ಕನ್ನಡದ ವೈಶಿಷ್ಟ್ಯ, ವೈಜ್ಞಾನಿಕತೆ ಹಿನ್ನಲೆಯ ಮಹತ್ವ ಅರಿತು ನುಡಿ ಕಲಿಯಿರಿ. ಒಕ್ಕೂಟ ಮತ್ತು ರಾಜ್ಯ ಸರ್ಕಾರದ ಉದ್ದಿಮೆ ಹಾಗೂ ಸಂಸ್ಥೆಗಳು ಕನ್ನಡಕ್ಕೆ ಪ್ರಾಧಾನ್ಯತೆ ನೀಡಿದರಷ್ಟೇ ಜನರಿಗೆ ಉತ್ತಮ ಸೇವೆ ನೀಡಿದ ಸಾರ್ಥಕತೆ ಲಭಿಸುತ್ತದೆ ಎಂದು ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ರಾಮನಗರ ಜಿಲ್ಲೆಯ ಕನಕಪುರದ ಭಾರತೀಯ ವಿಮಾ ನಿಗಮದ ಕಚೇರಿಯಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಒಕ್ಕೂಟ ಸರ್ಕಾರದ ಅಧೀನ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಇತರ ರಾಜ್ಯದ ಅಧಿಕಾರಿಗಳು ಕನ್ನಡವು ಸ್ಥಳೀಯ ಭಾಷೆ ಕೆಲಸಕ್ಕಾಗಿ ಅನಿವಾರ್ಯ ಎನ್ನದೆ ಕಲಿಯಿರಿ. ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಿಂದಿ ಹೇರಿಕೆ ಮಿತಿ ಮೀರಿದೆ. ಕನ್ನಡಿಗರು ಅಂತಹ ಹೇರಿಕೆಯ ವಿರುದ್ದ ನಿರಂತರ ಹೋರಾಡುತ್ತಿದ್ದಾರೆ. ಹೋರಾಟಗಾರರ ಹೋರಾಟದ ಫಲವಾಗಿಯೇ ನಾವು ಇಂದು ಮಾಲುಗಳಾದಿಯಾಗಿ ಕನ್ನಡದ ಫಲಕವನ್ನು ಕಾಣುವಂತಾಗಿದೆ. ಇನ್ನೂ ಕೆಲವು ಬ್ಯಾಂಕ್‌ಗಳು ಕನ್ನಡದ ಬಗ್ಗೆ ಅಸಡ್ಡೆ ತೋರುತ್ತಿದ್ದಾರೆ. ಅವರಿಗೂ ಪಾಠ ಕಲಿಸುವ ಕಾಲ ದೂರವಿಲ್ಲ” ಎಂದರು.
“ರೈಲ್ವೆ ನೇಮಕಾತಿಯಲ್ಲಿ ಕನ್ನಡಗರಿಗೆ ವಂಚನೆಯಾಗುತ್ತಿತ್ತು, ಕನ್ನಡಿಗರೇ ರೈಲ್ವೆ ಮಂತ್ರಿಗಳಾಗಿದ್ದರೂ ಕನ್ನಡಕ್ಕೆ ಪ್ರಾಶಸ್ತ್ಯ ಗಳಿಸಿಕೊಡಲಾಗಿರಲಿಲ್ಲ. ಇದಕ್ಕಾಗಿ ಬಹಳಷ್ಟು ಹೋರಾಟ ನಡೆದವು. ಕನ್ನಡಿಗ ವಿ ಸೋಮಣ್ಣ ಪ್ರಧಾನಿಗಳಿಗೆ ಕನ್ನಡಿಗರಿಗಾದ ಅನ್ಯಾಯವನ್ನು ಅರ್ಥ ಮಾಡಿಸಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ್ದಾರೆ. ಅವರನ್ನು ಇಂತಹ ಸಂದರ್ಭಗಳಲ್ಲಿ ಸ್ಮರಿಸಲೇಬೇಕಿದೆ” ಎಂದು ಹೇಳಿದರು.

