವು ಸ್ಥಳಗಳಲ್ಲಿ ಬೆಳಗಿನ ಜಾವದಲ್ಲಿ ಮಂಜು ಬೀಳಲಿದೆ. ಗರಿಷ್ಠ 23° ಸೆಲ್ಸಿಯಸ್ ಹಾಗೂ ಕನಿಷ್ಠ 19° ಸೆಲ್ಸಿಯಸ್ ಕಂಡುಬರಲಿದೆ” ಎಂದು ಭಾರತೀಯ ಹವಾಮಾನ ಇಲಾಖೆ ಮಳೆಯ ಮುನ್ಸೂಚನೆ ನೀಡಿದೆ.