ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸೇರಿದಂತೆ ಬಿಜೆಪಿ ನಾಯಕತ್ವದ ಬಗ್ಗೆ ಬಹಿರಂಗವಾಗಿ ಟೀಕೆ ಮಾಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕೊನೆಗೂ ಬಿಜೆಪಿ ಶೋಕಾಸ್ ನೋಟಿಸ್ ನೀಡಿದೆ.
ಯತ್ನಾಳ್ ಬಿಜೆಪಿ ಅಧಿಕೃತ ನಿರ್ಧಾರದ ವಿರುದ್ಧವಾಗಿ ನಡೆದುಕೊಂಡರೂ, ಪ್ರತ್ಯೇಕ ಸಭೆ- ಕಾರ್ಯಕ್ರಮಗಳನ್ನು ನಡೆಸುತ್ತಿದ್ದರೂ ಈವರೆಗೂ ಯಾವುದೇ ಶಿಸ್ತು ಕ್ರಮ ಕೈಗೊಂಡಿರಲಿಲ್ಲ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಯಾಗಿತ್ತು. ಆರ್‌ಎಸ್‌ಎಸ್ ನಾಯಕ ಬಿ ಎಲ್ ಸಂತೋಷ್ ಬೆಂಬಲವೇ ಯತ್ನಾಳ್ ರಾಜರೋಷವಾಗಿ ಬಿಜೆಪಿ ಕರ್ನಾಟಕ ನಾಯಕತ್ವದ ವಿರುದ್ಧವಾಗಿ ನಡೆದುಕೊಳ್ಳಲು ಕಾರಣ ಎನ್ನಲಾಗಿತ್ತು. ಈ ಎಲ್ಲಾ ವಿಚಾರಗಳು ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಇದೀಗ ಬಿಜೆಪಿ ಹೈಕಮಾಂಡ್ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಇದನ್ನು ಓದಿದ್ದೀರಾ? ಮತದಾನ ಮಾಡದ, ಚುನಾವಣಾ ಪ್ರಚಾರದಲ್ಲಿ ಭಾಗಿಯಾಗದ ಸಂಸದ ಜಯಂತ್ ಸಿನ್ಹಾಗೆ ಬಿಜೆಪಿ ಶೋಕಾಸ್ ನೋಟಿಸ್
“ರಾಜ್ಯ ಮಟ್ಟದ ಪಕ್ಷದ ನಾಯಕತ್ವದ ವಿರುದ್ಧ ನೀವು ಮಾಡಿದ ನಿರಂತರ ವಾಗ್ದಾಳಿ ನಡೆಸಿರುವುದು, ಪಕ್ಷದ ಆದೇಶ ಧಿಕ್ಕರಿಸುವುದು, ರಾಜಕೀಯ ಮತ್ತು ಸಾರ್ವಜನಿಕ ಪ್ರಾಮುಖ್ಯತೆಯ ಎಲ್ಲಾ ವಿಷಯದಲ್ಲಿಯೂ ಪಕ್ಷದ ಅಧಿಕೃತ ನಿಲುವಿಗೆ ವಿರುದ್ಧವಾಗಿ ನಿಲುವು ತೆಗೆದುಕೊಂಡಿರುವುದು ಮಾಧ್ಯಮಗಳು ಮತ್ತು ವಿವಿಧ ಕಡೆಗಳಲ್ಲಿ ವರದಿಯಾಗಿದೆ” ಎಂದು ಶೋಕಾಸ್ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.


“ಈ ಹಿಂದೆ ಹಲವು ಬಾರಿ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದ್ದು, ನೀವು ಇನ್ನು ತಪ್ಪು ಮಾಡುವುದಿಲ್ಲ ಎಂದು ಭರವಸೆ ನೀಡಿದರೂ ಮತ್ತೆ ಶಿಸ್ತು ಉಲ್ಲಂಘಿಸುತ್ತಿದ್ದೀರಿ” ಎಂದು ಹೈಕಮಾಂಡ್ ಹೇಳಿದೆ. ಹಾಗೆಯೇ 10 ದಿನಗಳ ಒಳಗಾಗಿ ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ತಿಳಿಸಲಾಗಿದೆ. “ಹತ್ತು ದಿನದಲ್ಲಿ ಯಾವುದೇ ಪ್ರತಿಕ್ರಿಯೆ ನೀಡದಿದ್ದರೆ ಈ ವಿಚಾರದಲ್ಲಿ ನಿಮ್ಮ ಉತ್ತರವೇನಿಲ್ಲ ಎಂದು ಭಾವಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು” ಎಂದು ತಿಳಿಸಲಾಗಿದೆ.