ಭಾರತೀಯ ವಿಮಾ ನಿಗಮದ ಶಾಖಾಧಿಕಾರಿ ಆದಿತ್ಯಕುಮಾರ್ ಮಾತನಾಡಿ, “ಭಾರತೀಯ ವಿಮಾ ನಿಗಮವು ಒಕ್ಕೂಟ ಸರ್ಕಾರದ ಸಂಸ್ಥೆಯಾದರೂ ನಾವು ತ್ರಿಭಾಷಾ ನೀತಿಯನ್ನು ಸಮರ್ಪಕವಾಗಿ ಅಳವಡಿಸಿಕೊಂಡಿದ್ದೇವೆ. ಕನ್ನಡಕ್ಕೆ ಅತಿಹೆಚ್ಚು ಪ್ರಾಶಸ್ತ್ಯ ನೀಡುವ ಸಂಸ್ಥೆಗಳ ಪೈಕಿ ಭಾರತೀಯ ಜೀವ ವಿಮಾ ನಿಗಮವು ಮೊದಲ ಸಾಲಿನಲ್ಲಿದೆ. ನಮ್ಮ ಕನಕಪುರ ಶಾಖೆಯ ಕನ್ನಡ ಶ್ರೀನಿವಾಸ್ ಅಚ್ಚ ಕನ್ನಡವನ್ನೆ ಉಚ್ಛರಿಸುತ್ತಾರೆ. ಇತರ ಭಾಷೆಯನ್ನು ಬಳಸುವುದೂ ಇಲ್ಲ ಬೆರೆಸುವುದೂ ಇಲ್ಲ. ಅಲ್ಲದೆ ನಮ್ಮ ಸಿಬ್ಬಂದಿಗಳಲ್ಲಿ ಕವಿಗಳು ಸಾಹಿತಿಗಳು ಇದ್ದಾರೆ. ಇದು ನಮಗೆ ಹೆಮ್ಮೆಯ ಸಂಗತಿ. ಆಂಧ್ರದವನಾದ ನಾನು ಕನ್ನಡ ಭಾಷೆಯ ಹಿರಿಮೆಗೆ ಮಾರುಹೋಗಿ ಕನ್ನಡದಲ್ಲೇ ಮಾತನಾಡುತ್ತಿದ್ದೇನೆ” ಎಂದರು.
ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದ ಚಂದ್ರು ನಿರೂಪಣೆಯ ಜೊತೆಗೆ ಕನ್ನಡದ ಮಹತ್ವ, ಕನ್ನಡದ ಹಲವಾರು ಮೊದಲುಗಳನ್ನು ತಿಳಿಸುತ್ತ ಕಾರ್ಯಕ್ರಮದ ಆಕರ್ಷಣೆ ಎನಿಸಿದರು.
ಇದನ್ನು ಓದಿದ್ದೀರಾ? ರಾಮನಗರ | ಮನೆ, ಮನಗಳಲ್ಲಿ ನಿತ್ಯವೂ ಕನ್ನಡ ಆಚರಿಸುವ ದೀಕ್ಷೆ ತೊಡಬೇಕು: ಎ ಆರ್ ಗೋವಿಂದಸ್ವಾಮಿ
ಕಾರ್ಯಕ್ರಮದಲ್ಲಿ ಶಾಖಾ ಉಪವಿಭಾಗಾಧಿಕಾರಿ ಶಶಿಧರ್, ಪ್ರತಿನಿಧಿ ಅಧ್ಯಕ್ಷರಾದ ಶಿವಶಂಭುಲಿಂಗೇಗೌಡ, ಕನ್ನಡ ಪಂಡಿತ ಕನ್ನಡ ಶ್ರೀನಿವಾಸ್ ಹಾಗೂ ವಿಠಲ್ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಪ್ರಶಾಂತ್ ಹೊಸದುರ್ಗ, ಕನ್ನಡ ಸಂಘದ ಅಧ್ಯಕ್ಷ ಚಂದ್ರು, ವಿಜಯ್ ಕುಮಾರ್, ಜಗನ್ನಾಥ್, ಮಹೇಶ್ವರಿ, ನೇತ್ರಾವತಿ, ರುದ್ರೇಶ್, ಮಾದಾ ನಾಯಕ್, ನಾಗರಾಜು, ಸೋಮೇಶ್ವರ್, ಶಿವಪ್ರಸಾದ್ ಮಂಚೇಗೌಡ ಹಾಗೂ ಇತರ ಪ್ರತಿನಿಧಿಗಳು, ಸಿಬ್ಬಂದಿಗಳು ಇದ್ದರು.