ರಾಯಚೂರು ಜಿಲ್ಲೆಯ ಸಿರವಾರ ನಗರದಲ್ಲಿ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆಯಿಲ್ಲದೆ ಶಾಲಾ ಮಕ್ಕಳು ಪರದಾಡುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಬಂಧುತ್ವ ವೇದಿಕೆ ನೇತೃತ್ವದಲ್ಲಿ ಶಾಲೆ ಕಾಲೇಜು ವಿದ್ಯಾರ್ಥಿಗಳು ದಿಢೀರ್ ರಸ್ತೆ ತಡೆ ಪ್ರತಿಭಟನೆ ನಡೆಸಿದರು.
“ಸಿರವಾರ ತಾಲೂಕಿನಿಂದ ನಿತ್ಯವೂ ನೂರಾರು ಮಂದಿ ಮಕ್ಕಳು ರಾಯಚೂರು ಜಿಲ್ಲಾ ಕೇಂದ್ರಕ್ಕೆ ಉನ್ನತ ವ್ಯಾಸಂಗಕ್ಕೆ ತೆರಳುತ್ತಾರೆ. ಸರಿಯಾದ ಸಮಯಕ್ಕೆ ಬಸ್ ಇಲ್ಲದ ಕಾರಣ ಪರದಾಡುವಂತ ಸ್ಥಿತಿ ಎದುರಾಗಿದೆ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿ ಬಂಧುತ್ವ ವೇದಿಕೆಯ ಮುಖಂಡ ಮೇಸಕ್ ದೊಡ್ಡಮನಿ ಮಾತನಾಡಿ, “ಸಮರ್ಪಕ ಬಸ್‌ಗಳನ್ನು ಬಿಡದ ಕಾರಣ ಹಾಗೂ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸದಿರುವ ಕಾರಣಕ್ಕೆ ಬೇಸತ್ತಿದ್ದ ವಿದ್ಯಾರ್ಥಿಗಳು ಏಕಾಏಕಿ ರಸ್ತೆಗಿಳಿದು ಪ್ರತಿಭಟನೆ ಕೈಗೊಳ್ಳಲಾಯಿತು” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಫೆಂಗಲ್ ಚಂಡಮಾರುತ; ರಾಜ್ಯದಲ್ಲಿ ಡಿ.5ರವರೆಗೆ ಭಾರೀ ಮಳೆ
“ಸಿರವಾರ ತಾಲೂಕು ಭಾಗದಿಂದ ಸುತ್ತಮುತ್ತಲ ಹಳ್ಳಿಗಳಿಂದ ಸುಮಾರು 500ರಿಂದ 600ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಹೆಚ್ಚಿನ ವ್ಯಾಸಂಗಕ್ಕೆ ಜಿಲ್ಲಾ ಕೇಂದ್ರವಾದ ರಾಯಚೂರಿಗೆ ತೆರಳುತ್ತಾರೆ. ಜಿಲ್ಲೆಯ ಗಡಿಭಾಗ ಜಿಲ್ಲಾವಾದ್ದರಿಂದ ಬೇರೆ ರಾಜ್ಯಕ್ಕೆ ತೆರಳುವ ಬಸಗಳು ಇದ್ದರೂ ಇಲ್ಲದಂತಾಗಿದೆ. ಗಡಿಭಾಗ ಆಂಧ್ರಕ್ಕೆ ಹೋಗುವ ಕೆಲವು ಬಸ್‌ಗಳನ್ನು ನಿಲ್ಲಿಸಲು ಹಿಂದೇಟು ಹಾಕುತ್ತಾರೆ” ಎಂದು ಆರೋಪಿಸಿದರು.
“ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಯನ್ನು ಕೂಡಲೇ ಸರಿಪಡಿಸಬೇಕೆಂದು ಆಗ್ರಹಿಸಿಲಾಯಿತು. ಬಳಿಕ ಪೊಲೀಸರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರ್ಯಾಯ ಬಸ್ ವ್ಯವಸ್ಥೆ ಕಲ್ಪಿಸಿ ಮಕ್ಕಳಿಗೆ ಸುಲಭಗೊಳಿಸಿದರು” ಎಂದರು.
